Sunday, April 28, 2024

ಸತ್ಯ | ನ್ಯಾಯ |ಧರ್ಮ

ಕನ್ನಡದ ಬೆನ್ನೇರಿದ ಸಂಸ್ಕೃತದ ಬೇತಾಳ -ನಿಖಿಲ್ ಕೋಲ್ಪೆ


ನಮ್ಮಲ್ಲಿ ಹುಟ್ಟಿಸಲಾಗಿರುವ ಕೀಳರಿಮೆಯಿಂದಾಗಿ ಸಂಸ್ಕತವು ಕನ್ನಡದ ಬೆನ್ನೇರಿ ಕುಳಿತ ಬೇತಾಳವಾಗಿದೆಯೆಂದೂ, ಅದು ಗಂಟಲು ಕಚ್ಚಿಹಿಡಿದ ಪುರಾಣದ ಬ್ರಹ್ಮ ಕಪಾಲದಂತೆಯೂ ಆಗಿದೆ ಎಂದೂ ಇತ್ತೀಚೆಗೆ ಹೆಚ್ಚುಹೆಚ್ಚಾಗಿ ಅರಿವಿಗೆ ಬರುತ್ತಿದೆ. ಇದು ನಡೆಯುತ್ತಿರುವುದು ಹೇಗೆ? ಈ ಸಂಸ್ಕೃತದ ಬೇತಾಳವನ್ನು ಕೆಳಗಿಳಿಸಬೇಕಾದರೆ ಮೊದಲು ಅನಗತ್ಯ ಸಂಸ್ಕೃತ ಪದಗಳನ್ನು ಗುಡಿಸಿಹಾಕುವ ಕಸಬರಿಕೆಯ ಅಗತ್ಯವಿದೆ.


ಕೆಲದಶಕಗಳ ಹಿಂದೆ ಇಂಗ್ಲೀಶ್ ಭಾಷೆಯ ಪ್ರಭಾವದಿಂದ ಕನ್ನಡವು ಬಡವಾಗುತ್ತಿದೆ ಎಂಬ ಕೂಗು ಎದ್ದಿತ್ತು. ಈ ಕುರಿತು ಹೆಚ್ಚಿನ ಆತಂಕವಿದ್ದದ್ದು ಸಂಸ್ಕೃತಮಯ ಕನ್ನಡದ ಅಭಿಮಾನಿಗಳಿಗೇ ಹೆಚ್ಚು. ಕನ್ನಡದ ನಡುವೆ ಇಂಗ್ಲೀಶ್ ಪದಗಳ ಬಳಕೆಯ ಈ ಚಾಳಿ ಉಳಿದವರಲ್ಲೂ ಆತಂಕ ಉಂಟುಮಾಡಿತ್ತು. ಈಗಿನ ಕನ್ನಡ ಟಿವಿ ಚಾನೆಲುಗಳನ್ನು ನೋಡಿದರೆ, ಈ ಚಾಳಿ ಇಂಗ್ಲೀಶ್ ಪದಗಳ ನಡುವೆ ಕನ್ನಡ ಪದಗಳನ್ನು ಬಳಸುವಷ್ಟು ಮುಂದುವರಿದಿದೆ! ಏನೇ ಇದ್ದರೂ ನಾವು ಸಾವಿರಾರು ಇಂಗ್ಲೀಶ್ ಪದಗಳನ್ನು ಸರಳವಾಗಿ ಕನ್ನಡೀಕರಿಸಿ ನಮ್ಮದೇ ಮಾಡಿಕೊಂಡಿದ್ದೇವೆ.

ಬಸ್ಸು, ಕೋರ್ಟು, ಸ್ಕೂಟರು, ಪೆನ್ನು, ಗ್ಲಾಸು, ಹೊಟೇಲು, ಪೊಲೀಸು ಇತ್ಯಾದಿ ಉದಾರಣೆಗಳು ಸಾವಿರಾರು ಇವೆ. ಇದೇ ರೀತಿ ಪರ್ಶಿಯನ್, ಹಿಂದಿ, ಉರ್ದು, ಪಾರ್ಸಿ, ಮರಾಠಿಯಿಂದಲೂ ಚಾದರ, ಜಮಖಾನ, ದವಾಖಾನೆ, ಮೆಹನತ್ತು, ವಾಯಿದೆ, ಕರಾರು, ಕಾಯಿದೆ, ಫರ್ಮಾನು, ಜೈಲು ಇತ್ಯಾದಿ ಉದಾರಣೆಗಳೂ ಸಾವಿರಾರು ಇವೆ. ಇದಕ್ಕೂ “ಖಡಾಖಂಡಿತ, ಕಠಿಣ” ವಿರೋಧ ತೋರಿಸಿದವರುಂಟು. ಇಂತವರು ಇಂತಹ ಪದಗಳಿಗೆ ಬದಲಾಗಿ ತಂದದ್ದು ಏನನ್ನು? ಆರಕ್ಷಕ, ಅಭಿಯಂತರರು ಇತ್ಯಾದಿಯಾಗಿ ಸಂಸ್ಕೃತ ಪದಗಳನ್ನು!

