ಮಂಡ್ಯ: ಸಾಹಿತ್ಯ ಸಮ್ಮೇಳನಗಳಿಗೂ ವಿವಾದಗಳಿಗೂ ಮೊದಲಿನಿಂದಲೂ ಎಲ್ಲಿಲ್ಲದ ನಂಟು. ಪ್ರತಿ ಸಾಹಿತ್ಯ ಸಮ್ಮೇಳನದ ನಂತರ ಅಲ್ಲಿನ ತೀರ್ಮಾನಗಳ ಕುರಿತು ಚರ್ಚೆಯಾಗುವುದಕ್ಕಿಂತಲೂ ಅಲ್ಲಿನ ಭ್ರಷ್ಟಾಚಾರ, ದುಂದು ವೆಚ್ಚ, ಅವ್ಯವಸ್ಥೆಗಳ ಚರ್ಚೆಯೇ ಹೆಚ್ಚು.
ಮುಂದಿನ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಆಯೋಜಿಸಲಾಗಿದ್ದು, ಆ ಕುರಿತು ಈಗಾಗಲೇ ಅಪಸ್ವರಗಳು ಕೇಳಿ ಬರತೊಡಗಿವೆ. ಕಳೆದ ಬಾರಿ ಹಾವೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ನಡೆದಿದ್ದ ಹಣದ ಅಂದಾದುಂದೀ ಇಲ್ಲಿಯೂ ನಡೆಯುವ ಸೂಚನೆ ಕಂಡುಬಂದಿದ್ದರಿಂದ ಪ್ರಜ್ಞಾವಂತರು ಈ ಕುರಿತು ಆಕ್ಷೇಪ ಎತ್ತುತ್ತಿದ್ದಾರೆ.
ಸಾಹಿತ್ಯ ಪರಿಷತ್ತಿಗೆ ಮಹೇಶ್ ಜೋಷಿ ಎನ್ನುವ ವ್ಯಕ್ತಿ ಬಂದು ಸೇರಿದ ಮೇಲಂತೂ ಅದು ಸಾಹಿತ್ಯ ಪರಿಷತ್ತಿಗಿಂತಲೂ ಹೆಚ್ಚಾಗಿ ಬಿಜೆಪಿಯ ಪಡಸಾಲೆಯಾಗಿ ಮಾರ್ಪಟ್ಟಿದೆ. ಅಧ್ಯಕ್ಷರು ಅಗತ್ಯವಿಲ್ಲದ ಸವಲತ್ತುಗಳನ್ನು ಸರಕಾರದಿಂದ ಪಡೆಯುತ್ತಾ ತನ್ನ ಒಡ್ಡೋಲಗ ಮೆರೆಸುತ್ತಿದ್ದಾರೆ.
ಕಳೆದ ಬಾರಿಯ ಹಾವೇರಿ ಸಮ್ಮೇಳನ ಅಕ್ಷರಶಃ ಅಪಸವ್ಯಗಳ ಸರಮಾಲೆಯಂತಿತ್ತು. ಕಾರ್ಯಕ್ರಮಕ್ಕೆ ಬಂದ ಮಹಿಳೆಯರಿಗೂ ಸರಿಯಾಗಿ ವ್ಯವಸ್ಥೆ ಮಾಡಿಸದೆ ಅವರು ಸಮ್ಮೇಳನದ ಸ್ಥಳದಲ್ಲೇ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು.
