Home ಆರೋಗ್ಯ ಮಾರಣಾಂತಿಕ ಮಂಗನ ಕಾಯಿಲೆ : ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ : 21 ದಿನಗಳ ಸಕ್ರಿಯ...

ಮಾರಣಾಂತಿಕ ಮಂಗನ ಕಾಯಿಲೆ : ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ : 21 ದಿನಗಳ ಸಕ್ರಿಯ ಸಮೀಕ್ಷೆಗೆ ಆದೇಶ

0

ಬೆಂಗಳೂರು: ರಾಜ್ಯದಲ್ಲಿ ಮಂಗನ ಕಾಯಿಲೆ ಎಂದೇ ಕರೆಯಲಾಗುವ ಮಾರಣಾಂತಿಕ ‘ಕ್ಯಾಸನೂರು ಫಾರೆಸ್ಟ್ ಡಿಸೀಸ್’ (KFD) ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸಮಗ್ರ ಮತ್ತು ಕಟ್ಟುನಿಟ್ಟಿನ ನಿಯಂತ್ರಣ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಸೋಂಕಿತ ಉಣ್ಣೆಗಳು (Ticks) ಕಚ್ಚುವುದರಿಂದ ಹರಡುವ ಈ ವೈರಾಣು ರೋಗವು ಸಾಮಾನ್ಯವಾಗಿ ನವೆಂಬರ್‌ನಿಂದ ಜೂನ್ ತಿಂಗಳ ಅವಧಿಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಪ್ರಸ್ತುತ ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಅಥವಾ ಲಸಿಕೆ ಲಭ್ಯವಿಲ್ಲದಿರುವ ಹಿನ್ನೆಲೆಯಲ್ಲಿ, ತಡೆಗಟ್ಟುವಿಕೆ ಮತ್ತು ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಮಂಗಗಳ ಅಸಾಮಾನ್ಯ ಸಾವು – ಮೊದಲ ಎಚ್ಚರಿಕೆ
ಮಂಗಗಳ ಅಸಾಮಾನ್ಯ ಸಾವುಗಳು ಕೆಎಫ್‌ಡಿ ಹರಡುವಿಕೆಯ ಪ್ರಾಥಮಿಕ ಸೂಚಕವಾಗಿರುವುದರಿಂದ, ಅರಣ್ಯ ಇಲಾಖೆ ಮತ್ತು ಗ್ರಾಮ ಸಮುದಾಯದ ಸಹಕಾರದೊಂದಿಗೆ ನೈಜ ಸಮಯದಲ್ಲಿ ಮಂಗ ಸಾವು ವರದಿ ವ್ಯವಸ್ಥೆ ಜಾರಿಗೊಳಿಸುವಂತೆ ಸೂಚಿಸಲಾಗಿದೆ.

ಮಂಗ ಸಾವು ವರದಿಯಾದ 2 ಕಿ.ಮೀ. ವ್ಯಾಪ್ತಿಯಲ್ಲಿ ಕನಿಷ್ಠ 21 ದಿನಗಳವರೆಗೆ ಸಕ್ರಿಯ ಸಮೀಕ್ಷೆ ಕೈಗೊಳ್ಳಬೇಕು. ಮಾನವ KFD ಪ್ರಕರಣ ದೃಢಪಟ್ಟಲ್ಲಿ, ಕೊನೆಯ ರೋಗಲಕ್ಷಣ ಆರಂಭವಾದ ದಿನಾಂಕದಿಂದ 21 ದಿನಗಳವರೆಗೆ ಸಮೀಕ್ಷೆ ಮುಂದುವರಿಸಲು ಆದೇಶಿಸಲಾಗಿದೆ. ಮಂಗನಲ್ಲೇ ರೋಗ ದೃಢಪಟ್ಟರೆ, 5 ಕಿ.ಮೀ. ವ್ಯಾಪ್ತಿಯಲ್ಲಿ ಮೇ ಅಥವಾ ಜೂನ್ ತನಕ ಸಮೀಕ್ಷೆ ನಡೆಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಪರೀಕ್ಷೆ, ಆಸ್ಪತ್ರೆ ಸಿದ್ಧತೆ
ಎಲ್ಲಾ ಸಂಶಯಾಸ್ಪದ ಜ್ವರ ಪ್ರಕರಣಗಳನ್ನು ತಕ್ಷಣ ಪರೀಕ್ಷೆಗೆ ಒಳಪಡಿಸಬೇಕು. ಸಂಗ್ರಹಿಸಲಾದ ರಕ್ತದ ಮಾದರಿಗಳನ್ನು 24 ಗಂಟೆಯೊಳಗೆ VDL ಶಿವಮೊಗ್ಗಕ್ಕೆ ಕಳುಹಿಸಬೇಕಾಗಿದೆ. ಉಣ್ಣೆ ಮತ್ತು ಮಂಗ ಮಾದರಿಗಳನ್ನು NIV ಪೂನೆಗೆ ವೈರಾಣು ಪತ್ತೆಗಾಗಿ ರವಾನಿಸಲಾಗುತ್ತದೆ.

