–ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ
ಕರ್ನಾಟಕದಲ್ಲಿ ಕನ್ನಡವೇ ಪ್ರಧಾನವಾದ ಭಾಷೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆ ಕಾರಣಕ್ಕೇನೆ, ಕರ್ನಾಟಕ ರಾಜಭಾಷಾ ಅಧಿನಿಯಮ, ೧೯೬೩ರ ಅಡಿಯಲ್ಲಿ ಕನ್ನಡವನ್ನು ರಾಜ್ಯದ ಅಧಿಕೃತ ಭಾಷೆ ಎಂದು ಘೋಷಿಸಲಾಯಿತು. ಆಗ ಸರಕಾರದ ಕೆಲಸ ಇದ್ದದ್ದು ಒಂದು ಕಡೆ ಕನ್ನಡ ಭಾಷೆಯನ್ನು ಆಡಳಿತ, ನ್ಯಾಯಾಂಗ, ಶಿಕ್ಷಣ, ವಾಣಿಜ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಬಳಕೆಗೆ ಸಮರ್ಥವಾಗುವಂತೆ ಅಭಿವೃದ್ಧಿ ಪಡಿಸುವುದು; ಇನ್ನೊಂದು ಕಡೆ ಇದರಲ್ಲಿ ಒಳಗೊಳ್ಳುವ ಜನ ಸಂಪನ್ಮೂಲವನ್ನು ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡವನ್ನು ಬಳಸುವಂತೆ ಸಬಲಗೊಳಿಸುವುದು, ಮತ್ತೊಂದು ಕಡೆ, ಮೂಲಭೂತ ಶಿಕ್ಷಣ ವ್ಯವಸ್ಥೆಯಲ್ಲಿಯೇ ಬಹೋಪಯೋಗಿ ಕನ್ನಡ ಭಾಷಾ ಕೌಶಲಗಳಲ್ಲಿ ಭಾವೀ ನಾಗರಿಕರನ್ನು ಸಜ್ಜುಗೊಳಿಸುವುದು. ನಮ್ಮ ಸರಕಾರ ಈ ಮೂರೂ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ ಅಷ್ಟಕ್ಕಷ್ಟೇ. ಇದಕ್ಕೆ ಕಾರಣ, ಇದರ ಹೊಣೆಯನ್ನು ಹೊತ್ತಿರುವ ಇಲಾಖೆ, ಅಧಿಕಾರಿಗಳು ಮತ್ತು ರಾಜಕಾರಣಿಗಳಲ್ಲಿ ಈ ಕುರಿತು ಇರುವ ವೈಜ್ಞಾನಿಕವಾದ ಅರಿವಿನ, ದೃಷ್ಟಿಕೋನದ ತೀವ್ರವಾದ ಕೊರತೆ.೧೯೬೩ರಲ್ಲಿ ಜಾರಿಗೆ ಬಂದ ಕರ್ನಾಟಕ ರಾಜಭಾಷಾ ಅಧಿನಿಯಮ, ಕನ್ನಡವನ್ನು ರಾಜ್ಯದ ಅಧಿಕೃತ ಭಾಷೆ ಎಂದು ಸ್ಪಷ್ಟವಾಗಿ ಘೋಷಿಸುತ್ತದೆ, ಮತ್ತು ಅದರ ಅನುಷ್ಠಾನಕ್ಕಾಗಿ ಪ್ರಾಯೋಗಿಕವಾದ ಹಂತಗಳನ್ನು ಸೂಚಿಸುತ್ತದೆ. ಇದಕ್ಕೆ ಪೂರಕವಾಗಿ ಸರಕಾರವು ೧೯೭೩ರಲ್ಲಿ ಮುಖ್ಯ ಭಾಷಾಂತರಕಾರರ ಕಛೆರಿಯನ್ನು ಪುನಾರಚಿಸಿ, “ಭಾಷಾ ನಿರ್ದೇಶನಾಲಯ’ವನ್ನಾಗಿ ರೂಪಿಸಿತು, ಇದನ್ನು ೧೯೭೭ರಲ್ಲಿ ಪುನಃ ಸಂಘಟಿಸಿತು, “ಭಾಷಾಂತರ ನಿರ್ದೇಶನಾಲಯ”ವನ್ನು ರಚಿಸಿತು. ಕನ್ನಡವನ್ನು ಸರಕಾರದ ಎಲ್ಲಾ ಹಂತಗಳಲ್ಲಿಯೂ ಆಡಳಿತ ಭಾಷೆಯಾಗಿ ಜಾರಿಗೆ ತರುವ ರಾಜ್ಯ ಸರಕಾರದ ನೀತಿಯ ಅನ್ವಯ ಇವು ಕೇಂದ್ರ ಮತ್ತು ರಾಜ್ಯ ಅಧಿನಿಯಮಗಳು ಮತ್ತು ನಿಯಮಾವಳಿಗಳನ್ನು ಕನ್ನಡಕ್ಕೆ ಭಾಷಂತರಿಸುವುದು ಹಾಗೂ ಅವರುಗಳನ್ನು ಪುಸ್ತಕ ರೂಪದಲ್ಲಿ ಅಧಿಕೃತ ಕನ್ನಡ ಪಾಠವನ್ನು ಪ್ರಕಟಿಸುವ ಕೆಲಸವನ್ನು ನಿರ್ವಹಿಸುತ್ತಾ ಬಂದಿವೆ.
ಈ ಬೆಳವಣಿಗೆಗಳ ಜೊತೆಯಲ್ಲಿಯೇ ಕನ್ನಡ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಉತ್ತೇಜಿಸಲು ಈ ಕೆಳಗಿನ ಕಾನೂನುಗಳನ್ನು ಜಾರಿಗೆ ತಂದಿದೆ. ಕರ್ನಾಟಕ ರಾಜಭಾಷಾ ಅಧಿನಿಯಮ, ೧೯೬೩; ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಅಧಿಕೃತ ಭಾಷಾ) ಅಧಿನಿಯಮ, ೧೯೮೧, ಮತ್ತು ಕನ್ನಡ ಕಲಿಕಾ ಅಧಿನಿಯಮ, ೨೦೧೫. ೧೯೭೭ರಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ೧೯೯೨ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಹಲವಾರು ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಕಾವಲು, ಜಾಗೃತ, ಅನುಷ್ಠಾನ ಸಮಿತಿಗಳು ಆದವು. ಈಗ ಸರಕಾರವು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ, ೨೦೨೨ನ್ನು ಅಧಿನಿಯಮ ಮಾಡಲು ಹೊರಟಿದೆ. ಏಕೆಂದರೆ, ಇದೇ ಮಸೂದೆಯಲ್ಲಿ ಹೇಳಿರುವಂತೆ, ಈ ಹಿಂದಿನ ಅಧಿನಿಯಮಗಳು, ಅಧಿಸೂಚನೆಗಳು, ಸುತ್ತೋಲೆ ಇತ್ಯಾದಿಗಳಿಂದ, ಸರಕಾರವು ‘ಕನ್ನಡ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿಸುವ ಆಶಯ ನೆರವೇರಿಸುವಲ್ಲಿ ಯಶಸ್ವಿಯಾಗಿಲ್ಲ.’
