Home ಬ್ರೇಕಿಂಗ್ ಸುದ್ದಿ ಪಶ್ಚಿಮ ಬಂಗಾಳ SIR ವಿವಾದ; ಮೇಲ್ಮನವಿಗಳ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ ಟಿ.ಎಸ್. ಸಿವಗ್ನಾನಂ, ರಾಜೀನಾಮೆ...

ಪಶ್ಚಿಮ ಬಂಗಾಳ SIR ವಿವಾದ; ಮೇಲ್ಮನವಿಗಳ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ ಟಿ.ಎಸ್. ಸಿವಗ್ನಾನಂ, ರಾಜೀನಾಮೆ ಸಲ್ಲಿಕೆ

0

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ, ವಿಶೇಷ ತೀವ್ರ ಪರಿಷ್ಕರಣ (SIR) ಮೇಲ್ಮನವಿ ನ್ಯಾಯಾಧಿಕರಣದ ಪ್ರಮುಖ ಸದಸ್ಯರಾಗಿದ್ದ ಮಾಜಿ ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಸಿವಗ್ನಾನಂ ಅವರು ರಾಜೀನಾಮೆ ನೀಡಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟ ಪ್ರಕರಣಗಳ ಮೇಲ್ಮನವಿ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ರಚಿಸಲಾಗಿದ್ದ ಈ ನ್ಯಾಯಾಧಿಕರಣದಿಂದ ಅವರು ಹೊರನಡೆದಿರುವುದು ರಾಜ್ಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಅಂಕಿ-ಅಂಶಗಳು ಏನು ಹೇಳೋದೇನು?
ಈ ಪ್ರಕರಣದ ಅತ್ಯಂತ ಗಮನಾರ್ಹ ಅಂಶವೆಂದರೆ — ನ್ಯಾ. ಸಿವಗ್ನಾನಂ ಅವರು ಒಬ್ಬರೇ 1,707 ಮೇಲ್ಮನವಿಗಳನ್ನು ಇತ್ಯರ್ಥಪಡಿಸಿ ಮತದಾರರ ಪರವಾಗಿ ತೀರ್ಪು ನೀಡಿದರು. ಆದರೆ ಚುನಾವಣಾ ಆಯೋಗ ಇಡೀ ರಾಜ್ಯದಾದ್ಯಂತ ಪೂರಕ ಮತದಾರರ ಪಟ್ಟಿಯಲ್ಲಿ ಸೇರಿಸಿದ ಹೆಸರುಗಳ ಸಂಖ್ಯೆ ಕೇವಲ 1,607 ಮಾತ್ರ. ಅಂದರೆ, ನ್ಯಾಯಾಧಿಕರಣ ಅನುಮೋದಿಸಿದ ಸಂಖ್ಯೆಗಿಂತಲೂ ಕಡಿಮೆ ಹೆಸರುಗಳನ್ನು ಆಯೋಗ ಪಟ್ಟಿಗೆ ಸೇರಿಸಿತು ಎಂಬ ಗಂಭೀರ ಪ್ರಶ್ನೆ ಎದ್ದಿದೆ.

SIR ಪ್ರಕ್ರಿಯೆ: ವ್ಯಾಪಕ ತಿದ್ದುಪಡಿ
SIR ಅಡಿ ರಾಜ್ಯದ ಸುಮಾರು 91 ಲಕ್ಷ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಯಿತು. ಇದು ರಾಜ್ಯದ ಒಟ್ಟು ಮತದಾರರ ಸರಿಸುಮಾರು ಶೇ. 12ರಷ್ಟಾಗುತ್ತದೆ. ಇದರಲ್ಲಿ:
* 63 ಲಕ್ಷ ಹೆಸರುಗಳನ್ನು ಮೃತ, ವಲಸೆ, ನಕಲು ಅಥವಾ ತಪ್ಪು ನಮೂದು ಎಂದು ಗುರುತಿಸಲಾಗಿದೆ.
* 27 ಲಕ್ಷ ಹೆಸರುಗಳನ್ನು “ತಾರ್ಕಿಕ ವ್ಯತ್ಯಾಸ”ಗಳ ಕಾರಣ ನೀಡಿ ಕೈಬಿಡಲಾಯಿತು.. ಅಂದರೆ ಹೆಸರಿನ ಕಾಗುಣಿತ ದೋಷ, ಲಿಂಗ ನಮೂದಿನ ತಪ್ಪು, ತಂದೆ-ಮಕ್ಕಳ ವಯಸ್ಸಿನ ಅಸಂಗತತೆ ಮುಂತಾದ ಕಾರಣಗಳನ್ನು ಮುಂದಿಡಲಾಯಿತು

