Friday, May 3, 2024

ಸತ್ಯ | ನ್ಯಾಯ |ಧರ್ಮ

ಕಾರಟಗಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರ ಮೇಲೆ ಹಲ್ಲೆ ; ಕರವೇ ತೀವ್ರ ಆಕ್ರೋಶ

ಅಕ್ರಮವಾಗಿ ಅಕ್ಕಿಯನ್ನು ದಾಸ್ತಾನು ಮಾಡಿ ನೆರೆಯ ಆಂಧ್ರಕ್ಕೆ ಕಳುಹಿಸಲು ತಯಾರಿ ನಡೆಸಿದ್ದಾರೆ ಎಂಬ ಮಾಹಿತಿಯ ಅಡಿಯಲ್ಲಿ ಪರಿಶೀಲನೆಗೆಂದು ಹೋದ ಕೊಪ್ಪಳ ಜಿಲ್ಲೆಯ ಕರಟಗಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರ ಮೇಲೆ ತೀವ್ರವಾಗಿ ಹಲ್ಲೆ ನಡೆದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದೆ.

ಭಾನುವಾರದ ದಿನ ಸಂಜೆ 7 ಗಂಟೆಯ ಸುಮಾರಿಗೆ ಕಾರಟಗಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರಶಾಂತ್ ನಾಯಕ್ ತಮ್ಮ ಸಂಘಟನೆಯ ನಾಲ್ಕು ಮಂದಿ ಸಹಪಾಠಿಗಳೊಂದಿಗೆ ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿದ್ದಾರೆ ಎನ್ನಲಾದ ಗೋಡೌನ್ ಗೆ ಹೋಗಿದ್ದಾರೆ. ಹೋಗುವುದಕ್ಕೂ ಮೊದಲು ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ಕೊಟ್ಟಿರುತ್ತಾರೆ. ಮಾಹಿತಿ ತಿಳಿಸಿದರೂ ಆಹಾರ ಇಲಾಖೆ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಕ್ಕಿರುವುದಿಲ್ಲ. ಇನ್ನು ಸ್ಥಳೀಯ CPI ವೀರಭದ್ರಯ್ಯ ಸ್ವಾಮಿ ಅವರಿಗೆ ಮಾಹಿತಿ ನೀಡಿರುತ್ತಾರೆ. ಪೊಲೀಸರು ಇದನ್ನು ಗಂಭೀರವಾಗಿ ತಗೆದುಕೊಳ್ಳದೇ ಕೇವಲ ಇಬ್ಬರು ಪೊಲೀಸ್ ಕಾನಸ್ಟೆಬಲ್ ರನ್ನು ಕಳಿಸಿರುತ್ತಾರೆ.

ಗೋಡೌನಿನ ಒಳಗೆ ಪ್ರವೇಶಿಸುತ್ತಿದ್ದಂತೆ ಗೇಟ್ ಹಾಕಿ, ನೀನು ಯಾರು? ನೀನೇಕೆ ಬಂದಿದ್ದೀಯಾ ಎಂದು ಮಾತಿಗೆ ಮಾತು ಬೆಳೆದಿದೆ. ಹಾಗೇ ಅಕ್ರಮವಾಗಿ ಇಟ್ಟಿರುವುದು ತಪ್ಪು. ಸರ್ಕಾರಕ್ಕೆ ಸೇರಬೇಕಾದ ಅಕ್ಕಿ ದಾಸ್ತಾನಿನ ಬಗ್ಗೆ ವಿವರಿಸಲು ಕರೆವೇ ಅಧ್ಯಕ್ಷ ಪ್ರಶಾಂತ್ ನಾಯಕ್ ತಿಳಿಸಲು ಮುಂದಾದಾಗ, ಗೋಡೌನಿನ ಮಾಲಿಕನ ಆಜ್ಞೆಯಂತೆ ಅಲ್ಲಿದ್ದ ಕಾರ್ಮಿಕರು ಮತ್ತು ಕೆಲವು ಗೂಂಡಾಗಳು ಹಲ್ಲೆಗೆ ಮುಂದಾಗುತ್ತಾರೆ.

