Home ರಾಜ್ಯ ಮಂಡ್ಯ ಜೆಡಿಎಸ್‌ – ಬಿಜೆಪಿ ಮೈತ್ರಿ: ಕೆ.ಸಿ.ನಾರಾಯಣಗೌಡ, ಸುಮಲತಾ‌ ಅಂಬರೀಷ್ ಅಪಸ್ವರ!

ಜೆಡಿಎಸ್‌ – ಬಿಜೆಪಿ ಮೈತ್ರಿ: ಕೆ.ಸಿ.ನಾರಾಯಣಗೌಡ, ಸುಮಲತಾ‌ ಅಂಬರೀಷ್ ಅಪಸ್ವರ!

0

ಮಂಡ್ಯ: ಜಿಲ್ಲೆಯ ರಾಜಕಾರಣ ವಲಯದಲ್ಲಿ ಬಿಜೆಪಿ ಮತ್ತು ಜೆಡಿಸಿ ಮೈತ್ರಿ ತಲ್ಲಣ ಮೂಡಿಸಿದ್ದು ಅಲ್ಲಿನ ಮಾಜಿ ಜನತಾದಳ ನಾಯಕರು ಈಗ ಆಕುರಿತು ಅಪಸ್ವರ ಎತ್ತ ತೊಡಗಿದ್ದಾರೆ.

ಕಳೆದ ಬಾರಿ ಆಪರೇಷನ್‌ ಕಮಲಕ್ಕೆ ಒಳಗಾಗಿದ್ದ ಕೆ.ಸಿ.ನಾರಾಯಣಗೌಡರು ಈಗ ತನ್ನ ಮಾತೃಪಕ್ಷ ಬಿಜೆಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಮುಜುಗರಕ್ಕೆ ಈಡಾಗಿದ್ದಾರೆ. ಹಳ್ಳಿಗಳಲ್ಲಿ ಕಾರ್ಯಕರ್ತರ ನಡುವೆ ಕತ್ತಿ-ಚೂರಿಯಂತಹ ಪರಿಸ್ಥಿತಿಗಳಿರುತ್ತವೆ. ಹೀಗಿರುವಾಗ ಹಿರಿಯ ನಾಯಕರು ಜಿಲ್ಲಾ ಮಟ್ಟದ ನಾಯಕರೊಡನೆ ಸಮಾಲೋಚನೆ ಮಾಡದೆ ಮೈತ್ರಿ ಮಾಡಿಕೊಂಡರೆ ಏನಾಗಬಹುದೋ ಅದು ಮಂಡ್ಯದಲ್ಲೂ ಆಗುತ್ತಿರುವಂತಿದೆ.

ಜೊತೆಗೆ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾವು ಮುಂಗುಸಿಯಂತೆ ಕಿತ್ತಾಡಿದ್ದ ಜೆಡಿಎಸ್‌ ಪಕ್ಷದ ಕೆಲವು ನಾಯಕರು ಈಗ ಸುಮಲತಾ ಅವರೊಡನೆ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ. ಈ ಕುರಿತು ಸುಮಲತಾ ಕೂಡಾ ಕೊಂಕು ದನಿ ನುಡಿದ್ದಾರೆ. ಒಟ್ಟಾರೆ ಈ ಜಿಲ್ಲೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದ ಉಭಯ ಪಕ್ಷಗಳಿಗೆ ಲಾಭಕ್ಕಿಂತಲೂ ಹೆಚ್ಚು ನಷ್ಟವೇ ಎದುರಾಗುವ ಎಲ್ಲಾ ಸನ್ನಿವೇಶಗಳೂ ಕಾಣತೊಡಗಿವೆ.

ಇದಕ್ಕೆ ಸಾಕ್ಷಿಯನ್ನು ಬಿಜೆಪಿ ನಾಯಕರಾದ ನಾರಾಯಣ ಗೌಡ ಮತ್ತು ಸಂಸದೆ ಸುಮಲತಾ ಪತ್ರಿಕಾಗೋಷ್ಟಿಯಲ್ಲಿ ಆಡಿದ ಮಾತುಗಳೇ ಹೇಳುತ್ತಿವೆ.

