Home ಅಂಕಣ ಬೊಗಸೆಗೆ ದಕ್ಕಿದ್ದು-63 : ಮೋಡಿಗಾರ ಮೋದಿಯ ರೋಡ್‌ಸೈಡ್ ಕಣ್ಕಟ್ಟು!

ಬೊಗಸೆಗೆ ದಕ್ಕಿದ್ದು-63 : ಮೋಡಿಗಾರ ಮೋದಿಯ ರೋಡ್‌ಸೈಡ್ ಕಣ್ಕಟ್ಟು!

0

“..ಉದ್ಯೋಗ ಖಾತರಿ ಯೋಜನೆಯ ಹೆಸರಿನಿಂದ ಗಾಂಧಿಯವರನ್ನು ಹೊರದಬ್ಬಿ “ರಾಮ್ ಜಿ”ಯನ್ನು ತುರುಕಿದವರು ಅಭಿವೃದ್ಧಿಯ ಮರೀಚಿಕೆಯನ್ನಷ್ಟೇ ತೋರಿಸುತ್ತಿದ್ದಾರೆ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಮೋದಿ ಸರಕಾರದ ಮಹತ್ತರ ಸಾಧನೆಯೆಂದರೆ, ಹಿಂದಿನ ಸರಕಾರಗಳ ಯೋಜನೆಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಿಸಿ, ಅವುಗಳ ಹೆಸರು ಬದಲಿಸುವುದು, ಭಾರೀ ಮೊತ್ತದ ಹಣವನ್ನು ತೋರಿಕೆಗಾಗಿ ಬಿಡುಗಡೆ ಮಾಡಿ, ವೆಚ್ಚವನ್ನೇ ಮಾಡದೇ ಲೆಕ್ಕ ಮತ್ತು ಜಾಹೀರಾತುಗಳಲ್ಲಿ ಅದನ್ನೇ ಸಾಧನೆ ಎಂದು ಬಿಂಬಿಸುವುದು. ಉದ್ಯೋಗ ಖಾತರಿ ಯೋಜನೆಯ ಹೆಸರಿನಿಂದ ಗಾಂಧಿಯವರನ್ನು ಹೊರದಬ್ಬಿ “ರಾಮ್ ಜಿ”ಯನ್ನು ತುರುಕಿದವರು ಅಭಿವೃದ್ಧಿಯ ಮರೀಚಿಕೆಯನ್ನಷ್ಟೇ ತೋರಿಸುತ್ತಿದ್ದಾರೆ. ಅಚ್ಛೇ ದಿನ್‌ನಿಂದ ಆರಂಭವಾದ ಈ ಮರೀಚಿಕೆಗಳನ್ನು ಮರುಭೂಮಿಯಲ್ಲಿ ಹೇಗೋ ಚಡಪಡಿಸುತ್ತಿರುವ ಒಂಟೆಗಳು ನಂಬಿ ಭ್ರಮೆಯಲ್ಲಿ ಭಜನೆ ಮಾಡುತ್ತಾ ಮುಂದುವರಿಯುತ್ತಿವೆ. ಮುಖ್ಯವಾಹಿನಿ ಮಾಧ್ಯಮಗಳು ಈ ಭಜನೆಗೆ ಪಕ್ಕವಾದ್ಯ ಒದಗಿಸುತ್ತಿವೆ. ಮೋದಿ ಸರಕಾರವು- ಹಳೆಯದು, ಹೊಸದು ಎನ್ನದೇ ಹಿಂದೂತ್ವದ ಅಜೆಂಡಾಕ್ಕೆ ಪೂರಕವಾದ ರಂಗುರಂಗಿನ ಹೆಸರುಗಳನ್ನು ಇಡುವುದರಲ್ಲಿಯೂ ವಿಶ್ವಗುರು.

ಈ ಹೊತ್ತಿನಲ್ಲಿ ದೇಶದಲ್ಲಿ ನಗರಾಭಿವೃದ್ಧಿ ಕುರಿತ ಹಳೆಯ ಸಂಸದೀಯ ಸಮಿತಿಯ ವರದಿಯೊಂದು ಮೊನ್ನೆ ಮೊನ್ನೆ ಕಣ್ಣಿಗೆ ಬಿತ್ತು. ಬಿಜೆಡಿಯ ಪಿನಾಕಿ ಮಿಶ್ರಾ ನೇತೃತ್ವದ ಈ ಸಮಿತಿಯು ಸರಕಾರವನ್ನು ಯದ್ವಾತದ್ವಾ ಜಾಡಿಸಿ, ಸರಕಾರ ಮಾಡುತ್ತಿರುವ ಕಣ್ಕಟ್ಟನ್ನು ಬಯಲಿಗೆಳೆದಿತ್ತು ಮತ್ತು ಯೋಜನೆಗಳ ಅನುಷ್ಟಾನಕ್ಕೆ ಹಲವಾರು ಶಿಫಾರಸುಗಳನ್ನೂ ಮಾಡಿತ್ತು. ಒಂದು ವಿಶೇಷವೆಂದರೆ, ಇದರಲ್ಲಿ ಹಲವರು ಬಿಜೆಪಿ ಸದಸ್ಯರಾಗಿದ್ದರು. ಇನ್ನೊಂದು ವಿಶೇಷವೆಂದರೆ, ಅದು ಈ ಯೋಜನೆಗಳ ಅನುಷ್ಟಾನಕ್ಕೆ 2025ರ ಗುರಿಯನ್ನು ಮತ್ತೆ ನೆಪಿಸಿತ್ತು. ಇದು ಮುಂದೆ 2037…. 2047…ಹೀಗೆ ಮುಂದುವರಿಯಬಹುದು. ಈಗ ನಾವು 2025ರ ಕೊನೆಯ ದಿನಗಳಲ್ಲಿ ಇರುವುದರಿಂದಾಗಿ ಈ ಯೋಜನೆಗಳು ಎಲ್ಲಿಯ ತನಕ ಮುಟ್ಟಿವೆ ಎಂಬುದನ್ನು ಇಲ್ಲಿ ಚುಟುಕಾಗಿ ನೋಡೋಣ.

ಮಾರ್ಚ್ 9, 2018ರಂದು, ಪಿನಾಕಿ ಮಿಶ್ರಾ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಯು ಭಾರತೀಯ ನಗರ ನೀತಿಗೆ ಒಂದು ಮಹತ್ವದ ತಿರುವು ನೀಡಬೇಕಿದ್ದ ವರದಿಯನ್ನು ನೀಡಿತು. ಬದಲಾಗಿ, ಅದು ಮರೆತುಹೋದ ವೈಫಲ್ಯದ ನೀಲನಕ್ಷೆಯಾಯಿತು. ನಾವು 2025ರ ಅಂತ್ಯದಲ್ಲಿ ನಿಂತಿರುವಾಗ, ಏಳು ವರ್ಷಗಳ ಹಿಂದೆ ಗುರುತಿಸಲಾದ “ಪಾರ್ಶ್ವವಾಯು”ವನ್ನು ಗುಣಪಡಿಸಲಾಗಿಲ್ಲ; ಅದನ್ನು ಸಂಖ್ಯಾಶಾಸ್ತ್ರೀಯ “ವಿವರಣೆ” ಮತ್ತು ಅಚ್ಚೇ ದಿನ್‌ನಂತೆ- ನಾಳೆ, ನಾಳೆ ಎಂದು ಸದಾ ಬದಲಾಗುವ ಗಡುವಿನ “ಅತ್ಯಾಧುನಿಕ” ತಂತ್ರಗಳಿಂದ ಮರೆಮಾಚಲಾಗಿದೆ.

ಮೂಲ ವರದಿಯು ದಿಗ್ಭ್ರಮೆಗೊಳಿಸುವ ಸತ್ಯವನ್ನು ಬಹಿರಂಗಪಡಿಸಿತು: ದೇಶದ ಆರು ಅತ್ಯಂತ ಮಹತ್ವಾಕಾಂಕ್ಷೆಯ ನಗರ ಯೋಜನೆಗಳಿಗೆ “ಬಿಡುಗಡೆ”ಯಾದ ₹36,194 ಕೋಟಿಗ ರೂ.ಗಳಲ್ಲಿ, ಕೇವಲ 21.6 ಶೇಕಡಾದಷ್ಟನ್ನು ಮಾತ್ರ ಬಳಸಲಾಗಿದೆ. ಈ “ನವಭಾರತ” ಭ್ರಮೆಯ ಕಿರೀಟ ರತ್ನವಾದ “ಸ್ಮಾರ್ಟ್ ಸಿಟೀಸ್ ಮಿಷನ್” 1.8 ಶೇಕಡಾ ಕರುಣಾಜನಕ ಬಳಕೆಯ ದರದೊಂದಿಗೆ ಒಂದು ಕಣ್ಣಿಗೆ ಬೀಳದ ಪಿಶಾಚಿಯಾಗಿದೆ ಎಂದು ಬಹಿರಂಗವಾಯಿತು. ಇದು ಮೋದಿ ಮತ್ತಾತನ ಭಕ್ತರರಿಗೆ ಮಾತ್ರ ಕಾಣುವ, ನಗರಗಳಲ್ಲಿ ದಿನವೂ ಒದ್ದಾಡುವವರಿಗೆ ಕಾಣದ ಸನಾತನ ಪಿಶಾಚಿ. ಇಂದು, ಸರ್ಕಾರವು ಅದೇ ಸ್ಮಾರ್ಟ್ ಸಿಟಿಗಳಿಗೆ 94 ಶೇಕಡಾ ಪೂರ್ಣತೆಯ ದರವನ್ನು ಹೇಳಿಕೊಳ್ಳುತ್ತದೆ, ಆದರೆ ಅಂಕಿಅಂಶಗಳನ್ನು ಆಳವಾಗಿ ನೋಡಿದರೆ, ಈ “ಯಶಸ್ಸು” ಕೇವಲ ಒಂದು ಹಣಕಾಸಿನ ಮರೀಚಿಕೆ ಎಂದು ತಿಳಿಯುತ್ತದೆ. ಅಂದರೆ, ಶುದ್ಧ ಸುಳ್ಳು.