ಉದಾಹರಣೆಗೆ ಪೊಲೀಸು ಎಂಬ ಪದವನ್ನೇ ನೋಡೋಣ. ಅದು ಪೊಲೀಸ್, ಪೊಲೀಸಿ, ಪೊಲೀಸಿಯಾ, ಪೋಲ್ಝಿ… ಇತ್ಯಾದಿಯಾಗಿ ಬದಲಾವಣೆಗೊಂಡು ಬೇರೆಬೇರೆ ದೇಶಗಳಲ್ಲಿ ಬಳಕೆಯಲ್ಲಿದೆ. ನಮ್ಮಲ್ಲಿ ಪೋಲೀಸ್ ‌‌‌ಪಾಟೀಲ ಎಂಬ ಜೊತೆಹೆಸರೇ ಇದೆ. ಹಳ್ಳಿಗರೇ ಸಹಜವಾಗಿಯೇ ಪೊಲೀಸಪ್ಪ, ಪೋಲೀಸ್ ಟೇಸನ್ನು, ಇನಸ್ಪೆಕ್ಟರು ಇತ್ಯಾದಿ ಪದ ಬಳಕೆ ಮಾಡುತ್ತಿರುವಾಗ ಈ ಕರ್ಮಠರು ಆರಕ್ಷಕ, ನಿರೀಕ್ಷಕ ಇತ್ಯಾದಿ ಪದಗಳನ್ನು ಅವರ ಮೇಲೆ ಹೇರುವುದೇ, ಅದಕ್ಕೇ ಅಧಿಕೃತ ಚಾಪು ಒತ್ತುವುದೇ ಭಾಷಾ ದಬ್ಬಾಳಿಕೆ. ಇಂತಹ ಕುರುಡು ಕನ್ನಡ ಪ್ರೇಮಿಗಳೇ ಈಗ ಸಂಸ್ಕೃತ ಹೇರಿಕೆಯಿಂದ ನಿಜಗನ್ನಡವನ್ನು ಕೊಲ್ಲುತ್ತಿರುವ ಭಾಷಾಶಾಸ್ತ್ರಿಗಳು!

ಇಲ್ಲೊಂದು ದೊಡ್ಡ ಮೋಸವನ್ನು ಗಮನಿಸಬೇಕು. ಬೇರೆ ಭಾಷೆಗಳ ಪದಗಳನ್ನು ಬದಲಿಸಿ ನಮ್ಮದನ್ನಾಗಿ ಮಾಡಿಕೊಂಡಿದ್ದೇವೆ. ಆದರೆ, ಸಂಸ್ಕೃತ ಪದಗಳನ್ನು ಮಾತ್ರ ಕಿಂಚಿತ್ತೂ ಬದಲಿಸುವ ಹಕ್ಕು ನಿಮಗಿಲ್ಲ. ಅಷ್ಟು ಶುದ್ಧತೆಯ ವ್ಯಸನ. ಅದಕ್ಕಾಗಿಯೇ ನಾವೀಗ ಬಳಸುವ ಕನ್ನಡಕ್ಕೆ ಸ್ವಲ್ಪ ಮಟ್ಟಿಗೆ ಅನುಕೂಲವಾದ ಕೆಲವು ಮತ್ತು ಸಾರಾಸಗಟು ಹೊರೆಯಾಗಿ ಪ್ರಾಣ ಹಿಂಡುವ ಕೆಲವು ಮಹಾಪ್ರಾಣಗಳನ್ನು ತಂದಿದ್ದಾರೆ‌. ಒಂದು ಬಾಲ ಆಚೆ ಈಚೆಯಾದರೂ ಇವರು ನಿಮಗೆ ಕನ್ನಡ ಬರೆಯಲು ಗೊತ್ತಿಲ್ಲ ಎಂಬಂತೆ ಅವಮಾನ ಮಾಡುತ್ತಾರೆ. ಕಾರಣ ಸುಲಭ. ಭೇದ ಮತ್ತು ಬೇಧಿಯ ನಡುವಿನ ಗೊಂದಲ ಇಲ್ಲದ ಯಾವುದೇ ಸಾಮಾನ್ಯ ಕನ್ನಡಿಗ ಇರಲು ಸಾಧ್ಯವಿಲ್ಲ. ಉಳಿದವರಿಗೆ ಅರ್ಥವಾಗದ ಸಂಸ್ಕೃತ ಮಂತ್ರಗಳನ್ನು ಇಟ್ಟುಕೊಂಡು ಧರ್ಮವನ್ನು ಹೈಜಾಕ್ ಮಾಡಿದಂತೆ, ಗೊಂದಲಕಾರಿ, ಪರಿಚಯ ಇಲ್ಲದ, ಕಬ್ಬಿಣದ ಕಡಲೆಯಂತಹ ಸಂಸ್ಕೃತ ಪದಗಳ ಮೂಲಕ ಕನ್ನಡ ಭಾಷೆಯನ್ನು ಹೈಜಾಕ್ ಮಾಡುವ ಪ್ರಯತ್ನ ಇದು.