ಎಲ್ಲಾ KFD ದೃಢಪಟ್ಟ ಪ್ರಕರಣಗಳನ್ನು ಆಸ್ಪತ್ರೆಗೆ ದಾಖಲಿಸುವುದು ಕಡ್ಡಾಯವಾಗಿದೆ. ರೋಗ ಪ್ರಸರಣ ಅವಧಿಯಲ್ಲಿ ತಾಲ್ಲೂಕು ಆಸ್ಪತ್ರೆಗಳಲ್ಲಿ KFD ಮೀಸಲು ವಾರ್ಡ್ ತೆರೆಯಲು ಸರ್ಕಾರ ಸೂಚಿಸಿದೆ.
ಹೆಚ್ಚಿನ ಚಿಕಿತ್ಸೆಗೆ KMC ಮಣಿಪಾಲ, SIMS ಶಿವಮೊಗ್ಗ ಮತ್ತು KRIMS ಕಾರವಾರ ಆಸ್ಪತ್ರೆಗಳನ್ನು ರೆಫರಲ್ ಕೇಂದ್ರಗಳಾಗಿ ಗುರುತಿಸಲಾಗಿದೆ. ಅಗತ್ಯವಿದ್ದರೆ ರೋಗಿಗಳನ್ನು ತಡಮಾಡದೆ ಈ ಕೇಂದ್ರಗಳಿಗೆ ಸಾಗಿಸಿ ಮರಣ ಪ್ರಮಾಣ ತಗ್ಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಅಂಬ್ಯುಲೆನ್ಸ್, ಔಷಧಿ ಸೌಲಭ್ಯ
ರೋಗಿಗಳನ್ನು ಮನೆಗಳಿಂದ ಆಸ್ಪತ್ರೆಗೆ ಅಥವಾ ರೆಫರಲ್ ಕೇಂದ್ರಗಳಿಗೆ ಸಾಗಿಸಲು ಅಂಬ್ಯುಲೆನ್ಸ್ ವ್ಯವಸ್ಥೆ ಕಡ್ಡಾಯ. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳು ಮತ್ತು ಉಣ್ಣೆ ವಿಕರ್ಷಕಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರಬೇಕು ಎಂದು ಸರ್ಕಾರ ಆದೇಶಿಸಿದೆ.

ಹಾಟ್‌ಸ್ಪಾಟ್‌ಗಳಲ್ಲಿ ಉಣ್ಣೆ ನಿಯಂತ್ರಣ
ಮಂಗ ಸತ್ತ ಸ್ಥಳದ 50 ಮೀಟರ್ ವ್ಯಾಪ್ತಿಯನ್ನು ಹಾಟ್‌ಸ್ಪಾಟ್ ಎಂದು ಪರಿಗಣಿಸಿ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮೆಲಾಥಿಯಾನ್ ಬದಲು ಡೆಲ್ಟಾಮೆಥ್ರಿನ್, ಸೈಫೋಥ್ರಿನ್, ಲ್ಯಾಂಬ್ಡಾ ಸೈಹ್ಯಾಲೋಥ್ರಿನ್, ಆಲ್ಫಾ ಸೈಪರ್‌ಮೆಥ್ರಿನ್ ಅಥವಾ ಬೈಫೆಂದ್ರಿನ್ ಕೀಟನಾಶಕಗಳನ್ನು ಬಳಸಲು ಸೂಚಿಸಲಾಗಿದೆ.

ಉಣ್ಣೆ ಸಮೀಕ್ಷೆ, ಪಶುವೈದ್ಯರ ಪಾತ್ರ
ಕೆಎಫ್‌ಡಿ ಪೀಡಿತ ಜಿಲ್ಲೆಗಳಲ್ಲಿ ಪ್ರತಿ 15 ದಿನಗಳಿಗೊಮ್ಮೆ ಉಣ್ಣೆಗಳ ಸಮೀಕ್ಷೆ ವರದಿ ಸಲ್ಲಿಸಬೇಕು. SOP ಪ್ರಕಾರ ಎಂಟಮಾಲಜಿಸ್ಟ್‌ಗಳು ಸೂಚ್ಯಾಂಕ ವಿಶ್ಲೇಷಣೆ ನಡೆಸಿ ನಿಯಂತ್ರಣ ಕ್ರಮಗಳಿಗೆ ಶಿಫಾರಸು ಮಾಡಬೇಕು.

ಪಶುವೈದ್ಯರು ಸತ್ತ ಮಂಗಗಳ ಶವಪರೀಕ್ಷೆ ಕಡ್ಡಾಯವಾಗಿ ನಡೆಸಬೇಕು. ಮಂಗ ಮಾದರಿಗಳನ್ನು ಕೂಡ ವೈರಾಣು ಪತ್ತೆಗೆ NIV ಪೂನೆಗೆ ಕಳುಹಿಸಬೇಕಾಗಿದೆ.

ಸಾರ್ವಜನಿಕ ಜಾಗೃತಿ, ಉಚಿತ ಚಿಕಿತ್ಸೆ
ಸಾರ್ವಜನಿಕರಿಗೆ ರೋಗ ಲಕ್ಷಣಗಳು, ಹರಡುವಿಕೆ ಮತ್ತು ತಡೆಗಟ್ಟುವಿಕೆ ಕುರಿತು ಐಇಸಿ/ಬಿಸಿಸಿ ಜಾಗೃತಿ ಕಾರ್ಯಕ್ರಮಗಳನ್ನು ತೀವ್ರಗೊಳಿಸಲು ಸರ್ಕಾರ ಸೂಚಿಸಿದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ನೋಂದಾಯಿತ ಆಸ್ಪತ್ರೆಗಳಲ್ಲಿ KFD ಚಿಕಿತ್ಸೆ ಉಚಿತ ಎಂಬ ಮಾಹಿತಿ ಜನರಿಗೆ ತಲುಪುವಂತೆ ಮಾಡುವುದಕ್ಕೂ ಆದ್ಯತೆ ನೀಡಲಾಗಿದೆ.

ಕಡ್ಡಾಯ ವರದಿ ವ್ಯವಸ್ಥೆ
ಎಲ್ಲಾ ಪ್ರಕರಣಗಳನ್ನು IHIP ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ವರದಿ ಮಾಡಬೇಕು. ಉಪಕೇಂದ್ರ ಮಟ್ಟದಲ್ಲಿ S-form, ಆರೋಗ್ಯ ಸಂಸ್ಥೆಗಳಲ್ಲಿ P-form ಹಾಗೂ ಲ್ಯಾಬ್ ಮಾಹಿತಿಯನ್ನು L-form ನಲ್ಲಿ ದಾಖಲಿಸಬೇಕು. ಮರಣ ಪ್ರಕರಣಗಳ ಆಡಿಟ್ ನಡೆಸಿ ತಕ್ಷಣ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಮಾನವ, ಮಂಗ ಮತ್ತು ಉಣ್ಣೆಗಳ ಮಾಹಿತಿಯನ್ನು ಒಳಗೊಂಡ ದೈನಂದಿನ ವರದಿಯನ್ನು VDL ಶಿವಮೊಗ್ಗ ತಯಾರಿಸಿ ಸಂಬಂಧಿತ ಜಿಲ್ಲೆಗಳು ಹಾಗೂ ಆಯುಕ್ತಾಲಯಕ್ಕೆ ಸಲ್ಲಿಸಲಿದೆ ಎಂದು ಸರ್ಕಾರ ತಿಳಿಸಿದೆ.

You cannot copy content of this page

Exit mobile version