ಕಳೆದ ಹನ್ನೊಂದು ವರ್ಷಗಳಲ್ಲಿ ಕೇಂದ್ರ ಕನ್ನಡಕ್ಕೆ ನೀಡಿದ್ದು ಕೇವಲ 12.28 ಕೋಟಿ; ಉರ್ದು ಭಾಷೆಗೆ 837.94 ಕೋಟಿ, ಸಂಸ್ಕೃತಕ್ಕೆ 2,532.59 ಕೋಟಿ!

ಸಂಸ್ಕೃತ ಭಾಷೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ 2014-15ರಿಂದ 2024-25 ರವರೆಗೆ 2,532.59 ಕೋಟಿ ರೂ. ಖರ್ಚು ಮಾಡಿದೆ.

ಇದು ಇತರ 5 ಪ್ರಾಚೀನ ಭಾರತೀಯ ಭಾಷೆಗಳಿಗೆ (ತೆಲುಗು, ತಮಿಳು, ಕನ್ನಡ, ಮಲಯಾಳಂ, ಒರಿಯಾ) ಖರ್ಚು ಮಾಡಿದ 147.56 ಕೋಟಿ ರೂ.ಗಿಂತ 17 ಪಟ್ಟು ಹೆಚ್ಚು. ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅರ್ಜಿಯ ಮೂಲಕ ಇಂಗ್ಲಿಷ್ ಪತ್ರಿಕೆಯೊಂದು ಈ ವಿವರಗಳನ್ನು ಸಂಗ್ರಹಿಸಿದೆ.

ಮೊದಲ ಪ್ರಾಚೀನ ಭಾಷೆಯಾಗಿ (2004 ರಲ್ಲಿ) ಗುರುತಿಸಲ್ಪಟ್ಟ ತಮಿಳಿಗೆ ಕಳೆದ 11 ವರ್ಷಗಳಲ್ಲಿ ಜಿಪಿಐಎಲ್ (ಭಾರತೀಯ ಭಾಷೆಗಳ ಪ್ರಚಾರಕ್ಕಾಗಿ ನೀಡುವ ಅನುದಾನ) ಅಡಿಯಲ್ಲಿ ಕೇವಲ 113.48 ಕೋಟಿ ರೂ. ನೀಡಲಾಗಿದೆ.

ತೆಲುಗು ಭಾಷೆಗೆ ರೂ.12.65 ಕೋಟಿ, ಕನ್ನಡಕ್ಕೆ ರೂ.12.28 ಕೋಟಿ, ಒರಿಯಾ ಭಾಷೆಗೆ ರೂ.4.63 ಕೋಟಿ ಮತ್ತು ಮಲಯಾಳಂಗೆ ರೂ.4.52 ಕೋಟಿ ಮಂಜೂರು ಮಾಡಲಾಗಿದೆ.

ಅದೇ ಸಮಯದಲ್ಲಿ, ಉರ್ದು ಭಾಷೆಗೆ ರೂ.837.94 ಕೋಟಿ, ಹಿಂದಿ ಭಾಷೆಗೆ ರೂ.426.99 ಕೋಟಿ ಮತ್ತು ಸಿಂಧಿಗೆ ರೂ.53.03 ಕೋಟಿ ಖರ್ಚು ಮಾಡಲಾಗಿದೆ.

ಇದಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಸ್ಕೃತ ಭಾಷೆಯನ್ನು ಜನರ ಮೇಲೆ ಹೇರುವುದು ಬಿಜೆಪಿಯ ನಿಜವಾದ ಗುರಿಯಾಗಿದ್ದು, ಹಿಂದಿ ಅದಕ್ಕೆ ಕೇವಲ ಮುಖವಾಡವಾಗಿದೆ ಎಂದು ಅವರು ಹೇಳಿದ್ದಾರೆ.

ತಮಿಳು ಭಾಷೆಯ ಮೇಲೆ ಕಪಟ ಪ್ರೀತಿಯನ್ನು ತೋರಿಸುವ ಮೂಲಕ ಬಿಜೆಪಿ ಆಡಳಿತಗಾರರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.

Related Articles

ಇತ್ತೀಚಿನ ಸುದ್ದಿಗಳು