Home ವಿದೇಶ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಹತ್ಯೆ: ದೇಶವ್ಯಾಪಿ ಹಿಂಸಾಚಾರ, ಮಾಧ್ಯಮ ಕಚೇರಿಗಳ ಮೇಲೆ...

ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಹತ್ಯೆ: ದೇಶವ್ಯಾಪಿ ಹಿಂಸಾಚಾರ, ಮಾಧ್ಯಮ ಕಚೇರಿಗಳ ಮೇಲೆ ದಾಳಿ

0

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಹತ್ಯೆಯ ಬೆನ್ನಲ್ಲೇ ದೇಶವ್ಯಾಪಿ ತೀವ್ರ ಹಿಂಸಾಚಾರ ಭುಗಿಲೆದ್ದಿದೆ. ಗುರುವಾರ ರಾತ್ರಿ ಆರಂಭವಾದ ಪ್ರತಿಭಟನೆಗಳು ನಿಯಂತ್ರಣ ತಪ್ಪಿ ಹಿಂಸಾಚಾರಕ್ಕೆ ತಿರುಗಿದ್ದು, ರಾಜಧಾನಿ ಢಾಕಾ ಸೇರಿದಂತೆ ಹಲವು ನಗರಗಳಲ್ಲಿ ಆಸ್ತಿ-ಪಾಸ್ತಿ ನಾಶ, ಬೆಂಕಿ ಹಚ್ಚುವ ಘಟನೆಗಳು ವರದಿಯಾಗಿವೆ.

ಪ್ರತಿಭಟನಾಕಾರರು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪೋಸ್ಟರ್‌ಗಳಿಗೆ ಬೆಂಕಿ ಹಚ್ಚಿದ್ದು, ಅವರ ತಂದೆ ಹಾಗೂ ಬಾಂಗ್ಲಾದೇಶದ ಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಐತಿಹಾಸಿಕ ನಿವಾಸದ ಉಳಿದ ಭಾಗಗಳನ್ನು ಧ್ವಂಸಗೊಳಿಸಲು ಯತ್ನಿಸಿದ್ದಾರೆ.

ಚುನಾವಣೆ ಪ್ರಚಾರದ ವೇಳೆ ಗುಂಡೇಟು
ಫೆಬ್ರವರಿ 12ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಪ್ರಚಾರ ನಡೆಸುತ್ತಿದ್ದ ವೇಳೆ ಶರೀಫ್ ಉಸ್ಮಾನ್ ಹಾದಿಗೆ ತಲೆಗೆ ಗುಂಡೇಟು ತಗುಲಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಬಳಿಕ ಮೃತಪಟ್ಟಿದ್ದಾರೆ. ಶೇಖ್ ಹಸೀನಾ ಸರ್ಕಾರದ ವಿರುದ್ಧ ನಡೆದ ವಿದ್ಯಾರ್ಥಿ ಪ್ರತಿಭಟನೆಗಳಲ್ಲಿ ಅವರು ಪ್ರಮುಖ ನಾಯಕನಾಗಿದ್ದರು. ಈ ಹತ್ಯೆ ಪೂರ್ವನಿಯೋಜಿತ ಸಂಚು ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಮಾಧ್ಯಮಗಳ ಮೇಲೆ ದಾಳಿ
ಹಿಂಸಾಚಾರದ ವೇಳೆ ಪ್ರತಿಭಟನಾಕಾರರು ‘ದಿ ಡೈಲಿ ಸ್ಟಾರ್’ ಹಾಗೂ ‘ಪ್ರಥಮ ಆಲೋ’ ಪತ್ರಿಕೆಗಳ ಕಚೇರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು. ಡೈಲಿ ಸ್ಟಾರ್ ಕಟ್ಟಡದೊಳಗೆ ನುಗ್ಗಿದ ದುಷ್ಕರ್ಮಿಗಳು ನೆಲಮಹಡಿಯಲ್ಲಿ ಭಾರೀ ವಿಧ್ವಂಸಕ ಕೃತ್ಯ ನಡೆಸಿದರು. ಈ ಸಂದರ್ಭ ಒಳಗಿದ್ದ ಪತ್ರಕರ್ತರು ಪ್ರಾಣಭಯದಿಂದ 10ನೇ ಮಹಡಿಯ ಮೇಲ್ಛಾವಣಿಗೆ ಓಡಿ ಹೋಗಿ ಸಿಲುಕಿದರು. ದಟ್ಟ ಹೊಗೆಯ ನಡುವೆ ಸಿಲುಕಿದ್ದವರನ್ನು ಅಗ್ನಿಶಾಮಕ ದಳ ಏಣಿಯ ಮೂಲಕ ರಕ್ಷಿಸಿತು. ಹಿಂಸಾಚಾರದ ಹಿನ್ನೆಲೆ ಈ ಎರಡು ಪತ್ರಿಕೆಗಳು ಶುಕ್ರವಾರ ಪ್ರಕಟವಾಗುವುದಿಲ್ಲ ಎಂದು ಘೋಷಿಸಿವೆ.

