ಆಕೆಯನ್ನು ಜನರಿಗೆ ಮೋಜು ನೀಡಲು ಜೀವನಪೂರ್ತಿ ಬಳಸಲಾಗುತ್ತದೆ. ಆಕೆಯ ಹಿಂಬದಿಯ ಉಬ್ಬಿದ ಬಂಪ್ ಮೇಲೆ ಹೆಂಡದ ಬಾಟಲಿ ಇಟ್ಟು ಬ್ಯಾಲೆನ್ಸ್ ಮಾಡುವುದನ್ನು ಜನರು ಮೋಜಿನಿಂದ ನೋಡಲು ಬಯಸಿ ಆಕೆಯ ಷೋ ಮಾಡಿಸುತ್ತಿದ್ದರಂತೆ.
ಆಕೆ ಸಹ ವಿದೇಶಿಯರ ಇಂತಹ ಮೋಜು, ಮಸ್ತಿಯ ಕೂಟಗಳಿಗೆ ಖಾಯಂ ಬಫೂನ್ ಆಗಿಬಿಟ್ಟಿದ್ದಳು. ಆಕೆಯನ್ನು ಹಲವು ಬಾರಿ ಖರೀದಿ ಮಾಡಲಾಗಿತ್ತು ಹಾಗೂ ಇಂತಹ ಆಟಗಳಿಗಾಗಿಯೇ ಮಾರಾಟ ಮಾಡಲಾಗಿತ್ತು.
ಈಕೆ ಓರ್ವ ಕಪ್ಪು ವರ್ಣದ ಮಹಿಳೆಯಾಗಿದ್ದಳು. ಈಕೆಯ ಜೀವನದುದ್ದಕ್ಕೂ ಕಣ್ಣೀರು ನುಂಗಿ ಬದುಕಿದ್ದಳು. ಆಕೆ ಸಾವಾದ ೧೮೭ ವರ್ಷಗಳು ಸಹ ಆಕೆಯ ಅಂಗಗಳನ್ನು ಸಹ ಷೋ ಮಾಡುತ್ತಿದ್ದ ಮನುಷ್ಯರಿದ್ದರು ಎಂದರೆ ನೀವು ನಂಬಲೇಬೇಕು.
ಆಕೆಯ ನಾಮಧೇಯ ಸಾರಾ ಬಾರ್ಟ್ಮನ್ ಎಂದಾಗಿತ್ತು. ಆಕೆಯನ್ನು ಅತ್ಯಂತ ದುರದೃಷ್ಟ ಮನುಷ್ಯಳು ಎಂದೇ ಹೇಳಲಾಗುತ್ತದೆ. ಆಕೆ ೧೭೮೯ರಲ್ಲಿ ದಕ್ಷಿಣ ಆಫ್ರಿಕಾ ಖಂಡದ ಈಸ್ಟ್ರನ್ ಕೇಪ್ ಎಂಬಲ್ಲಿ ಹುಟ್ಟಿದ ಹೆಣ್ಣು ಮಗಳು.
ಆ ಕಾಲದಲ್ಲಿ ದಕ್ಷಿಣ ಆಫ್ರಿಕಾ ದೇಶೀಯರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದ ಕೆಟ್ಟ ಸಮಯ. ಎರಡು ವರ್ಷದವಳಿದ್ದ ಸಮಯದಲ್ಲಿ ಆಕೆಯ ತಾಯಿ ಮರಣ ಹೊಂದಿದ್ದರು. ಆಕೆಗೆ ನಾಲ್ಕು ವರ್ಷಗಳಾದ ನಂತರ ತಂದೆ ಬಿಟ್ಟು ಹೋಗುತ್ತಾರೆ. ಆಕೆ ಕೊಯೆ ಕೊಯೆ ಸಮುದಾಯದವಳಾಗಿದ್ದು ಅವರಲ್ಲೇ ಆಶ್ರಯ ಪಡೆಯುತ್ತಾಳೆ. ಹಣಕ್ಕಾಗಿ ಜನ ಮಾರಾಟವಾಗುತ್ತಿದ್ದ ಆ ಕಗ್ಗತ್ತಲೆಯ ಖಂಡದ ಆ ಹೆಣ್ಣುಮಗಳ ಬದುಕು ಕಗ್ಗತ್ತಲೆಯಿಂದಲೇ ಮುಗಿದಿತ್ತು.