ಇವರ ಇನ್ನೊಂದು ಅಹಂಕಾರ ನೋಡಿ. ನಮಗೆ ಶಾಲೆಯಲ್ಲಿ- ತತ್ಸಮ ಅಂದರೆ ಅದಕ್ಕೆ ಸಮನಾದದ್ದು ಮತ್ತು ತದ್ಭವ ಅಂದರೆ, ಅದರಿಂದ ಹುಟ್ಟಿದ್ದು ಎಂದು ಪದಗಳ ಪಟ್ಟಿಯನ್ನೇ ಉರುಹೊಡೆಸುತ್ತಿದ್ದರು. ‘ಈ ಎಲ್ಲಾ ಶಬ್ದಗಳು ಸಂಸ್ಕೃತದ್ದು; ಅದರಿಂದ ಹುಟ್ಟಿದ್ದು; ಸಂಸ್ಕೃತ ಎಲ್ಲಾ ಭಾಷೆಗಳ ತಾಯಿ” ಎಂಬ ಸುಳ್ಳನ್ನು ನಮ್ಮ ತಲೆಗೆ ದಾಟಿಸುವ ಮೇಲ್ಮೆಯ ಅಹಂಕಾರವಿದು.

ಹೊಸದಾಗಿ ಧರ್ಮವನ್ನು ಸೇರಿದವರು, ಮೊದಲಿಂದಲೂ ಇದ್ದವರಿಗಿಂತ ಹೆಚ್ಚು ಕರ್ಮಠರೂ, ಮೂಲಭೂತವಾದಿಗಳೂ ಆಗಿರುವುದು ಜಾಗತಿಕ ವಿದ್ಯಮಾನ. ಇದು ಭಾಷೆಯ ಮಟ್ಟಿಗೂ ನಿಜ. ಈಗ ಸಂಸ್ಕೃತದ ಪರವಾಗಿ ಮಾತನಾಡುವವರು ಹೆಚ್ಚಾಗಿ ಬ್ರಾಹ್ಮಣರೇ ಮೊದಲಾದ ಮೇಲ್ಜಾತಿಯವರು ಮತ್ತು ಶಾಲೆಯಲ್ಲಿ ಕನ್ನಡ ಕಲಿತ ತುಳು, ಬ್ಯಾರಿ, ಕೊಂಕಣಿ, ಕೊಡವ ಇತ್ಯಾದಿಯನ್ನು ತಾಯಿ ನುಡಿಯಾಗಿ ಹೊಂದಿರುವವರು; ನೆಲದ ಕನ್ನಡದವರಲ್ಲ. ಸ್ವತಃ ಸಂಸ್ಕೃತ ಬರದವರೂ, ಅಲ್ಪಪ್ರಾಣ ಮಹಾಪ್ರಾಣಗಳಲ್ಲಿ ಗೊಂದಲಿಸುವವರೂ, ಬಾಲದ ಸಮಸ್ಯೆಯವರೂ ಇವರಲ್ಲಿ ಸೇರಿರುವುದು ತಮಾಷೆಯಾಗಿದೆ. ಇದೊಂದು ಕುರುಡು ನಂಬಿಕೆ. ದೇಶಪ್ರೇಮ, ಪುರಾತನ, ಸಂಸ್ಕೃತ ಇತ್ಯಾದಿ ಬೆರೆಸಿದ ಗಾಂಜಾ. (ಈ ಕುರಿತು ಹಿಂದಿನ ಬರಹದಲ್ಲಿ ವಿವರಿಸಲಾಗಿದೆ.)

