Home ಅಂಕಣ ಸಂಸತ್ತಿನ ಪೂರ್ವಸೂರಿಗಳು – 18 : ವಿರೋಧಾಭಾಸಗಳ ಸಮ್ಮಿಲನ: ಜಾರ್ಜ್‌ ಫರ್ನಾಂಡಿಸ್

ಸಂಸತ್ತಿನ ಪೂರ್ವಸೂರಿಗಳು – 18 : ವಿರೋಧಾಭಾಸಗಳ ಸಮ್ಮಿಲನ: ಜಾರ್ಜ್‌ ಫರ್ನಾಂಡಿಸ್

0

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಹದಿನೆಂಟನೇ ಲೇಖನ

ವಿವಾದಗಳು ಮತ್ತು ಸಾಧನೆಗಳೆರಡೂ ಅವರ ಬದುಕಿನಲ್ಲಿ ತುಂಬಿಕೊಂಡಿದ್ದವು.

ಜಾರ್ಜ್‌ ಮ್ಯಾಥ್ಯೂ ಫರ್ನಾಂಡಿಸ್‌ ಅವರನ್ನು ಅವರ ಕಾಲದ ಬೆಂಕಿ ಚೆಂಡಿನಂತಹ ಸಮಾಜವಾದಿ ಎಂದೇ ಕರೆಯುತ್ತಾರೆ. ಕೆಲಕಾಲ ಪಾದ್ರಿಯಾಗಿದ್ದ ಅವರು ಒಬ್ಬ ಕಾರ್ಮಿಕ ಸಂಘಟಕ, ರೈತ, ರಾಜಕಾರಣಿ, ಮಾನವ ಹಕ್ಕುಗಳ ಕಾರ್ಯಕರ್ತ, ಸಂಸದ ಮತ್ತು ಪತ್ರರ್ತರೂ ಆಗಿದ್ದರು. 1974 ರಲ್ಲಿ ಅವರು ಮುನ್ನಡೆಸಿದ್ದ ಪ್ರಖ್ಯಾತ ರೈಲು ಮುಷ್ಕರದಲ್ಲಿ 1.5 ಮಿಲಿಯನ್‌ ರೈಲ್ವೇ ಕಾರ್ಮಿಕರು ಪಾಲ್ಗೊಂಡು ಇಡೀ ದೇಶವನ್ನು ಸ್ತಭ್ದಗೊಳಿಸಿದ್ದರು. ಭಾರತೀಯ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿ, ಸಂವಹನಾ ಖಾತೆಯ ಮಂತ್ರಿಯಾಗಿ, ಕೈಗಾರಿಕಾ ಮಂತ್ರಿಯಾಗಿ, ರೈಲ್ವೆ ಮಂತ್ರಿಯಾಗಿ, ಕೊನೆಗೆ ರಕ್ಷಣಾ ಮಂತ್ರಿಯಾಗಿ ಫರ್ನಾಂಡಿಸ್‌, ಪೂರ್ತಿ ಅಚ್ಚರಿಗಳು ಮತ್ತು ವಿರೋಧಾಭಾಸಗಳಿಂದ ತುಂಬಿದ ವ್ಯಕ್ತಿಯಾಗಿದ್ದರು. ಮೊರಾರ್ಜಿ ದೇಸಾಯಿ ಸರಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಫರ್ನಾಂಡಿಸ್‌, 1979 ಜುಲೈನಲ್ಲಿ ತಮ್ಮದೇ ಸರಕಾರದ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಸುಮಾರು ಎರಡೂವರೆ ಗಂಟೆಗಳ ಸಮರ್ಥಿಸಿಕೊಂಡು ಮಾತನಾಡಿದ್ದರು. ಅದೇ ದಿನ ಅವರು ರಾಜೀನಾಮೆ ನೀಡಿ ಹೊರ ಬಂದಿದ್ದರು.