ಈಗ ಮಂಡ್ಯದಲ್ಲಿ ಹಣದ ವ್ಯರ್ಥಗೊಳಿಸುವಿಕೆ ಮುಂದುವರೆದಿದ್ದು ಮಂಡ್ಯದಲ್ಲಿ ಸಾಕಷ್ಟು ಮೈದಾನಗಳು ಲಭ್ಯವಿದ್ದರೂ ಭತ್ತ ಬೆಳೆಯುವ ಗದ್ದೆಗೆ ಮಣ್ಣು ತುಂಬಿ ಸಮತಟ್ಟುಗೊಳಿಸುವ ಕೆಲಸ ನಡೆಯುತ್ತಿದೆ. ಇದು ಜನರ ಬೆವರು ಸುರಿಸಿ ದುಡಿದು ಕಟ್ಟಿದ ತೆರಿಗೆಯ ಹಣದಿಂದ ನಡೆಯುತ್ತಿರುವುದು. ಇಂತಹ ಅನಗತ್ಯ ವೆಚ್ಚಗಳ ಅಗತ್ಯವೇನಿದೆ ಎಂದು ಜಗದೀಶ್ ಕೊಪ್ಪ ಪ್ರಶ್ನಿಸಿದ್ದಾರೆ.
ಈ ಕುರಿತು ದೀರ್ಘ ಪತ್ರ ಬರೆದಿರುವ ಅವರು “
ಮಿತ್ರರೇ ನಿನ್ನೆ ಸೋಮವಾರ ಮಂಡ್ಯ ಜಿಲ್ಲಾಡಳಿತ ಕರೆದಿದ್ದ ಅಖಿಲಭಾರತ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಲ್ಲಿ ಪಾಲ್ಗೊಂಡು, ಸಮ್ಮೇಳನಕ್ಕೆ ಹಾಗೂ ಸಭೆಗಳಿಗೆ ಭಾಗವಹಿಸುವುದಿಲ್ಲ ಎಂದ ಹೇಳುವುದರ ಮೂಲಕ ಪ್ರತಿಭಟಿಸಿ ಸಭೆಯಿಂದ ಹೊರಬಂದೆ. ನಂತರ ಪೆಬ್ರವರಿ ತಿಂಗಳಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂಬ ವರದಿಯನ್ನು ಪತ್ರಿಕೆಯಲ್ಲಿ ಓದಿದೆ.
ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಶಯನಿಗೆ ಮತ್ತು ಮಂಡ್ಯ ಜಿಲ್ಲಾ ಶಾಶಕರು ಮತ್ತು ಸಚಿವರಿಗೆ ಸಮ್ಮೇಳನಕ್ಕೆ ಖರ್ಚು ಮಾಡುವ ಹಣ ಈ ನೆಲದ ಬಡವರಾದಿಯಾಗಿ ಎಲ್ಲರೂ ತಿನ್ನುವ ಉಪ್ಪು, ಕುಡಿಯುವ ನೀರಿಗಾಗಿ ಪಾವತಿಸಿದ ಹಣ ಎಂಬುದಾಗಿ ತಿಳಿಸಿಬಂದೆ.
ಸಾಹಿತ್ಯದ ಹೆಸರಿನ ಈ ಹುಚ್ಚಾಟವನ್ನು ಈ ನಾಡಿನ ಪ್ರತಿಯೊಬ್ಬ ಪ್ರಜ್ಞಾವಂತನೂ ಪ್ರತಿಭಟಿಸಿ ಇದಕ್ಕೆ ಕಡಿವಾಣ ಹಾಕಬೇಕಿದೆ. ಈ ಕುರಿತು ನಾನು ಮುಖ್ಯಮಂತ್ರಿಯವರಿಗೆ ಕಳಿಸಿರುವ ಪತ್ರ ಇಲ್ಲಿದೆ.
ದಯಮಾಡಿ ಎಲ್ಲರೂ ಮುಖ್ಯಮಂತ್ರಿಯವರಿಗೆ ಪತ್ರ ಬರೆಯಬೇಕಾಗಿ ವಿನಂತಿ.” ಎಂದು ಜನರ ಬಳಿ ವಿನಂತಿಸಿದ್ದಾರೆ.