ಇಂತ ಗುಲಾಮಿ ಮನಸ್ದಿತಿಯಲ್ಲಿ ಜೀವನದ ಪ್ರತಿಯೊಂದು ಅಂಶದಲ್ಲೂ ಸಂಸ್ಕೃತವನ್ನು ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ ಹೇಗೆ ತುರುಕಿಸಿ “ಪ್ರತಿಷ್ಟಾಪನೆ” ಮಾಡಲಾಗಿದೆ ಎಂದು ಮೊದಲು ನೋಡಬೇಕು. ಹುಟ್ಟಿದ ಕೂಡಲೇ ಬ್ರಾಹ್ಮಣಶಾಹಿಯೇ ಇಡುತ್ತಿದ್ಧ ಅವಹೇಳನಕಾರಿ ಹೆಸರುಗಳ ಕುರಿತ ಜಿಗುಪ್ಸೆ ನಂತರ ಅಪ್ಪಟ ಗ್ರಾಮೀಣ ಹೆಸರುಗಳಿಗೂ ವ್ಯಾಪಿಸಿ, ಈಗ ಸಂಸ್ಕೃತ ಹೆಸರುಗಳೇ ರಾರಾಜಿಸುತ್ತಿವೆ. ಈಗ ಅವರಿಗೆ ಈ ಕುರಿತು ತಕರಾರುಗಳಿಲ್ಲ. ಸತ್ತ ಬಳಿಕ ಮಾಡುವುದೆಲ್ಲವೂ ಸಂಸ್ಕೃತದ “ಅಪರ ಕ್ರಿಯೆ”ಗಳಾಗಿವೆ. ಬೊಜ್ಜ ಎಂಬುದು ವೈಕುಂಠ ಸಮಾರಾಧನೆ ಇತ್ಯಾದಿಯಾಗಿದೆ. ನಡುವೆಯೂ ಬಹಳಷ್ಟು ಸಂಸ್ಕೃತಮಯ ಆಗಿವೆ. ಹುಟ್ಟಿದ ದಿನ-ಜನ್ಮ ದಿನೋತ್ಸವ, ಹೆಸರಿಡುವ ಹಬ್ಬ- ನಾಮಕರಣ, ಮನೆಯೊಕ್ಕಲು-ಗೃಹಪ್ರವೇಶ, ಮದುವೆ- ವಿವಾಹ, ಪಾಣಿಗ್ರಹಣ… ಬೆಳ್ಳಿ ಹಬ್ಬ- ರಜತ ಮಹೋತ್ಸವ… ಇನ್ನು ಸಾವಿಗೆ ಬಳಸಲಾಗುತ್ತಿರುವ ಸಂಸ್ಕೃತ ಪದಗಳಿಗೆ ಲೆಕ್ಕವೇ ಇಲ್ಲ. ಇಲ್ಲೆಲ್ಲಾ ಸಂಸ್ಕೃತದ ಆಕ್ರಮಣವು ಸಾಂಸ್ಕೃತಿಕ ಆಕ್ರಮಣ- ಎಂದರೆ ನಡೆನುಡಿಯ ಮೇಲಿನ ದಾಳಿಯ ಜೊತೆಗೇ ನಡೆದಿದೆ ಎಂಬುದನ್ನು ಗಮನಿಸಬೇಕು.

