ಬೆಂಗಳೂರು: ಕರ್ನಾಟಕದ ರೈತರು ಹಾಗೂ ನಾಗರಿಕರ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರೊಂದಿಗೆ ನಡೆಯಬಹುದಾದ ಮಾತುಕತೆಯನ್ನು “ಸಹಾನುಭೂತಿ”ಯಿಂದ ಕಾಣುವಂತೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೆ ರವಿವಾರ ಪತ್ರ ಬರೆದು ಮನವಿ ಮಾಡಿದ್ದಾರೆ.
“ಪರಸ್ಪರ ಗೌರವ ಮತ್ತು ಸೌಹಾರ್ದತೆಯೇ ಕರ್ನಾಟಕ ಹಾಗೂ ತಮಿಳುನಾಡಿನ ನಡುವಿನ ಸಂಬಂಧದ ಅಡಿಪಾಯವಾಗಿದೆ. ಕೋಟ್ಯಂತರ ತಮಿಳರು ಕರ್ನಾಟಕವನ್ನು, ಅದರಲ್ಲೂ ಮುಖ್ಯವಾಗಿ ಬೆಂಗಳೂರನ್ನು ತಮ್ಮ ನೆಲೆಯಾಗಿಸಿಕೊಂಡು ಇದರ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅದೇ ರೀತಿ, ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ನಿಮ್ಮ ರಾಜ್ಯದ ಏಳಿಗೆಗೆ ಶ್ರಮಿಸಿದ್ದಾರೆ. ಈ ಪರಸ್ಪರ ಅವಲಂಬನೆಯು ರಾಜ್ಯದ ಗಡಿಗಳನ್ನು ಮೀರಿ ಜನರಡುವೆ ಇರುವ ಆಳವಾದ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.”
ಮೇಕೆದಾಟು ಯೋಜನೆಯು ತಮಿಳುನಾಡಿನ ಹಿತಾಸಕ್ತಿಗಳಿಗೆ ಧಕ್ಕೆ ತರದೆ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಬಲ್ಲದು ಎಂದು ಒತ್ತಿಹೇಳಿದ ಬಿಜೆಪಿ ರಾಜ್ಯ ಅಧ್ಯಕ್ಷರು, ವಿಜಯ್ ಅವರ ಬೆಂಬಲವು ಎರಡೂ ರಾಜ್ಯಗಳ ನಡುವಿನ ಸಹಕಾರದ ದೊಡ್ಡ ಹೆಜ್ಜೆಯಾಗಲಿದೆ ಎಂದು ವಿವರಿಸಿದರು.
“ಎರಡೂ ರಾಜ್ಯಗಳ ಹಿತವನ್ನು ಕಾಯುವ ಹಿರಿಯ ನಾಯಕನ ನಿಲುವನ್ನು ನೀವು ತಳೆಯುತ್ತೀರಿ ಎಂದು ನಾನು ನಂಬಿದ್ದೇನೆ. ಈ ಎರಡು ರಾಜ್ಯಗಳ ನಡುವಿನ ಐತಿಹಾಸಿಕ ಬಾಂಧವ್ಯವನ್ನು ಗಟ್ಟಿಗೊಳಿಸಲು ನೀವು ನೆರವಾಗುತ್ತೀರಿ ಎಂದು ನಾನು ಪ್ರಾಮಾಣಿಕವಾಗಿ ಆಶಿಸುತ್ತೇನೆ. ಜನರನ್ನು ಒಡೆಯುವ ಬದಲು ಕಾವೇರಿಯು ನಮ್ಮನ್ನು ಒಂದಾಗಿಸಲಿ.”