2017ರ ಬೊಗಳೆ ರೋಗ
ಅದ್ಭುತ, ರಮ್ಯ ಭಾಷೆಯ ಪ್ರಸ್ತುತಿ, ಹೊಳಪಿನ ಹೊದಿಕೆಗಳು ಮತ್ತು “ನವ ಭಾರತ”ದ “ವಿಜಯೋತ್ಸವ”ದ ಬೊಗಳೆಯ ಬ್ರೋಷರ್, ಜಾಹೀರಾತು ಪೋಸ್ಟರ್‌ಗಳ ಅಡಿಯಲ್ಲಿ ನಿರಾಕರಿಸಲು ಸಾಧ್ಯವಿಲ್ಲದ ತಣ್ಣಗಿನ ಅಂಕಿಅಂಶ ಮತ್ತು ಲೆಕ್ಕಾಚಾರದ ವಾಸ್ತವವಿದೆ. ನಗರಾಭಿವೃದ್ಧಿ ಸ್ಥಾಯಿ ಸಮಿತಿಯ (2017-18) 22ನೇ ವರದಿಯು ವ್ಯವಸ್ಥಿತವಾದಷ್ಟೇ ಆಳವಾದ ಅನುಷ್ಠಾನದ ಬಿಕ್ಕಟ್ಟಿಗೆ ಸರಕಾರ ಹಾಕಿದ್ದ ಪರದೆಯನ್ನು ಎಳೆದು ಅನಾವಣಗೊಳಿಸಿತ್ತು. ಪಿನಾಕಿ ಮಿಶ್ರಾ (ಬಿಜೆಡಿ) ಅಧ್ಯಕ್ಷತೆಯ ಮತ್ತು ಮೀನಾಕ್ಷಿ ಲೇಖಿ (ಬಿಜೆಪಿ), ಬ್ರಿಜ್‌ಭೂಷಣ್ ಶರಣ್ ಸಿಂಗ್ (ಬಿಜೆಪಿ) ಮತ್ತು ಪ್ರೊ. ಕೆ.ವಿ. ಥಾಮಸ್ (ಐಎನ್‌ಸಿ) ಅವರಂತಹ ಪ್ರಮುಖ ಧ್ವನಿಗಳನ್ನು ಒಳಗೊಂಡ ಸರಕಾರದ್ದೇ ಆದ ಸಂಸದೀಯ ಚೌಕಿದಾರರು ಹಣಕಾಸಿನ “ಪಾರ್ಶ್ವವಾಯು”ವಿನ ತೀರ್ಪನ್ನು ನೀಡಿದ್ದರು. ನಿಮಗೆ ಆಶ್ಚರ್ಯವಾಗಬಹುದು; ಈ ಪಾರ್ಶ್ವವಾಯು ಪದ ಬಳಕೆ ಇದೇ ಸಮಿತಿಯದ್ದು!