ಕರಾವಳಿಯ ಶೂದ್ರಾದಿಗಳ ಬೂತ (ಇದು ಭೂತವಲ್ಲ!)ದ ನಡಾವಳಿಗಳು “ಭೂತಾರಾಧನೆ”ಗಳಾಗಿ, ಕೋಲ, ನೇಮಗಳು, ಕೋಲೋತ್ಸವ, ನೇಮೋತ್ಸವಗಳಾಗಿವೆ. ಅಷ್ಟೇಕೆ ದೈವಗಳ ಹೆಸರೂ ಸಂಸ್ಕೃತಮಯ. ಲೆಕ್ಕೆಸಿರಿ-ರಕ್ತೇಶ್ವರಿ, ಕಲ್ಲುಟ್ಟಿ- ಕಲ್ಲುರ್ಟಿ ಸತ್ಯಜಾವದೆ- ಸತ್ಯದೇವತೆ; ಅಷ್ಟೇ ಏಕೆ ಮುಸ್ಲಿಂ ಬೂತವಾದ ಬೊಬ್ಬರ್ಯ-ಬಬ್ರುವಾಹನ… ಹೀಗೆ…! ಊರಿನ ಹೆಸರುಗಳನ್ನೂ ಇವರು ಬಿಟ್ಟಿಲ್ಲ. ಹೆಸರುಗಳನ್ನು ಮೊದಲು ಕನ್ನಡೀಕರಿಸಿ ನಂತರ ಸಂಸ್ಕೃತಮಯಗೊಳಿಸುವುದು ತಂತ್ರ. ಉದಾರಣೆಗೆ: ಸೊರ್ನಾಡು- ಸುವರ್ಣ ನಾಡಾಗುತ್ತದೆ; ಮನಿತ್ತಾರ್ ಎಂಬುದು ಮಣಿಹಳ್ಳವಾಗುತ್ತದೆ. ಯಾವುದೇ ಊರಿನ ಮೂಲ ಹೆಸರನ್ನು ಯಾವುದರೂ ಗೊಡ್ಡು ಪುರಾಣಕ್ಕೆ, ದೇವಸ್ಥಾನಕ್ಕೆ ತಳಕುಹಾಕುವುದು ನಡೆಯುತ್ತಿದ್ದರೂ ಯಾರಿಗೂ ನಾಚಿಕೆ ಆಗುವುದಿಲ್ಲ. ಇತ್ತೀಚೆಗೆ ಬರುವ ಎಲ್ಲಾ ಸರಕಾರಿ ಯೋಜನೆಗಳು, ಕಾರ್ಯಕ್ರಮಗಳು, ಹೊಸ ರಾಕೆಟುಗಳು, ಉಪಗ್ರಹಗಳು… ಇತ್ಯಾದಿಗಳ ಹೆಸರುಗಳನ್ನು ನೋಡಿದರೆ, ಸಂಸ್ಕೃತವೇ ಕಾಣುತ್ತದೆ.

ಇತ್ತೀಚೆಗೆ ಮದುವೆಯಿಂದ ಹಿಡಿದು ಸಂಮಾನದ ತನಕ ಎಲ್ಲಾ ಕಾರ್ಯಕ್ರಮಗಳಲ್ಲಿ ಎಂಸಿ ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಿರೂಪಕರ ಹಾವಳಿ ಆರಂಭವಾಗಿದೆ. ಇವರು ತಮಗೂ ಅರ್ಥವಾಗದ ಸಂಸ್ಕೃತಮಯ ಕನ್ನಡದಲ್ಲಿ ಒದರಿದಲ್ಲಿ ಜನ ಅರ್ಥವಾಗದೆಯೂ ಚಪ್ಪಾಳೆ ತಟ್ಟುತ್ತಾರೆ. ಭಾಷೆಯ ಮೂಲ ಉದ್ದೇಶವಾದ ಬೇರೆಯವರಿಗೆ ಅರ್ಥವಾಗಬೇಕು ಎಂಬುದನ್ನೇ ಗಾಳಿಗೆ ತೂರಿ, ಅರ್ಥವಾಗದ ಭಾರೀ ಪದಗಳಿದ್ದರೆ ಮಾತ್ರ ಉತ್ತಮ ಭಾಷೆ ಎಂಬ ಭ್ರಮೆಯಿಂದ ಜನರನ್ನು ಹೊರಗೆಳೆದು, ಕೀಳರಿಮೆ ದೂರಮಾಡುವ ಕೆಲಸ ಮೊದಲು ಆಗಬೇಕಾಗಿದೆ. ಆದರೆ, ನಮ್ಮ ಸರಕಾರಿ ಸಾಹಿತ್ಯ ಸಮ್ಮೇಳನಗಳು, ಸಿರಿವಂತರ “ಸಿರಿ” ಜಾತ್ರೆಗಳು ಜನರನ್ನು ಇದರಿಂದ ಮೇಲೆತ್ತುವ ಬದಲು ಇನ್ನಷ್ಟು ಆಳದ ಬಾವಿಗೆ ತಳ್ಳುತ್ತಿವೆ.