ಮೇಲ್ಮನವಿ: ಲಕ್ಷಾಂತರ ಅರ್ಜಿ, ಪ್ರಯೋಜನ ಅತ್ಯಲ್ಪ
ಹೆಸರು ಕಳೆದುಕೊಂಡ ಮತದಾರರಲ್ಲಿ ೩೪ ಲಕ್ಷಕ್ಕೂ ಹೆಚ್ಚು ಮಂದಿ ನ್ಯಾಯಾಧಿಕರಣಗಳ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ 2026ರ ವಿಧಾನಸಭಾ ಚುನಾವಣೆಗೆ ಮೊದಲು ಮೇಲ್ಮನವಿ ಪ್ರಕ್ರಿಯೆ ಮೂಲಕ ಮರುಸ್ಥಾಪಿತರಾದ ಮತದಾರರ ಸಂಖ್ಯೆ ಕೇವಲ 136 ಮಾತ್ರ. ಇದು ಇಡೀ ಪ್ರಕ್ರಿಯೆಯ ಪರಿಣಾಮಕಾರಿತ್ವದ ಬಗ್ಗೆ ತೀವ್ರ ಅನುಮಾನಗಳನ್ನು ಹುಟ್ಟಿಹಾಕಿದೆ.

ನ್ಯಾ. ಸಿವಗ್ನಾನಂ ಅವರು ಮೇ 7ರಂದು ತಮ್ಮ ರಾಜೀನಾಮೆಯನ್ನು ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಜಯ್ ಪಾಲ್ ಅವರಿಗೆ ಸಲ್ಲಿಸಿದರು. “ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿದ್ದೇನೆ” ಎಂದಷ್ಟೇ ಅವರು ತಿಳಿಸಿದ್ದಾರೆ. ಆದರೆ ಚುನಾವಣಾ ಫಲಿತಾಂಶ ಘೋಷಣೆಯಾದ ಕೂಡಲೇ ರಾಜೀನಾಮೆ ನೀಡಿರುವುದು – ಅದರ ಸಮಯ – ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಮೇ ೪ರಂದು ಫಲಿತಾಂಶ ಹೊರಬಿದ್ದ ಚುನಾವಣೆಯಲ್ಲಿ BJP ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿದೆ.

ಸರ್ವೋಚ್ಚ ನ್ಯಾಯಾಲಯ ಈ ರಾಜೀನಾಮೆ ಸ್ವೀಕರಿಸಿದರೆ, ಇನ್ನೂ ಬಾಕಿ ಉಳಿದಿರುವ ಮೇಲ್ಮನವಿ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಮತದಾರರ ಹೆಸರು ಅಳಿಸುವ ಪ್ರಕ್ರಿಯೆ, ಮೇಲ್ಮನವಿಯ ವೈಫಲ್ಯ ಮತ್ತು ನ್ಯಾಯಾಧಿಕರಣದ ರಾಜೀನಾಮೆ – ಈ ಮೂರು ಅಂಶಗಳು ಸೇರಿ ಪಶ್ಚಿಮ ಬಂಗಾಳದ SIR ಪ್ರಕ್ರಿಯೆಯನ್ನು ದೇಶದ ಚುನಾವಣಾ ಇತಿಹಾಸದಲ್ಲಿ ಅತ್ಯಂತ ವಿವಾದಾಸ್ಪದ ಅಧ್ಯಾಯಗಳಲ್ಲಿ ಒಂದಾಗಿಸಿವೆ.

You cannot copy content of this page

Exit mobile version