ಇಷ್ಟೇಕೆ ಒದ್ದಾಡುತ್ತೀರಿ
೧೯೭೮ರಲ್ಲಿ ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯಲ್ಲಿ ದಕ್ಷಿಣ ಆಪ್ರಿಕಾದ ಆ ವರ್ಷಗಳಲ್ಲಿ ಸ್ವಾತಂತ್ರ್ಯವನ್ನು ಗಳಿಸಿದ ದೇಶಗಳಿಗಾಗಿ ಒಂದು ಸಮಾವೇಶ ನಡೆದಿತ್ತು. ಭಾರತದ ಹಾಗೆಯೇ ಅವೂಬಹುಭಾಷೀಯಾದ ದೇಶಗಳು. ತಮಲ್ಲಿ ಪ್ರಚಲಿತವಿರುವ ಹಲವು ಭಾಷೆಗಳಲ್ಲಿ ಯಾವುದನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು, ಅದನ್ನು ಸಮರ್ಥವಾದ ಆಡಳಿತ/ನ್ಯಾಯಾಂಗದ ಭಾಷೆಯನ್ನಾಗಿ ಅಭಿವೃದ್ಧಿಪಡಿಸುವುದು ಹೇಗೆ ಎಂಬ ವಿಚಾರಗಳ ಕುರಿತು ಅವರು ಭಾರತೀಯ ಭಾಷಾ ಸಂಸ್ಥೆಯ ನೆರವನ್ನು ಕೋರಿದ್ದರು. ಅದರಲ್ಲಿ, ಆಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ವಿಜಯ ಸಾಸನೂರರು, ಒಂದು ಮಾದರಿಯಾಗಿ, ಕರ್ನಾಟಕದಲ್ಲಿ ಕನ್ನಡವನ್ನು ಅಧಿಕೃತವಾದ ಭಾಷೆಯನ್ನಾಗಿ ಮಾಡುವುದಕ್ಕಾಗಿ ಇಲಾಖೆಯು ಏನೆಲ್ಲಾ ಪರಿಶ್ರಮ ಪಡುತ್ತಿದೆ, ಏನೆಲ್ಲಾ ಯೋಜನೆಗಳನ್ನು ಜಾರಿಗೊಳಿಸಿ ಹೆಣಗಾಡುತ್ತಿದೆ-ಎಂದೆಲ್ಲಾ ಭಾಷಣ ಮಾಡಿದರು. ಅದನ್ನು ಬಹಳ ಆಸಕ್ತಿಯಿಂದ ಆಲಿಸಿದ ಒಬ್ಬ ಆಫ್ರಿಕನ್ ಪ್ರತಿನಿಧಿ ಅವರಿಗೆ ಒಂದು ಪ್ರಶ್ನೆಯನ್ನು ಕೇಳಿದ, ‘ನಿಮ್ಮ ರಾಜ್ಯದಲ್ಲಿ ಬಹುಸಂಖ್ಯಾತರ ಭಾಷೆ ಯಾವುದು ಎಂದಿರಿ?’ ‘ಕನ್ನಡ’ ಎಂದು ಸಾಸನೂರರು. ‘ಕನ್ನಡ! ನೀವು ನಿಮ್ಮ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಹೊರಟಿರುವ ಭಾಷೆಯಾವುದು?’ ‘ಕನ್ನಡ!’ ಎಂದರು ನಮ್ಮ ನಿರ್ದೇಶಕರು. ಆಗ ಆತ ತುಂಬಾ ಅಚ್ಚರಿಯಿಂದ ಪ್ರತಿಕ್ರಿಯಿಸಿದ್ದು ಹೀಗೆ: ‘ಅದೂ ಕನ್ನಡ, ಇದೂ ಕನ್ನಡ. ರಾಜ್ಯದ ಇಡೀ ಜನತೆ ತಮ್ಮ ಭಾಷೆಯನ್ನೇ ಅಧಿಕೃತ ಭಾಷೆಯನ್ನಾಗಿ ಮಾಡಿ ಎಂದು ಗೋಗರೆಯುತ್ತಿರುವಾಗ, ಅದನ್ನು ಅನುಷ್ಠಾನ ಮಾಡುವುದಕ್ಕೆ ನೀವ್ಯಾಕೆ ಇಷ್ಟೊಂದು ಒದ್ದಾಡುತ್ತಿದ್ದೀರಿ?’ ಇದಕ್ಕೆ ಸಾಸನೂರರು ನಿರುತ್ತರರಾದರು.
ಆ ವಿದೇಶಿ ವ್ಯಕ್ತಿ, ನಮಗೆ ಈ ಸವಾಲನ್ನು ಹಾಕಿ ಈಗ್ಗೆ ೪೪ ವರ್ಷಗಳಾಗಿವೆ. ಆದರೂ ನಾವು ಮೇಲೆ ಹೇಳಿದ ಎಲ್ಲಾ ಯೋಜನೆ, ಇಲಾಖೆ, ಆಯೋಗ, ಅಧಿನಿಯಮಗಳ ಹೊರತಾಗಿಯೂ, ಬಹುಸಂಖ್ಯಾತ ಜನರ ‘ಕನ್ನಡ ಭಾಷೆಯನ್ನು ರಾಜ್ಯ ಅಧಿಕೃತ ಭಾಷೆಯನ್ನಾಗಿಸುವ ಆಶಯ ನೆರವೇರಿಸುವಲ್ಲಿ ಯಶಸ್ವಿಯಾಗಿಲ್ಲ.’ಎಂದು ಒಪ್ಪಿಕೊಂಡು ಅದಕ್ಕಾಗಿ ಇನ್ನೊಂದು ಅಧಿನಿಯಮ, ಈ ಬಾರಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, ೨೦೨೨ ಜಾರಿಗೊಳಿಸಲು ಹೊರಟಿದ್ದೇವೆ. ಪ್ರತಿ ವರ್ಷ ಕೋಟಿಗಟ್ಟಲೆ ರೂಪಾಯಿ ವ್ಯಯ ಮಾಡುತ್ತಿದ್ದೇವೆ ಆದರೂ ಕನ್ನಡದ ಬಳಕೆಗಾಗಿ ಗೋಗರೆಯುವ, ಇಲ್ಲವೇ ದರ್ಪದಿಂದ ದಂಡ ಹಾಕುವ ಸ್ಥಿತಿ ಮುಂದುವರೆದಿದೆ. ಇದೊಂದು ಶತಮಾನದ ವಿಪರ್ಯಾಸ. ಇದಕ್ಕೆ ಕಾರಣ ಇಚ್ಛಾಶಕ್ತಿಯ ಕೊರತೆ ಎಂದೋ, ಕನ್ನಡದ ಬಗ್ಗೆ ಅಭಿಮಾನವಿಲ್ಲ ಎಂದೋ ಹೇಳಿ ಮತ್ತೆ ಅದೇ ರಾಗದಲ್ಲಿ ಅದೇ ಹಾಡು ರೀಪ್ಲೇ ಆಗುತ್ತಿರುತ್ತದೆ.
ಹೊಸ ಅಧಿನಿಯಮ ತರಲು ನೋಡುವಾಗ ಹಿಂದಿನವು ಕಳೆದ ೬೦ ವರ್ಷಗಳಲ್ಲಿ ಫಲಕಾರಿಯಾಗದೇ ಇರುವುದಕ್ಕೆ ಕಾರಣವೇನು ಎಂದು ವಿಶ್ಲೇಷಿಸಲಾಗಿದೆಯೇ? ಮೂಲಭೂತ ಸಮಸ್ಯೆಗಳನ್ನು ಗುರುತಿಸಲಾಗಿದೆಯೇ? ಅದಕ್ಕೆ ಪರಿಹಾರಗಳನ್ನು ಯೋಜಿಸಲಾಗಿದೆಯೇ ಎಂದರೆ ಇಲ್ಲ ಎಂಬ ಉತ್ತರ ಸ್ಪಷ್ಟವಾಗಿದೆ.
ಚಕ್ರದ ಮರುಶೋಧನೆ
ನಾನು ೧೯೭೫-೭೮ ಅವಧಿಯಲ್ಲಿ ಭಾರತೀಯ ಭಾಷಾ ಸಂಸ್ಥೆಯಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕ್ಷೇತ್ರದಲ್ಲಿ ದುಡಿದೆ. ೧೯೭೮-೮೦ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ, ಆಡಳಿತ/ನ್ಯಾಯಾಂಗ ಕನ್ನಡದ ಅಭಿವೃದ್ಧಿ/ಜಾರಿಗಾಗಿಯೇ ಎಂದು ವಿಶೇಷವಾಗಿ ನೇಮಿಸಲ್ಪಟ್ಟಿದ್ದ ರಾಜ್ಯ ಮಟ್ಟದ ಸಹಾಯಕ ನಿರ್ದೇಶಕನಾಗಿದ್ದೆ. ೨೦೨೦-೨೩ ಅವಧಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನೂ ಆಗಿದ್ದೆ. ನಾನೊಬ್ಬ ಭಾಷಾವಿಜ್ಞಾನದ ವಿದ್ಯಾರ್ಥಿ. ಈ ಹಿನ್ನೆಲೆಯಲ್ಲಿ ನಮ್ಮ ಸರಕಾರವು ಕನ್ನಡದÀ ಅನುಷ್ಠಾನದಲ್ಲಿ ಏಕೆ ಸೋತಿದೆ ಎಂಬುದನ್ನು ಸ್ವಂತ ಅನುಭವದ ಬೆಳಕಿನಲ್ಲಿಯೂ ಇಲ್ಲಿ ಚರ್ಚಿಸಲು ಪ್ರಯತ್ನಿಸುತ್ತಿದ್ದೇನೆ. ನಾನು ಹೇಳುತ್ತಿರುವು ಅಂತಿಮ ಪರಿಹಾರ ಎಂದು ನಾನು ಹೇಳುತ್ತಿಲ್ಲ. ಸಮಸ್ಯೆ ಅಷ್ಟು ಸುಲಭವೂ ಅಲ್ಲ. ಆದರೆ, ನಮ್ಮ ಸರಕಾರಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಸೇರಿದ ಹಾಗೆ ವಿವಿಧ ಅಧಿಕೃತ ಜಾರಿ ಸಂಸ್ಥೆಗಳು ಎಲ್ಲಿ ಎಡವಿರಬಹುದು ಎಂಬುದನ್ನು ಗುರುತಿಸುವ ಪ್ರಯತ್ನ ಮಾಡುತ್ತಿದ್ದೇನೆ.
ಕನ್ನಡದ ಅಭಿವೃದ್ಧಿ ಎಂದರೇನು?
ನಾವೀಗ ಮತಾಡುತ್ತಿರುವುದು ಸಾಹಿತ್ಯಕ, ಸಾಂಸ್ಕೃತಿಕ ಕನ್ನಡ ಭಾಷೆಯ ಅಭಿವೃದ್ಧಿಯ ಬಗ್ಗೆ ಅಲ್ಲ. ನಾವೀಗ ಕನ್ನಡವನ್ನು ಅದಕ್ಕಿಂತ ಮೂಲಭೂತವಾಗಿ ಭಿನ್ನವಾದ, ವಿಶಿಷ್ಟವಾದ, ಆಡಳಿತ, ನ್ಯಾಯಾಂಗ, ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಇಂಥ ಕ್ಷೇತ್ರದಲ್ಲಿ ಸಮರ್ಥವಾಗಿ ಬಳಕೆಯಾಗುವ ರೀತಿಯಲ್ಲಿ ಮಾಡಬೇಕಾಗಿರುವ ಅಭಿವೃದ್ಧಿ. (ಈ ಲೇಖನದಲ್ಲಿ ಇಂಥ ಶೈಲಿಯನ್ನು ಒಟ್ಟಾರೆಯಾಗಿ ರಾಜ್ಯದ ಅಧಿಕೃತ ಭಾಷೆ ಎಂದು ಕರೆಯೋಣ.) ಸಾಹಿತ್ಯಕ ಶ್ರೀಮಂತಿಕೆಯಿAದ ಇದಕ್ಕೆ ಪ್ರಯೋಜನವಾಗುವುದು ಬಹಳ ಕಡಿಮೆ. ಬದಲಿಗೆ ಸಾಹಿತ್ಯಕ ವೈಭವ, ಅಭಿಮಾನವು ಕನ್ನಡದ ತಾಂತ್ರಿಕ ಶೈಲಿಯ ಅಭಿವೃದ್ಧಿಗೆ ಬಾಧೆಯಾಗುವ ಸಾಧ್ಯತೆ ಹೆಚ್ಚು. ಇದನ್ನು ಸಂಪೂರ್ಣ ಭಿನ್ನವಾದ ನೆಲೆಗಟ್ಟಿನಲ್ಲಿ ನೋಡಬೇಕಾಗುತ್ತದೆ.
ಭಾಷೆಯನ್ನು ಬಂಗಾರದ ಕುಂಡದಲ್ಲಿ ಬೆಳೆಸಲು ಸಾಧ್ಯವಿಲ್ಲ. ಅದರಲ್ಲೂ ಅಧಿಕೃತ ಭಾಷೆಯನ್ನು ಅದನ್ನು ಬಳಸಬೇಕಾಗಿರುವ ಜನರಿಂದ ಪ್ರತ್ಯೇಕಿಸಿ ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ. ಮಾಡಿದರೂ ಅಂಥ ಪ್ರಯತ್ನಗಳು ನಿರರ್ಥಕವಾಗುತ್ತವೆ. ಬದಲಿಗೆ, ಅಧಿಕೃತ ಭಾಷೆಯನ್ನು ಬಳಸಬೇಕಾದ ವ್ಯಕ್ತಿಗಳನ್ನು ಅದರ ಬಳಕೆಯಲ್ಲಿ ಸಬಲೀಕರಿಸಬೇಕು. ಪದಕೋಶಗಳು, ಕೈಪಿಡಿಗಳು ಇತ್ಯಾದಿ ಅಗತ್ಯವಾದ ಪೂರಕ ಸಾಮಗ್ರಿಯನ್ನು ರೂಪಿಸಿ, ವ್ಯಾಪಕವಾಗಿ ಹಂಚಬೇಕು. ವಿಶಿಷ್ಟವಾದ ತರಬೇತಿ ವ್ಯವಸ್ಥೆಯನ್ನು ಕಟ್ಟಿ ನಿರಂತರವಾಗಿ ನಡೆಸಬೇಕು. ಈ ಜೀವಂತ ಸನ್ನಿವೇಶಗಳಲ್ಲಿ ಆಗುವ ಬಳಕೆಯಿಂದಾಗಿ, ಎದುರಿಸುವ ಸವಾಲುಗಳನ್ನು ಬಗೆಹರಿಸಿಕೊಳ್ಳುತ್ತಾ, ಇನ್ನಷ್ಟು ಸಮರ್ಥವಾಗುತ್ತಾ, ಹೆಚ್ಚಿನ ಸವಾಲುಗಳನ್ನು ಎದುರಿಸಲು ಸಜ್ಜಾಗುತ್ತಾ ಅಧಿಕೃತ ಭಾಷೆ ಬೆಳೆಯುತ್ತದೆ. ಆದರೆ, ಸರಕಾರದ ಅಧಿಕೃತ ಭಾಷಾ ಅಭಿವೃದ್ದಿಯ ಕಾರ್ಯನೀತಿ ಮತ್ತು ಕಾರ್ಯಯೋಜನೆಗಳಲ್ಲಿ ಅಧಿಕೃತ ಕನ್ನಡದ ಬಳಕೆದಾರರನ್ನುಸಂಪೂರ್ಣವಾಗಿ ಗೌಣವಾಗಿ ಕಾಣಲಾಗಿದೆ. ಇನ್ನೂ ಸರಿಯಾಗಿ ಹೇಳಬೇಕು ಎಂದರೆ, ಅವರನ್ನು ಅಭಿವೃದ್ಧಿಗೆ ಮಾರಕವಾಗಿರುವ ದ್ರೋಹಿಗಳು, ಅಪರಾಧಿಗಳು ಎಂಬಂತೆ ಕಾಣಲಾಗುತ್ತದೆ. ‘ಹುತ್ತವ ಬಡಿದರೆಹಾವು ಸಾವುದೇ’ ಎಂಬ ಒಂದು ವಚನ ಇದೆ, ಎಂದರೆ ಮೂಲ ಸಮಸ್ಯೆಯನ್ನು ಕಂಡುಕೊಳ್ಳುವುದನ್ನು ಬಿಟ್ಟು, ಅದರ ಸುತ್ತಲೂ ಬಡಿದಾಡಿದ ಹಾಗೆ. ಅಧಿಕೃತ ಕನ್ನಡದ ಅಭಿವೃದ್ಧಿಯ ಕಥೆಯೂ ಇದೇ ಆಗಿದೆ ಎನ್ನುವುದು ವಿಪರ್ಯಾಸ. ಅದಕ್ಕೇ, ನಾನು ಈ ಲೇಖನದ ಆರಂಭದಉಲ್ಲೇಖದಲ್ಲಿ ಆ ಆಫಿû್ರಕನ್ ವ್ಯಕ್ತಿ ಕೇಳಿದ ಪ್ರಶ್ನೆಯನ್ನು ಈಗಲೂ ಕೇಳುತ್ತಲೇ ಇರಬೇಕಾಗಿದೆ.
ಬೇರಿನಲ್ಲಿಯೇ ದೋಷ
ಹತ್ತನೇ ತರಗತಿಯ ವರೆಗೆ ಈಗಿರುವ ಕನ್ನಡ ವಿಷಯದ ಪಠ್ಯಪುಸ್ತಕಗಳನ್ನೊಮ್ಮೆ ತೆರೆದುನೋಡಿ. ಅಲ್ಲಿ ಕನ್ನಡ ಭಾಷೆಯನ್ನು ಬಿಟ್ಟು ಉಳಿದೆಲ್ಲವನ್ನೂ ಕಲಿಸಲಾಗುತ್ತದೆ. ಈ ಪಠ್ಯಕ್ರಮ, ಪುಸ್ತಕಗಳನ್ನು ರೂಪಿಸುವ ಪಂಡಿತರಿಗೆ ಕನ್ನಡ ಭಾಷಾ ಕೌಶಲಗಳಿಗೂ ಕನ್ನಡ ಸಾಹಿತ್ಯಕ್ಕೂ ವ್ಯತ್ಯಾಸವೇ ತಿಳಿದಿಲ್ಲ. ಹಳಗನ್ನಡ, ನಡುಗನ್ನಡ, ವ್ಯಾಕರಣ, ಚಂದಸ್ಸು, ವಚನಸಾಹಿತ್ಯದಿಂದ ಹಿಡಿದು ಮುಸ್ಲಿಮ್ ಸಾಹಿತ್ಯ, ದಲಿತ ಸಾಹಿತ್ಯ, ಮಹಿಳಾ ಸಾಹಿತ್ಯದವರೆಗೆ ಬರೀ ಸಾಹಿತ್ಯದ ಗದ್ಯ-ಪದ್ಯಗಳದ್ದೇ ದರ್ಬಾರು ಶಾಲಾ ಪಠ್ಯದಲ್ಲಿ. ಇದರಲ್ಲಿ ನೂರಕ್ಕೆ ನೂರು ಅಂಕ ಪಡೆದವರೂ ಮುಂದೆ ಸರಕಾರೀ ನೌಕರರಾದರೆ, ವಕೀಲರೋ, ನ್ಯಾಯಾಧೀಶರೋ ಆದರೆ ಆಡಳಿತ/ನ್ಯಾಯಾಂಗ ಕನ್ನಡ ಬಳಸುವ ಸಾಮರ್ಥ್ಯ ಎಲ್ಲಿಂದ ಬರಬೇಕು? ಎಂದರೆ, ಮುಂದೆ ಬದುಕಿನ ವಿವಿಧ ರಂಗಗಳಲ್ಲಿ ಕನ್ನಡವನ್ನು ಸಮರ್ಥವಾಗಿ ಬಳಸುವ ರೀತಿಯ ಭಾಷಾ ಕೌಶಲಗಳನ್ನು, ಸಾಮರ್ಥ್ಯಗಳನ್ನು ಮೂಲ ಶಿಕ್ಷಣ ನಮ್ಮ ಯುವಜನರಿಗೆ ನೀಡಬೇಕಾಗಿತ್ತು. ನಂತರ ಅವರನ್ನು ಅಧಿಕೃತ ಕನ್ನಡದ ಬಳಕೆಗೆ ಒಗ್ಗಿಸುವುದು ಚಿಟಿಕೆ ಹೊಡೆದಷ್ಟು ಸುಲಭದ ಕೆಲಸವಾಗುತ್ತಿತ್ತು. ಈ ರೀತಿಯ ಬದುಕಿನ ಸವಾಲುಗಳನ್ನು ಎದುರಿಸಲು ಬೇಕಾದ ಭಾಷಾ ಸಾಮರ್ಥ್ಯವನ್ನು ಶಾಲಾ ಶಿಕ್ಷಣದಲ್ಲಿ ನೀಡಲು ಸಾಧ್ಯವಾಗದಿರುವುದು ಮುಂದೆ ಅದನ್ನು ಅಧಿಕೃತ ಭಾಷೆಯನ್ನಾಗಿ ಜಾರಿಗೆ ತರುವಲ್ಲಿ ಇರುವ ಮೂಲಭೂತ ತೊಡಕು. ಇದನ್ನು ನಾನು ಡಿಎಸ್ಇಆರ್ಟಿ, ಕ.ಸಾ.ಪ. ಕ.ಅ.ಪ್ರಾಧಿಕಾರ ಇತ್ಯಾದಿ ಉನ್ನತ ವೇದಿಕೆಗಳ ಹತ್ತಾರು ಸಲ ಹೇಳಿದ್ದೇನೆ, ಹತ್ತಾರು ಲೇಖನಗಳನ್ನು ಬರೆದು, ಇವರ ಗಮನಕ್ಕೆ ತಂದಿದ್ದೇವೆ. ಆದರೆ ಇದ್ಯಾವುದೂ ಇವರಿಗೆ ಉಪಯುಕ್ತವಾಗಿ ತೋರಿಲ್ಲ, ಏಕೆಂದರೆ ಇದು ‘ಆಕರ್ಷಕ’ವಾಗಿಲ್ಲ.
ಇದಲ್ಲದೇ, ರಾಜ್ಯದ ಮಧ್ಯಮ, ಮೇಲ್ಮಧ್ಯಮ ಮತ್ತು ಮೇಲ್ವರ್ಗದ ಪೋಷಕರು ತಮ್ಮ ಮಕ್ಕಳನ್ನು ಕಳಿಸುವುದು ಇಂಗ್ಲಿಷ್ ಮಾಧ್ಯಮದ ಶಾಲೆಗೆ, ಕೆಲವು ಬಡ ಅಲ್ಪಸಂಖ್ಯಾತರು ತಮ್ಮ ಮಕ್ಕಳನ್ನೂ ಈಗಲೂ ಹತ್ತನೇ ತರಗತಿಯವರೆಗೆ ಉರ್ದು, ತಮಿಳು, ತೆಲುಗು, ಗುಜರಾತಿ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಾರೆ. ಇಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಕಲಿಸಲಾಗುತ್ತದೆ. ಇಲ್ಲಿ ಕಲಿಯುವ ಕನ್ನಡ ಮುಂದಿನ ಜೀವನದಲ್ಲಿ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಖಾತ್ರಿಯಾದ್ದರಿಂದ ಪೋಷಕರು, ಮಕ್ಕಳು, ಕೊನೆಗೆ ಶಿಕ್ಷಕರೂ ಕನ್ನಡ ಕಲಿಸುವುದರಲ್ಲಿ ತೋರಬೇಕಾದಷ್ಟು ಕಾಳಜಿ ತೋರುವುದಿಲ್ಲ. ಇದೆಲ್ಲದರ ಫಲವಾಗಿ ಎಂಟನೇ ತರಗತಿಗೆ ಬಂದರೂ, ಕನ್ನಡ ಮಾಧ್ಯಮದ, ಕನ್ನಡ ಮಾತೃಭಾಷೀಯ ಮಕ್ಕಳಿಗೇ ಕನ್ನಡ ನೆಟ್ಟಗೇ ಓದಲು, ಬರೆಯಲು ಬರುವುದಿಲ್ಲ ಈಗಲೂ ಗುಣಿತಾಕ್ಷರ, ಒತ್ತಕ್ಷರ ಗೊತ್ತಿಲ್ಲ ಎಂದು ಶಿಕ್ಷಣ ಇಲಾಖೆಯೇ ಒಪ್ಪಿಕೊಂಡಿದೆ. ಹತ್ತನೇ ತರಗತಿಯ ವರೆಗೆ ಕನ್ನಡ ಭಾಷೆಯನ್ನು ಕಲಿಸಲು ಸುಮಾರು ೧೫೦೦ ಗಂಟೆಗಳಷ್ಟು ಕಾಲಾವಕಾಶ ಸಿಕ್ಕರೂ ನಮಗೆ ಕೆಲಸಕ್ಕೆ ಬರುವ ಕನ್ನಡ ಭಾಷಾ ಕೌಶಲಗಳನ್ನು ಕಲಿಸಲು ಆಗುವುದಿಲ್ಲ ಎನ್ನುವುದನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ.ಪರಿಸ್ಥಿತಿ ಹೀಗಿಟ್ಟುಕೊಂಡು ಸರಕಾರವು ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣವನ್ನೂ ಕನ್ನಡದಲ್ಲಿ ನೀಡಬೇಕು ಎಂಬ ಅಂಧ ಶ್ರದ್ಧೆಯನ್ನು ತೋರುತ್ತಿದೆ. ಸಂಬAಧ ಪಟ್ಟ ಎಲ್ಲಾ ಇಲಾಖೆ, ಪ್ರಾಧಿಕಾರಗಳು ಕೋಟಿ ಕಂಠಗಳಲ್ಲಿ (ಸಿನಿಮಾ ಹಾಡೂ ಸೇರಿ)ಕನ್ನಡ ವೈಭವದ ಹಾಡುಗಳನ್ನು ಹಾಡಿ, ಕನ್ನಡ ಅಭಿವೃದ್ಧಿಯಾಯಿತು ಎಂದು ಜನರನ್ನು ನಂಬಿಸುತ್ತವೆ.
ಕನ್ನಡೇತರರನ್ನು ಪ್ರೀತಿಸಿ
ಈಗಿರುವ ಶಿಕ್ಷಣ ವ್ಯವಸ್ಥೆಯಿಂದ ಮುಂದೆ ಆಡಳಿತ/ನ್ಯಾಯಾಂಗ/ವಾಣಿಜ್ಯ/ ಮಾಧ್ಯಮ ಇತ್ಯಾದಿ ವ್ಯಾವಹಾರಿಕ ಕ್ಷೇತ್ರಗಳಲ್ಲಿ ಬಳಸುವಷ್ಟು ಕನ್ನಡ ಭಾಷಾ ಕೌಶಲಗಳನ್ನು ಕನ್ನಡ ಮಾತೃಭಾಷಿಯರಿಗೇ ಕಲಿಸುವಲ್ಲಿ ಸೋತಿದ್ದೇವೆ ಎಂಬುದು ಸ್ಪಷ್ಟವಾಗಿದೆ. ಇನ್ನು ನಾವು ಕನ್ನಡ ಬಾರದೇ ಇರುವ ಜನಸಮುದಾಯವನ್ನು ಗಮನಿಸೋಣ. ಬರೆಯುವ ಅನುಕೂಲಕ್ಕೆ ಇವರನ್ನು ‘ಕನ್ನಡೇತರರು’ ಎಂದು ಕರೆಯೋಣ. ಹೀಗೆಂದ ಕೂಡಲೇ ಇವರು ಯಾರೋ ಆಗಂತುಕರು, ಬೇಡವಾದವರು, ಕೆಲಸಕ್ಕೆ ಬಾರದವರು ಎಂದು ಭಾವಿಸಬಾರದು. ಏಕೆಂದರೆ, ಇವರೂ ನಮ್ಮವರೇ. ಬಡತನ ಒಂದು ಸಮಸ್ಯೆಯಾದರೆ ಬಡತನವನ್ನು ನಿವಾರಿಸಲು ನೋಡುತ್ತೇವೋ ಬಡವರನ್ನು ಹಳಿಯುತ್ತ ಕೂಡುತ್ತೇವೆ. ಕನ್ನಡೇತರರೂ ಈ ನಾಡಿನ ಮಾನವ ಸಂಪನ್ಮೂಲ. ಕನ್ನಡ ಬಾರದೇ ಇದ್ದುದಕ್ಕೆ ಮಾತ್ರ ಅವರು ಕನ್ನಡ ಬರುವವರಿಗಿಂತ ಅಯೋಗ್ಯರೇನೂ ಅಲ್ಲ. ಕನ್ನಡೇತರಿಗೂ ಕನ್ನಡವನ್ನು ಕಲಿಸುವ ವ್ಯವಸ್ಥೆ ಆಗಬೇಕು. ಇದರ ಹೊಣೆ ಯಾರು ಹೊತ್ತಿದ್ದಾರೆ?
ಮೊದಲನೆಯದಾಗಿ ಭಾಷಿಕ ಅಲ್ಪ ಸಂಖ್ಯಾತರ ಕುರಿತು ಸರಕಾರದ ಧೋರಣೆಯೇ ದೋಷಪೂರ್ಣವಾಗಿದೆ. ಅವರನ್ನು ಇವರು ಮಾಡುತ್ತಿರುವ ಮಹಾನ್ ಪ್ರಗತಿ ಮಾರಕವೆಂದು ಭಾವಿಸಲಾಗುತ್ತದೆ.
೨೦೧೧ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ೧೫೬ ಮಾತೃಭಾಷೆಗಳಿವೆ. ಅವುಗಳಲ್ಲಿ, ಕನ್ನಡವನ್ನು ಮಾತೃಭಾಷೆ ಎಂದು ಗುರುತಿಸಿಕೊಳ್ಳುವವರು ಶೇ.೬೬ ಜನ ಮಾತ್ರ. ಉಳಿದ ಶೇ.೩೪ರಷ್ಟು ಜನರ ಮಾತೃಭಾಷೆ ಉರ್ದು, ತೆಲುಗು, ತಮಿಳು, ಮರಾಠಿ, ಕೊಂಕಣಿ, ತುಳು, ಕೊಡವ, ಬ್ಯಾರಿ, ಮಲೆಯಾಳ, ಮಾರವಾರಿ, ಬಂಗಾಲಿ, ಹಿಂದಿ ಇತ್ಯಾದಿ ಮಾತೃಭಾಷೆಗೆ ಸೇರಿದವರು. ಇವರೆಲ್ಲರೂ ತಲತಲಾಂತರಗಳಿAದ ಕರ್ನಾಟಕದಲ್ಲಿ ಇರುವವರು. ಇವರು ಇಲ್ಲಿನ ‘ನೆಲೆ, ಜಲ, ಗಾಳಿ’ ಬಳಸಿಕೊಂಡರೂ ಇಲ್ಲಿಯೇ ಇದ್ದು ದುಡಿಯುತ್ತಾ ನಾಡಿನ ಸಂಪತ್ತನ್ನು, ಸೇವೆಯನ್ನು ಸಮೃದ್ಧಿಗೊಳಿಸಿರುವವರು, ತೆರಿಗೆಗಳನ್ನೂ ಕಟ್ಟಿ ಒಟ್ಟಾರೆ ಅಭಿವೃದ್ಧಿಯಲ್ಲಿ ಭಾಗವಹಿಸಿರುವವರು. ಇವರಲ್ಲಿ ಹೆಚ್ಚಿನವರಿಗೆ ಕನ್ನಡವು ದ್ವಿತೀಯ ಭಾಷೆ, ಕೆಲವರಂತೂ ಉತ್ತಮ ಸಾಹಿತಿಗಳು, ಸಂಶೋಧಕರು, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿರುವವರೂ ಇದ್ದಾರೆ. ಆದರೂ ಅನೇಕ ಐತಿಹಾಸಿಕ ಕಾರಣಕ್ಕಾಗಿ ಜನಸಾಮಾನ್ಯ ಅನ್ಯಭಾಷೀಯರಿಗೆ ಈಗಲೂ ಕನ್ನಡ ಭಾಷೆ ಬಾರದೇ ಇರುವ ಪರಿಸ್ಥಿತಿ ರಾಜ್ಯದಲ್ಲಿದೆ.
