ಬದುಕಿರುವ 1,054 ಮತದಾರರನ್ನು ‘ಸತ್ತವರು’ ಎಂದು ಬಿಂಬಿಸಿದ ಆರೋಪ: ಶಾಸಕ ಯತ್ನಾಳ್ ವಿರುದ್ಧ ಕ್ರಮಕ್ಕೆ ಜಾಗೃತ ಕರ್ನಾಟಕ ಆಗ್ರಹ

ಬೆಂಗಳೂರು : ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬದುಕಿರುವ 1,054 ಮತದಾರರನ್ನು ಮೃತರೆಂದು ಬಿಂಬಿಸಿ, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಪ್ರಯತ್ನಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಚುನಾವಣಾ ಆಯೋಗದ ನಡೆಗೆ ಜಾಗೃತ ಕರ್ನಾಟಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಅಕ್ಟೋಬರ್ 7ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರತಿನಿಧಿಗಳು, ಯತ್ನಾಳ್ ಅವರ ವಿರುದ್ಧದ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ಪ್ರಕರಣದಲ್ಲಿ ಅಕ್ರಮ ಕಂಡುಬಂದರೆ ಕ್ರಿಮಿನಲ್ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಯತ್ನಾಳ್ ಅವರು ವಿಜಯಪುರ ಕ್ಷೇತ್ರದ 198 ಮತಗಟ್ಟೆಗಳಿಗೆ ಸಂಬಂಧಿಸಿದಂತೆ 1,054 ಮತದಾರರು ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಿ ಚುನಾವಣಾಧಿಕಾರಿಗಳಿಗೆ ಪತ್ರ ನೀಡಿದ್ದರು. ಈ ಪಟ್ಟಿಯಲ್ಲಿ ಬದುಕಿರುವ ಮತದಾರರ ಹೆಸರುಗಳಿದ್ದವು ಎಂಬುದು ಬಳಿಕ ಬೆಳಕಿಗೆ ಬಂದಿದೆ ಎಂದು ಸಂಘಟನೆ ಆರೋಪಿಸಿದೆ. ಅಲ್ಲದೇ, ಸಂಬಂಧವಿಲ್ಲದ ಎಂಟು ಮರಣ ಪ್ರಮಾಣಪತ್ರಗಳನ್ನು ಸಹ ಲಗತ್ತಿಸಲಾಗಿತ್ತು ಎಂದು ಹೇಳಲಾಗಿದೆ.

ಕರಡು ಮತದಾರರ ಪಟ್ಟಿ ಆಗಸ್ಟ್ 24ರಂದು ಪ್ರಕಟವಾಗಿದ್ದು, ಕೇವಲ ಒಂದು ವಾರದೊಳಗೆ ಅಷ್ಟೊಂದು ದೊಡ್ಡ ಸಂಖ್ಯೆಯ ಮತದಾರರ ಹೆಸರುಗಳನ್ನು ಮೃತರ ಪಟ್ಟಿಯೊಂದಿಗೆ ಹೋಲಿಕೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಜಾಗೃತ ಕರ್ನಾಟಕ ಪ್ರಶ್ನಿಸಿದೆ. ಮತದಾರರ ಪಟ್ಟಿ ಮತ್ತು ಮೃತರ ಮಾಹಿತಿಯ ಸಾಫ್ಟ್ ಕಾಪಿಗಳು ಯಾರ ಮೂಲಕ ಯತ್ನಾಳ್ ಅವರಿಗೆ ಲಭ್ಯವಾದವು ಎಂಬುದರ ಕುರಿತು ತನಿಖೆ ನಡೆಯಬೇಕು ಎಂದು ಒತ್ತಾಯಿಸಿದೆ.

ಇದೇ ವೇಳೆ, ಯತ್ನಾಳ್ ಅವರು ನೀಡಿದ್ದ ಪಟ್ಟಿಯಲ್ಲಿ ಮತದಾರರ ಗುರುತಿನ ಚೀಟಿಯಲ್ಲಿರುವ ಬಣ್ಣದ ಛಾಯಾಚಿತ್ರಗಳನ್ನು ಬಳಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಮಾಹಿತಿಗಳು ಚುನಾವಣಾ ಆಯೋಗದ ವ್ಯವಸ್ಥೆಯಲ್ಲಿ ಲಭ್ಯವಿರುವುದರಿಂದ ಅವು ಹೊರಗೆ ಹೇಗೆ ಬಂದವು ಎಂಬುದನ್ನೂ ತನಿಖೆ ಮಾಡಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಫಾರಂ-7 ಸಲ್ಲಿಸದೇ ಕ್ರಮ ಹೇಗೆ?
ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಆಕ್ಷೇಪಣೆ ಸಲ್ಲಿಸಲು ನಿಗದಿತ ಪ್ರಕ್ರಿಯೆ ಇದ್ದರೂ, ಯತ್ನಾಳ್ ಅವರು ಫಾರಂ-7 ಮೂಲಕ ಅರ್ಜಿ ಸಲ್ಲಿಸದೆ ತಮ್ಮ ಲೆಟರ್‌ಹೆಡ್‌ನಲ್ಲಿ ಪತ್ರ ನೀಡಿದ್ದರು. ಆ ಪತ್ರದ ಆಧಾರದ ಮೇಲೆ ಚುನಾವಣಾಧಿಕಾರಿಗಳು ಕ್ರಮ ಕೈಗೊಂಡಿರುವುದು ಯಾವ ನಿಯಮದ ಅಡಿಯಲ್ಲಿ ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು ಎಂದು ಜಾಗೃತ ಕರ್ನಾಟಕ ಪ್ರಶ್ನಿಸಿದೆ.