ಪಿನಾಕಿ ಮಿಶ್ರಾ ವರದಿಯು ಎರಡು ರೀತಿಯ ನಯವಂಚನೆಗಳನ್ನು ಗುರುತಿಸಿತ್ತು. ಒಂದನೆಯದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು “ಅವಾಸ್ತವಿಕ ಮುನ್ನೋಟ”ದ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಅದು ಬಹಿರಂಗಪಡಿಸಿತು. ಅಂದರೆ, ಕಾರ್ಯಸಾಧ್ಯವಲ್ಲದ ಗುರಿಗಳನ್ನು ಪ್ರಚಾರಕ್ಕಾಗಿ ನಿಗದಿಗೊಳಿಸುವುದು. ಅರ್ಥವೆಂದರೆ, ಯಾರೋ (ಭಕ್ತರ ಪ್ರಕಾರ ಮೋದಿಯೇ) ಎಲ್ಲೋ ಕುಳಿತು, ಏನು, ಹೇಗೆ, ಎತ್ತ ಎಂಬ ಸ್ಪಷ್ಟ ಚಿಂತನೆ ಇಲ್ಲದೇ ಕಾಗದದ ದೋಣಿಗಳನ್ನು, ವಿಮಾನಗಳನ್ನು ಬಿಡುವುದು; ಜನರನ್ನು ನಂಬಿಸುವುದು. ಯೋಜನೆಗಳ ವಿವರಗಳನ್ನು, ಪ್ರಕ್ರಿಯೆಗಳನ್ನು ನಿಗದಿಪಡಿಸುವುದಕ್ಕೆ ಮೊದಲೇ ಯೋಜನೆಗಳನ್ನು ಘೋಷಿಸಿ, ಅವಸರದಲ್ಲಿ ಪ್ರಾರಂಭಿಸುವುದು. ದಿಲ್ಲಿಯಿಂದ ಶತಕೋಟಿಗಳನ್ನು “ಬಿಡುಗಡೆ” ಮಾಡಲಾಗುತ್ತಿದ್ದರೂ, ರಾಜ್ಯ ಮತ್ತು ಪುರಸಭೆಯ ಮಟ್ಟದಲ್ಲಿ ಹಣವು ಗೋಡೆಗೆ ಬಡಿಯುತ್ತಿದೆ ಎಂದು ಸಮಿತಿಯು ಹೇಳಿತ್ತು. 2017ರಲ್ಲಿ, ಸರಕಾರದ ಸಮರ್ಥನೆಯು ಅಧಿಕಾರಶಾಹಿಯ ತಾಂತ್ರಿಕ ಕಣ್ಕಟ್ಟು ಆಗಿತ್ತು. “ಬಳಕೆ ಪ್ರಮಾಣಪತ್ರ” (Utilisation Certificate) ವಿಳಂಬವಾಗಿದೆ; ಆದರೆ, ಕೆಲಸ ನಡೆಯುತ್ತಿದೆ ಎಂಬ ಸಬೂಬು ನೀಡಲಾಗಿತ್ತು, ಆದರೆ ವಾಸ್ತವದಲ್ಲಿ ಹಣ ನೀಡಿಕೆಯೇ ವಿಳಂಬವಾಗಿತ್ತು,

ಹೀಗಿದ್ದರೂ, ಸಮಿತಿಯು ಈ ಕಣ್ಣ್ಕಟ್ಟನ್ನು ನೋಡಿ ಬಹಿರಂಗಪಡಿಸಿತು ಎಂಬುದೇ ಒಂದು ವಿಶೇಷ. ಒಂದು ಮಿಷನ್‌ನ ಬಜೆಟ್‌ನ 98.2 ಶೇಕಡಾ ಹಣವು- ಅದು ಪ್ರಾರಂಭವಾದ ವರ್ಷಗಳ ನಂತರ ನಿಷ್ಕ್ರಿಯವಾಗಿದ್ದರೆ, ಅದು ಲೆಕ್ಕಪತ್ರ ನಿರ್ವಹಣೆಯ ಸಮಸ್ಯೆಯಲ್ಲ – ಅದು ಅನುಷ್ಟಾನ ಸಾಮರ್ಥ್ಯದ ಕೊರತೆ ಎಂದು ಸಮಿತಿ ಗಮನಿಸಿತು. ಆಮೂಲಾಗ್ರ, ಕೂಲಂಕಷ ಪರೀಕ್ಷೆಯಿಲ್ಲದೆ, “ಎಲ್ಲರಿಗೂ ವಸತಿ” ಮತ್ತು “ಸ್ಮಾರ್ಟ್ ಸಿಟಿಗಳು” ಎಂಬ ಭರವಸೆಯು “ದೂರದ ಕನಸು” ಆಗಿ ಉಳಿಯುತ್ತದೆ ಎಂದು ವರದಿ ಎಚ್ಚರಿಸಿತ್ತು. 2025ಕ್ಕೆ ವೇಗವಾಗಿ ಮುಂದಕ್ಕೆ ಹೋದಾಗ, ಸರಕಾರವು ಇದನ್ನು ಸರಿಪಡಿಸಿ ಸಾಮರ್ಥ್ಯವನ್ನು ಹೆಚ್ಚಿಸುವ ಬದಲು ಗುರಿ ಕಂಬಗಳನ್ನೇ ಮುಂದಕ್ಕೆ ಮುಂದಕ್ಕೆ ಸರಿಸಿರುವುದನ್ನು ನಾವು ನೋಡುತ್ತೇವೆ. ಈಗ ಜೀವ ಇರುವವರು ಸರಕಾರವನ್ನು ಬದಲಿಸದಿದ್ದರೆ, ನಾಳೆ ನಾಳೆ ಎಂಬ ರಾಗ ಸಾಯುವವರೆಗೆ ಮುಂದುವರಿಯಬಹುದೋ ಏನೋ!?

