Home ರಾಜ್ಯ ವಿಮಾನ ನಿಲ್ದಾಣಗಳಿಗೆ ಸಾಧಕ ಕನ್ನಡಿಗರ ಹೆಸರು: ಕರವೇ ಅಭಿನಂದನೆ

ವಿಮಾನ ನಿಲ್ದಾಣಗಳಿಗೆ ಸಾಧಕ ಕನ್ನಡಿಗರ ಹೆಸರು: ಕರವೇ ಅಭಿನಂದನೆ

0

ಬೆಂಗಳೂರು: ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ ಮತ್ತು ವಿಜಯಪುರ ವಿಮಾನ ನಿಲ್ದಾಣಗಳಿಗೆ ಕರ್ನಾಟಕದ ನಾಲ್ವರು ಮಹಾಸಾಧಕರ ಹೆಸರನ್ನು ಇಡುವ ಪ್ರಸ್ತಾಪವನ್ನು ಕರ್ನಾಟಕ ವಿಧಾನಸಭೆ ಸರ್ವಾನುಮತದಿಂದ ಅನುಮೋದಿಸಿರುವುದು ಅತ್ಯಂತ ಸಂತಸದ ವಿಷಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು,ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಹತ್ತು ವರ್ಷಗಳಿಂದ ಈ ಬೇಡಿಕೆ ಇಟ್ಟು ಹೋರಾಟ ನಡೆಸಿತ್ತು, ಆದರೆ ಈಗ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯುಗದ ಕವಿ, ಜಗದ ಕವಿ ಕುವೆಂಪು, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ವಿಜಯಪುರ ವಿಮಾನ ನಿಲ್ದಾಣಕ್ಕೆ ಕ್ರಾಂತಿಯೋಗಿ ಬಸವಣ್ಣನವರ ಹೆಸರು ಇಡುವ ಪ್ರಸ್ತಾಪವನ್ನು ಅಂಗೀಕರಿಸಿರುವುದು ಹೆಮ್ಮೆ ತಂದಿದೆ ಎಂದಿದ್ದಾರೆ.

ಭಾರತ ಒಕ್ಕೂಟ ಸರ್ಕಾರವು ಆದಷ್ಟು ಶೀಘ್ರದಲ್ಲೇ ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿ ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ‌. ಈ ವಿಷಯದಲ್ಲಿ ಪಕ್ಷಬೇಧ ಮರೆತು ಒಂದಾಗಿ ಸರ್ವಾನುಮತದಿಂದ ಪ್ರಸ್ತಾಪ ಅನುಮೋದಿಸಿದ ಎಲ್ಲ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಐತಿಹಾಸಿಕ ನಿರ್ಣಯಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಎಲ್ಲ ಶಾಸಕರನ್ನು ಅಭಿನಂದಿಸಿರುವ ಅವರು
ಕನ್ನಡಿಗರ ಬೇಡಿಕೆ ಈಡೇರಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಬೇಕೆಂದು ನಾವು ಹೋರಾಟ ನಡೆಸಿ ಯಶಸ್ವಿಯಾಗಿದ್ದೆವು. ಅದೇ ರೀತಿ ಈಗ ನಾಲ್ಕು ವಿಮಾನ ನಿಲ್ದಾಣಗಳಿಗೆ ಕರ್ನಾಟಕದ ನಾಲ್ವರು ಮೇರುಸಾಧಕರ ಹೆಸರು ಇಡಬೇಕೆಂಬ ನಮ್ಮ ಹೋರಾಟದ ಬೇಡಿಕೆಯೂ ಈಗ ಈಡೇರಿದಂತಾಗಿದೆ ಎಂದು ಹೇಳಿದ್ದಾರೆ.

You cannot copy content of this page

Exit mobile version