ಜೆನ್-ಝೀಗಳು ಅತಿ ದೊಡ್ಡ ಆಸ್ತಿ, ಅವರೇ ದೇಶದ ಶಕ್ತಿ: ಯೂಟರ್ನ್ ತೆಗೆದುಕೊಂಡ ಕಂಗನಾ

ಜೆನ್‌ ಝೀ (Gen Z) ಯುವ ಪೀಳಿಗೆಯ ವಿರುದ್ಧ ಇತ್ತೀಚೆಗಷ್ಟೇ ತೀವ್ರ ವಾಗ್ದಾಳಿ ನಡೆಸಿ ವಿವಾದಕ್ಕೀಡಾಗಿದ್ದ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್, ಇದೀಗ ತಮ್ಮ ಹೇಳಿಕೆಯಿಂದ ಸಂಪೂರ್ಣ ಯೂ-ಟರ್ನ್ ಪಡೆದಿದ್ದಾರೆ. ಜೆನ್‌ ಝೀ ಯುವಕರು ದೇಶದ ಅತ್ಯಂತ ದೊಡ್ಡ ಶಕ್ತಿ ಮತ್ತು ಆಸ್ತಿ ಎಂದು ಅವರು ಬಣ್ಣಿಸಿದ್ದಾರೆ.

​ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಂಗನಾ ರನೌತ್, “ಜೆನ್‌ ಝೀ ನಮ್ಮ ದೇಶದ ಬಲ ಹಾಗೂ ಶ್ರೇಷ್ಠ ಆಸ್ತಿಯಾಗಿದ್ದಾರೆ. ನಮ್ಮ ಯುವಜನತೆ ದೇಶದ ಸಂಸ್ಕೃತಿ ಮತ್ತು ಅನನ್ಯತೆಯ ರಾಯಭಾರಿಗಳಾಗಿ ಹೊರಹೊಮ್ಮುತ್ತಿರುವುದು ಅತ್ಯಂತ ಸಂತಸದ ವಿಷಯ” ಎಂದು ಹೇಳಿದ್ದಾರೆ.

​ಇತ್ತೀಚೆಗೆ ಆರೆಸ್ಸೆಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಯುವ ಪೀಳಿಗೆಯ ಪರವಾಗಿ ನೀಡಿರುವ ಹೇಳಿಕೆಯನ್ನು ಕಂಗನಾ ಬೆಂಬಲಿಸಿದ್ದಾರೆ. “ಮೋಹನ್ ಭಾಗವತ್ ಅವರ ಅನುಭವ ಮತ್ತು ಮಾರ್ಗದರ್ಶನದಿಂದ ನಾವು ಕಲಿಯುವುದು ಸಾಕಷ್ಟಿದೆ. ದೇಶದ ಯುವಜನರು ನಮ್ಮ ಸಾಂಸ್ಕೃತಿಕ ಗುರುತನ್ನು ಅಪ್ಪಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ” ಎಂದು ತಿಳಿಸಿದ್ದಾರೆ.

​ಕೆಲವು ದಿನಗಳ ಹಿಂದಷ್ಟೇ ಪ್ರತಿಭಟನಾನಿರತ ಯುವಕರನ್ನು ಉಲ್ಲೇಖಿಸಿ ‘ಜನರೇಷನ್ ಗಟ್ಟರ್’ (Generation Gutter) ಎಂದು ಕಂಗನಾ ಕರೆದಿದ್ದರು. ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ರಾಜಕೀಯ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಈ ಕುರಿತು ಸ್ಪಷ್ಟನೆ ನೀಡಿದ ಅವರು, “ಕೆಲವೇ ಕೆಲವು ಯುವಕರು ಕೆಟ್ಟ ಭಾಷೆ ಬಳಸಿ ಇಡೀ ಜೆನ್‌ ಝೀ ಪೀಳಿಗೆಗೆ ಕೆಟ್ಟ ಹೆಸರು ತರುತ್ತಿದ್ದಾರೆ. ದೇಶಕ್ಕಾಗಿ ಉತ್ತಮ ಕೊಡುಗೆ ನೀಡುತ್ತಿರುವ ಮತ್ತು ಶಾಂತಿಯುತವಾಗಿ ಹೋರಾಡುವ ಯುವಕರ ಬಗ್ಗೆ ನಮಗೆ ಹೆಮ್ಮೆಯಿದೆ” ಎಂದು ಸ್ಪಷ್ಟಪಡಿಸಿದ್ದಾರೆ. 

Related Articles

ಇತ್ತೀಚಿನ ಸುದ್ದಿಗಳು