2025ರ ಮರೆವು ರೋಗ
ಮಾರ್ಚ್ 2025ರಲ್ಲಿ ಕಾರ್ಯಾಚರಣೆಯ “ಅಂತಿಮ ವಿಸ್ತರಣೆ”ಯ ಕೊನೆಯಲ್ಲಿ ನಿಂತಿರುವ ಮೋದಿ ಸರಕಾರದ ನಿರೂಪಣೆಯು ವಿಜಯೋತ್ಸವದಂತಿದೆ. ಒಟ್ಟು 8,062ರಲ್ಲಿ 7,504 ಯೋಜನೆಗಳು ಪೂರ್ಣಗೊಂಡಿವೆ, ಇದಕ್ಕೆ 1.5 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚವಾಗಿದೆ ಎಂಬ ಅಂಶವನ್ನು ಅದು ತೋರಿಸುತ್ತಿದೆ. ಆದರೆ 2017ರ ವರದಿಯ ಮೂಲವು ವಿವರಗಳಲ್ಲಿ ಇನ್ನೂ ಜೀವಂತವಾಗಿದೆ. “ಪೂರ್ಣಗೊಳಿಸುವಿಕೆಯ ದರ”ವನ್ನು 94 ಶೇಕಡಾ ಎಂದು ಜಾಹೀರಾತುಗಳ ಮೂಲಕ ಮಾಡಲಾಗಿದ್ದರೂ, ನೆಲದ ಮೇಲೆ ಕಾಣುವ ವಾಸ್ತವವು ಒಂದು ರಣಹೇಡಿಯ ಕಥೆಯನ್ನು ಹೇಳುತ್ತದೆ. 2025ರ ಆರಂಭದ ವೇಳೆಗೆ, ಆಯ್ದ ಮೂಲ 100 ನಗರಗಳಲ್ಲಿ ಕೇವಲ 18 ನಗರಗಳು ಮಾತ್ರ ಮೂಲತಃ ಭರವಸೆ ನೀಡಿದ ಪ್ರತಿಯೊಂದು ಯೋಜನೆಯನ್ನು ಪೂರ್ಣಗೊಳಿಸಿವೆ.

