ಚಂಡೀಗಢ: ತಮ್ಮ ಬೇಡಿಕೆಗಳಿಗಾಗಿ ಡಿಸೆಂಬರ್ 6ರಂದು ದೆಹಲಿಗೆ ಮೆರವಣಿಗೆ ನಡೆಸುವುದಾಗಿ ರೈತ ಸಂಘಗಳು ಸೋಮವಾರ ಘೋಷಿಸಿವೆ. ರಾಜಕೀಯೇತರ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾಗಳು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಶಾಸನಬದ್ಧ ಖಾತರಿಯೊಂದಿಗೆ ವಿವಿಧ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ದೆಹಲಿ ಮೆರವಣಿಗೆ ನಡೆಸುವುದಾಗಿ ಘೋಷಿಸಿವೆ.
ಈ ಹಿಂದೆ ದೆಹಲಿ ಚಲೋ ಮಾರ್ಚ್ ಮೆರವಣಿಗೆಯನ್ನು ಭದ್ರತಾ ಪಡೆಗಳು ತಡೆದ ನಂತರ ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೆಎಂಎಂ ನಾಯಕ ಸರ್ವಾನ್ ಸಿಂಗ್ ಪ್ಯಾಂಥರ್, ಸುದೀರ್ಘ ಕಾಯುವಿಕೆಯ ನಂತರ ನಾವು ದೆಹಲಿ ಮೆರವಣಿಗೆಯನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ರೈತರ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಮಾತುಕತೆ ನಡೆಸುತ್ತಿಲ್ಲ ಎಂದು ಸರ್ವಾನ್ ಸಿಂಗ್ ಕಿಡಿಕಾರಿದರು. ಕಳೆದ ಒಂಬತ್ತು ತಿಂಗಳಿಂದ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಶಾಂತಿಯುತವಾಗಿ ಕಾಯುತ್ತಿದ್ದೆವು, ಆದರೆ ಈಗ ಬೇರೆ ದಾರಿಯಿಲ್ಲ ಎಂದು ಹೇಳಿದರು. ಶಂಭು ಗಡಿಯಿಂದ ರೈತರು ಹಂತ ಹಂತವಾಗಿ ದೆಹಲಿಯತ್ತ ಸಾಗಲಿದ್ದಾರೆ ಎಂದರು.
ಭಾರತೀಯ ಕಿಸಾನ್ (ಶಹೀದ್ ಭಗತ್ ಸಿಂಗ್) ಒಕ್ಕೂಟದ ತೇಜ್ವೀರ್ ಸಿಂಗ್ ರೈತರು 280 ದಿನಗಳಿಂದ ಎರಡೂ ಗಡಿಗಳಲ್ಲಿ ಜಮಾಯಿಸಿದ್ದಾರೆ ಮತ್ತು ಫೆಬ್ರವರಿ 18ರಿಂದ ಕೇಂದ್ರವು ಅವರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಹೇಳಿದ್ದಾರೆ.
ಬೆಳೆಗಳಿಗೆ ಎಂಎಸ್‌ಪಿಯ ಕಾನೂನು ಗ್ಯಾರಂಟಿ, ರೈತರಿಗೆ ಸಾಲ ಮನ್ನಾ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ, ವಿದ್ಯುತ್ ಶುಲ್ಕದಲ್ಲಿ ಹೆಚ್ಚಳವಿಲ್ಲ, 2021ರ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದು, ಸಂತ್ರಸ್ತರಿಗೆ ನ್ಯಾಯ, ಭೂಸ್ವಾಧೀನ ಕಾಯ್ದೆ 2013ರ ನವೀಕರಣ, 2020-21ನೇ ಸಾಲಿನ ಆಂದೋಲನದಲ್ಲಿ ಮೃತಪಟ್ಟ ರೈತರು ಮತ್ತು ಅವರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.