ಈ ನಿಟ್ಟಿನಲ್ಲಿ ನಾವು ಸ್ಪಷ್ಟ ಉದ್ದೇಶ ಇಟ್ಟುಕೊಂಡು ನಿತ್ಯದ ಮಾತು, ಬರವಣಿಗೆಯಲ್ಲಿ- ಮನಸ್ಸಿಗೆ ಬರುವ ಅಗತ್ಯವಿಲ್ಲದ ಸಂಸ್ಕೃತ ಪದಗಳನ್ನು ಅಲ್ಲಲ್ಲಿಯೇ ಗುಡಿಸಿಹಾಕಬೇಕು. ಎರಡೂವರೆ ದಶಕಗಳ ಹಿಂದೆ ನಾನು ಸಹಾಯಕ ಸುದ್ದಿ ಸಂಪಾದಕನಾಗಿದ್ದ “ಜನವಾಹಿನಿ” ಪತ್ರಿಕೆಯಲ್ಲಿ ಇಂತ ಪ್ರಯೋಗ ಮಾಡಲಾಗಿತ್ತು. ಸರಳ ಕನ್ನಡ ಪದಗಳು ಇವೆ ಎಂದಾದರೆ, ಸಂಸ್ಕೃತ ಪದಗಳ ಜಾಗದಲ್ಲಿ ಅವುಗಳನ್ನೇ ಬಳಸುವುದು. ಉದಾ: ಜ್ಞಾನ-ಅರಿವು, ತಿಳುವಳಿಕೆ, ಸಂತೋಷ-ಸಂತಸ, ಆಶ್ಚರ್ಯ-ಅಚ್ಚರಿ, ಲೇಖನ-ಬರಹ, ಗ್ರಾಂಥಿಕ-ಪುಸ್ತಕದ… ಹೀಗೆ ಸರಳ ಪದಗಳಿಂದ ಇದು ಆರಂಭವಾಗಿತ್ತು. ಆಡಂಬರದ, ತೋರಿಕೆಯ ಘನಘೋರ ಸಂಸ್ಕೃತ ಶಬ್ದಗಳನ್ನು ಸಾರಾಸಗಟು ಉಚ್ಛಾಟಿಸಲಾಗಿತ್ತು. ಉದಾ: ಉಚ್ಛ್ರಾಯ, ಪ್ರಕ್ಷೇಪ, ಪ್ರಜ್ವಲನ…. ಇತ್ಯಾದಿ. ಕೆಲವು ಸರಿಹೊಂದುವ ಸಂದರ್ಭಗಳಲ್ಲಿ ಕೆಲವು ಪ್ರಾಣ ತಿನ್ನುವ ಮಹಾಪ್ರಾಣಗಳಿಂದಲೂ ಮುಕ್ತಿ ಪಡೆಯಲಾಗಿತ್ತು. ಉದಾ: ಉಚ್ಛಾಟನೆ- ಉಚ್ಚಾಟನೆ, ಕಛೇರಿ-ಕಚೇರಿ, ಕೊಠಡಿ-ಕೊಟಡಿ, ಶ್ರೇಷ್ಠ-ಶ್ರೇಷ್ಟ… ಇತ್ಯಾದಿ.

ಇದನ್ನು ಮಾಡುವಾಗ ಒಂದು ಎಚ್ಚರ ವಹಿಸದೇ ಇದ್ದರೆ, ಅದು ಕನ್ನಡಕ್ಕೆ ಸಹಾಯವಾಗುವ ಬದಲು ಹಾನಿಯನ್ನೇ ಉಂಟುಮಾಡುವುದು ನೂರಕ್ಕೆ ನೂರರಷ್ಟು ನಿಜ. ಸಂಸ್ಕೃತ ಪ್ರೇಮಿಗಳು ಅದರ ಭಾಷಾ ಶುದ್ಧತೆ ಬಗ್ಗೆ ಮತ್ತು ಬೇರೆ ಭಾಷೆಗಳ ಪದಗಳ ಎರವಲಿನ ಕುರಿತು ತೋರುವ ಕರ್ಮಠತನವನ್ನು ಸಂಸ್ಕೃತವನ್ನು ಗುಡಿಸುವುದರಲ್ಲಿ ನಾವು ತೋರಿಸಬೇಕಾಗಿಲ್ಲ. ಕನ್ನಡದಲ್ಲಿ ಮೂರು ರೀತಿಯ ಸಂಸ್ಕೃತ ಪದಗಳನ್ನು ಗುರುತಿಸಬಹುದು. ಮೊದನೆಯವು “ಸಹಜ” ಮತ್ತು “ಸರಳ”ವಾಗಿ ಕನ್ನಡದಲ್ಲಿ “ಮಿಲನ”ಗೊಂಡು “ಸ್ವಂತ”ದ್ದೇ ಆಗಿರುವಂತವುಗಳು. ಇಂತಹ ಪದಗಳ ತಂಟೆಗೆ ಹೋಗುವುದು ಕನ್ನಡದ ಪದಸಂಪತ್ತಿನ ದರೋಡೆಗೆ ಸಮ. ಬೇರೆ ಭಾಷೆಗಳಿಂದ ಪದಗಳನ್ನು ಎರವಲು ಪಡೆಯದ ಭಾಷೆಯೇ ಇಲ್ಲ. ಇಂಗ್ಲೀಶಿನಿಂದ ಲ್ಯಾಟಿನ್, ಗ್ರೀಕ್, ಫ್ರೆಂಚ್ ಮೂಲದ ಪದಗಳನ್ನು ಕಿತ್ತುಹಾಕಿದರೆ, ಅದರ ಹಂದರ ಮಾತ್ರ ಉಳಿಯಬಹುದು.

