ಬೆಂಗಳೂರು: ರಾಜ್ಯದ ಸಿಇಟಿ ಪರೀಕ್ಷೆಯ ವೇಳೆ ಕಳೆದ ವರ್ಷ ಉಂಟಾಗಿದ್ದ ಜನಿವಾರ ವಿವಾದ ಈ ವರ್ಷವೂ ಮರುಕಳಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಮಡಿವಾಳದ ಕೃಪಾನಿಧಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಿಯಮದಂತೆ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಗುರುವಾರ ನಡೆದ ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ, ಆನಂದ್ ಸುಧೀರ್ ರಾವ್ ಸೇರಿದಂತೆ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಪಾಸಣೆ ಸಂದರ್ಭದಲ್ಲಿ ಸಿಬ್ಬಂದಿ ತಡೆದ ಹಿನ್ನೆಲೆಯಲ್ಲಿ, ಜನಿವಾರದಾರಿ ವಿದ್ಯಾರ್ಥಿಗಳು ಮತ್ತವರ ಪೋಷಕರಿಂದ ಆಕ್ರೋಶ ವ್ಯಕ್ತವಾಗಿದೆ.
ಸಿಇಟಿ ಪರೀಕ್ಷಾ ನಿಯಮಕ್ಕೆ ವಿರುದ್ಧವಾಗಿ ವಿದ್ಯಾರ್ಥಿಗಳು ಜನಿವಾರ ತೆಗೆಯಲು ವಿರೋಧ ವ್ಯಕ್ತಪಡಿಸಿದಾಗ, ‘ಜನಿವಾರ ತೆಗೆಯದಿದ್ದರೆ ಪರೀಕ್ಷೆಗೆ ಅವಕಾಶ ಇಲ್ಲ’ ಎಂದು ಸಿಬ್ಬಂದಿ ಎಚ್ಚರಿಕೆ ನೀಡಿದರು ಎಂದು ಜನಿವಾರದಾರಿಗಳಿಂದ ಆರೋಪ ಕೇಳಿಬಂದಿದೆ. ಅಂತಿಮವಾಗಿ ಪೋಷಕರು ಅನಿವಾರ್ಯವಾಗಿ ಜನಿವಾರ ತೆಗೆಸಿಕೊಂಡು ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾದ ತಕ್ಷಣ ಶಿಕ್ಷಣ ಇಲಾಖೆ ಹಾಗೂ ಸಿಇಟಿ ಸೆಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೋಷಕರನ್ನು ಮನವೊಲಿಸಲು ಯತ್ನಿಸಿದ ಅಧಿಕಾರಿಗಳು, ಯಾವುದೇ ದೂರು ನೀಡಬಾರದು ಎಂದು ಹೇಳಿ ಪತ್ರ ಬರೆಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಈ ಘಟನೆಗೆ ಸಂಬಂಧಿಸಿ ಪೋಷಕರು ಹಾಗೂ ಧಾರ್ಮಿಕ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಧಾರ್ಮಿಕ ಹಕ್ಕಿಗೆ ಧಕ್ಕೆ” ಎಂಬ ರೀತಿಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಜಾತಿ ಸೂಚಕ ಜನಿವಾರ ತೆಗೆಸುವ ಕ್ರಮವನ್ನು ತಕ್ಷಣ ನಿಲ್ಲಿಸಬೇಕು” ಎಂದು ಆಗ್ರಹಿಸಿದ್ದಾರೆ.
ಗಮನಾರ್ಹವಾಗಿ, ಕಳೆದ ವರ್ಷ ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜು ಹಾಗೂ ಬೀದರ್‌ನ ಪರೀಕ್ಷಾ ಕೇಂದ್ರಗಳಲ್ಲಿ ಸಹ ಇದೇ ರೀತಿಯ ವಿವಾದ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ, ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಅನುಸರಿಸಲಾಗುವ ನಿಯಮಾವಳಿ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಗೌರವ ಕುರಿತು ಮತ್ತೆ ಚರ್ಚೆ ಚಿಗುರೊಡೆಯುತ್ತಿದೆ.