ಆಕೆಯ ಉಬ್ಬಿದ ಬಂಪ್ ಗಳನ್ನು ಪುರುಷರು ಮಹಿಳೆಯರೆನ್ನದೆ ಎಲ್ಲರೂ ನಿರ್ಭೀಡೆಯಿಂದ ಮುಟ್ಟಲು ಇಚ್ಛಿಸುತ್ತಿದ್ದರು. ಆಕೆಯ ಸಾರ್ವಜನಿಕ ಷೋಗಳಿಗಲ್ಲದೆ ಖಾಸಗಿ ಷೋಗಳಿಗೆ ಹೆಚ್ಚು ಬೇಡಿಕೆ ಇತ್ತು ಎಂಬ ಅಂಶ ಸಿರಿವಂತರ ತಿಕ್ಕಲುಗಳ ಪೂರೈಕೆಗಾಗಿ ಆಕೆಯನ್ನು ಅಡವಿಡಲಾಗಿತ್ತು ಎಂಬುದನ್ನು ಪುಷ್ಟೀಕರಿಸುತ್ತದೆ.
ಆಕೆಯ ಮೇಲೆ ಮಹಿಳೆಯರು ಸವಾರಿ ಮಾಡುವುದು, ಉಬ್ಬಿದ ಬಂಪ್ ಗಳಿಗೆ ಹೊಡೆಯುವುದನ್ನು ನಾಚಿಕೆ ಇಲ್ಲದೆ ಮಾಡುತ್ತಿದ್ದರು. ಇವೆಲ್ಲಾ ಆಕೆಗೆ ಷೋ ಹೆಸರಿನಲ್ಲಿ ನೀಡಲಾಗಿದ್ದ ಹಿಂಸೆಯ ಕೆಲವು ನೈಜ ಉದಾಹರಣೆಗಳು.
ಆಕೆಯ ಭಾವಚಿತ್ರಗಳನ್ನು ತಮಾಷೆಯ ಹೆಸರಿನಲ್ಲಿ ಲಂಡನ್ ಪತ್ರಿಕೆಗಳಲ್ಲಿ ಅಚ್ಚು ಹಾಕಲಾಗುತ್ತಿತ್ತು. ಯಾವುದೇ ಹೆಣ್ಣಿಗೆ ಆಗಲಿ ಇವೆಲ್ಲಾ ನೆಮ್ಮದಿ ಕದಡಿದ ವಿಚಾರಗಳಾಗಿದ್ದುವು. ಆಕೆಯ ಆಕಾರವೇ ಮುಳ್ಳಾಗುವ ಹಾಗೆ ಜನರು ವರ್ತನೆಗಳಿದ್ದುವು.
೧೮೦೭ರಲ್ಲಿ ಬ್ರಿಟನ್ ನಲ್ಲಿ ಗುಲಾಮರ ಖರೀದಿ ಮಾರಾಟವನ್ನು ಕಾನೂನುಬದ್ಧಗೊಳಿಸಲಾಗಿತ್ತು. ಇದು ಆಕೆಗೆ ಇನ್ನಷ್ಟು ನೋವು ತರಿಸಿತ್ತು. ಆಕೆಯ ಮಾಲೀಕ ಫ್ರಾನ್ಸ್ ದೇಶಕ್ಕೆ ಮಾರಾಟ ಮಾಡಿದ ಮೇಲೂ ಆಕೆ ಸರ್ಕಸ್ ಪ್ರಾಣಿಯ ಹಾಗೆ ಮತ್ತೊಮ್ಮೆ ಬಳಕೆಯಾಗಬೇಕಾಯ್ತು.
೨೯ ಡಿಸೆಂಬರ್ ೧೮೧೫ರಂದು ಸಾರಾ ಮರಣ ಹೊಂದುತ್ತಾಳೆ. ಆದರೆ ಆಕೆಯ ಮರಣಾನಂತರ ಸಹ ಆ ದೇಶಕ್ಕೆ ಯಾವುದೇ ಗೌರವ ನೀಡದೆ ನಡೆಸಿಕೊಳ್ಳಲಾಗುತ್ತದೆ. ಆಕೆಯ ಉಬ್ಬಿದ ನಿತಂಬಗಳನ್ನು ಅಮಾನವೀಯವಾಗಿ ಕತ್ತರಿಸಿ ಸಂಗ್ರಹಿಸಿಡಲಾಗುತ್ತದೆ ಜೊತೆಗೆ ಅವುಗಳ ಪ್ರದರ್ಶನ ಎಂದಿನಂತೆ ಆಕೆಯ ಬದಲು ನಡೆಸಲಾಗುತ್ತದೆ.
