ಕುಂದಾಪುರ: ತಾಲ್ಲೂಕಿನ ಆಲೂರು ಗ್ರಾಮದ ಹಾಡಿಮನೆ ಎನ್ನುವಲ್ಲಿ ಜರುಗಿದ ಕಾಡ್ತ್ ಕಿಜ್ರ್ ಬಣ್ತ್ ಹೆಜ್ (ಕಾಡಿನ ಮಕ್ಕಳ ಬಣ್ಣದ ಹೆಜ್ಜೆ) ಎನ್ನುವ ರಜಾಕಾಲದ ರಂಗ ಶಿಬಿರವು ಕುಂದಾಪುರ ಸಮುದಾಯ ಸಾಂಸ್ಕೃತಿಕ ಸಂಘಟನೆಯ ವಾಸುದೇವ ಗಂಗೇರ ಅವರ ನಿರ್ದೇಶನದಲ್ಲಿ ಆರು ದಿನಗಳ ಕಾಲ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಹಿರಿಯರು ಬಹಳ ಉತ್ಸಾಹದಿಂದ ಪಾಲ್ಗೊಂಡು ತಮ್ಮ ದೈನಂದಿನ ಬದುಕಿನ ಜಂಜಡಗಳ ನಡುವೆ ಒಂದಷ್ಟು ಸಂಭ್ರಮವನ್ನು ಅನುಭವಿಸಿದರು. ಆ ಕಾರ್ಯಕ್ರಮದ ಸಮಾರೋಪ ಸಮಾರಂಭದ ಕೆಲವು ಚಿತ್ರಗಳು ಮತ್ತುವರದಿಯನ್ನು ನಿಮಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಎಸ್ ವೈ ಗುರುಶಾಂತ್ ಮಾತನಾಡಿ ಈ ರೀತಿಯ ರಂಗ ತರಬೇತಿ ಶಿಬಿರ ಈ ಸಮುದಾಯದ ನಡುವೆ ಹೆಚ್ಚು ಹೆಚ್ಚು ನಡೆಯಬೇಕು. ಕೊರಗ ಸಮುದಾಯದ ಮಕ್ಕಳಿಗೆ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಒದಗಿಸುವ ಕೆಲಸ ಆಗಬೇಕು. ಆಲೂರಿನ ಕೊರಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿ ಅಖಿಲೇಶ್ ಅತ್ಯಂತ ಹೆಚ್ಚು ಅಂಕಗಳನ್ನು ಪಡೆದಿರುವುದು ಹಾಗೆ ಅಂಕಿತಾ ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿದ್ದಾರೆ. ಹಾಗೆ ಇಲ್ಲಿನ ಸ್ಥಳೀಯ ಕೊರಗ ಮಕ್ಕಳಲ್ಲಿ ಪ್ರತಿಭಾವಂತರು ಇದ್ದಾರೆ ಅವರಿಗೆ ಗುರಿ ತಲುಪಲು ಸಹಾಯ ಮಾಡಬೇಕಾದ ಮಹತ್ತರವಾದ ಜವಬ್ದಾರಿ ಈ ಸಮಾಜದ ಮೇಲಿದೆ ಎಂದು ಅವರು ತಿಳಿಸಿದರು.

ಈ ರಂಗ ತರಬೇತಿ ಶಿಬಿರ ಸರಕಾರದ ಯಾವುದೇ ಇಲಾಖೆಗಳ ಸಹಕಾರ ಇಲ್ಲದೇ ದಾನಿಗಳ ನೆರವಿನಿಂದ ಅದರಲ್ಲೂ, ಕೊರಗ ಸಮುದಾಯದವರೇ ನೀಡಿದ ಆಹಾರ ಸಾಮಗ್ರಿ ಸಂಗ್ರಹಿಸಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ರೀತಿಯ ಚಟುವಟಿಕೆಗಳನ್ನು ಮುಂದುವರಿಸಬೇಕು ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಮುದಾಯ ಕುಂದಾಪುರ ಇದರ ಅಧ್ಯಕ್ಷರಾದ ಉದಯ ಗಾಂವಕರ್ ಮಾತನಾಡಿ ಈ ಮಕ್ಕಳಿಗೆ ನಾವು ಏನನ್ನು ಕಲಿಸಲು, ಹೊಸತನ್ನು ಅವರ ತಲೆಗೆ ತುಂಬುವ ಕೆಲಸವನ್ನು ನಾವು ಮಾಡಿಲ್ಲ. ಈ ಸಮುದಾಯ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದೆ. ಅವರ ಸಮುದಾಯದ ನಾಯಕ ಹುಭಾಶಿಕನ ಕಥೆಯ ಎಳೆಯನ್ನು ಹಿಡಿದುಕೊಂಡು ನಾಟಕವನ್ನು ಕಟ್ಟಿದೇವೆ. ಒಂದು ವಾರದಲ್ಲಿ ನಾವು ಮಕ್ಕಳೊಂದಿಗೆ ಕೊರಗ ಸಮುದಾಯದ ಬಂಧುಗಳೊಂದಿಗೆ ಬೆರೆತು ಸಾಕಷ್ಟು ಕಲಿತಿದ್ದೇವೆ. ಈ ಸಮುದಾಯದ ನಡುವೆ ನಾವು ಕಲಿಯಬೇಕಾದ ವಿಷಯಗಳು ಬಹಳಷ್ಟಿವೆ ಎಂದರು. ಹಾಗೆ ಈ ಶಿಬಿರ ನಡೆಸಲು ತೀರ್ಮಾನ ಮಾಡಿರುವ ಶಿಬಿರದ ನಿರ್ದೇಶಕರಾದ ವಾಸುದೇವ ಗಂಗೇರ ಮತ್ತು ಆದಿವಾಸಿ ಸಂಘಟನೆ ಮುಖಂಡರಾದ ಶ್ರೀಧರ ನಾಡ ಅವರಿಗೆ ಅಭಿನಂದನೆ ಸಲ್ಲಿಸಿದರು.
ಆ ದಿನ ವೇದಿಕೆಯಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕರು ಆದ ಡಾ ಕೃಷ್ಣಪ್ಪ ಕೊಂಚಾಡಿ, ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷರು ಫಿಲಿಪ್ ಡಿಸಿಲ್ವಾ, ವಿನಯ್ ಕೊರ್ಲಹಳ್ಳಿ, ಪೊಲೀಸ್ ಉಪನಿರೀಕ್ಷಕರು ಗಂಗೊಳಿ ಪೊಲೀಸ್ ಠಾಣೆ, ಲಕ್ಷ್ಮಣ ಬೈಂದೂರು, ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಜಲಜ ಶೆಡ್ತಿ, ಆಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ರವಿ ಶೆಟ್ಟಿ, ಶಿಬಿರದ ನಿರ್ದೇಶಕರು ವಾಸುದೇವ ಗಂಗೇರ, ಕೊರಗ ಮುಖಂಡ ಗಣೇಶ ಆಲೂರು, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಅಧ್ಯಕ್ಷ ಶ್ರೀಧರ ನಾಡ ಉಪಸ್ಥಿತರಿದ್ದರು. ರಮೇಶ್ ಗುಲ್ವಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ರೇವತಿ ಸ್ವಾಗತಿಸಿದರು, ಶ್ರೀಧರ ನಾಡ ವಂದಿಸಿದರು