ಫಾರಂ-7 ದುರ್ಬಳಕೆಯ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಚುನಾವಣಾ ಆಯೋಗ ನೀಡಿದ್ದ ಹೇಳಿಕೆಗಳನ್ನು ಉಲ್ಲೇಖಿಸಿದ ಸಂಘಟನೆ, ದೊಡ್ಡ ಸಂಖ್ಯೆಯಲ್ಲಿ ಫಾರಂ-7 ಅರ್ಜಿಗಳನ್ನು ಸಲ್ಲಿಸುವವರನ್ನು ಪರಿಶೀಲಿಸುವುದಾಗಿ ಆಯೋಗವೇ ಹೇಳಿತ್ತು. ಆದರೆ, ಕರ್ನಾಟಕದಲ್ಲಿ ಇಂತಹ ಪ್ರಕರಣಗಳ ಕುರಿತು ಈವರೆಗೆ ಪರಿಣಾಮಕಾರಿ ಕ್ರಮ ಕೈಗೊಂಡಿರುವುದು ಕಂಡುಬರುತ್ತಿಲ್ಲ ಎಂದು ಆರೋಪಿಸಿದೆ.

ಒಬ್ಬ ಬೂತ್ ಮಟ್ಟದ ಏಜೆಂಟ್ (BLA) ನಿಗದಿತ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಫಾರಂ-7 ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಿಲ್ಲ ಎಂಬ ನಿಯಮವಿರುವಾಗ, ಯಾವುದೇ ಫಾರಂ-7 ಅರ್ಜಿ ಸಲ್ಲಿಸದೆ ಲೆಟರ್‌ಹೆಡ್ ಮೂಲಕ ದೊಡ್ಡ ಸಂಖ್ಯೆಯ ಮತದಾರರ ಹೆಸರುಗಳನ್ನು ನೀಡಿರುವ ಯತ್ನಾಳ್ ಅವರ ಕ್ರಮವನ್ನು ಏಕೆ ಪರಿಶೀಲಿಸಲಾಗಿಲ್ಲ ಎಂದು ಸಂಘಟನೆ ಪ್ರಶ್ನಿಸಿದೆ.

‘ಮತದಾರರ ಹಕ್ಕು ರಕ್ಷಣೆಯಾಗಬೇಕು’
ಯತ್ನಾಳ್ ಅವರ ಪಟ್ಟಿಯಲ್ಲಿ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದ್ದ ಕೆಲ ಮತದಾರರು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಮಹಬೂಬಿ ಶೇಖ್, ಮಲನ್ನಿ ಜಮಾದಾರ ಹಾಗೂ ರಜಿಯಾ ಶೇಖ್ ಅವರು ತಾವು ಬದುಕಿದ್ದರೂ ಮತದಾರರ ಪಟ್ಟಿಯಲ್ಲಿ ಮೃತರೆಂದು ಗುರುತಿಸಿರುವುದರಿಂದ ಉಂಟಾದ ಆತಂಕವನ್ನು ವಿವರಿಸಿದ್ದಾರೆ ಎಂದು ಸಂಘಟನೆ ತಿಳಿಸಿದೆ.

ವಿಜಯಪುರದಲ್ಲಿ ಮತದಾರರ ಹಕ್ಕುಗಳ ರಕ್ಷಣೆಗೆ ಹೋರಾಟ ನಡೆಸುತ್ತಿರುವ ಪತ್ರಕರ್ತ ಇರ್ಫಾನ್ ಶೇಖ್ ಹಾಗೂ ಜಾಗೃತ ಕರ್ನಾಟಕದ ಡಾ. ವಾಸು ಎಚ್.ವಿ. ಕೂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬದುಕಿರುವ ವ್ಯಕ್ತಿಯನ್ನೇ ಮೃತಪಟ್ಟಿದ್ದಾರೆ ಎಂದು ಘೋಷಿಸಿ ಮತದಾನದ ಹಕ್ಕಿನಿಂದ ವಂಚಿಸುವ ಪ್ರಯತ್ನ ನಡೆದಿದ್ದರೆ ಅದು ಗಂಭೀರ ವಿಚಾರ. ಹೀಗಾಗಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನುಕುಮಾರ್ ಅವರು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜಾಗೃತ ಕರ್ನಾಟಕ ಒತ್ತಾಯಿಸಿದೆ.

Related Articles

ಇತ್ತೀಚಿನ ಸುದ್ದಿಗಳು