ಈ ಅಂಕಿಅಂಶಗಳ ಕೈಚಳಕದ  “ರೆಡ್ ಹ್ಯಾಂಡ್” ಸಾಕ್ಷ್ಯವನ್ನು ಪಾಟ್ನಾ ಸ್ಮಾರ್ಟ್ ಸಿಟಿ ಯೋಜನೆಯ 2024ರ ಸಿಎಜಿ ಲೆಕ್ಕಪರಿಶೋಧನೆಯಲ್ಲಿ ಕಾಣಬಹುದು. ಮೂಲತಃ ಅನುಮೋದಿಸಲಾದ 44 ಯೋಜನೆಗಳಲ್ಲಿ 29 ಯೋಜನೆಗಳನ್ನು “ಅಸಾಧ್ಯ” ಎಂಬ ಕಾರಣದಿಂದಾಗಿ ಕೈಬಿಡಲಾಗಿದೆ ಎಂದು ಆಡಿಟ್ ಬಹಿರಂಗಪಡಿಸಿದೆ. 2015-2017ರ ಸಂಕುಚಿತ ಜ್ಞಾನದ “ದೂರದೃಷ್ಟಿ”ಯಲ್ಲಿ ಭರವಸೆ ನೀಡಿದ- ಸಂಕೀರ್ಣ ಬಹು-ಹಂತದ ಮೂಲಸೌಕರ್ಯವನ್ನು ನಿರ್ಮಿಸುವ ಬದಲು, ಆ ನಗರವು ತನ್ನ ಪಟ್ಟಿಯನ್ನೇ “ಪರಿಷ್ಕರಿಸಿದೆ”. ಕಷ್ಟಕರವಾದ ಎಂಜಿನಿಯರಿಂಗ್ ಸಾಧನೆಗಳನ್ನು ಸುಲಭ, ಮೇಲ್ನೋಟದ, ನಿರ್ಮಾಣ ಹಂತದಲ್ಲೇ ಕುಸಿಯುವ ಕೆಲಸಗಳೊಂದಿಗೆ ಬದಲಾಯಿಸಿತು. ಇದು ಸರಕಾರ ಆಚರಿಸುವ “ಪೂರ್ಣಗೊಳಿಸುವಿಕೆ”ಯ ಯಜ್ಞ! ಕಠಿಣ ಭಾಗಗಳನ್ನು ತೆಗೆದುಹಾಕುವುದು ಮತ್ತು ಹಳೆಯ ರಾಜ್ಯ-ಅನುದಾನಿತ ಯೋಜನೆಗಳನ್ನು “ಸ್ಮಾರ್ಟ್ ಸಿಟಿ” ಯಶಸ್ಸುಗಳೆಂದು ಮರು-ಲೇಬಲ್ ಮಾಡುವುದು. ಈ ಮೂಲಕ ಲೆಡ್ಜರ್‌ಗಳನ್ನು ಶುದ್ಧಗೊಳಿಸಿ, ಆ ಮೂಲಕ ಸಾಧಿಸಿದ ಗೆಲುವನ್ನು, “ಎವರ್ ರೆಡಿ” ಮೋದಿಯ ನಾಲಗೆಯ ಮೂಲಕ ಸತ್ಯವೆಂದು ಹೇಳಿಸುವುದು.

“ಎಲ್ಲರಿಗೂ ವಸತಿ” ಮಿಷನ್ ಕೂಡಾ ಇದೇ ರೀತಿಯ ಮುಂದೂಡಲ್ಪಟ್ಟ ಭರವಸೆಯ ಕಣ್ಕಟ್ಟನ್ನು ಅನುಸರಿಸುತ್ತದೆ. ಸರಕಾರವು “ಮಂಜೂರಾದ” 1.19 ಕೋಟಿ ಮನೆಗಳ ಬಗ್ಗೆ ಹೆಮ್ಮೆಪಡುತ್ತಿದ್ದರೂ, 2025ರ ಅಂತ್ಯದ ವೇಳೆಗೆ, ಆ ಮನೆಗಳಲ್ಲಿ ಸುಮಾರು 25 ಲಕ್ಷ ಮನೆಗಳು ಅಪೂರ್ಣವಾಗಿವೆ. ಮೂಲ 2022ರ ಗಡುವನ್ನು “PMAY-U 2.0” ನ ಪ್ರಾರಂಭದ ಅಡಿಯಲ್ಲಿ ಹೂಳಲಾಗಿದೆ. ಇದು ಮೂಲತಃ:  ಮೂಲ ಮಿಷನ್- ತನ್ನ ತ ನಿಗದಿತ ಗುರಿಯಲ್ಲಿ ವಿಫಲವಾಗಿದೆ ಎಂದು ಪರೋಕ್ಷವಾಗಿ ಒಪ್ಪಿಕೊಳ್ಳುವ ಐದು ವರ್ಷಗಳ ಒಂದು ವಿಸ್ತರಣೆ. ಆದರೆ, ಆಗಿರುವುದು ಏನು? 2024-25ರ ಬಜೆಟ್‌ನಲ್ಲಿ ನಗರ ವಸತಿಗಾಗಿ ಪರಿಷ್ಕೃತ ಅಂದಾಜುಗಳಲ್ಲಿ 55 ಶೇಕಡಾದಷ್ಟು ಹಣವನ್ನು ಕಡಿತಗೊಳಿಸಲಾಗಿದೆ. ಇದರ ಅರ್ಥವೆಂದರೆ, ಸರಕಾರವು ಹೊಸ ಹಂತಗಳನ್ನು ಘೋಷಿಸಿದಾಗಲೂ, ಹಳೆಯ ಮುಗಿಯದ ಹಂತಗಳಿಗೆ ಹಣವನ್ನು ಸದ್ದಿಲ್ಲದೆ ನಿಲ್ಲಿಸುತ್ತಿದೆ.

