Home ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಅಮಾನತಿಗೆ ಎಲ್ಲರೂ ಟೀಕಿಸಿದ್ರೆ ಕರವೇ ನಾರಾಯಣ ಗೌಡ್ರು ಖುಷಿ ಪಡ್ತಿದ್ದಾರೆ.. ಯಾಕೆ...

ಪೊಲೀಸ್ ಕಮಿಷನರ್ ಬಿ.ದಯಾನಂದ್ ಅಮಾನತಿಗೆ ಎಲ್ಲರೂ ಟೀಕಿಸಿದ್ರೆ ಕರವೇ ನಾರಾಯಣ ಗೌಡ್ರು ಖುಷಿ ಪಡ್ತಿದ್ದಾರೆ.. ಯಾಕೆ ಗೊತ್ತಾ?

0

ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರ ಏನೋ ದುರ್ಘಟನೆಗೆ ಪ್ರತ್ಯಕ್ಷ ಮತ್ತು ಪರೋಕ್ಷ ಕಾರಣ ಆದವರನ್ನೆಲ್ಲ ಅಮಾನತು ಮಾಡ್ತಿದೆ. ಈ ಮಧ್ಯೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ್ ಅವರ ವರ್ಗಾವಣೆಗೆ ಸರ್ಕಾರದ ಮೇಲೆ ಜನರಿಂದ ಹೆಚ್ಚು ಆಕ್ರೋಶ ವ್ಯಕ್ತವಾದರೆ, ಇತ್ತ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ ನಾರಾಯಣ ಗೌಡ್ರು ಮಾತ್ರ ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರಕ್ಕೆ ಈಗಾಗಲೇ ಹೊಸ ಆಯುಕ್ತರ ನೇಮಕ ಕೂಡ ಆಗಿದೆ..ಸೋಷಿಯಲ್‌ ಮೀಡಿಯಾ ತುಂಬ ಸರ್ಕಾರದ ವಿರೋಧವಾಗಿ ಪೋಸ್ಟ್‌ ಜಾಸ್ತಿಯಾಗಿದೆ. ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಆಗಲು ಸರ್ಕಾರವೇ ನೇರ ಕಾರಣ. ನಿಮ್ಮ ಪ್ರಚಾರದ ಗೀಳಿಗೆ ಇಷ್ಟುದೊಡ್ಡ ಹಾನಿಯಾಯಿತು. ತಪ್ಪೇ ಮಾಡದ ಪೊಲೀಸರ ಮೇಲೆ ಯಾಕೆ ಕ್ರಮ ಎಂದು ಜನ ಪ್ರಶ್ನಿಸುತ್ತಿದ್ದಾರೆ.. ಎಂಬೆಲ್ಲ ರೀತಿಯಾಗಿ ಸರ್ಕಾರದ ಟೀಕೆ ಮಾಡುತ್ತಿರುವಾಗ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರ ಜಾಲತಾಣದ ಪೋಸ್ಟ್ ಈಗ ಮತ್ತೊಂದು ಕಡೆಯಿಂದ ಸುದ್ದಿ ಮಾಡುತ್ತಿದೆ.

ಅಷ್ಟಕ್ಕೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಅಮಾನತಿಗೆ ನಾರಾಯಣ ಗೌಡರ ಸಂತಸ ಯಾಕೆ ಎಂದು ನೋಡುವುದಾದರೆ