ರಾಜ್ಯದಲ್ಲಿ ಎಲ್ಲೆಡೆ ಮಳೆ ಕೊರತೆ ಕಾಡುತ್ತಿರುವ ಹೊತ್ತು ಇಂತಹ ದುಂದುವೆಚ್ಚಗಳು ಎಷ್ಟರಮಟ್ಟಿಗೆ ಸರಿ ಎನ್ನುವುದನ್ನು ಸಾಹಿತ್ಯ ಪರಿಷತ್ ಅಧ್ಯಕ್ಷರು ಪ್ರಶ್ನಿಸಿಕೊಂಡು ಮುಂದುವರೆಯಬೇಕಾಗಿದೆ.
ಡಾ. ಜಗದೀಶ್ ಕೊಪ್ಪ ಅವರ ಪತ್ರದ ಪೂರ್ಣ ಪಾಠ ʼಪೀಪಲ್ ಮೀಡಿಯಾʼಕ್ಕೆ ಲಭ್ಯವಾಗಿದ್ದು, ಪತ್ರವನ್ನು ಕೆಳಗೆ ಪ್ರಕಟಿಸಲಾಗಿದೆ.
ಶ್ರೀ ಸಿದ್ಧರಾಮಯ್ಯನವರು
ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ವಿಧಾನಸೌಧ, ಬೆಂಗಳೂರು-560001
ವಿಷಯ- ಮಂಡ್ಯ ದಲ್ಲಿ ನಡೆಯಬೇಕಾದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡುವ ಕುರಿತು.
ಮಾನ್ಯರೇ,
ಮಂಡ್ಯ ಜಿಲ್ಲೆಯಲ್ಲಿ ಇದೇ ವರ್ಷ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಇವರ ಪರವಾಗಿ ಜಿಲ್ಲಾಡಳಿತ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ವರ್ಷಕ್ಕೊಮ್ಮ ಸಮ್ಮೇಳನ ನಡೆಸುವ ಕುರಿತಾಗಿ ನನ್ನ ಪ್ರತಿಭಟನೆಯನ್ನು ದಾಖಲಿಸಿ, ಸಭೆಯಿಂದ ಹೊರಬಂದೆ.
ಇದೇ ವರ್ಷ ಜನವರಿ ತಿಂಗಳಿನಲ್ಲಿ ಹಾವೇರಿಯಲ್ಲಿ ಇಪ್ಪತ್ತೈದು ಕೋಟಿ ರೂ.ವೆಚ್ಚದಲ್ಲಿ ಸಾಹಿತ್ಯ ಸಮ್ಮೇಳನ ನಡೆದಿರುವುದು ಈಗಾಗಲೇ ತಮ್ಮ ಗಮನಕ್ಕೂ ಸಹ ಬಂದಿದೆ. ವಾಸ್ತವವಾಗಿ ಸರ್ಕಾರ ಇಪ್ಪತ್ತು ಕೋಟಿ ರೂಪಾಯಿಗಳನ್ನು ಮಾತ್ರ ನೀಡಿತ್ತು. ಆದರೆ, ಹೆಚ್ಚುವರಿಯಾಗಿ ಐದು ಕೊಟಿ ಹಣ ಖರ್ಚಾಗಿದೆ ಎಂದಾಗ ಹಣವನ್ನು ನೀಡಲು ನಿರಾಕರಿಸಿರುವುದು ಒಳ್ಳೆಯ ನಿರ್ಧಾರ. ಗಂಭೀರ ಚಿಂತನೆಗಳ ಮೂಲಕ ವಿಚಾರ ಮಂಥನದ ಕೇಂದ್ರವಾಗಬೇಕಿದ್ದ ಕನ್ನಡ ಸಾಹಿತ್ಯ ಸಮ್ಮೇಳನವು ಇತ್ತೀಚೆಗಿ ನ ದಿನಗಳಲ್ಲಿ ಜಾತ್ರೆಯ ಸ್ವರೂಪ ಪಡೆಯುವದಕ್ಕೆ ಕಡಿವಾಣ ಹಾಕಿರುವುದು ನಿಜಕ್ಕೂ ಶ್ಲಾಘನೀಯವಾದುದು.