ಇನ್ನು ಕೆಲವು ಪದಗಳು ಬೇರೆ ಬೇರೆ ಕಾಲಗಳಲ್ಲಿ ಬಂದು ಸೇರಿದವು. ಇವುಗಳಲ್ಲಿ ಕೆಲವು “ಸಹನೀಯ” ಮತ್ತು ಕೆಲವು ಈಗಲೂ ಕನ್ನಡಕ್ಕೆ ಒಗ್ಗದೆ, ನಿಜ ಕನ್ನಡಿಗರಿಗೆ ಸವಾಲು ಒಡ್ಡುತ್ತಾ, ವಂದಿಮಾಗಧ, ಆಸ್ತಾನ ಕವಿ-ಸಾಹಿತಿಗಳ “ಕೃಪಾಕಟಾಕ್ಷ”ದಿಂದ ಮತ್ತು ಕನ್ನಡಿಗರ ನಾಚಿಕೆಗೇಡಿನ ಕೀಳರಿಮೆಯಿಂದ ಮಾತ್ರ ಉಳಿರುವಂತವು. ಅವುಗಳನ್ನು ಸುಲಭದಲ್ಲಿ ಕಿತ್ತೆಸೆಯಬಹುದು. ಆದರೆ ತಕ್ಷಣವೇ ಒದ್ದೋಡಿಸಬೇಕಾದ ಕೆಲವು ಸಂಸ್ಕೃತ ಪದಗಳಿವೆ. ಅವು- ಇರುವ ಕನ್ನಡ ಪದಗಳನ್ನು ಕೀಳುಗಾಣಿಸಿ, ಅವುಗಳ ಜಾಗದಲ್ಲಿ ಸಭ್ಯತೆ, ಸಂಸ್ಕೃತಿಯ ಸೋಗಿನಲ್ಲಿ ಮೆರೆಯುತ್ತಿರುವಂತವು. ಹೆರಿಗೆ ಎನ್ನಲು ನಾಚಿಕೆಪಟ್ಟು ಪ್ರಜನನ ಎನ್ನಬೇಕು ಎಂದು ಒತ್ತಾಯಿಸುವಂತವು.

