ರಾಯಚೂರು: ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ (ಎಸ್.ಸಿ. ಮೋರ್ಚಾ) ಹುದ್ದೆಗೆ ಹಾಗೂ ಸಾಮಾನ್ಯ ಸದಸ್ಯತ್ವಕ್ಕೆ, ತಿಮ್ಮಪ್ಪ ಅಲ್ಕೂರು ಅವರು ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಪಕ್ಷದ ವರಿಷ್ಠರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ‘ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮೀನಾಮೇಷ ಮಾಡುತ್ತಿರುವುದರಿಂದ ಹಾಗೂ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ 4 ವರ್ಷಗಳು ಕಳೆದರೂ ಶಿಫಾರಸ್ಸು ಮಾಡುವಲ್ಲಿ ವಿಫಲವಾಗಿರುವುದರಿಂದ ಮನನೊಂದು ಮತ್ತು ನಮ್ಮ ಜನಾಂಗದ ಬಹುದೊಡ್ಡ ಬೇಡಿಕೆಗೆ ಅನ್ಯಾಯವಾಗುತ್ತಿರುವುದರಿಂದ, ಪಕ್ಷದಲ್ಲಿ ಸೇವೆ ಸಲ್ಲಿಸಲು ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ’ ಎಂದು ತಿಳಿಸಿದ್ದಾರೆ.
ತಿಮ್ಮಪ್ಪ ಅವರು, ಭಾರತೀಯ ಜನತಾ ಪಾರ್ಟಿಯಲ್ಲಿ ರಾಯಚೂರು ಗ್ರಾಮೀಣ ಭಾಗದಲ್ಲಿ ಪಕ್ಷದ ಸೇವೆ ಸಲ್ಲಿಸಿದರೂ ಸಹ ಯಾವುದೇ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ಸಿಗದಿರುವ ಕಾರಣ ಬೇಸತ್ತು, ರಾಜೀನಾಮೆ ನೀಡುತ್ತಿದ್ದಾರೆಂದು ರಾಜೀನಾಮೆ ಪತ್ರದಲ್ಲಿ ಬರೆಯಲಾಗಿದೆ.