1979 ರಲ್ಲಿ ಇಂಡಿಯಾ ಟುಡೇ ಲೇಖನವೊಂದು ಫರ್ನಾಂಡಿಸ್‌ ಅವರನ್ನು “ಪಾದ್ರಿ ಪಟ್ಟದಿಂದ ಸಮಾಜವಾದಿ ನಾಯಕನ ತನಕ, ಟ್ರೇಡ್‌ ಯೂನಿಯನ್‌ ನಾಯಕ ಪಟ್ಟದಿಂದ ತಲೆಮರೆಸಿಕೊಂಡ ವ್ಯಕ್ತಿಯ ತನಕ (ತುರ್ತು ಪರಿಸ್ಥಿತಿಯಲ್ಲಿ), ಮತ್ತು ಈಗ ಅತೃಪ್ತ ಕ್ಯಾಬಿನೆಟ್‌ ಸಚಿವರ ತನಕ.” ಎಂದು ಬಣ್ಣಿಸಿತ್ತು.

1930 ಜೂನ್‌ 3 ರಂದು ಮಂಗಳೂರಿನ ಕ್ಯಾಥೋಲಿಕ್‌ ಕುಟುಂಬವೊಂದರಲ್ಲಿ ಫರ್ನಾಂಡಿಸ್‌ ಅವರ ಜನನ. ತಮ್ಮ ಆರಂಭಿಕ ವಿದ್ಯಾಭ್ಯಾಸವನ್ನು “ಬೋರ್ಡ್‌ ಸ್ಕೂಲ್‌” ಎಂದು ಕರೆಯುತ್ತಿದ್ದ ಸರಕಾರಿ ಶಾಲೆಯಲ್ಲಿ ಪಡೆದುಕೊಳ್ಳುತ್ತಾರೆ. ಐದನೇ ತರಗತಿಯಿಂದ ಅವರು ಸಂತ ಅಲೋಶಿಯಸ್‌ ಕಾಲೇಜಿನ ಅಧೀನದಲ್ಲಿರುವ ಶಾಲೆಯಲ್ಲಿ ಕಲಿಯುತ್ತಾರೆ. ಅಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸುತ್ತಾರೆ. ತನ್ನ 16 ನೇ ಹರೆಯದಲ್ಲಿ ಅವರು ಬೆಂಗಳೂರಿನ ಸಂತ ಪೀಟರ್ಸ್‌ ಸೆಮಿನರಿ ಸೇರಿಕೊಂಡು ಅಲ್ಲಿ ರೋಮನ್‌ ಕ್ಯಾಥೋಲಿಕ್‌ ಪಾದ್ರಿಯಾಗಲು ತರಬೇತಿ ಪಡೆಯುತ್ತಾರೆ. ಅಲ್ಲಿಯೇ ಅವರು 1946 ರಿಂದ 1948 ರವರೆಗೆ ಸುಮಾರು ಎರಡೂವರೆ ವರ್ಷಗಳ ಕಾಲ ತತ್ವಶಾಸ್ತ್ರವನ್ನೂ ಅಧ್ಯಯನ ಮಾಡುತ್ತಾರೆ.

ತನ್ನ 19 ನೇ ಪ್ರಾಯದಲ್ಲಿ ಕೆಲಸಕ್ಕೆ ಇಳಿಯುವ ಫರ್ನಾಂಡಿಸ್‌, ಮಂಗಳೂರಿನ ರಸ್ತೆ ಸಾರಿಗೆ, ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಉದ್ಯಮಗಳಲ್ಲಿ ಶೋಷಿತ ಕಾರ್ಮಿಕರನ್ನು ಸಂಘಟಿಸಲು ಆರಂಭಿಸುತ್ತಾರೆ. ನಗರದ ಹೋಟೆಲ್‌ ಮತ್ತು ಇತರ ಸಣ್ಣ ಕಾರ್ಮಿಕರನ್ನು ಸಂಘಟಿಸುವಲ್ಲಿ ಯಶಸ್ವಿಯೂ ಆಗುತ್ತಾರೆ. 1949 ರಲ್ಲಿ ಫರ್ನಾಂಡಿಸ್‌ ಮತ್ತು ಇತರ ಕೆಲವು ಯೂನಿಯನ್‌ ನಾಯಕರು ಕೆನರಾ ಪಬ್ಲಿಕ್ ಕನ್ವೇಯನ್ಸ್‌ನ ಕಾರ್ಮಿಕರನ್ನು ಸಂಘಟಿಸಿ ಮಂಗಳೂರಿನ ಮೊದಲ ಕಾರ್ಮಿಕ ಮುಷ್ಕರವನ್ನು ನಡೆಸುತ್ತಾರೆ.