“ವಿಕ್ಸಿತ್” (ವಿಕಸಿತ) ಭಾರತದ ವಿಕ್ಷಿಪ್ತ ನಾಯಕತ್ವ
2017ರ ಪಿನಾಕಿ ಮಿಶ್ರಾ ವರದಿಯ ಮಾರ್ಗದರ್ಶನದ ಉತ್ಸಾಹವು ನಗರಗಳ ನಾಗರಿಕರ ಘನತೆಯಲ್ಲಿ ಬೇರೂರಿದೆ. ಒಬ್ಬ ವ್ಯಕ್ತಿಯು ಒಳಚರಂಡಿ ಇರುವ ರಸ್ತೆಗಳು ಅಥವಾ ತಲೆ ಮೇಲೊಂದು ಛಾವಣಿಗಾಗಿ ದಶಕಗಳ ಕಾಲ ಏಕೆ ಕಾಯಬೇಕು ಎಂದು ಅದು ಕೇಳಿತ್ತು. ಇಂದು, ಪ್ರಶ್ನೆಗಳು ಹೆಚ್ಚು ಚುಚ್ಚುತ್ತಿವೆ ಅಲ್ಲವೇ ಮೋದಿಯವರೆ? ಮತ್ತು ನಿಮ್ಮ ಸರಕಾರದ ಮತ್ತು ನಿಮ್ಮ ಮೌನವು ಹೆಚ್ಚು ಆಳವಾಗಿದೆ.

​ಸ್ಮಾರ್ಟ್ ಸಿಟೀಸ್ ಮಿಷನ್ 94 ಶೇಕಡಾ ಪೂರ್ಣಗೊಂಡಿದ್ದರೆ, ಸ್ವತಂತ್ರ ಜಾಗತಿಕ ಸೂಚ್ಯಂಕಗಳು ನಾಗರಿಕ ತೃಪ್ತಿ ಮತ್ತು ಮೂಲಸೌಕರ್ಯ ಗುಣಮಟ್ಟದಲ್ಲಿ ಭಾರತೀಯ ನಗರಗಳನ್ನು ಕೆಳಮಟ್ಟದಲ್ಲಿ ಏಕೆ ಶ್ರೇಣೀಕರಿಸುತ್ತಿವೆ? ಅವರಿಗೆ ತಲೆ ಸರಿ ಇಲ್ಲವೋ? ಅಥವಾ ನೀವು ಸಂಚರಿಸುವಲ್ಲಿ ಅಧಿಕಾರಿಗಳು ಪರದೆ ಹಾಕುತ್ತಾರೋ!? ಸರಕಾರವು ತನ್ನ “ಸ್ಮಾರ್ಟ್ ಸಿಟಿ”ಗಳಲ್ಲಿ 82 ಶೇಕಡಾದಷ್ಟು ಮೂಲ ಮಾಸ್ಟರ್ ಯೋಜನೆಗಳನ್ನೇ ಪೂರೈಸದೆ ಇರುವಾಗ ಅಂತಿಮ ಗಡುವನ್ನು ತಲುಪಿದ್ದು ಹೇಗೆ?

ಬಹುಶಃ ಅತ್ಯಂತ ಹಾನಿಕಾರಕ ವಿಷಯ ಎಂದರೆ, “ಲೆಕ್ಕಪತ್ರ ನಿರ್ವಹಣೆ ಮರೀಚಿಕೆ”ಯ ಸುಳ್ಳು. “ಬಳಕೆ ಪ್ರಮಾಣಪತ್ರ” ಅಡಚಣೆಯನ್ನು ಸರಿಪಡಿಸಲು ಸಚಿವಾಲಯವು ಹತ್ತು ವರ್ಷಗಳನ್ನು ಹೊಂದಿದ್ದರೂ, 2025ರ ಬಜೆಟ್ ಪರಿಷ್ಕೃತ ಅಂದಾಜುಗಳಲ್ಲಿ ಹಂಚಿಕೆಯಾದ ಮತ್ತು ನಿಜವಾಗಿ ಖರ್ಚು ಮಾಡಿದ ಮೊತ್ತಗಳ ನಡುವೆ ಇನ್ನೂ ದೊಡ್ಡ ಅಂತರವನ್ನು ಏಕೆ ತೋರಿಸಿದೆ? ರಾಜ್ಯಗಳಿಗೆ ಹಣವನ್ನು “ಬಿಡುಗಡೆ ಮಾಡುವುದು” ಎಂದರೆ, ಕೇಂದ್ರ ಖಜಾನೆಯಲ್ಲಿ ಹಣವನ್ನು ಉಳಿಸಿಕೊಳ್ಳಲು ಮಾಡಿದ ಉದ್ದೇಶಪೂರ್ವಕವಾಗಿ ಮಾಡಿದ ಹಣಕಾಸಿನ ತಮಾಷೆಯೇ? ಅರ್ಥ ಸರಳ: ಹಣವನ್ನೆ ಕೊಡದೆ, ನಡೆಯದ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ, ಬಳಕೆಯಾಗಿಲ್ಲ ಎಂದು ತೋರಿಸಲಾಗಿದೆ! ಹೀಗಿರುವಾಗ, ಹಣ ಬಳಕೆಯಾಗದೆ ಯೋಜನೆ ಪೂರ್ಣವಾಗಿರುವುದಾದರೂ ಹೇಗೆ!? “ಮೋದಿ ಹೈ ತೋ ಮುಮ್ಕಿನ್ ಹೈ” ತುತ್ತೂರಿಯಿಂದಲೋ!?