ನಾರಾಯಣ ಗೌಡರ ಮನೆಯಲ್ಲಿ ನಡೆದ ಪತ್ರಿಕಾಗೋಷ್ಟಿಯ್ಲಲಿ ಮಾತನಾಡಿದ ಸುಮಲತಾ ಅಂಬರೀಷ್‌ ಅವರು “ಮೈತ್ರಿ ಬೇರೆ, ಲೋಕಸಭೆ ಅಭ್ಯರ್ಥಿಗಳ ಟಿಕೆಟ್ ಹಂಚಿಕೆ ಬೇರೆ, ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಪಡೆಯಬೇಕು ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯಿಂದ ಮೊದಲ ಶಾಸಕರಾಗಿ ಆಯ್ಕೆಯಾದವರು ಮಾಜಿ ಸಚಿವ ಕೆ.ಸಿ.ನಾರಾಯಣಗೌಡರು. ಜಿಲ್ಲೆಯಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮೊದಲು ನಾರಾಯಣಗೌಡರ ಅಭಿಪ್ರಾಯ ತಿಳಿದುಕೊಳ್ಳಬೇಕು, ಕಾರ್ಯಕರ್ತರ ಅಭಿಪ್ರಾಯಕ್ಕೆ ಬೆಲೆ ಕೊಡದಿದ್ದರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ” ಎಂದು ಅಭಿಪ್ರಾಯಪಟ್ಟರು.

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿ ಇತ್ತೀಚೆಗೆ ಬಿಜೆಪಿಯನ್ನು ಬೆಂಬಲಿಸಿದ ಸುಮಲತಾ, ಮೈತ್ರಿಯ ಬಗ್ಗೆ ನನ್ನ ನಿರ್ಣಯವನ್ನು ಹೇಳಿದರೆ ಕೆಲವರು ಅಸಮಾಧಾನಗೊಳ್ಳಬಹುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಪರೋಕ್ಷವಾಗಿ ಹೇಳಿದರು. ಮಂಡ್ಯ ಜಿಲ್ಲೆಯ ಜನರು ಸಹಕರಿಸಿದರೆ ಮತ್ತೆ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುತ್ತೇನೆ ಎಂದು ಸುಮಲತಾ ಅವರು ತಮ್ಮ ಮನದಾಳದ ಮಾತುಗಳನ್ನಾಡಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸುಮಲತಾ ನಮ್ಮ ಪಕ್ಷದ ಸಂಸದೆ ಎಂದು ಕರ್ನಾಟಕದ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು. ಅವರಿಗೆ ಮತ್ತೆ ಮಂಡ್ಯ ಲೋಕಸಭೆ ಟಿಕೆಟ್ ನೀಡುವಂತೆ ಬಿಜೆಪಿ ಹೈಕಮಾಂಡ್‌ಗೆ ಮನವಿ ಮಾಡಿದರು. ಜಿಲ್ಲೆಯಲ್ಲಿ ಜೆಡಿಎಸ್ ಹೆಚ್ಚು ಪ್ರಭಾವಿಯಾಗಿದೆ ಎಂಬುದು ಸುಳ್ಳು, ಜಿಲ್ಲೆಯಲ್ಲಿ ನಾನು ಸೇರಿದಂತೆ ಎಂಟು ಜನ ಜೆಡಿಎಸ್‌ ಶಾಸಕರು ಇದ್ದ ಸಮಯದಲ್ಲಿ ಸುಮಲತಾ ಅವರು ಪಕ್ಷೇತರ ಸಂಸದರಾಗಿ ಗೆದ್ದಿದ್ದಾರೆ ಎಂದರು.

ನಾರಾಯಣಗೌಡ ಮುಂದುವರೆದು ಮಾತನಾಡಿ, “ಕಳೆದ ಸಂಸತ್ ಚುನಾವಣೆ ವೇಳೆ ಜೆಡಿಎಸ್ ಪಕ್ಷದ ಶಾಸಕನಾಗಿದ್ದ ಸಂದರ್ಭದಲ್ಲಿ ನಾನು ಸುಮಲತಾ ಪರ ಕೆಲಸ ಮಾಡಿಲ್ಲ” ಎಂದರು.

ಲೋಕಸಭೆ ಚುನಾವಣೆ ವೇಳೆ ಎಂಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ನನ್ನ ಅಭಿಪ್ರಾಯವನ್ನು ಪಕ್ಷ ತೆಗೆದುಕೊಳ್ಳಲಿ, ಜೆಡಿಎಸ್ ಜೊತೆ ಮೈತ್ರಿಗೆ ನನ್ನ ಆತ್ಮಸಾಕ್ಷಿ ಒಪ್ಪಲ್ಲ, ಮೈತ್ರಿ ಮಾಡಿಕೊಂಡರೆ ಜೆಡಿಎಸ್ ಜೊತೆ ಕೆಲಸ ಮಾಡಲಾರೆ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ. ಇದರಿಂದಾಗಿ ಮಂಡ್ಯ ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಕಂಪನಗಳು ಉಂಟಾಗುತ್ತಿವರ. ಒಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸಂದರ್ಭದಲ್ಲಿ ಎರಡು ಪಕ್ಷಗಳ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಬಯಲಿಗೆ ಬರುತ್ತಿವೆ.

You cannot copy content of this page

Exit mobile version