ಆದರೆ ಪೊಲೀಸರು ಆ ಮುಷ್ಕರವನ್ನು ಹತ್ತಿಕ್ಕಿದ್ದರು. ಅಂದು ಲಾಠಿ ಚಾರ್ಜ್‌ ಕೂಡ ನಡೆದಿತ್ತು. ಆ ಮುಷ್ಕರದ ನಂತರ ಫರ್ನಾಂಡಿಸ್‌ ಅವರು ಬಾಂಬೆಯ ಪ್ರಮುಖ ಟ್ರೇಡ್‌ ಯೂನಿಯನ್‌ ನಾಯಕ ಪ್ಲಾಸಿಡ್‌ ಡಿ ಮೆಲ್ಲೋ (1919-1958) ಅವರ ಸಂಪರ್ಕಕ್ಕೆ ಬರುವುದು.

1950 ರ ಹೊತ್ತಿಗೆ ಮುಂಬೈಗೆ ತೆರಳುವ ಫರ್ನಾಂಡಿಸ್‌, ಅಲ್ಲಿ ಬಹಳವೇ ಕಷ್ಟಗಳನ್ನು ಎದುರಿಸುತ್ತಾರೆ.

ಮುಂಬೈ ಮಹಾನಗರದಲ್ಲಿ ಅವರ ಬದುಕು ದುರ್ಬರವಾಗಿತ್ತು. ಪತ್ರಿಕೆಯೊಂದರಲ್ಲಿ ಪ್ರೂಫ್‌ ರೀಡರ್‌ ಆಗಿ ಕೆಲಸ ಸಿಗುವ ತನಕವೂ ಅವರು ಬೀದಿ ಬದಿಯಲ್ಲಿ ಮಲಗುತ್ತಿದ್ದರು. ಅವರ ಮಾತುಗಳಲ್ಲಿ ಆ ಕಾಲವನ್ನು ನೆನಪಿಸುವುದು ಹೀಗೆ, “ನಾನು ಮುಂಬೈಗೆ ಬಂದ ಆರಂಭದಲ್ಲಿ ಚೌಪಾತಿ ತೀರದ ಬೆಂಚುಗಳ ಮೇಲೆ ಮಲಗುತ್ತಿದ್ದೆ. ಮಧ್ಯರಾತ್ರಿ ಪೊಲೀಸರು ಬಂದು ಎಬ್ಬಿಸಿ ಅಲ್ಲಿಂದ ಹೋಗಲು ಹೇಳುತ್ತಿದ್ದರು.”

ಅಲ್ಲಿಯೇ ಅವರು ಸಮಾಜವಾದಿ ನಾಯಕ ರಾಮಮನೋಹರ್‌ ಲೋಹಿಯಾ ಅವರ ಸಂಪರ್ಕಕ್ಕೆ ಬರುವುದು. ಲೋಹಿಯಾ ಫರ್ನಾಂಡಿಸರ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರಿದವರಲ್ಲಿ ಒಬ್ಬರು. ನಂತರ ಅವರು ಪ್ಲಾಸಿಡ್‌ ಡಿ ಮೆಲ್ಲೋ ಅವರ ಜೊತೆಗೆ ಪಕ್ಷ ಮತ್ತು ಟ್ರೇಡ್‌ ಯೂನಿಯನ್‌ ಚಳುವಳಿ ಸೇರಿಕೊಳ್ಳುತ್ತಾರೆ. ಅವರ ಶಿಷ್ಯರಾಗಿಯೂ ಬದಲಾಗುತ್ತಾರೆ. 1958 ರಲ್ಲಿ ಡಿ ಮೆಲ್ಲೋ ಅವರ ಮರಣಾ ನಂತರ ಬಂದರು ಕಾರ್ಮಿಕರ ಒಕ್ಕೂಟ, ಟ್ಯಾಕ್ಸಿಮೆನ್‌ ಯೂನಿಯನ್‌, ಬಟ್ಟೆ ಮಿಲ್‌ ಮತ್ತು ಇತರ ಮಜ್ದೂರ್‌ ಸಂಘಗಳನ್ನು ಸಂಘಟಿಸಿ ನಿರ್ವಹಿಸುವಲ್ಲಿ ಯಶಸ್ವಿಯಾಗುತ್ತಾರೆ.