ಕೊನೆಯದಾಗಿ, 2025ರ ನಗರಾಭಿವೃದ್ಧಿ ಯೋಜನೆಗಳ “ಪೂರ್ಣಗೊಳಿಸುವಿಕೆ”ಯ ಅಂಕಿಅಂಶಗಳು ಸುಂದರವಾಗಿ ಕಾಣುವಂತೆ ಮಾಡಲು ಪಾಟ್ನಾದ 29 ಯೋಜನೆಗಳಂತೆ ದೇಶಾದ್ಯಂತ ಎಷ್ಟು ಸಾವಿರ ಯೋಜನೆಗಳನ್ನು ಪುಸ್ತಕಗಳಿಂದ ಸದ್ದಿಲ್ಲದೆ ಅಳಿಸಲಾಗಿದೆ ಮೋದಿಯವರೇ?

ಪಿನಾಕಿ ಮಿಶ್ರಾ ವರದಿಯು ಕೇವಲ ಘೋಷಣೆಗಳು ಮತ್ತು ಖರ್ಚು ಮಾಡದ “ನಿಧಿ”ಗಳಿಂದ “ನವ ಭಾರತ”ವನ್ನು ನಿರ್ಮಿಸಲಾಗುವುದಿಲ್ಲ ಎಂಬ ಎಚ್ಚರಿಕೆಯಾಗಿತ್ತು. 2025ರಲ್ಲಿ, ನಮ್ಮಲ್ಲಿ ಘೋಷಣೆಗಳಿವೆ, ಮತ್ತು ಅಂಕಿಅಂಶಗಳಿವೆ. ಆದರೆ ನಮಗೆ ಭರವಸೆ ನೀಡಲಾದ ಸ್ಮಾರ್ಟ್ ನಗರಗಳು ಎಲ್ಲಿವೆ ತೋರಿಸಿ ಮೋದೀಜಿ. ನಿಮ್ಮ ಭಕ್ತರು ವಿದೇಶಿ ಯೋಜನೆಗಳ ಪಟಗಳನ್ನು ಹಾಕಿ, ಸ್ಮಾರ್ಟ್ ಸಿಟಿ ಯೋಜನೆಗಳೆಂದು ನಿಮ್ಮಂತೆಯೇ ಸುಳ್ಳು ಹೇಳುವ ನಾಚಿಕೆಗೇಡಿತನವನ್ನು ಯಾಕೆ ತಂದಿಟ್ಟುಕೊಂಡಿರಿ? 2017ರ “ಪಾರ್ಶ್ವವಾಯು” ಎಂದಿಗೂ ಗುಣವಾಗಲಿಲ್ಲ; ಅದನ್ನು ನೀವು ನಿಮ್ಮ ಭಕ್ತರಂತೆ ಫೋಟೋಶಾಪ್ ಮಾಡಿ ದೇಶಕ್ಕೆ ಪ್ರಸ್ತುತಪಡಿಸಿದ್ದೀರಿ ಅಲ್ಲವೆ!?

ಈ ಯೋಜನೆಗಳ ಅಂಕಿಅಂಶಗಳು ಬಹಳಷ್ಟಿವೆ. ಇದನ್ನು ನೀವು ಪೂರ್ವಭಾವಿ ಸೂಚನೆ ಎಂದು ಭಾವಿಸಿದಲ್ಲಿ ಅಂಕಿ ಅಂಶ ಸಹಿತ ತುಲನಾತ್ಮಕ ವಿವರಗಳನ್ನು ಮುಂದೆ ನೋಡೋಣ.

You cannot copy content of this page

Exit mobile version