ಇಂಕ್ವಿಲಾಬ್ ಮಂಚ್ ಶಾಂತಿ ಕರೆ
ಹಿಂಸಾಚಾರಕ್ಕೆ ಕಾರಣವಾದ ‘ಇಂಕ್ವಿಲಾಬ್ ಮಂಚ’ ಸಂಘಟನೆ ತಡರಾತ್ರಿ ಫೇಸ್‌ಬುಕ್ ಪೋಸ್ಟ್ ಮೂಲಕ ಶಾಂತಿಗೆ ಕರೆ ನೀಡಿದ್ದು, “ಕೆಲವು ಗುಂಪುಗಳು ಬಾಂಗ್ಲಾದೇಶವನ್ನು ವಿಫಲ ರಾಷ್ಟ್ರವನ್ನಾಗಿ ಮಾಡಲು ಯತ್ನಿಸುತ್ತಿವೆ. ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರಬೇಡಿ. 32 ಮತ್ತು 36 ಒಂದೇ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ” ಎಂದು ಹೇಳಿದೆ.

ಭಾರತ ವಿರೋಧಿ ಪ್ರಚಾರ ಆರೋಪ
ಶರೀಫ್ ಉಸ್ಮಾನ್ ಹಾದಿ ಅವರು ಮುಂಬರುವ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಉದ್ದೇಶಿಸಿದ್ದರು. ಅವರ ಸಾವಿನ ಬಳಿಕ ರೂಪುಗೊಂಡ ಇಂಕ್ವಿಲಾಬ್ ಮಂಚ ಗುಂಪು ಭಾರತ ವಿರೋಧಿ ಭಾವನೆಗಳನ್ನು ಬಿತ್ತುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಶೇಖ್ ಹಸೀನಾ ಅವರ 15 ವರ್ಷಗಳ ಆಡಳಿತ ಭಾರತಕ್ಕೆ ಅಧೀನವಾಗಿತ್ತು ಎಂದು ಈ ಗುಂಪು ಆರೋಪಿಸಿದೆ.

ಗಡಿ ವಿಚಾರದಲ್ಲಿ ಮತ್ತೊಂದು ವಿವಾದ
ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ಮತ್ತೊಮ್ಮೆ ಗಡಿ ವಿಚಾರದಲ್ಲಿ ಭಾರತವನ್ನು ಕೆಣಕಿದ್ದಾರೆ. ಅಸ್ಸಾಂ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದೇಶದ ಭಾಗವಾಗಿ ತೋರಿಸುವ ನಕ್ಷೆಯಿರುವ ಪುಸ್ತಕವನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಸಾಹಿರ್ ಶಂಶಾದ್ ಮಿರ್ಜಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

‘ಆರ್ಟ್ ಆಫ್ ಟ್ರಯಂಫ್: ಬಾಂಗ್ಲಾದೇಶದ ಹೊಸ ಉದಯ’ ಎಂಬ ಈ ಪುಸ್ತಕವು 2024ರಲ್ಲಿ ಶೇಖ್ ಹಸೀನಾ ಸರ್ಕಾರ ಉರುಳಿದ ವಿದ್ಯಾರ್ಥಿ ದಂಗೆಯನ್ನು ವಿವರಿಸುತ್ತದೆ. ಪುಸ್ತಕದ ಮುಖಪುಟದಲ್ಲಿರುವ ನಕ್ಷೆ ‘ಗ್ರೇಟರ್ ಬಾಂಗ್ಲಾದೇಶ’ ಪರ ಕಲ್ಪನೆಗಳಿಗೆ ಹೊಂದಿಕೆಯಾಗಿದ್ದು, ಇದು ಭಾರತವನ್ನು ಉದ್ದೇಶಪೂರ್ವಕವಾಗಿ ಕೆಣಕುವ ನಡೆ ಎಂಬ ಟೀಕೆ ವ್ಯಕ್ತವಾಗಿದೆ.

You cannot copy content of this page

Exit mobile version