ಈಗಾಗಲೇ ‘ಶಕ್ತಿ ಯೋಜನೆ’ ಹೆಸರಿನ ಅಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೂ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣವನ್ನು ಅನುಷ್ಠಾನಕ್ಕೆ ತಂದ ಕಾಂಗ್ರೆಸ್ ಸರ್ಕಾರ, ಈಗ ‘ಗೃಹಲಕ್ಷ್ಮಿ’ ಯೋಜನೆಗೆ ಮಾರ್ಗಸೂಚಿ ಹೊರಡಿಸಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಿಡುಗಡೆ ಮಾಡಿರುವ ಪ್ರಸ್ತಾವನೆಯಲ್ಲಿ ‘ಗೃಹಲಕ್ಷ್ಮಿ’ ಯೋಜನೆಯ ಫಲಾನುಭವಿಗಳು ಯಾರು, ಯಾವ ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು, ನಂತರ ಯಾವಾಗ ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂಬ ಬಗ್ಗೆ ತಿಳಿಸಿದೆ.
ಮೇ 20 ರಂದು ಕರೆದ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ಕುಟುಂಬದ ಯಜಮಾನಿಗೆ 2,000 ರೂಪಾಯಿಯ ಮಾಸಿಕ ಭತ್ಯೆ ನೀಡುವ ಬಗೆಗಿನ ಪ್ರಸ್ತಾಪದಲ್ಲಿ ಒಂದಷ್ಟು ನಿಯಮಗಳನ್ನು ಹೊರಡಿಸಲಾಗಿದೆ. ಅದರಂತೆ
- * ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ಗುರುತಿಸಿಕೊಂಡ ಮಹಿಳೆ ಈ ಯೋಜನೆಯ ಅರ್ಹ ಫಲಾನುಭವಿ ಆಗಿರುತ್ತಾರೆ.
- * ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರು ಇದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ ಯೋಜನೆ ಅನ್ವಯಿಸತಕ್ಕದ್ದು.
- * ಯೋಜನೆಯ ಫಲಾನುಭವಿಗಳು ಇದೇ ಜೂನ್ 15 ರಿಂದ ಜುಲೈ 15 ರ ವರೆಗೆ ಅರ್ಜಿ ಸಲ್ಲಿಸಬಹುದು.
- * ಅರ್ಜಿದಾರರು ಸೇವಾಸಿಂಧು ಪೋರ್ಟಲ್ ಅಥವಾ ತಾವೇ ಖುದ್ದು ಅಧಿಕಾರಿಗಳ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.
- * ಯೋಜನೆಯ ಸೌಲಭ್ಯ ಪಡೆಯುವ ಅರ್ಜಿದಾರರ ಬ್ಯಾಂಕ್ ಖಾತೆಯ ವಿವರ ಮತ್ತು ಆಧಾರ್ ಕಾರ್ಡ್ ಗಳನ್ನು ಜೋಡಣೆ ಮಾಡಬೇಕಿದೆ.
- * ಜುಲೈ 15 ರ ನಂತರ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ, ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15 ರಂದು ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು.
- * ಅರ್ಜಿಯಲ್ಲಿನ ಅಂಶಗಳು ತಪ್ಪೆಂದು ಕಂಡುಬಂದಲ್ಲಿ ಅರ್ಜಿದಾರರು ಅಲ್ಲಿಯವರೆಗೆ ತಗೆದುಕೊಂಡ ಹಣವನ್ನು ವಸೂಲಿ ಮಾಡಿ, ಸೂಕ್ತ ಕ್ರಮ ತಗೆದುಕೊಳ್ಳಲಾಗುವುದು.
- * ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರು, ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಹೆಸರಿನಲ್ಲಿ ಅರ್ಜಿ ಸಲ್ಲಿಸಬೇಕು.
- * ಅರ್ಜಿಯನ್ನು ಗ್ರಾಮ ಒನ್ ಕೇಂದ್ರ, ಬೆಂಗಳೂರು ಒನ್ ಕೇಂದ್ರ, ಸೈಬರ್ ಕೆಫೆಗಳ ಮೂಲಕ ಸಲ್ಲಿಸಬಹುದು.
- * ಭೌತಿಕವಾಗಿ ಅರ್ಜಿ ಸಲ್ಲಿಸುವವರು ತಮ್ಮ ಸಮೀಪದ ನಾಡ ಕಛೇರಿ ಮೂಲಕ ಅರ್ಜಿ ಸಲ್ಲಿಸಬಹುದು.
- * ಗೃಹಲಕ್ಷ್ಮಿ ಅರ್ಜಿಗಳನ್ನು ಪರಿಶೀಲಿಸಿ ಮಂಜೂರಾತಿ ನೀಡಲು ಸಂಬಂಧಿಸಿದ ತಾಲ್ಲೂಕಿನ ಶಿಶು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಈ ಯೋಜನೆಯ ಅಧಿಕಾರಿಗಳು ಎಂದು ಮಂಜೂರಾತಿ ಪ್ರಾಧಿಕಾರದ ಅಧಿಕಾರಿಗಳೆಂದು ಪರಿಗಣಿಸಲಾಗಿದೆ.
ಅದರಂತೆ ಜೂನ್ 15 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಜುಲೈ 15 ಕ್ಕೆ ಕೊನೆಯ ದಿನವಾಗಿದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.