ವರ್ಷವೊಂದಕ್ಕೆ ಇಪ್ಪತ್ತು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ, ಯಾವ ಪುರುಷಾರ್ಥಕ್ಕೆ ಈ ಸಮ್ಮೇಳನಗಳು ನಡೆಸಲಾಗುತ್ತಿದೆ? ಇವುಗಳಿಂದ ಕನ್ನಡಕ್ಕೆ ಹೊಸ ಕಾಯಕಲ್ಪ ಏನಾದರೂ ದೊರೆತಿದೆಯಾ? ಅಥವಾ ಕನ್ನಡ ಭಾಷೆ ಉದ್ಧಾರವಾಗಿದೆಯಾ? ನಾಡಿನ ಬಹುತೇಕ ಪ್ರಜ್ಞಾವಂತ ಸಾಹಿತಿಗಳು ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಯಿಂದ ಏಕೆ ದೂರವಾಗಿದ್ದಾರೆ? ನನ್ನ ಹಿರಿಯ ಮಿತ್ರರಾದ ದೇವನೂರು ಮಹಾದೇವ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮತ್ತು ಅತಿ ಹೆಚ್ಚು ಮೌಲ್ಯದ ನೃಪತುಂಗ ಪ್ರಶಸ್ತಿಯನ್ನು ಏಕೆ ನಿರಾಕರಿಸಿದರು? ಈ ಎಲ್ಲಾ ಪ್ರಶ್ನೆಗಳಿಗೆ ನೀವು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳಿಂದ ಉತ್ತರ ಪಡೆಯಬೇಕು ಎಂದು ಈ ಮೂಲಕ ವಿನಂತಿಸುತ್ತೀನಿ. ಜೊತೆಗೆ ಪ್ರತಿ ಮೂರುವರ್ಷಕ್ಕೆ ಒಮ್ಮೆ ಮಾತ್ರ ಸಮ್ಮೇಳನ ನಡೆಯಲು ಮತ್ತು ಕೇವಲ ಮೂರರಿಂದ ಐದು ಕೋಟಿ ರೂಪಾಯಿಗಳನ್ನುಮಾತ್ರ ಆರ್ಥಿಕವಾಗಿ ಸಹಾಯ ನೀಡಬೇಕೆಂದು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.
ಮಂಡ್ಯ ನಗರದ ಹೃದಯ ಭಾಗದಲ್ಲಿ ಹಾಗೂ ಬೆಂಗಳೂರು- ಮೈಸೂರು ರಸ್ತೆಯಲ್ಲಿ ಈಗ ಮಂಡ್ಯ ವಿಶ್ವ ವಿದ್ಯಾನಿಲಯವಾಗಿರುವ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ ವಿಶಾಲವಾದ ಮೈದಾನ ಇರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಆದರೆ, ಮಂಡ್ಯ ನಗರದ ಹೊರವಲಯದಲ್ಲಿ ಭತ್ತ ಬೆಳೆಯುವ ಗದ್ದೆಯಲ್ಲಿ ನೂರಾರು ಎಕರೆ ಪ್ರದೇಶಕ್ಕೆ ಗಟ್ಟಿಯಾದ ಮಣ್ಣು ತುಂಬಿಸಿ ಆ ಜಾಗದಲ್ಲಿ ಸಮ್ಮೇಳನ ನಡೆಸುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ. ಇದು ಕೆಟ್ಟ ನಿರ್ಧಾರವಾಗಿದೆ.