ಇಲ್ಲಿ ಇರುವ ಇನ್ನೊಂದು ಅಪಾಯ ಎಂದರೆ, ಕೆಲವರು ಸಂಸ್ಕೃತವನ್ನು ಒಂದು ಭಾಷೆಯಾಗಿ ದ್ವೇಷಿಸುವ ಮೂಲಭೂತವಾದ ತೋರುತ್ತಿರುವುದು. ಇವರು ಹೇಳಿದ್ದನ್ನು ಒಪ್ಪಿದರೆ, ಸಂಸ್ಕೃತ ಪದಗಳು ಸಾಕಷ್ಟು ಇರುವ ಕುವೆಂಪು ಸಹಿತ ಈ ತನಕದ ಬಹುತೇಕ ಸಾಹಿತ್ಯವನ್ನು ಕಡೆಗಣಿಸಬೇಕಾಗುತ್ತದೆ. ಇಂತವರು ಸಂಸ್ಕೃತದಂತೆಯೇ, ಆಳುವ ಜಾತಿ, ವರ್ಗಗಳಿಗೆ ಹತ್ತಿರವಾಗಿ ಸತ್ತ ಮತ್ತು ಜನ ಸಾಮಾನ್ಯರಿಗೆ ಅರ್ಥವಾಗದ ಹಳೆಗನ್ನಡ ಕಾವ್ಯಗಳಿಂದ ಕನ್ನಡ ಪದಗಳ ಹೆಣ ಅಗೆದು ತಂದು ಸಂಸ್ಕೃತ ಪದಗಳ ಜಾಗದಲ್ಲಿ ಕೂರಿಸುತ್ತಿರುವುದು. ಇವು ಜನಭಾಷೆಗೆ ಸಂಬಂಧವಿಲ್ಲದ ಪದಗಳು. ಇದು ಎಷ್ಟು ಅಪಾಯಕಾರಿ ಎಂದರೆ, ಮೃತ ಸಂಸ್ಕೃತಮಯ ಕನ್ನಡಕ್ಕೆ ಎದುರಾಗಿ ಅಷ್ಟೇ ಕಷ್ಟವಾದ ಸತ್ತ ಹಳೆಗನ್ನಡವನ್ನು ನಿಲ್ಲಿಸುವುದು! ಇದರಿಂದ ಯಾರಿಗೇನು ಲಾಭ?

ನಾವು ಸಂಸ್ಕೃತವನ್ನು ಏಕೆ ವಿರೋಧಿಸಬೇಕು ಎಂಬ ಬಗ್ಗೆ ನಮಗೆ ಸ್ಪಷ್ಟತೆ ಇರಲಿ. ಮೇಲುಕೀಳಿನ ಜಾತಿಪದ್ಧತಿಯನ್ನು ಕ್ರೂರವಾಗಿ ಬೆಳೆಸಿ, ಇಂದಿಗೂ ಸಾಕುತ್ತಿರುವ ಧಾರ್ಮಿಕತೆಯೊಂದಿಗೆ ಅದು ಹೊಂದಿರುವ ಹೊಕ್ಕುಳಬಳ್ಳಿ ನಂಟು ಮತ್ತು ಅದಕ್ಕಿರುವ ಶ್ರೇಷ್ಟತೆಯ ವ್ಯಸನವೇ ಈ ಕಾರಣಗಳು; ಇತರ ಭಾಷೆ ಸಂಸ್ಕೃತಿಗಳನ್ನು ಕೀಳಾಗಿ ಕಾಣುವ ಮೇಲರಿಮೆಯ ಅಹಂಕಾರದ ಜೊತೆಗೆ ಒಳಗೆ ಸೇರಿ ಕಬಳಿಸುವ ವೈರಸ್ ಸ್ವಭಾವ.

ನಾವೊಂದು ಪ್ರಯೋಗ ಮಾಡಬಹುದು. ಇನ್ನು ಮುಂದೆ ಬರೆಯುವಾಗ ಆದಷ್ಟು ಸಂಸ್ಕೃತ ಪದಗಳನ್ನು ದೂರ ಇಟ್ಟು, ನೆನಪಿಗೆ ಬರುವ ಕನ್ನಡ ಪದಗಳನ್ನು, ಆಡುಮಾತುಗಳನ್ನು ಬಳಸೋಣ. ಇದನ್ನು ಕೃತಕವಾಗಿ, ಹಗೆ ಇಟ್ಟುಕೊಂಡು, ಹಟದಿಂದ ಮಾಡದೇ ಸಹಜವಾಗಿ ಮಾಡೋಣ. ಕೆಲವೊಮ್ಮೆ ಇದಕ್ಕಾಗಿ ವಾಕ್ಯ ರಚನೆಯ ರೀತಿಯನ್ನು ಕೊಂಚ ಬದಲಿಸಬೇಕಾಗಿ ಬರಬಹುದು. ಆದರೆ, ನಿಮ್ಮ ಬರವಣಿಗೆ ಸರಾಗವಾಗಿ ಹೊಸ ಮೆರುಗುಪಡೆಯುವುದನ್ನು ನೀವು ಕಾಣಲಿದ್ದೀರಿ. ಜೊತೆಗೆ ನಿಮ್ಮ ಬರವಣಿಗೆ ಮುಂದೆ ಹೆಚ್ಚು ಜನರನ್ನು ತಟ್ಟಬಹುದು.


Related Articles

ಇತ್ತೀಚಿನ ಸುದ್ದಿಗಳು