ಆರ್ ಸಿ ಬಿ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಘೋರ ದುರಂತದ ದೃಶ್ಯಗಳನ್ನು ನೋಡಿ, ಅದರ ಆಘಾತದಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಹನ್ನೊಂದು ಅಮಾಯಕ ಜೀವಗಳು ಹಾಗೆ ಅನ್ಯಾಯವಾಗಿ ಹೊಸಕಿ ಹಾಕಲ್ಪಟ್ಟವಲ್ಲ, ಅದನ್ನು ಹೇಗೆ ಅರಗಿಸಿಕೊಳ್ಳುವುದು. ಆ ಮಕ್ಕಳ ಕುಟುಂಬದವರ ನೋವಿಗೆ ಸಾಂತ್ವನ ಎಲ್ಲಿದೆ?. ಆರ್ ಸಿ ಬಿ ತಂಡ ಹದಿನೆಂಟು ವರ್ಷಗಳ ಬಳಿ ಐಪಿಎಲ್ ಟ್ರೋಫಿ ಗೆದ್ದಿದ್ದಕ್ಕೆ ಎಲ್ಲರಿಗೂ ಸಂತೋಷವಿತ್ತು, ಸಂಭ್ರಮವಿತ್ತು. ಆದರೆ ಅದು ಕೆಲವೇ ಘಂಟೆಗಳಲ್ಲಿ ಸೂತಕವಾಗಿ ಬದಲಾಗಿಹೋಯಿತು. ಹನ್ನೊಂದು ಜನರ ಮನೆಯ ದೀಪ ಆರಿಹೋಯಿತು. ಇದಕ್ಕೆ ಯಾರು ಹೊಣೆ, ಆ ಕುಟುಂಬದವರಿಗೆ ಎಲ್ಲಿದೆ ನ್ಯಾಯ? ನನ್ನ ದೃಷ್ಟಿಯಲ್ಲಿ ಈ ಭೀಕರ ದುರಂತಕ್ಕೆ ಎಲ್ಲರೂ ಹೊಣೆಗಾರರು. ಸಮೂಹ ಸನ್ನಿಗೆ ಬಲಿಯಾಗಿ ವಿಜಯೋತ್ಸವಕ್ಕೆ ಅನಗತ್ಯ ಉತ್ಸಾಹ ತೋರಿದ ರಾಜ್ಯ ಸರ್ಕಾರ, ಕಾರ್ಯಕ್ರಮವನ್ನು ಗೊತ್ತು ಗುರಿಯಿಲ್ಲದೆ ಆಯೋಜಿಸಿದ ಕರ್ನಾಟಕ ಕ್ರಿಕೆಟ್ ಅಸೋಸಿಯಷನ್, ಆರ್ ಸಿ ಬಿ ಮ್ಯಾನೇಜ್ಮೆಂಟ್, ಈವೆಂಟ್ ನಡೆಸುವ ಸಂಸ್ಥೆ, ಕೊನೆಗೆ ಸಂಭ್ರಮಕ್ಕೂ ಹುಚ್ಚಾಟಕ್ಕೂ ವ್ಯತ್ಯಾಸ ಗೊತ್ತಿಲ್ಲದ ಅಭಿಮಾನಿಗಳು ಎಲ್ಲರೂ ಕಾರಣ.ನಿನ್ನೆಯ ದುರ್ಘಟನೆ ಸಂದರ್ಭದಲ್ಲಿ ಇದ್ದ ಎರಡು, ಮೂರು ಸಾವಿರ ಪೊಲೀಸರು ತಮ್ಮ ಶಕ್ತಿ ಮೀರಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ಮೂರು – ನಾಲ್ಕು ಲಕ್ಷದಷ್ಟು ಜನರನ್ನು ನಿರ್ವಹಿಸಲು ಇಷ್ಟು ಪೊಲೀಸರಿಗೆ ಸಾಧ್ಯವೇ ಇರಲಿಲ್ಲ. ಹಾಗಿದ್ದ ಮೇಲೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟವರು ಯಾರು? ಯಾವ ಧೈರ್ಯದ ಮೇಲೆ ಅನುಮತಿ ಕೊಟ್ಟರು, ಅದೂ ಕೂಡ ಯಾವ ಪೂರ್ವ ತಯಾರಿಯೂ ಇಲ್ಲದೆ?ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರನ್ನು ಅಮಾನತ್ತು ಮಾಡಲಾಗಿದೆ. ಇದು ಅವರಿಗೆ ಆಗಬೇಕಿತ್ತು. ಯಾರು ಎಷ್ಟೇ ಒತ್ತಡ ಹೇರಲಿ, ತೀರ್ಮಾನ ತೆಗೆದುಕೊಳ್ಳಬೇಕಾಗಿದ್ದು ಪೋಲೀಸ್ ಕಮಿಷನರ್. ಅವರ ತಪ್ಪು ನಿರ್ಧಾರವು ಕೂಡ ಈ ಘೋರ ದುರಂತಕ್ಕೆ ಪ್ರಮುಖ ಕಾರಣ. ಇದೇ ದಯಾನಂದ್ ಅವರು 2023ರ ಡಿಸೆಂಬರ್ 27 ರಂದು ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಐತಿಹಾಸಿಕ ಕನ್ನಡ ನಾಮಫಲಕ ಚಳವಳಿ ಸಂದರ್ಭದಲ್ಲಿ ಹೇಗೆ ಚಳವಳಿಗಾರರೊಂದಿಗೆ ಹೇಗೆ ನಡೆದುಕೊಂಡರು ಎಂಬುದು ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನನ್ನ ಮೇಲೆ ಹದಿನಾರು ಕೇಸ್ ಗಳನ್ನು ಹಾಕಲಾಯಿತು. ನನ್ನನ್ನು ಮೂರು ನಾಲ್ಕು ತಿಂಗಳುಗಳ ಕಾಲ ಜೈಲಿನಲ್ಲೇ ಇಡುವ ಸಂಚು ನಡೆದಿತ್ತು. ನ್ಯಾಯಾಲಯ ಜಾಮೀನು ನೀಡಿದ್ದರಿಂದ ಹದಿನಾರು ದಿನಗಳ ನಂತರ ನಾನು ಜೈಲಿನಿಂದ ಹೊರಗೆ ಬಂದೆ. ಅಧಿಕಾರ ಯಾವತ್ತಿಗೂ ಶಾಶ್ವತ ಅಲ್ಲ ಎಂದು ನಾನು ಅವತ್ತೇ ದಯಾನಂದ್ ಅವರಿಗೆ ಹೇಳಿದ್ದೆ. ಈಗ ಕರ್ಮ ಅವರ ಕಡೆ ತಿರುಗಿ ಬಂದು ನಿಂತಿದೆ. ಮೂರು ದಶಕಕ್ಕೂ ಹೆಚ್ಚು ಕಾಲದ ನನ್ನ ಚಳವಳಿಯ ಅನುಭವದಲ್ಲಿ ಕನ್ನಡ ಚಳವಳಿಗಾರರನ್ನು ಕೆಟ್ಟದಾಗಿ ನಡೆಸಿಕೊಂಡವರಿಗೆ ಏನೇನೆಲ್ಲ ಆಗಿದೆ ಎಂಬುದನ್ನು ನಾನು ನೋಡಿದ್ದೇನೆ. ದಯಾನಂದ್ ಈ ಪಟ್ಟಿಗೆ ಹೊಸ ಸೇರ್ಪಡೆ ಅಷ್ಟೇ.