ಸುಮಾರು 120 ಕ್ಕೂ ಹೆಚ್ಚು ಮಂದಿ ತೆಲುಗು ಮಿಶ್ರಿತ ಕನ್ನಡದಲ್ಲಿ ಮಾತನಾಡುವವರು ಗುಂಪುಕಟ್ಟಿ ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸರ ಮುಂದೆಯೇ ಕರವೇ ತಾಲ್ಲೂಕು ಅಧ್ಯಕ್ಷ ಪ್ರಶಾಂತ್ ನಾಯಕ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ತಪ್ಪಿಸಲು ಹೊದ ಪೊಲೀಸರನ್ನೂ ನೂಕಾಡಿ, ತಳ್ಳಾಡಿದ್ದಾರೆ. ಪ್ರಶಾಂತ್ ನಾಯಕ್ ಜೊತೆಗಿದ್ದ ಸಹಪಾಠಿಗಳು ಈ ಮಧ್ಯದಲ್ಲಿ ಅಷ್ಟು ಜನರಿಂದ ತಪ್ಪಿಸಿಕೊಂಡು ಓಡಿ ಹೋದರೆ, ಪ್ರಶಾಂತ್ ನಾಯಕ್ ಮಾತ್ರ ಅಷ್ಟೂ ಮಂದಿಯಿಂದ ದೈಹಿಕವಾಗಿ ತೀವ್ರತರವಾದ ಹಲ್ಲೆಗೆ ಒಳಗಾಗಿದ್ದಾರೆ. ಹಲ್ಲೆಯ ಸಂದರ್ಭದಲ್ಲಿ ತಲೆ ಮತ್ತು ಕಪಾಳಕ್ಕೆ ತೀವ್ರವಾಗಿ ಹೊಡೆತ ಬಿದ್ದ ಪರಿಣಾಮ ಪ್ರಶಾಂತ್ ನಾಯಕ್ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿರುತ್ತಾರೆ. ನಂತರ ಅವರನ್ನು ಎಳೆದು ತಂದು ಬೀದಿಯಲ್ಲಿ ಎಸೆದ ನಂತರ ಕರವೇ ಸಂಘಟನೆಯ ಕಾರ್ಯಕರ್ತರು ಆಸ್ಪತ್ರೆಗೆ ದಾಖಲು ಮಾಡಿ, ಸಧ್ಯ ಪ್ರಶಾಂತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಕ್ರಮವಾಗಿ ಅಕ್ಕಿಯನ್ನು ದಾಸ್ತಾನು ಮಾಡಿ ಅದನ್ನು ನೆರೆಯ ಆಂಧ್ರಕ್ಕೆ ಕಳುಹಿಸಲು ತಯಾರಿ ನಡೆಸಿರುತ್ತಾರೆ ಎಂಬುದನ್ನು ತಿಳಿದ ಮೇಲೂ ಕ್ರಮ ಕೈಗೊಳ್ಳದ ಆಹಾರ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಮೇಲೂ ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದೆ. ಪ್ರಶಾಂತ್ ನಾಯಕ್ ಮೇಲೆ ಹಲ್ಲೆ ಸಂದರ್ಭದಲ್ಲಿ ಪ್ರಶಾಂತ್ ನಾಯಕ್ ಬೈದ ಶಬ್ದಗಳನ್ನೇ ದಾಸ್ತಾನು ಮಾಲಿಕರು ದೂರಿನಲ್ಲಿ ದಾಖಲು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಕ್ರಮ ಪ್ರವೇಶ, ಅವಾಚ್ಯ ಶಬ್ದಗಳ ನಿಂಧನೆ, ಜಾತಿ ನಿಂಧನೆ ಅಡಿಯಲ್ಲಿ ಪ್ರಶಾಂತ್ ನಾಯಕ್ ಅವರ ಮೇಲೂ ದೂರು ದಾಖಲಾಗಿದೆ.

ಹಲ್ಲೆಯ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ‘ಜಿಲ್ಲಾ ಮತ್ತು ರಾಜ್ಯ ಸಮಿತಿಯಲ್ಲಿ ಈ ಬಗ್ಗೆ ರಕ್ಷಣಾ ವೇದಿಕೆ ಸಭೆ ಕರೆದು ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸಧ್ಯಕ್ಕೆ ತಾಲ್ಲೂಕು ಕರವೇ ಅಧ್ಯಕ್ಷರಾದ ಪ್ರಶಾಂತ್ ನಾಯಕ್ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಾರಣಾಂತಿಕವಾಗಿ ನಡೆದ ಹಲ್ಲೆ ಇದಾದ್ದರಿಂದ ಇದನ್ನು ರಕ್ಷಣಾ ವೇದಿಕೆ ಗಂಭೀರವಾಗಿ ತಗೆದುಕೊಂಡಿದೆ’ ಎಂದು ಕರವೇ ಕೊಪ್ಪಳ ಜಿಲ್ಲಾ ಘಟಕದ ಮುಖ್ಯಸ್ಥರಾದ ಗಿರೀಶ್ ಆನಂದ್ ಪೀಪಲ್ ಮೀಡಿಯಾ ಕ್ಕೆ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು