ಕೆನಡಾದ ಮ್ಯಾನಿಟೋಬಾ ಎನ್ನುವಲ್ಲಿ ಎರಡು ತರಬೇತಿ ವಿಮಾನಗಳು ಡಿಕ್ಕಿ ಹೊಡೆದಿವೆ. ತರಬೇತಿ ಅವಧಿಯಲ್ಲಿ ಎರಡು ಸಿಂಗಲ್ ಎಂಜಿನ್ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದಿವೆ.
ಅಪಘಾತದಲ್ಲಿ ಇಬ್ಬರು ಯುವ ಪೈಲಟ್‌ಗಳು ಪ್ರಾಣ ಕಳೆದುಕೊಂಡಿದ್ದಾರೆ. ಮೃತ ಪೈಲಟ್‌ಗಳಲ್ಲಿ ಒಬ್ಬರು 23 ವರ್ಷದ ಭಾರತೀಯ ವಿದ್ಯಾರ್ಥಿ ಎಂದು ಟೊರೊಂಟೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಅವರನ್ನು ಕೇರಳದ ಶ್ರೀಹರಿ ಸುಖೇಶ್ ಎಂದು ಗುರುತಿಸಲಾಗಿದೆ. ಇನ್ನೋರ್ವ ಮೃತ ಪೈಲಟ್‌ನನ್ನು 20 ವರ್ಷದ ಕೆನಡಾದ ನಾಗರಿಕ ಸವನ್ನಾ ಮೇ ರಾಯ್ಸ್ ಎಂದು ಗುರುತಿಸಲಾಗಿದೆ.
ಕೊಟ್ಟಾಯಂ ಮೂಲದ ಸುದ್ದಿ ಸಂಸ್ಥೆ ಆನ್‌ಮನೋರಮಾ ಪ್ರಕಾರ ಸುಕೇಶ್ ಕೊಚ್ಚಿಯ ತ್ರಿಪುನಿತುರದಲ್ಲಿರುವ ಸ್ಟ್ಯಾಚ್ಯೂ ನ್ಯೂ ರೋಡ್ ನಿವಾಸಿ. ಅವರು ಹಾರ್ವ್ಸ್ ಏರ್ ಪೈಲಟ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದರು.
ಮಂಗಳವಾರ ಮುಂಜಾನೆ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಅಭ್ಯಾಸ ಮಾಡುವಾಗ ಅಪಘಾತ ಸಂಭವಿಸಿದೆ ಎಂದು ತರಬೇತಿ ಶಾಲೆಯ ಅಧ್ಯಕ್ಷ ಆಡಮ್ ಪೆನ್ನರ್ ಹೇಳಿದ್ದಾರೆ. ಇಬ್ಬರೂ ಒಂದೇ ಸಮಯದಲ್ಲಿ ವಿಮಾನ ಇಳಿಸಲು ಪ್ರಯತ್ನಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದರು.