ಕರ್ನಾಟಕ ಕಾರ್ಮಿಕ ಇಲಾಖೆಯು ದೇಶದಲ್ಲೇ ಮೊದಲ ಬಾರಿಗೆ ‘ನಿರ್ಗತಿಕ ವಿಧವಾ ಮಹಿಳಾ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ವಿಧೇಯಕ, 2026’ ಅನ್ನು ಸಿದ್ಧಪಡಿಸುತ್ತಿದೆ. ಪತಿಯನ್ನು ಕಳೆದುಕೊಂಡು, ಜೀವನೋಪಾಯದ ಮಾರ್ಗವಿಲ್ಲದೆ ಬಡತನ ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಮಗ್ರ ಸಾಮಾಜಿಕ ಭದ್ರತೆ ಒದಗಿಸುವುದು ಈ ಕಾನೂನಿನ ಮುಖ್ಯ ಉದ್ದೇಶವಾಗಿದೆ.
ಈ ವಿಧೇಯಕವು ಕೇವಲ ಪಿಂಚಣಿ ನೀಡುವುದಕ್ಕೆ ಸೀಮಿತವಾಗದೆ, ಈ ಮಹಿಳೆಯರಿಗೆ ಉದ್ಯೋಗಾವಕಾಶ ಮತ್ತು ಕೌಶಲ್ಯ ತರಬೇತಿ ನೀಡುವುದಕ್ಕೆ ಒತ್ತು ನೀಡುತ್ತದೆ. ಇದಕ್ಕಾಗಿ ಪ್ರತ್ಯೇಕವಾದ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ನೋಂದಾಯಿತ ಫಲಾನುಭವಿಗಳಿಗೆ ಮತ್ತು ಅವರ ಕುಟುಂಬಗಳಿಗೆ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಈ ಮಂಡಳಿ ಹೊಂದಿರುತ್ತದೆ.
ಯೋಜನೆಯ ಅನುಷ್ಠಾನಕ್ಕಾಗಿ ‘ವಿಶೇಷ ಕಲ್ಯಾಣ ನಿಧಿ’ಯನ್ನು ರಚಿಸಲಾಗುತ್ತದೆ. ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದ ಮೇಲೆ ವಿಧಿಸುವ ಸೆಸ್ (Cess), ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿ ಮತ್ತು ಸರ್ಕಾರಿ ಅನುದಾನಗಳ ಮೂಲಕ ಈ ನಿಧಿಗೆ ಹಣ ಸಂಗ್ರಹಿಸಲಾಗುತ್ತದೆ. ಈ ಹಣವನ್ನು ಫಲಾನುಭವಿಗಳ ಉದ್ಯಮಶೀಲತೆ ಮತ್ತು ಜೀವನಮಟ್ಟ ಸುಧಾರಣೆಗೆ ಬಳಸಲಾಗುತ್ತದೆ.
ಅರ್ಹ ಮಹಿಳೆಯರು ನೋಂದಣಿ ಮಾಡಿಸಿಕೊಂಡು 3 ವರ್ಷಗಳ ಅವಧಿಯ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ. ಪ್ರತಿ ಕಾರ್ಮಿಕರಿಗೆ ಇ-ಶ್ರಮ್ ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ. ಈ ಯೋಜನೆಯು ವಿಧವಾ ಮಹಿಳೆಯರ ಮೇಲಿರುವ ಸಾಮಾಜಿಕ ಕಳಂಕವನ್ನು ತೊಡೆದುಹಾಕಿ, ಅವರಿಗೆ ಸಮಾಜದಲ್ಲಿ ಗೌರವಯುತ ಸ್ಥಾನಮಾನ ತಂದುಕೊಡುವ ಗುರಿ ಹೊಂದಿದೆ.
