ಬೆಂಗಳೂರು: ರಾಜಸ್ಥಾನದಿಂದ ಸರಬರಾಜಾಗುತ್ತಿದ್ದ ಮಾಂಸವು ನಾಯಿಯದ್ದಲ್ಲ, ‘ಕುರಿ’ಯದ್ದು ಎಂಬುದನ್ನು ಪ್ರಯೋಗಾಲಯವು ಖಚಿತಪಡಿಸಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಬಗ್ಗೆ ಲ್ಯಾಬ್ ವರದಿ ಬಹಿರಂಗಪಡಿಸಿರುವ ಸಚಿವರು, ರೈಲುಗಳಲ್ಲಿ ಬಂದಿದ್ದ ಮಾಂಸದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಇದೀಗ ಪ್ರಯೋಗಾಲಯಗಳಿಂದ ಪರೀಕ್ಷಾ ವರದಿ ಬಂದಿದ್ದು, ರಾಜಸ್ಥಾನದಿಂದ ಬಂದ ಮಾಂಸವು ‘ಕುರಿ’ಯದ್ದೇ ಆಗಿದೆ ಎಂಬುದನ್ನು ಪ್ರಯೋಗಾಲಯವು ಖಚಿತಪಡಿಸಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅನಗತ್ಯ ಗೊಂದಲ ಸೃಷ್ಟಿಸದಂತೆ ಮತ್ತು ಈ ಕುರಿತ ಗಾಳಿ ಸುದ್ದಿಗಳಿಗೆ ಕಿವಿಗೊಡದಂತೆ ನಾನು ಸಾರ್ವಜನಿಕರಲ್ಲಿ ವಿನಂತಿಸುತ್ತೇನೆ” ಎಂದು ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಶುಕ್ರವಾರ (ಜುಲೈ 26) ನಾಯಿ ಮಾಂಸ ಸಾಗಾಣೆ ಮಾಡಲಾಗುತ್ತಿದೆ ಎಂದು ಹಿಂದುತ್ವ ಸಂಘಟನೆಗಳ ಕೆಲವರು ವಿವಾದ ಸೃಷ್ಟಿಸಿದ್ದರು. ಜೈಪುರದಿಂದ ರೈಲಿನಲ್ಲಿ ಬಂದ ಸುಮಾರು 2,700 ಕೆಜಿ ಮಾಂಸವನ್ನು ಹೊಂದಿದ್ದ 90 ಇನ್ಸುಲೇಟೆಡ್ ಬಾಕ್ಸ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ರೈಲು ನಿಲ್ದಾಣದಲ್ಲಿ ಜಮಾಯಿಸಿದ ಕಾರ್ಯಕರ್ತರು, ನಾಯಿ ಮಾಂಸ ಸಾಗಾಟವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ರಾಜಸ್ಥಾನದಿಂದ ಬೆಂಗಳೂರಿಗೆ ರೈಲಿನ ಮೂಲಕ ಕುರಿಮರಿ ಮತ್ತು ಇತರ ಪ್ರಾಣಿಗಳ ಮಾಂಸವನ್ನು ಸಾಗಿಸಲಾಗುತ್ತಿದೆ ಎಂಬ ಇತ್ತೀಚಿನ ಮಾಧ್ಯಮ ವರದಿಗಳ ನಂತರ, ವೈಜ್ಞಾನಿಕ ಪರಿಶೀಲನೆಯ ಮೂಲಕ ಈ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡಲು ನಾವು ಬದ್ಧರಾಗಿದ್ದೇವೆ. ನಿಖರವಾದ ಪ್ರಯೋಗಾಲಯದ ವಿಶ್ಲೇಷಣೆಗಾಗಿ ನಾವು ಒಟ್ಟು 84 ಪಾರ್ಸೆಲ್‌ಗಳನ್ನು ಹೈದರಾಬಾದ್‌ನಲ್ಲಿರುವ ಐಸಿಎಆರ್-ನ್ಯಾಷನಲ್ ಮೀಟ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗೆ ಕಳುಹಿಸಿದ್ದೇವೆ ಎಂದಿದ್ದಾರೆ.