ಅವರೊಬ್ಬ ಕಾರ್ಮಿಕ ನಾಯಕನಾಗಿಯೇ ಮುಖ್ಯವಾಹಿನಿಗೆ ಧುಮುಕುವುದು. ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ತರದ ಸಣ್ಣ ಉದ್ದಿಮೆಗಳಲ್ಲಿ ಕಾರ್ಮಿಕರ ಹಕ್ಕುಗಳಿಗಾಗಿ ಅವರು ಮುಖ್ಯವಾಗಿ ಹೋರಾಡುತ್ತಿದ್ದರು. 1950 ರ ದಶಕದ ಆರಂಭದಲ್ಲಿ ಮುಂಬೈ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕನಾಗಿ ಹೊರ ಹೊಮ್ಮಿದ್ದ ಫರ್ನಾಂಡಿಸ್‌, ಮುಂಬೈಯ ಎಲ್ಲ ಕಾರ್ಮಿಕ ವಿಭಾಗಗಳನ್ನು ಒಂದು ಒಕ್ಕೂಟವಾಗಿಸಲು ಪ್ರಮುಖ ಪಾತ್ರ ವಹಿಸಿದರು.

ಪ್ರಖರ ಕಾರ್ಮಿಕ ನಾಯಕನಾಗಿದ್ದ ಫರ್ನಾಂಡಿಸ್‌ ಅವರು 50 ಮತ್ತು 60 ರ ದಶಕಗಳಲ್ಲಿ ಮುಂಬೈಯಾದ್ಯಂತ ಹಲವಾರು ಮುಷ್ಕರಗಳನ್ನೂ ಹರತಾಳಗಳನ್ನೂ ನಡೆಸಿದ್ದರು. ಆದ್ದರಿಂದಲೇ ಅವರಿಗೆ “ಬೊಂಬಾಯಿ ಬಂದ್‌ ಕಾ ಹೀರೋ” ಎಂಬ ಹೆಸರೂ ಬಂದಿತ್ತು. 1961 ರಿಂದ 1967 ರವರೆಗೆ ಅವರು ಮುಂಬೈ ಮುನ್ಸಿಪಲ್‌ ಕಾರ್ಪೋರೇಷನ್‌ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿ ಕೂಡ ಶೋಷಿತ ಕಾರ್ಮಿಕರ ಸಮಸ್ಯೆಗಳನ್ನು ನಿರಂತರವಾಗಿ ಎತ್ತುತ್ತಲೇ ಬಂದರು.

ಸಂಸದರಾಗಿ
1967 ರಲ್ಲಿ ಬಾಂಬೆಯಿಂದ (ಇಂದಿನ ಮುಂಬೈ) ಆರಂಭಿಸಿ 2009 ರವರೆಗೆ 30 ವರ್ಷಕ್ಕೂ ಹೆಚ್ಚು ಕಾಲ ಫರ್ನಾಂಡಿಸ್‌ ಲೋಕಸಭಾ ಸದಸ್ಯರಾಗಿದ್ದರು. ಬಹುತೇಕ ಅವರು ಬಿಹಾರದಿಂದಲೇ ಸ್ಪರ್ಧಿಸುತ್ತಿದ್ದರು. 1971 ರಲ್ಲಿ ಸೋಲುವ ಅವರು 1977 ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಜೈಲಿನಿಂದಲೇ ಮುಜಫರ್‌ಪುರದಿಂದ ಗೆದ್ದಿದ್ದರು. ಭಾರತದ ಮೊದಲ ಕಾಂಗ್ರೆಸ್ಸೇತರ ಸರಕಾರದಲ್ಲಿ ಅವರಿಗೆ ಸಚಿವ ಸ್ಥಾನವೂ ದೊರೆತಿತ್ತು.

1979 ರಲ್ಲಿ ಜನತಾ ಪಕ್ಷಕ್ಕೆ ರಾಜೀನಾಮೆ ನೀಡುವ ಅವರು, 1980 ರಲ್ಲಿ ಚರಣ್‌ ಸಿಂಗ್‌ ಅವರ ವಿಭಾಗವಾಗಿದ್ದ ಜನತಾ ಪಾರ್ಟಿ (ಎಸ್)‌ ಪಕ್ಷದಿಂದ ಅದೇ ಮುಜಫರ್‌ಪುರದಿಂದ ಮತ್ತೊಮ್ಮೆ ಗೆಲ್ಲುತ್ತಾರೆ. 1984 ರಲ್ಲಿ ಬೆಂಗಳೂರಿನಿಂದ ಜನತಾ ಪಕ್ಷದ ಟಿಕೆಟ್‌ ಪಡೆದು ಸ್ಪರ್ಧಿಸುವ ಅವರು ಕಾಂಗ್ರೆಸ್‌ ಪಕ್ಷದ ಜಾಫರ್‌ ಶರೀಫ್‌ ವಿರುದ್ಧ ಸೋಲುತ್ತಾರೆ. 1985 ಮತ್ತು 1986 ರಲ್ಲಿ ಬಂಕಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಗಳಲ್ಲಿ ಸೋಲುತ್ತಾರೆ. 1989 ಮತ್ತು 1991 ರ ಚುನಾವಣೆಗಳಲ್ಲಿ ಮತ್ತೆ ಬಿಹಾರಕ್ಕೆ ಮರಳುವ ಅವರು ಜನತಾ ದಳ ಅಭ್ಯರ್ಥಿಯಾಗಿ ಎರಡು ಬಾರಿಯೂ ಮುಜಫರ್‌ಪುರದಿಂದ ಗೆಲ್ಲುತ್ತಾರೆ.

1994 ರಲ್ಲಿ ಲಾಲು ಪ್ರಸಾದ್‌ ಯಾದವ್‌ ಅವರೊಂದಿಗಿನ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಜನತಾ ದಳವನ್ನು ತೊರೆಯುವ ಅವರು ಸಮತಾ ಪಕ್ಷವನ್ನು ಸ್ಥಾಪಿಸುತ್ತಾರೆ. ಅದು ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡ ಪಕ್ಷವಾಗಿತ್ತು.

1996 ಮತ್ತು 1998 ರ ಚುನಾವಣೆಗಳಲ್ಲಿ ಅವರು ನಳಂದಾದಿಂದ ಸಮತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುತ್ತಾರೆ. ನಂತರ ಸಮತಾ ಪಕ್ಷವು ಜನತಾ ದಳ (ಯುನೈಟೆಡ್)‌ ಪಕ್ಷದೊಂದಿಗೆ ವಿಲೀನಗೊಳ್ಳುತ್ತದೆ. 1999 ರಲ್ಲಿ ಮತ್ತೆ ನಳಂದಾದಿಂದ ಗೆಲ್ಲುತ್ತಾರೆ. 2004 ರಲ್ಲಿ ಮುಜಫರ್‌ಪುರದಿಂದ ಗೆಲ್ಲುವ ಅವರಿಗೆ 2009 ರಲ್ಲಿ ಪಕ್ಷ ಟಿಕೆಟ್‌ ನಿರಾಕರಿಸುತ್ತದೆ. ಮುಜಫರ್‌ಪುರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಲಿ ಸೋಲು ಕಾಣುತ್ತಾರೆ. ನಂತರ 2009 ರಲ್ಲಿ ಜೆಡಿ (ಯು) ಅಭ್ಯರ್ಥಿಯಾಗಿ ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ.

