ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುವಾಗ ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಈ ವರೆಗೂ ತಲೆ ಕೆಡಿಸಿಕೊಂಡಿರಲಿಲ್ಲ. ಅದರಂತೆ ಇಂದೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಕಡ್ಡಿ ತುಂಡು ಮಾಡಿದಂತೆ ಐದು ವರ್ಷವೂ ನಾನೇ ಮುಖ್ಯಮಂತ್ರಿ ಎಂದು ಪುನರುಚ್ಚರಿಸಿದ್ದಾರೆ. ಹಾಗೇ ಸಂಪುಟ ಸಹೋದ್ಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೂ ಸಹ ಇನ್ನು ಮುಂದೆ ಈ ಬಗ್ಗೆ ಚರ್ಚೆ ಸಾಕು ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯನವರು ಕೊಟ್ಟ ಸಂದೇಶ ಮ್ಯಾಚ್ ಕ್ಲೋಸ್ ಅಂತ. ಇಂದಿನಿಂದ ಪವರ್ ಶೇರಿಂಗ್ ಚರ್ಚೆ ನಿಲ್ಲಬೇಕು. ಬದಲಾವಣೆ ಬಗ್ಗೆ ಯಾರು ಮಾತನಾಡುತ್ತಿದ್ದರೋ ಅವರಿಗೂ ಇದು ಕ್ಲೀಯರ್ ಮೆಸೇಜ್. ಇಂದಿನಿಂದ ಬದಲಾವಣೆ ಚರ್ಚೆ ಕ್ಲೋಸ್ ಆಗಬೇಕು ಎಂದು ಹೇಳಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರಕ್ಕೆ ಇನ್ನು ಇತಿಶ್ರೀ ಹಾಅಡಬೇಕು. ಸಿಎಂ ಸಿದ್ದರಾಮಯ್ಯ ಹೇಳಿರುವುದರಲ್ಲಿ ಹೊಸದೇನಿಲ್ಲ. ಈಗ ಹೇಳಬೇಕಾದ ಸಂದರ್ಭ ಬಂದಿದೆ. ಅದಕ್ಕೆ ಹೇಳಿದ್ದಾರೆ. ಸಿಎಂ ಬದಲಾವಣೆ ಚರ್ಚೆ ಎಲ್ಲಿಯೂ ಆಗಿಲ್ಲ. ಅಧಿಕಾರ ಹಂಚಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಾಸಕರು ನಾಯಕತ್ವ ಬದಲಾವಣೆ ಮಾಡಿ ಎಂದು ಹೇಳಿಲ್ಲ. ಸುರ್ಜೇವಾಲಾ ಮುಂದೆ ಎಲ್ಲಾ ಶಾಸಕರು ಅನುದಾನಕ್ಕೆ ಮಾಡಿರಬಹುದು. ಸಿಎಂ ಆಯ್ಕೆ ಮಾಡುವಾಗ ವೋಟಿಂಗ್ ಆಗಿತ್ತು. ವೋಟ್ ಹೆಚ್ಚಿದೆ ಅಂತಾ ಸಿದ್ದರಾಮಯ್ಯನವರನ್ನು ಸಿಎಂ ಮಾಡಿದ್ದಾರೆ. ಹೀಗಾಗಿ ಸಿಎಂ ಬೆಂಬಲಕ್ಕೆ ಹೆಚ್ಚು ಶಾಸಕರಿದ್ದಾರೆ. ಅದಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಸ್ಪಷ್ಟವಾಗಿ ಹೇಳಿದ್ದು, ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ತಿಳಿಸಿದರು.