ಇಲ್ಲಿಯವರೆಗೂ ಭಾರತದ ದಾಳಿಯನ್ನು ಅಲ್ಲಗಳೆಯುತ್ತಿದ್ದ ಪಾಕಿಸ್ತಾನ ಸರ್ಕಾರ, ಭಾರತ ತನ್ನ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದನ್ನು ಪರೋಕ್ಷವಾಗಿ ಒಪ್ಪಿಕೊಂಡಿದೆ. ಈ ಬಗ್ಗೆ ಪಾಕಿಸ್ತಾನದಲ್ಲೇ ಒಂದು ವೇದಿಕೆಯಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಪಾಕಿಸ್ತಾನದ ನೂರ್ ಖಾನ್ ವಾಯುನೆಲೆ ಸೇರಿದಂತೆ ಇತರ ಕಡೆಗಳಲ್ಲೂ ಭಾರತ ದಾಳಿ ನಡೆಸಿದೆ ಎಂದು ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ನಡೆದ ವಿಶೇಷ ‘ಯೂಮ್-ಎ-ತಶಾಕೂರ್’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶೆಹಬಾಜ್ ಷರೀಫ್, ‘ಮೇ 9-10ರ ಮಧ್ಯರಾತ್ರಿ ಬೆಳಗಿನ ಜಾವ 2.30 ರ ಸುಮಾರಿಗೆ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಬೆಳಗಿನ ಜಾವ 2:30 ಕ್ಕೆ ತಮಗೆ ಕರೆ ಮಾಡಿ ಭಾರತ ನೂರ್ ಖಾನ್ ವಾಯುನೆಲೆ ಮತ್ತು ಇತರ ಹಲವಾರು ಸ್ಥಳಗಳ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ತಿಳಿಸಿದ್ದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸ್ವತಃ ಒಪ್ಪಿಕೊಂಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಐಟಿ ವಿಭಾಗದ ಮುಖ್ಯಸ್ಥ ಮತ್ತು ಪಶ್ಚಿಮ ಬಂಗಾಳದ ಸಹ-ಉಸ್ತುವಾರಿ ಅಮಿತ್ ಮಾಳವೀಯ, ನೂರ್ ಖಾನ್ ವಾಯುನೆಲೆ ಮತ್ತು ಇತರ ಸ್ಥಳಗಳ ಮೇಲೆ ಬಾಂಬ್ ದಾಳಿ ನಡೆದಿರುವುದನ್ನು ಷರೀಫ್ ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಈ ಘಟನೆಯ ಗಂಭೀರತೆಯನ್ನು ಒತ್ತಿ ಹೇಳಿದ್ದಾರೆ. ‘ಆಪರೇಷನ್ ಸಿಂಧೂರ್’ ನ ಧೈರ್ಯ ಮತ್ತು ದಕ್ಷತೆಗೆ ಸಾಕ್ಷಿ ಎಂದು ಬಣ್ಣಿಸಿದ್ದಾರೆ.