ಹಾವೇರಿಯ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚಗಳು ನನಗೆ ಸಿಕ್ಕ ಮಾಹಿತಿಯ ಪ್ರಕಾರ ಈ ರೀತಿಯಲ್ಲಿವೆ. ‘ಹಾವೇರಿ ಹೊರವಲಯದ ಕಪ್ಪು ಮಣ್ಣಿನ ಹೊಲವನ್ನು ಸಮತಟ್ಟು ಮಾಡಲು ಒಂದು ಕೋಟಿ ರೂಪಾಯಿ, ವೇದಿಕೆ ಮತ್ತು ಶಾಮಿಯಾನಕ್ಕೆ ಒಂದು ಕೋಟಿ, ಸಮ್ಮೇನಾಧ್ಯಕ್ಷರ ವಾಹನ ಶೃಂಗಾರಕ್ಕೆ, ಜಿಲ್ಲಾ ಸಾಹಿತ್ಯ ಪರಿಷತ್ತ್ ಅಧ್ಯಕ್ಷರುಗಳ ವಾಹನ ಶೃಂಗಾರಕ್ಕೆ ಮತ್ತು ಮೆರವಣಿಗೆಯಲ್ಲಿ ಭಾಗವಹಿಸಿದ ಕಲಾವಿದರ ತಂಡಕ್ಕೆ ಒಟ್ಟು ಒಂದು ಕೋಟಿ ರೂಪಾಯಿ ಇಷ್ಟು ಮಾತ್ರವಲ್ಲದೆ ಊಟದ ವೆಚ್ಚ ಎಂಟು ಕೋಟಿ ರೂಪಾಯಿಗಳು. ಈ ಮಾಹಿತಿಯನ್ನು ನೀವು ಅಲ್ಲಿನ ಜಿಲ್ಲಾಧಿಕಾರಿಯಿಂದ ಮಾಹಿತಿ ತರಿಸಿಕೊಂಡು ಪರಿಶೀಲಿಸಬೇಕಾಗಿ ವಿನಂತಿ.
ನನ್ನ ಮುಖ್ಯ ಪ್ರಶ್ನೆಯೆಂದರೆ, ಇದು ಸಾಹಿತ್ಯ ಸಮ್ಮೇಳನವಾ? ಅಥವಾ ಊಟದ ಸಮ್ಮೇಳನವಾ? ಈ ಬಾರಿಯ ವಿಚಾರಗೋಷ್ಟಿಯಲ್ಲಿ ಪ್ರಬಂಧ ಮಂಡಿಸುವ ತಜ್ಞರಿಗೆ ನೀಡಿದ್ದ ಕಾಲಾವಧಿ ಕೇವಲ ಏಳು ನಿಮಿಷ ಮಾತ್ರ. ಹಾಗಾಗಿ ಇತ್ತೀಚೆಗೆ ಸಾಹಿತ್ಯ ಸಮ್ಮೇಳನಗಳು ಜಾತ್ರೆಯ ಸ್ವರೂಪ ಪಡೆದುಕೊಂಡು ಕನ್ನಡದ ಹೆಸರಿನಲ್ಲಿ ದೂಳೆಬ್ಬಿಸುವ ಗದ್ದಲದ ಜಾತ್ರೆಗಳಾಗಿ ಮಾರ್ಪಟ್ಟಿವೆ.
ಕಳೆದ ವಾರ ಧಾರವಾಡದ ವಿದ್ಯಾವರ್ಧಕ ಸಂಘದ ಸಭೆಯಲ್ಲಿ . ವಿಧಾನಪರಿಷತ್ತಿನ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿಯವರು ಈ ವರ್ಷ ಕರ್ನಾಟಕದಲ್ಲಿ 1900 ಕನ್ನಡ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುತ್ತಿವೆ ಎಂಬ ಆತಂಕದ ಸುದ್ದಿಯನ್ನು ಸಮಾರಂಭದಲ್ಲಿ ಬಹಿರಂಗ ಪಡಿಸಿದರು. ಎರಡು ತಿಂಗಳ ಹಿಂದೆ ರಾಜ್ಯ ಹೈಕೋರ್ಟ್ ಕೂಡಾ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಮುಂತಾದ ಮೂಲಭೂತ ಸೌಕರ್ಯಗಳಿಲ್ಲದೆ ಕಾರಣ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಗೆ ಚಾಟಿಯೇಟು ಬೀಸಿದೆ.
