ಜೆಡಿಎಸ್ ಪಕ್ಷ ಯಾವತ್ತಿಗೂ ಅಪ್ಪ-ಮಕ್ಕಳು ಅಥವಾ ತಾತ-ಮೊಮ್ಮಕ್ಕಳ ಪಕ್ಷವಾಗಿಲ್ಲ. ಇದೊಂದು ಕಾರ್ಯಕರ್ತರ ಪಕ್ಷ. ಇದನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಹಿರಿಯ ನಾಯಕ ಎಚ್. ಡಿ.ದೇವೇಗೌಡ ಗುಡುಗಿದರು. ರಾಯಚೂರಿನ ದೇವದುರ್ಗದಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡರು ಈ ರೀತಿಯಾಗಿ ಹೇಳಿದ್ದಾರೆ.
ದೇವದುರ್ಗ ಪಟ್ಟಣದ ಬಸವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ “ಜನರೊಂದಿಗೆ ಜನತಾದಳ” ಕಾರ್ಯಕ್ರಮ ಹಾಗೂ ದೇವೇಗೌಡರ ಪ್ರತಿಮೆ ಅನಾವರಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ದೇವೇಗೌಡರು, ಇಲ್ಲಿರುವ ಯಾರೂ ನನ್ನ ಬಂಧುಗಳಲ್ಲ. ನಾನು ಅಥವಾ ನನ್ನ ಕಾರ್ಯಕರ್ತರು ಯಾವತ್ತೂ ಜಾತಿ ನೋಡಿ ರಾಜಕಾರಣ ಮಾಡಿದವರಲ್ಲ ಎಂದು ಹೇಳಿದರು.
“ಒಂದು ರಾಜಕೀಯ ಪಕ್ಷವನ್ನು ಉಳಿಸುವ ಶಕ್ತಿ ಯಾರಿಗಾದರೂ ಇದ್ದರೆ ಅದು ಕಾರ್ಯಕರ್ತರು ಮತ್ತು ಮುಖಂಡರಿಗೆ ಮಾತ್ರ. ಪಕ್ಷವನ್ನು ಎಲ್ಲರೂ ಒಗ್ಗೂಡಿ ಉಳಿಸಬೇಕು” ಎಂದು ದೇವೇಗೌಡರು ಕರೆ ನೀಡಿದರು.
ಪುನರಪಿ ಜನನಂ ಪುನರಪಿ ಮರಣಂ ಎಂಬ ಸಾಲನ್ನು ವ್ಯಾಖ್ಯಾನಿಸಿದ ದೇವೇಗೌಡರು ನಾನು ಇನ್ನು ಒಂದು ವರ್ಷ ಅಷ್ಟೇ ಇರುತ್ತೇನೆ ಎಂಬ ಮಾತನ್ನಾಡಿದರು. ನಾನು ಮತ್ತೆ ಬರುತ್ತೇನೆ. ನಿಮ್ಮ ಮಧ್ಯದಲ್ಲಿಯೇ ಇರುತ್ತೇನೆ. ಬರೀ ಹಳೆ ಮೈಸೂರಲ್ಲಿ ಈ ದೇವೇಗೌಡ ಇರುತ್ತಾರೆ ಎನ್ನುವುದು ಸುಳ್ಳು. ರಾಜ್ಯವನ್ನು ಪಕ್ಕದ ರಾಜ್ಯಗಳಿಗೆ ಸರಿಸಮನಾಗಿ ಬೆಳೆಸಲು ಯುವಕರು ಏಳಬೇಕು. ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದಲ್ಲಷ್ಟೇ ಕಾಂಗ್ರೆಸ್ ಅಧಿಕಾರದಲ್ಲಿದೆ. ಮಹಾನಾಯಕ ರಾಜ್ಯದ ಬೊಕ್ಕಸ ಲೂಟಿ ಮಾಡಿದ್ದಾನೆ. ಬೆಂಗಳೂರಿನ ನಗರ ಪಾಲಿಕೆಯ ಗುಮಾಸ್ತರಿಗೆ ಸಂಬಳ ಕೊಡಲು ಸರಕಾರದ ಬಳಿ ದುಡ್ಡಿಲ್ಲ. ಇದನ್ನು ನಾನು ಹೇಳುತ್ತಿಲ್ಲ. ಅವರ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ ಎಂದರು.