ಚಳವಳಿಗಾರರು ಪ್ರತಿಭಟನೆ ಮಾಡಬೇಕೆಂದರೆ ಫ್ರೀಡಂ ಪಾರ್ಕ್ ನಲ್ಲಿ ಹೋಗಿ ಬಾಯಿ ಬಡಿದುಕೊಳ್ಳಬೇಕು. ಬೀದಿಗೆ ಬಂದ್ರೆ ಪೊಲೀಸರು ಕೇಸು ಹಾಕುತ್ತಾರೆ. ಅದಕ್ಕೆ ಕೋರ್ಟಿನ ತೀರ್ಮಾನವನ್ನು ಮುಂದೆ ಇಡುತ್ತಾರೆ. ನಿನ್ನೆ ಇಡೀ ಬೆಂಗಳೂರು ನಗರ ನಲುಗಿ ಹೋಯಿತಲ್ಲ, ಅದಕ್ಕೆ ನ್ಯಾಯಾಲಯದ ಆದೇಶ ಅಡ್ಡಿ ಬರುವುದಿಲ್ಲವೇ? ನ್ಯಾಯ ಕೇಳಿ ಪ್ರತಿಭಟನೆ ಮಾಡುವವರಿಗೆ ಅನುಮತಿ ಸಿಗುವುದಿಲ್ಲ, ವಿಜಯೋತ್ಸವದ ಹೆಸರಿನಲ್ಲಿ ಅಮಾಯಕ ಜೀವಗಳನ್ನು ತುಳಿದು ಹಾಕುವ ಕಾರ್ಯಕ್ರಮಗಳಿಗೆ ಅನುಮತಿ ಸಿಗುತ್ತೆ. ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ. ಇದಕ್ಕೆ ನನ್ನ ಧಿಕ್ಕಾರ.ʼ ಎಂದಿದ್ದಾರೆ.

You cannot copy content of this page

Exit mobile version