ಆದರೆ, ಸರಕಾರವು ರಾಜ್ಯ ಈ ಭಾಷಾ ಬಹುತ್ವವನ್ನು ಕಡೆಗಾಣಿಸುತ್ತದೆ. ಇಡೀ ರಾಜ್ಯದಲ್ಲಿ ಇರುವುದು ಕನ್ನಡವೊಂದೇ ಎನ್ನುವಂತೆ ವರ್ತಿಸುತ್ತದೆ. ಸರಕಾರದ ಇಂಥ ಅಂಧ ಧೋರಣೆಯಿಂದಾಗಿ ಕನ್ನಡ ರಕ್ಷಣಾ ವೇದಿಕೆ, ಸೇನೆ, ಪಡೆ ಇತ್ಯಾದಿಗಳು ಹುಟ್ಟಿಕೊಳ್ಳುತ್ತವೆ ಬಹುಸಂಖ್ಯಾತ ಭಾಷೆಯಾಗಿರುವ ಕನ್ನಡ ಅವಸಾನದ ಅಪಾಯದಲ್ಲಿದೆ ಎಂದು ಬಿಂಬಿಸಲಾಗುತ್ತದೆ. ಅದರ ರಕ್ಷಣೆಗಾಗಿ ಜಾರಿಗೆ ಬರುವ ಕೆಲವು ಆಚರಣೆಗಳು ಭಾಷಾ ಅಲ್ಪಸಂಖ್ಯಾತರನ್ನು ಇನ್ನಷ್ಟು ಧೃತಿಗೆಡಿಸುತ್ತವೆ.
ನಾವು ನವೆಂಬರ್ ಒಂದನೆ ತಾರೀಖು ಆಚರಿಸಬೇಕಾದ ಕರ್ನಾಟಕ ರಾಜ್ಯೋತ್ಸವ ‘ಕನ್ನಡ ರಾಜ್ಯೋತ್ಸವ’ವಾಗುತ್ತದೆ. ರಾಜ್ಯಗಳ ಪುನರ್ವಿಂಗಡನೆ ಭಾಷಾಧಾರಿತವಾಗಿ ಆಗಿದ್ದರೂ ಭಾರತದ ಯಾವುದೇ ರಾಜ್ಯದಲ್ಲಿ ಆಯಾ ರಾಜ್ಯದ ಭಾಷೆಯ ಹೆಸರಿನಲ್ಲಿ ರಾಜ್ಯೋತ್ಸವನ್ನು ಆಚರಿಸುವ ಪದ್ಧತಿ ಕಾಣುವುದಿಲ್ಲ. ಇದು ನಮ್ಮ ರಾಜ್ಯದ ಆವಿಷಾರ. ಈ ಅಂಧಾಭಿಮಾನ ಇನ್ನು ಮುಂದುವರೆದು ಕನ್ನಡ ಭಾಷೆಯು ‘ಕನ್ನಡಾಂಬೆ’, ‘ಕನ್ನಡ ಭುವನೇಶ್ವರಿ’ ಆಗುತ್ತದೆ. ಸಾಲದು ಅಂತ ಕನ್ನಡ ಒಂದು ದೇವಿಯ ರೂಪವನ್ನೂ ಪಡೆದು ಅದರ ಫೋಟೋ ಅಥವಾ ವಿಗ್ರಹವು ಪೂಜೆಗೊಳ್ಳುತ್ತದೆ. ಮತ್ತು ಎಲ್ಲಾ ಕನ್ನಡ ನಾಡಿನವರು (?) ಇದಕ್ಕೆ ಬದ್ಧತೆ ತೋರಬೇಕು ಎಂದು ನಿರೀಕ್ಷಿಸಲಾಗುತ್ತದೆ.
ಕರುನಾಡಿಗರೇ ಆದರೆ ಕೆಲವು ಧಾರ್ಮಿಕ ಸಮುದಾಯದವರಿಗೆ ಜನರನ್ನು ಬೆಸೆಯುವ, ಒಂದಾಗಿಸುವ, ಪ್ರಗತಿಯ ವಾಹಕವಾಗಿರುವ ರೀತಿಯಲ್ಲಿ ಕನ್ನಡವನ್ನು ಒಪ್ಪಿಕೊಳ್ಳುವುದರಲ್ಲಿ, ಅಪ್ಪಿಕೊಳ್ಳುವುದರಲ್ಲಿ, ಕಲಿಯುವುದರಲ್ಲಿ, ಕಲಿಸುವುದರಲ್ಲಿ ಯಾವುದೇ ಅಭ್ಯಂತರ ಇರುವುದಿಲ್ಲ. ಆದರೆ, ಅದರ ಮೂರ್ತೀಕರಣ, ಪೂಜೆ ಒಂದೆರಡು ಧರ್ಮದವರಿಗೆ ಸ್ವಧರ್ಮ ದ್ರೋಹವಾಗಿ ತೋರುತ್ತದೆ, ವಿಚಾರವಂತರಿಗೆ ಮೂಢಾಚರಣೆಯಾಗಿ ತೋರುತ್ತದೆ. ಆದರೂ ಅದನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಉಳಿದಿಲ್ಲದ ಪರಿಸ್ಥಿತಿ ಏರ್ಪಡುತ್ತದೆ. ಬಹುಸಂಖ್ಯಾತ ಧರ್ಮವು (ತಾನೇ ಏಕೈಕ ಎನ್ನುವ ರೀತಿಯಲ್ಲಿ) ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದಬ್ಬಾಳಿಕೆ ಮಾಡುವ ಸಾಧನವಾಗಿಬಿಡುತ್ತದೆ. ಸರಕಾರವೂ ಇಂಥ ಅಂಧಾಭಿಮಾನಕ್ಕೆ ಕುಮ್ಮಕ್ಕು ಕೊಡುತ್ತದೆ.
ಕನ್ನಡವನ್ನು ರಾಜ್ಯದ ಏಕೈಕ ‘ಸಾರ್ವಭೌಮ’ ಭಾಷೆ ಎಂಬಂತೆ ಮೆರೆಸಲಾಗುತ್ತದೆ. ‘ಕನ್ನಡ ಸಂಸ್ಕೃತಿಯೊಂದೇ ರಾಜ್ಯದಲ್ಲಿ ಮಾನ್ಯ ಎಂಬAತೆ ಬಿಂಬಿಸಲಾಗುತ್ತದೆ. ಕನ್ನಡವನ್ನು ಅಧಿಕೃತ, ಜೀವನೋಪಯೋಗಿ, ಪ್ರಗತಿಯ ವಾಹಕವಾದ ಮಾಧ್ಯಮವನ್ನಾಗಿ ಬೆಳೆಸಬೇಕಾದವರು ಭಾಷೆಯೊಂದಿಗೆ ಅಂಟಿಕೊಂಡಿರುವ ಧರ್ಮ, ಸಂಸ್ಕೃತಿ, ಹಬ್ಬಗಳು, ಆಚರಣೆಗಳ ಗೋಜಿಗೆ ಹೋಗಬಾರದು. ಏಕೆಂದರೆ, ಕೊಡವ, ತುಳು, ಬ್ಯಾರಿ, ಉರ್ದು, ಕೊಂಕಣಿ, ಬಂಜಾರ (ಮರೆಯಬೇಡಿ, ಇವೆಲ್ಲವೂ ಕರ್ನಾಟಕದ ಜನಜೀವನದ ಅವಿಭಾಜ್ಯ ಅಂಗವಾಗಿರುವ ಭಾಷೆಗಳು) ಈ ಎಲ್ಲಾ ಭಾಷೆಗಳಿಗೂ ತಮ್ಮದೇ ಆದ ಧರ್ಮ, ಸಂಸ್ಕೃತಿ ಆಚರಣೆಗಳಿವೆ. ಕನ್ನಡದ ಜೊತೆ ಕನ್ನಡ ಸಂಸ್ಕೃತಿಯನ್ನು ಜೋಡಿಸಿದ ಕೂಡಲೇ ಇತರ ಭಾಷಿಗರಲ್ಲಿಯೂ ಅವರವರ ಧರ್ಮ, ಸಂಸ್ಕೃತಿ, ವೈಶಿಷ್ಟ್ಯ ಹಿರಿಮೆ ಎಲ್ಲವೂ ಉದ್ದೀಪನಗೊಳ್ಳುತ್ತವೆ. ಇದು ಕನ್ನಡವನ್ನು ಒಂದು ವ್ಯಾವಹಾರಿಕ ಭಾಷೆಯನ್ನಾಗಿ ಒಪ್ಪಿಕೊಳ್ಳುವಲ್ಲಿಯೂ ನಿರುತ್ತೇಜವನ್ನು ಹುಟ್ಟುಹಾಕುತ್ತದೆ. ಇದರ ಲಾಭವನ್ನು ಆಯಾ ಧರ್ಮದ ಮೂಲಭೂತವಾದಿಗಳು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ. ಎಲ್ಲಿಯವರಿಗೆ ಎಂದರೆ ಅವರು ಕನ್ನಡವನ್ನು ‘ನಮ್ಮದಲ್ಲ’ ಎಂಬ ಭಾವನೆಯನ್ನು ಜನಸಾಮಾನ್ಯರಲ್ಲಿ ಬಿತ್ತುವಷ್ಟು ಪರಿಸ್ಥಿತಿ ಹದಗೆಡುತ್ತದೆ. ಇದು ಕನ್ನಡದ ಅನುಷ್ಟಾನದಲ್ಲಿ ಗುಪ್ತಗಾಮಿನಿಯಾಗಿ ಅಡ್ಡಿಬರುತ್ತಲೇ ಇರುತ್ತದೆ.
ಕನ್ನಡ ಅನುಷ್ಠಾನದ ಕುರಿತು ಪ್ರಾಧಿಕಾರ, ಪರಿಷತ್ತು ಇತ್ಯಾದಿಗಳಲ್ಲಿ ವರ್ಷವರ್ಷ ಸಮಾಲೋಚನೆ ಗೋಷ್ಠಿಗಳನ್ನು ನಡೆಸುತ್ತಾರಲ್ಲಾ, ಅಲ್ಲಿ ಎಂದಾದರೂ, ಉರ್ದು, ಕೊಡವ, ಕೊಂಕಣಿ, ತುಳು ಇತ್ಯಾದಿ ಕನ್ನಡೇತರ ಭಾಷೀಯರ ಪ್ರತಿನಿಧಿಗಳನ್ನು, ಸಂಘಸಂಸ್ಥೆಗಳನ್ನು ಸೇರಿಸಿಕೊಂಡಿದ್ದಿದ್ದೆಯೇ? ನನ್ನಂಥವವರನ್ನು ಕರೆದಾಗಲೂ ನಾನೂ ಉರ್ದು ಭಾಷೀಯರ ಬಗ್ಗೆ ಮತಾಡದೇ ಇತರರ ಹಾಗೆ ‘ಕನ್ನಡಾಂಬೆಗೆ ಜಯವಾಗಲೀ’, ‘ಸಿರಿಗನ್ನಡಂ ಗೆಲ್ಗೆ’ ಎಂದಾಗಲೇ ನನಗಲ್ಲಿ ಮಾರ್ಯದೆ, ಮನ್ನಣೆ, ಪ್ರಶಂಸೆ.
ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿದ್ದಾಗ, ಅಧಿಕೃತ ಭಾಷೆಯಾಗಿ ಕನ್ನಡವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕರ್ನಾಟಕದ ಕನ್ನಡೇತರ ಭಾಷಿಕ ಸಮುದಾಯದ ಒಳತೋಟಿಗಳೇನು ಎಂಬುದನ್ನು ತಿಳಿಯುವ ಸಲುವಾಗಿ ಪ್ರಾಧಿಕಾರದ ವತಿಯಿಂದ ಮಂಗಳೂರಿನಲ್ಲಿ ಶಾಂತಿ ಪ್ರಕಾಶನ ಮತ್ತು ಕರ್ನಾಟಕ ಕ್ರಿಶ್ಚಿಯನ್ ಎಜುಕೇಷನ್ ಸೊಸೈಟಿ ಸಹಯೋಗದಲ್ಲಿ, ‘ಬಹುಭಾಷಾಮತಿ ಕರ್ನಾಟಕ’ ಎಂಬ ಸಮಾವೇಶದ ಯೋಜನೆ ಹಾಕಿಕೊಂಡಿದ್ದೆ. ಪ್ರಾಧಿಕಾರದ ಸಹಮತಿಯೂ ಸಿಕ್ಕಿತ್ತು. ಅದರೆ ಅದೇನು ಕಾರಣಕ್ಕೋ ಮುಂದೆ ಪ್ರಾಧಿಕಾರ ಆ ಕುರಿತು ಆಸಕ್ತಿಯನ್ನು ಕಳೆದುಕೊಂಡಿತು. ಚಂಪಾ, ಬರಗೂರು ರಾಮಚಂದ್ರ, ಎಸ್.ಜಿ.ಸಿದ್ದರಾಮಯ್ಯ ಇವರುಗಳ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಗಳಲ್ಲಿಯೂ ನಾನು ಅವರಿಗೆ ಇದೇ ಮನವಿಯನ್ನು ಮಾಡಿದ್ದೆ. ಆದರೂ ಪ್ರಾಧಿಕಾರ ಇದರಲ್ಲಿ ಆಸಕ್ತಿ ತೋರಲಿಲ್ಲ.
ಕನ್ನಡೇತರರು ಕನ್ನಡ ಕಲಿಯಬೇಕು, ತಮ್ಮ ನೌಕರಿಗಳನ್ನು ಪಡೆದುಕೊಳ್ಳಬೇಕು, ಉಳಿಸಿಕೊಳ್ಳಬೇಕು ಎಂದರೆ ಇಲಾಖಾ ಕನ್ನಡ ಪರೀಕ್ಷೆಗಳನ್ನು ಪಾಸು ಮಾಡಬೇಕು. ಸರಕಾರವು ನಡೆಸುವ ಈ ಕನ್ನಡ ಪರೀಕ್ಷೆಗಳೂ ಅಷ್ಟೇ ಅವೈಜ್ಞಾನಿಕ. ಅವುಗಳನ್ನು ಹೆಚ್ಚು ತಾರ್ಕಿಕ, ಆಡಳಿತ ಕನ್ನಡದ ಬಳಕೆಗೆ ಪೂರಕವಾಗುವಂತೆ ಮಾರ್ಪಡಿಸಬೇಕು ಎಂದು ನಾನು ಹಲವಾರು ಬಾರಿ ಸಲಹೆ ನೀಡಿದರೂ ಕನ್ನಡದ ಅಭಿವೃದ್ಧಿ ಹರಿಕಾರರಿಗೆ ಇಂಥ ಕ್ಷುಲ್ಲಕ ಕೆಲಸಗಳಲ್ಲಿ ಆಸಕ್ತಿಯಿಲ್ಲ. ಕನ್ನಡೇತರರಿಗೆ ಕನ್ನಡ ಕಲಿಸುವ ತರಗತಿಗಳಿಗೆ ಧನಸಹಾಯ ನೀಡುವ ಒಂದು ಯೋಜನೆ ಇದ್ದರೂ ಕ.ಅ.ಪ್ರಾಧಿಕಾರ ವರ್ಷಗಳಿಂದ ಇಂಥ ತರಗತಿಗಳನ್ನೇ ನಡೆಸಿಲ್ಲ. ನಾನು ಸದಸ್ಯನಾಗಿದ್ದ ಅವಧಿಯಲ್ಲಿ ಕೆಲವು ಮುಸ್ಲಿಮ್ ಸಂಘಟನೆಗಳ ಸಹಯೋಗದೊಂದಿಗೆ ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರಿಗಾಗಿ ರಾಜ್ಯ ಮಟ್ಟದ ಒಂದು ಕಾರ್ಯಶಿಬಿರವನ್ನು ನಡೆಸುವ ಯೋಜನೆ ಹಾಕಿದ್ದೆ. ಇಡೀ ವೆಚ್ಚವನ್ನು ಸಂಸ್ಥೆಗಳೇ ನೋಡಿಕೊಳ್ಳುವವರಿದ್ದರು. ಪ್ರಾಧಿಕಾರದ ಮನ್ನಣೆಗಾಗಿ ಮಾತ್ರ ಅವರು ಲಿಖಿತದಲ್ಲಿ ಮನವಿಮಾಡಿದ್ದರು. ಇದೂ ಕೈಗೂಡಲಿಲ್ಲ. ನಾನು ಮತ್ತು ಆ ಸಂಸ್ಥೆಗಳು ಸೇರಿ ನಾವೇ ಆ ಕಾರ್ಯಶಿಬಿರವನ್ನು ನಡೆಸಿಕೊಂಡೆವು. ಹೀಗಿದೆ ಕನ್ನಡ ಅಭಿವೃದ್ಧಿಯ ಧೋರಣೆ, ಪರಿಸ್ಥಿತಿ.
ಹೊಸ ವಿಧೇಯಕದ ಹಳೇ ಹಾಡು
ಈಗ ಬಹು ಚರ್ಚಿತವಾಗಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, ೨೦೨೨, ಮೇಲೆ ಹೇಳಿರುವ ಯಾವುದೇ ವಾಸ್ತವಗಳಿಂದ ಪಾಠ ಕಲಿತಹಾಗೆ ಕಾಣುವುದಿಲ್ಲ. ಕೋಟಿಗಟ್ಟಲೆ ರೂಪಾಯಿಗಳನ್ನು ಈಗಾಗಲೇ ವ್ಯಯಮಾಡಿದ್ದರೂ ನಿರೀಕ್ಷಿತ ಫಲಕೊಡದಿರುವ ಹಳೆಯ ಅಧಿನಿಯಮ, ಆದೇಶಗಳನ್ನೇ ರಿಪೇರಿ ಮಾಡಲು ನೋಡುತ್ತಿದೆ. ಬುನಾದಿಯೇ ಸರಿಯಿಲ್ಲದಿರುವಾಗ ಮೇಲಿನ ಕಟ್ಟಡಕ್ಕೆ ತೇಪೆ ಹಚ್ಚಲು ನೋಡುತ್ತಿದೆ. ಇದೂ ದಯನೀಯವಾಗಿ ಸೋಲುವುದು ನಿಶ್ಚಿತ. ಏಕೆಂದರೆ, ಇದೂ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹೊಳಹನ್ನು ಹೊಂದಿಲ್ಲ.
ಇಲ್ಲಿ ಎದ್ದು ಕಾಣುವ ಘೋರ ವಿಪರ್ಯಾಸವೆಂದರೆ, ಅಧಿಕೃತ ಭಾಷೆಯನ್ನು ಜಾರಿಗೆ ತರುವುದು, ಕನ್ನಡವನ್ನು ಉದ್ಧಾರ ಮಾಡುವುದು ಸಾಧ್ಯವಾಗದೇ ಇರುವುದಕ್ಕೆ ‘ಕನ್ನಡೇತರರು’ ಎಂಬ ತೀರ್ಮಾನಕ್ಕೆ ಬರುವ ಈ ಸರಕಾರ ಈ ೨೦೨೨ರ ವಿಧೇಯಕರ ರಚನೆಯಲ್ಲಿ ಅವರ ಪರಿಸ್ಥಿತಿಯ ವಾಸ್ತವತೆಯನ್ನು ಅಧ್ಯಯನ ಮಾಡಿದೆಯೇ? ೧೨ರಂದು ನಡೆದ ಮಹಾಸಭೆಯಲ್ಲಿ ಭಾಗವಹಿಸಿದವರೆಲ್ಲರೂ ಕನ್ನಡ ಪರ ‘ಮನಸ್ಸು’ಗಳು ಮತ್ತು ಕನ್ನಡ ಪರ ಸಂಘಟನೆಗಳು. ನಿಜವೆಂದರೆ ಇದರಲ್ಲಿ ಪ್ರಮುಖವಾಗಿ ಭಾಗವಹಿಸಬೇಕಾಗಿದ್ದವರು ಸೋ ಕಾಲ್ಡ್ ‘ಕನ್ನಡೇತರರು’ ಮತ್ತು ಅಂಥ ಭಾಷಿಕ/ಸಾಂಸ್ಕೃತಿಕ ಸಂಸ್ಥೆಗಳು/ವ್ಯಕ್ತಿಗಳು. ಅಂಥವರು ಈ ಸಭೆಯಲ್ಲಿ ಒಬ್ಬರೂ ಇರಲಿಲ್ಲ. ಅವರ ಪರವಾಗಿ ಇವರು ಕುಳಿತು ಅಸಹನೆ, ಅಸಡ್ಡೆಯ ಮನೋಭಾವದಿಂದಲೇ ನಿರ್ಧಾರಗಳನ್ನು ಕೈಕೊಳ್ಳುತ್ತಿದ್ದಾರೆ. ಇದು ಅತ್ಯಂತ ಅಸಾಂವಿಧಾನಿಕ ಮತ್ತು ಜನಸತ್ತಾತ್ಮಕ ವಿಧಾನಕ್ಕೆ ವಿರುದ್ಧವಾದದ್ದು, ಹೀಗಾಗಿ ಇದೂ ಯಶಸ್ವಿಯಾವುವಲ್ಲಿ ಸೋಲುತ್ತದೆ, ಮತ್ತೊಂದಷ್ಟು ಶತಕೋಟಿ ಹಣ ಈ ತಳವಿಲ್ಲದ ಪಾತ್ರೆಯಲ್ಲಿ ಸೋರಿಹೋಗುವುದು ನಿಶ್ಚಿತ.
(ಕೃಪೆ: “ಹೊಸತು” ಮಾಸಿಕ)