ಆಕೆಯ ದೇಹದ ಅಂಗಾಂಶಗಳ ಷೋ ಮಾಡುವುದರ ಜೊತೆಗೆ ಆಕೆಯ ದೇಹ ಮತ್ತು ಖಾಸಗಿ ಅಂಗಗಳನ್ನು ಬೇರ್ಪಡಿಸಿ ಫ್ರಾನ್ಸ್ ದೇಶದ ಒಂದು ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ.
ಆಕೆಯನ್ನೇ ಹೋಲುವ ಪ್ಲಾಸ್ಟರ್ ಕಾಸ್ಟ್ ಮಾಡಿ ಸಾರಾ ಹೇಗಿದ್ದಳು ಎಂಬುದನ್ನು ನಿರೂಪಿಸಲು ಬಳಸಲಾಗುತ್ತದೆ. ಇಂತಹ ಅಮಾನವೀಯ ನಡವಳಿಕೆ ೧೯೯೪ರವರೆಗೂ ಅವಿರತವಾಗಿ ನಡೆದಿತ್ತು.
೧೯೯೪ರಲ್ಲಿ ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾ ದೇಶದ ಅಧ್ಯಕ್ಷರಾಗಿ ಆಯ್ಕೆಯಾದಾಗ ಜಗತ್ತಿನಲ್ಲಿ ಸಾರಾಳ ಮೇಲೆ ನಡೆದ ಕ್ರೂರತೆಯನ್ನು ಹೊರಗೆಳೆದರು. ಸಾರಾ ಮರಣ ಹೊಂದಿದ ಮೇಲೂ ಆಕೆಯ ದೇಹದಿಂದ ಹೇಗೆ ಫ್ರಾನ್ಸ್ ದೇಶದ ಕೆಲವರು ಹಣ ಮಾಡುತ್ತಿದ್ದಾರೆ ಎಂದು ಆ ಅಮಾನವೀಯ ಕೆಲಸಗಳನ್ನು ಎತ್ತಿ ತೋರಿಸಿದರು.
ನೆಲ್ಸನ್ ಮಂಡೇಲಾರ ನಿರಂತರವಾದ ಹಲವು ಪ್ರಯತ್ನಗಳ ನಂತರ ಸಾರಾ ದೇಹಕ್ಕೆ ಗೌರವಪೂರ್ಣ ದಫನ್ ಮಾಡಲು ಅವಕಾಶ ಲಭಿಸಿತು. ೨೦೦೪ರಲ್ಲಿ ಸಾರಾಳ ದೇಹ ಮತ್ತು ಅಂಗಾಂಗಗಳು ಜೊತೆಗೆ ಫ್ಲಾಸ್ಟರ್ ಕಾಸ್ಟ್ ಎಲ್ಲವನ್ನು ತಾಯ್ನಾಡಿಗೆ ಮರಳಿಸಲಾಯ್ತು.
ಆಕೆಯ ಹುಟ್ಟಿದ ಊರಾದ ಈಸ್ಟ್ರನ್ ಕೇಪ್ ನಲ್ಲಿ ಸರ್ಕಾರಿ ಗೌರವದೊಂದಿಗೆ ಸಮಾಧಿ ಮಾಡಲಾಗುತ್ತದೆ.
ಹೀಗೆ ಓರ್ವ ಹೆಣ್ಣು ಮಗಳ ನೋವಿಗೆ ಕೊನೆ ಹಾಡಲಾಯಿತು. ಇಂದು ಆಕೆಯ ಹೆಸರನ್ನು ಒಂದು ಹಡಗಿಗೆ ಇರಿಸಲಾಗಿದೆ. ಯುನಿವರ್ಸಿಟಿಯೊಂದು ಆಕೆಯ ಹೆಸರನ್ನು ತನ್ನ ಸಭಾಭವನಕ್ಕೆ ಇರಿಸಿದೆ.
ನಿರಂತರ ನೋವುಂಡ ಆಕೆಯ ದೇಹ ಆತ್ಮಗಳಿಗೆ ಚಿರಶಾಂತಿ ಸಿಗಲೆಂದು ಕೋರುತ್ತಾ.. ಓಂ ಶಾಂತಿ
– ನಳಿನಾ ಧರ್ಮರಾಜ್