ವರ್ಷವೊಂದಕ್ಕೆ ಮೂರು ದಿನದ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಇಪ್ಪತ್ತು ಕೋಟಿ ರೂಪಾಯಿಗಳನ್ನು ವ್ಯಯ ಮಾಡುವುದರ ಬದಲಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡೆಸುವುದು, ಗ್ರಾಮಾಂತರ ಪ್ರದೇಶದ ಶಿಕ್ಷಕರಿಗೆ ವರ್ಷಕ್ಕೆ ಒಮ್ಮೆ ಪುನಶ್ಚೇತನ ಶೀಬಿರ ಏರ್ಪಡಿಸುವುದು ಸೂಕ್ತ. ವಿವಿಧ ರಂಗಳ ತಜ್ಞರ ಮೂಲಕ ಅವರಿಗೆ ತರಬೇತಿ ಕೊಡಿಸಿ ಕನ್ನಡ ಶಾಲೆಗಳನ್ನು ಇಂಗ್ಲೀಷ್ ಶಾಲೆಗಳ ಹಂತಕ್ಕೆ ನಿಲ್ಲಿಸುವ ಯೋಜನೆಗೆ ಈ ಹಣವನ್ನು ಉಪಯೋಗಿಸಿದರೆ, ಶಾಶ್ವತವಾಗಿ ಕನ್ನಡ ಭಾಷೆಯನ್ನು ಉಳಿಸಬಹುದಾಗಿದೆ.
ಅತ್ಯಾಧುನಿಕ . ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಸಾಮಾಜಿಕ ತಾಣಗಳು ಮತ್ತು ಅಂತರ್ಜಾಲ ವ್ಯವಸ್ಥೆಯಿಂದಾಗಿ ಸಮ್ಮೇಳನದ ಕಲಾಪಗಳನ್ನು ನೇರವಾಗಿ ರಾಜ್ಯ, ದೇಶ ಮತ್ತು ವಿದೇಶದ ಕನ್ನಡಿಗರಿಗೆ ನೇರವಾಗಿ ತಲುಪಿಸಬಹುದಾಗಿದೆ. ಸಮ್ಮೇಳನ ನಡೆಯುವ ಜಿಲ್ಲೆಯ ಸುತ್ತಮುತ್ತಲಿನ ಗಂಭೀರ ಆಸಕ್ತರು ಭಾಗವಹಿಸುವುದು ಒಳಿತು. ಈಗಾಗಲೇ ಮೂಡಬಿದ್ರೆಯ ಆಳ್ವಾಸ್ ಸಿರಿನುಡಿ, ಧಾರವಾಡದ ಸಾಹಿತ್ಯ ಸಂಭ್ರಮ ಕಾರ್ಯಕ್ರಮಗಳು ಇಂತಹ ಪ್ರಯೋಗವನ್ನು ಮಾಡಿ ಯಶಸ್ಸು ಕಂಡಿವೆ.
ವರ್ಷಪೂರ್ತಿ ಸಾಹಿತ್ಯ ಚಟುವಟಿಕೆಗಳು ರಾಜ್ಯಾದ್ಯಂತ ನಿರಂತರವಾಗಿ ನಡೆಯುತ್ತಿದ್ದು, ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಇಂತಹ ಊಟದ ವೈಭೋಗದ ಜಾತ್ರೆ ಬೇಡವಾಗಿದೆ. ಹಾಗಾಗಿ ನಾಡಿನ ಪ್ರಜ್ಞಾವಂತ ಲೇಖಕರ ಸಭೆಯನ್ನು ಕರೆದು ಮೂರು ವರ್ಷಕ್ಕೆ ಅಥವಾ ಐದು ವರ್ಷಕ್ಕೆ ಒಮ್ಮೆ ಸಮ್ಮೇಳನ ನಡೆಸಲು ವ್ಯವಸ್ಥೆ ಮಾಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ಇಂತಿ ತಮ್ಮ ವಿಶ್ವಾಸಿ
ಡಾ.ಎನ್.ಜಗದೀಶ್ ಕೊಪ್ಪ.