Home ಆರೋಗ್ಯ ಭಾರತದ ಟೀನೇಜರ್‌ಗಳಲ್ಲಿ ಆತಂಕಕಾರಿ ಮಟ್ಟದ ವಿಟಮಿನ್ ಡಿ ಕೊರತೆ: ಬಿಸಿಲಿಗೆ ಬಾರದೆ ಶಾಲೆ, ಮನೆಯೊಳಗೇ ಕಳೆದು...

ಭಾರತದ ಟೀನೇಜರ್‌ಗಳಲ್ಲಿ ಆತಂಕಕಾರಿ ಮಟ್ಟದ ವಿಟಮಿನ್ ಡಿ ಕೊರತೆ: ಬಿಸಿಲಿಗೆ ಬಾರದೆ ಶಾಲೆ, ಮನೆಯೊಳಗೇ ಕಳೆದು ಹೋಗುತ್ತಿದೆ ಹದಿಹರೆಯ

0

ಭಾರತೀಯ ಟೀನೇಜರ್‌ಗಳಲ್ಲಿ (13 ರಿಂದ 19 ವರ್ಷದವರು) ಸುಮಾರು ಅರ್ಧದಷ್ಟು ಜನರು ವಿಟಮಿನ್ ಡಿ (Vitamin D) ಕೊರತೆಯಿಂದ ಬಳಲುತ್ತಿದ್ದಾರೆ. ಮೆಟ್ರೋಪೋಲಿಸ್ ಹೆಲ್ತ್‌ಕೇರ್ (Metropolis Healthcare) ನಡೆಸಿದ ರಾಷ್ಟ್ರೀಯ ವಿಶ್ಲೇಷಣೆಯಲ್ಲಿ ಈ ಆತಂಕಕಾರಿ ಸಂಗತಿ ಬಹಿರಂಗವಾಗಿದೆ.

2019 ರಿಂದ ಜನವರಿ 2025 ರವರೆಗೆ ನಡೆಸಲಾದ 22 ಲಕ್ಷ ಪರೀಕ್ಷೆಗಳ ಫಲಿತಾಂಶಗಳನ್ನು ಈ ಅಧ್ಯಯನವು ಪರಿಶೀಲಿಸಿದೆ. ಒಟ್ಟಾರೆಯಾಗಿ, 46.5 ಪ್ರತಿಶತದಷ್ಟು ಟೀನೇಜರ್‌ಗಳಲ್ಲಿ ವಿಟಮಿನ್ ಡಿ ಕೊರತೆ ಕಂಡುಬಂದಿದ್ದು, ಇನ್ನೂ 26 ಪ್ರತಿಶತದಷ್ಟು ಜನರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈ ವಿಟಮಿನ್ ಇರಲಿಲ್ಲ.

ಮೂಳೆಗಳ ಆರೋಗ್ಯ, ಸ್ನಾಯುಗಳ ಶಕ್ತಿ ಮತ್ತು ರೋಗನಿರೋಧಕ ಶಕ್ತಿಗೆ ಅತ್ಯಗತ್ಯವಾಗಿರುವ ಡಿ ವಿಟಮಿನ್ ಕೊರತೆಯು ಈ ವಯೋಮಾನದವರಲ್ಲಿ ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

ಪ್ರಾದೇಶಿಕವಾಗಿ ಗಮನಿಸಿದರೆ, ದಕ್ಷಿಣ ಭಾರತದ ಕೇರಳ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳಲ್ಲಿ ಶೇ 50 ರಷ್ಟು ಟೀನೇಜರ್‌ಗಳಲ್ಲಿ ಕೊರತೆಯು ತೀವ್ರವಾಗಿದೆ. ಮಧ್ಯ ಭಾರತದಲ್ಲಿ ಇದು ಶೇ 48.1, ಉತ್ತರ ಭಾರತದಲ್ಲಿ ಶೇ 44.9, ಮತ್ತು ಈಶಾನ್ಯ ಭಾರತದಲ್ಲಿ ಶೇ 36.9 ರಷ್ಟಿದೆ.

ಬದಲಾದ ಜೀವನಶೈಲಿಯೇ ಈ ಕೊರತೆಗೆ ಮುಖ್ಯ ಕಾರಣವಾಗಿದೆ. ಟೀನೇಜರ್‌ಗಳು ಸೀಮಿತ ಪ್ರಮಾಣದಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು, ಹೆಚ್ಚು ಗಂಟೆಗಳ ಕಾಲ ಕೆಲಸದ ಸ್ಥಳಗಳು, ವಿದ್ಯಾ ಸಂಸ್ಥೆಗಳು ಅಥವಾ ಮನೆಗಳಲ್ಲೇ ಕಳೆಯುವುದರಿಂದ ಸಾಕಷ್ಟು ಡಿ ವಿಟಮಿನ್ ಲಭ್ಯವಾಗುತ್ತಿಲ್ಲ ಎಂದು ಅಧ್ಯಯನವು ತಿಳಿಸಿದೆ.

ಈ ಹಿನ್ನೆಲೆಯಲ್ಲಿ, ವಿಟಮಿನ್ ಡಿ ಕೊರತೆ ನಿವಾರಣೆಗೆ ಪರೀಕ್ಷೆಗಳನ್ನು ಹೆಚ್ಚಿಸುವುದು, ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯನ್ನು ಉತ್ತೇಜಿಸುವುದು ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಅಧ್ಯಯನವು ಕರೆ ನೀಡಿದೆ.

You cannot copy content of this page

Exit mobile version