ಚಿಕ್ಕಮಗಳೂರು: ಕಳೆದ ಇಪ್ಪತ್ತೈದು ವರ್ಷಗಳಿಂದ ಮಾವೋವಾದಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಆರು ಮಂದಿ ನಕ್ಸಲರು ಜನವರಿ, 8 ರಂದು ಚಿಕ್ಕಮಗಳೂರಿನಲ್ಲಿ ಮುಖ್ಯವಾಹಿನಿಗೆ ಬರಲಿದ್ದಾರೆ.
ಲತಾ ಮುಂಡಗಾರು, ವನಜಾಕ್ಷಿ, ಎಂ., ಜಯಣ್ಣ ಆರೋಲಿ, ಸುಂದರಿ, ವಸಂತ್.ಕೆ, ಜಿಷ. ಎ.ಡಿ ಎಂಬ ಆರು ಮಂದಿ ಮಾವೋವಾದಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ನಕ್ಸಲರು ಮುಖ್ಯವಾಹಿನಿಗೆ ಬರುವುದಾಗಿ ಒಪ್ಪಿಕೊಂಡಿದ್ದಾರೆ.
“ನಾವು ಆರು ಜನರು ಕಳೆದ 25 ವರ್ಷಗಳಿಂದ ಜನರ ಪರವಾಗಿ ಹೋರಾಡುತ್ತಾ ಬಂದಿದ್ದು, ಈಗ ಮುಖ್ಯ ವಾಹಿನಿಗೆ ಬಂದು ಸಂವಿಧನಾತ್ಮಕ, ಪ್ರಜಾಸತಾತ್ಮಕ ಹೋರಾಟಗಳಲ್ಲಿ ತೊಡಗಿಸಿಕೊಳ್ಳಲು ಸ್ವ ಇಚ್ಛೆಯಿಂದ ಬಯಸಿದ್ದೇವೆ. ಈಗಿನ ಬದಲಾದ ಪರಿಸ್ಥಿತಿಯಲ್ಲಿ ಅದೇ ಸರಿ ಎಂದು ತೀರ್ಮಾನಿಸಿದ್ದೇವೆ. ಮುಂದೆಯೂ ಜನರ ಪರವಾಗಿ ಕೊನೆ ಉಸಿರಿನ ತನಕ ಹೊರಡಲು ಬಯಸಿದ್ದೇವೆ,” ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಅಲ್ಲದೆ, ನಮಗೆ ಮುಖ್ಯವಾಹಿನಿಗೆ ಬರಲು ಕರೆಕೊಟ್ಟು ಜನರ ಪರವಾಗಿ ಮುಂದೆಯೂ ಪ್ರಜಾತಾಂತ್ರಿಕ ಹೋರಾಟಗಳಲ್ಲಿ ತೊಡಗಳು ಯಾವುದೇ ತಡೆ ಇಲ್ಲದಂತೆ ಮತ್ತು ಜನರ ಹಕ್ಕುಗಳಿಗಾಗಿ ನಾವಿಟ್ಟ ಹಕ್ಕೊತ್ತಾಯಗಳನ್ನು ಈಡೇರಿಸುವ ಭರವಸೆ ನೀಡಿದ ಮಾನ್ಯ ಮುಖ್ಯಮಂತ್ರಿಯವರಿಗೂ ಮತ್ತು ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ,” ಎಂದು ಹೇಳಿದ್ದಾರೆ.
“ಮೂರೂ ರಾಜ್ಯಗಳ ಪಶ್ಚಿಮ ಘಟ್ಟದಲ್ಲಿ ವಾಸಿಸುತ್ತಿರುವ ಆದಿವಾಸಿ, ದಲಿತ, ರೈತ, ಕೂಲಿ ಜನರ ಬದುಕಿಗೆ ಸಂಬಂಧಿಸಿದ ಮತ್ತು ಇಲ್ಲಿನ ಪರಿಸರಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಖಚಿತ ಹೆಜ್ಜೆಗಳನ್ನು ಇಡಬೇಕು ಎಂದು ನಾವು ಬಯಸುತ್ತೇವೆ. ಮೂರೂ ರಾಜ್ಯಗಳ ಸರ್ಕಾರಗಳಿಗೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಮೂರು ರಾಜ್ಯ ಜೈಲುಗಳಲ್ಲಿರುವ ನಮ್ಮ ಎಲ್ಲಾ ಕಾಡ್ಸ್ ರ್ ಕೇಸುಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ ಬಿಡುಗಡೆಗೊಳಿಸಲು ಮೃದು ಧೋರಣೆ ತೋರಬೇಕೆಂದು ಸರ್ಕಾರಗಳಲ್ಲಿ ಮನವಿ ಮಾಡುತ್ತೇವೆ. ವಿಕ್ರಂ ಗೌಡರ ಹತ್ಯೆಯ ಕುರಿತು ನ್ಯಾಯಾಂಗ ತನಿಖೆಗೆ ತನಿಖಾ ತಂಡವನ್ನು ರಚಿಸಬೇಕೆಂದು ಒತ್ತಾಯಿಸುತ್ತೇವೆ,” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.