ಬಳ್ಳಾರಿ,ನ.18:ಭಕ್ತ ಶ್ರೇಷ್ಠ ಕನಕದಾಸರ ಕೀರ್ತನೆಗಳು ಜನ ಸಾಮಾನ್ಯರಲ್ಲಿ ಇಂದಿಗೂ ಅಚ್ಚಳಿಯದೆ, ಅಜರಾಮರವಾಗಿವೆ, ಕನಕದಾಸರು ನ್ಯಾಯ ಸಾಹಿತ್ಯದ ಪ್ರತೀಕವಾಗಿದ್ದಾರೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೋಮವಾರ ಆಯೋಸಿದ್ದ ಭಕ್ತ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಳ್ಳಾರಿ ನಗರದಲ್ಲಿ ಅತ್ಯಂತ ಉತ್ಸುಕತೆಯಿಂದ ಕನಕ ದಾಸರ ಜಯಂತಿ ಆಚರಣೆ ಮಾಡಲಾಗುತ್ತಿದೆ. ಹಾಲುಮತ ಸಮಾಜದವರು ಹಾಲಿನಂತೆ ಶುಭ್ರತೆವುಳ್ಳ, ಮೃದು ಸ್ವಭಾವ ಹಾಗೂ ಕನಕ ದಾಸರರಂತೆ ಪವಿತ್ರ ಮನಸ್ಸು ಹೊಂದಿದವರು. ಕನಕದಾಸರು ಜಾತ್ಯತೀತ ತತ್ವವನ್ನು ಆಗಿನ ಕಾಲದಲ್ಲಿಯೇ ಪ್ರತಿಪಾದಿಸಿದ್ದರು ಎಂದರು.
ಅದೇ ರೀತಿ, ಸಂಗೊಳ್ಳಿ ರಾಯಣ್ಣನವರು ಕೂಡ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅವರು ಇಡೀ ದೇಶವೇ ಮೆಚ್ಚುವ ಮಹಾನ್ ಸ್ವಾತಂತ್ರö್ಯ ಹೋರಾಟಗಾರರಾಗಿದ್ದು, ರಾಯಣ್ಣನವರ ಧೈರ್ಯ, ಶೌರ್ಯ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.
ಸರ್ಕಾರಿ(ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಸುಂಕಪ್ಪ ಅವರು ಮಾತನಾಡಿ, ದಾಸ ಶ್ರೇಷ್ಠ ಕನಕದಾಸರು ಭಾವನಾ ಜೀವಿಯಾಗಿದ್ದರು. ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಮನುಷ್ಯತ್ವದ ಪರವಾಗಿ ಕಾಳಜಿ ಹೊಂದಿದ್ದು, ಅವರು ಕೀರ್ತನೆ ಸಾಹಿತ್ಯಕ್ಕೆ ಪುಷ್ಠಿ ನೀಡಿ ಮಹಾನ್ ಸಾಧಕರೆಂದು ಪರಿಗಣಿಸಿಕೊಂಡವರು ಎಂದು ಹೇಳಿದರು.
ಕಾಗಿನೆಲೆ ಆದಿಕೇಶವರ ದಾಸರಾಗಿದ್ದ ಕನಕ ದಾಸರು ಭಕ್ತಿ ಮಾರ್ಗವನ್ನು ಅನುಸರಿಸಿ ಮುಕ್ತ ಮಾರ್ಗದೆಡೆಗೆ ಸಾಗಿದರು. ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡ ಅವರು ನೂರಾರು ಸಮಾಜಮುಖಿ ಕೀರ್ತನೆಗಳನ್ನು ರಚಿಸಿದರು ಹಾಗೂ ಕೀರ್ತನೆಗಳೆಲ್ಲವೂ ಗುಣಮಟ್ಟ ಮತ್ತು ಅತ್ಯಂತ ಮೌಲ್ಯಯುತವಾಗಿದೆ ಎಂದು ಹೇಳಿದರು.
ಕನಕದಾಸರು, ಕೀರ್ತನೆ ಸಾಹಿತ್ಯದ ಸಮಕಾಲಿನದಲ್ಲಿ ಶ್ರೇಷ್ಠ ಹಿರಿಮೆ-ಗರಿಮೆ ತಂದುಕೊಟ್ಟಿದ್ದಾರೆ. ಕನಕದಾಸರು ಸ್ವಾರ್ಥಕ್ಕಾಗಿ ಏನನ್ನೂ ಬಯಸದೇ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸುತ್ತಾ ಜನ ಸೇವಕರಾಗಿದ್ದರು ಎಂದು ಹೇಳುತ್ತಾ ಕನಕದಾಸರ ಜೀವನ ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇದೇ ವೇಳೆ ಗಣ್ಯರು ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಭಕ್ತ ಕನಕದಾಸರ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ.ವಸಂತ್ ಕುಮಾರ್ ತಂಡದ ಸುಗಮ ಸಂಗೀತವು ಕೇಳುಗರಿಗೆ ಇಂಪು ನೀಡಿತು.
ಅದ್ದೂರಿ ಮೆರವಣಿಗೆ:
ಭಕ್ತ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆ ಬಳ್ಳಾರಿ ನಗರದಲ್ಲಿ ಅದ್ದೂರಿಯಾಗಿ ನಡೆಯಿತು.ಕನಕದಾಸ ವೃತ್ತದ ಕನಕದಾಸರ ಪುತ್ಥಳಿಗೆ ಸಂಸದ ಈ.ತುಕಾರಾಂ ಅವರು ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿದರು. ಇದೇ ವೇಳೆ ಡಾ.ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಸೇರಿದಂತೆ ಇತರರು ಇದ್ದರು.
ಕನಕದಾಸರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳು ಹಾಗೂ ವಾದ್ಯಗಳೊಂದಿಗೆ ಶ್ರೀ ಕನಕ ವೃತ್ತದಿಂದ ಆರಂಭವಾದ ಮೆರವಣಿಗೆಯು ಎಸ್‌ಪಿ ಸರ್ಕಲ್-ಶ್ರೀ ಕನಕ ದುರ್ಗಮ್ಮ ದೇವಸ್ಥಾನ-ಗಡಿಗಿ ಚೆನ್ನಪ್ಪ ವೃತ್ತ-ಬೆಂಗಳೂರು ರಸ್ತೆ-ಬ್ರೂಸ್‌ಪೇಟೆ ಪೊಲೀಸ್ ಠಾಣೆ ಮುಂಭಾಗ-ಹೆಚ್.ಆರ್.ಗವಿಯಪ್ಪ ವೃತ್ತದಿಂದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆವರೆಗೆ ತಲುಪಿ ಸಂಪನ್ನಗೊಂಡಿತು.
ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಾ.ಪಿ.ಎಲ್.ಗಾದಿಲಿಂಗನಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಹಾಗು ಇತರರು ಉಪಸ್ಥಿತರಿದ್ದರು.