ದೆಹಲಿ: ಭಾರತದಲ್ಲಿ 40 ಲಕ್ಷ ವೈದ್ಯಕೀಯ ಲ್ಯಾಬ್ ವರದಿಗಳನ್ನು (Medical Lab Reports) ಪರಿಶೀಲಿಸಿ ನೋಡಿದಾಗ ಆತಂಕಕಾರಿ ವಿಷಯವೊಂದು ಬಹಿರಂಗಗೊಂಡಿದೆ. ಪ್ರತಿ ಇಬ್ಬರು ಭಾರತೀಯರಲ್ಲಿ ಒಬ್ಬರು ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟವನ್ನು (ಮಧುಮೇಹ) ಹೊಂದಿರುವುದು ದೃಢಪಟ್ಟಿದೆ.
ಇದು ದೇಶದಲ್ಲಿ ಮೌನವಾಗಿ ವಿಸ್ತರಿಸುತ್ತಿರುವ ಮಧುಮೇಹದ ಸಾಂಕ್ರಾಮಿಕ ರೋಗವನ್ನು ಸೂಚಿಸುತ್ತದೆ. ಭಾರತದಲ್ಲಿ ಟೈಪ್-2 ಡಯಾಬಿಟೀಸ್ ಮತ್ತು ಪ್ರೀ-ಡಯಾಬಿಟೀಸ್ ಪ್ರಕರಣಗಳ ಹೆಚ್ಚಳ ಆತಂಕಕಾರಿಯಾಗಿದೆ ಎಂದು ಅಧ್ಯಯನವು ಹೇಳಿದೆ. 2021 ರಿಂದ 2025 ರ ನಡುವೆ ನಡೆಸಿದ 40 ಲಕ್ಷ ವೈದ್ಯಕೀಯ ಲ್ಯಾಬ್ ವರದಿಗಳನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ.
ಪ್ರತಿ ಇಬ್ಬರು ವ್ಯಕ್ತಿಗಳ HbA1c (ಸಕ್ಕರೆ ಪರೀಕ್ಷೆ) ಪರೀಕ್ಷಾ ಫಲಿತಾಂಶಗಳಲ್ಲಿ ಒಂದು ಡಯಾಬಿಟಿಕ್ ವ್ಯಾಪ್ತಿಯಲ್ಲಿ (Diabetic Range) ಇದೆ. ಕನಿಷ್ಠ ನಾಲ್ವರಲ್ಲಿ ಒಬ್ಬರು ಪ್ರೀ-ಡಯಾಬಿಟೀಸ್ ಹೊಂದಿದ್ದಾರೆ. ಕಳೆದ ಮೂರು ತಿಂಗಳ ರಕ್ತದಲ್ಲಿನ ಸಕ್ಕರೆ ಮಟ್ಟದ ಸರಾಸರಿಯನ್ನು ‘HbA1c ಪರೀಕ್ಷೆ’ಯ ಮೂಲಕ ತಿಳಿದುಕೊಳ್ಳಬಹುದು.
ತಜ್ಞರ ಅಭಿಪ್ರಾಯದ ಪ್ರಕಾರ, HbA1c ಮಟ್ಟವು ಸಾಮಾನ್ಯವಾಗಿ 5.7 ಶೇಕಡಾಕ್ಕಿಂತ ಕಡಿಮೆ ಇರಬೇಕು. ಇದು 6.5 ಶೇಕಡಾಕ್ಕಿಂತ ಹೆಚ್ಚಾದರೆ ಮಧುಮೇಹ ಇದೆ ಎಂದು ಅರ್ಥ. ಪಟ್ಟಣ ಮತ್ತು ಗ್ರಾಮೀಣ ಜನಸಂಖ್ಯೆ – ಎರಡರಲ್ಲೂ ಗ್ಲೂಕೋಸ್ ಮಟ್ಟಗಳು ಹೆಚ್ಚಾಗಿರುವುದನ್ನು ಅಧ್ಯಯನವು ತಿಳಿಸಿದೆ.
ಈ ಅಧ್ಯಯನದ ಪ್ರಕಾರ, ದೇಶದಲ್ಲಿ ಮಧುಮೇಹದ ಪ್ರಮಾಣವು ಅತ್ಯಂತ ವೇಗವಾಗಿ ಹೆಚ್ಚುತ್ತಿದೆ. ಆರೋಗ್ಯಕರ ಜೀವನಶೈಲಿ ಮತ್ತು ನಿಯಮಿತ ತಪಾಸಣೆಗಳು ಇದರ ನಿರ್ವಹಣೆಗೆ ನಿರ್ಣಾಯಕವಾಗಿವೆ.