ಫರ್ನಾಂಡಿಸ್‌ ಅವರನ್ನು ಶಕ್ತಿಶಾಲಿಯಾಗಿ ಮುನ್ನೆಲೆಗೆ ತಂದ ನಿರ್ಧಾರವೆಂದರೆ ಅದು 1967 ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ತೆಗೆದುಕೊಂಡ ನಿಲುವಾಗಿತ್ತು. ಅಂದು ಸಂಯುಕ್ತ ಸಮಾಜವಾದಿ ಪಕ್ಷದ (ಎಸ್‌ಎಸ್‌ಪಿ) ಅಭ್ಯರ್ಥಿಯಾಗಿ ಬಾಂಬೆ ದಕ್ಷಿಣ ಕ್ಷೇತ್ರದಿಂದ ಅವರು ಸ್ಪರ್ಧಿಸಿದ್ದು ರಾಜಕೀಯವಾಗಿ ಹೆಚ್ಚು ಜನಪ್ರಿಯವಾಗಿದ್ದ ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ಪಕ್ಷದ ಎಸ್.ಕೆ. ಪಾಟೀಲ್‌ ವಿರುದ್ಧ. ಎಸ್.ಕೆ. ಪಾಟೀಲ್‌ ಅದಾಗಲೇ ಒಬ್ಬ ನುರಿತ ರಾಜಕಾರಣಿಯಾಗಿದ್ದರು. ಅವರಿಗೆ ಹಲವು ದಶಕಗಳ ರಾಜಕೀಯ ಅನುಭವವಿತ್ತು. ಇಂದಿರಾ ಗಾಂಧಿ ಸರಕಾರದಲ್ಲಿ ಸಚಿವರಾಗಿದ್ದರು. ಕಾಂಗ್ರೆಸ್‌ ಪಕ್ಷಕ್ಕೆ ನಿಧಿ ಸಂಗ್ರಹಿಸುವಲ್ಲಿ ಅವರ ಪಾಲು ಅಗಾಧವಾಗಿತ್ತು. ಆದರೂ ಕೂಡ ಫರ್ನಾಂಡೀಸ್‌ 48.5% ಮತಗಳನ್ನು ಗಳಿಸಿಕೊಂಡು ಎಸ್.ಕೆ. ಪಾಟೀಲ್‌ ವಿರುದ್ಧ ಗೆಲ್ಲುತ್ತಾರೆ. ಹಾಗಾಗಿಯೇ ಅವರಿಗೆ “ಜಾರ್ಜ್‌ ದಿ ಜಯಂಟ್‌ ಕಿಲ್ಲರ್”‌ ಎಂಬ ಹೆಸರು ಕೂಡ ಅಂಟಿಕೊಂಡಿತ್ತು.

1970 ರ ದಶಕದ ಆರಂಭದಲ್ಲಿ ಬಾಂಗ್ಲಾ ವಿಮೋಚನೆಯೊಂದಿಗೆ ಪ್ರಧಾನಮಂತ್ರಿ ಇಂದಿರಾ ಗಾಂಧಿ ಜನಪ್ರಿಯತೆಯ ಉತ್ತುಂಗ ತಲುಪಿದ್ದರು. ಆದರೆ, ಅದರ ಬೆನ್ನಿಗೇ ಹುಟ್ಟಿಕೊಂಡ ಭ್ರಷ್ಟಾಚಾರ ಪ್ರಕರಣಗಳು, ಗುಜರಾತ್ ಮತ್ತು ಬಿಹಾರಗಳಲ್ಲಿ ನಡೆದ ನವನಿರ್ಮಾಣ ಆಂದೋಲನಗಳು ಸೃಷ್ಟಿಸಿದ್ದ ಜಾಗೃತಿ ಅವರ ಜನಪ್ರಿಯತೆಯನ್ನು ಕುಗ್ಗಿಸಲು ತೊಡಗಿದ್ದವು.

ಅಖಿಲ ಭಾರತ ರೈಲ್ವೇ ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಫರ್ನಾಂಡೀಸ್‌ ಅವರು, ದೇಶ ಕಂಡ ಅತ್ಯಂತ ಗಮನಾರ್ಹ ಆಂದೋಲನಗಳಲ್ಲಿ ಒಂದಾದ 1974 ರ ರೈಲ್ವೇ ಮುಷ್ಕರವನ್ನು ಆಯೋಜಿಸಿದ್ದರು. ರಾಜಸ್ಥಾನದ ಪೋಖ್ರಾನ್‌ ಮರುಭೂಮಿಯಲ್ಲಿ ಅಣುಬಾಂಬ್ ಪರೀಕ್ಷೆಗೆ ಇಂದಿರಾ ಗಾಂಧಿ ಆದೇಶ ನೀಡಿದ್ದ ಸಮಯವೂ ಆಗಿತ್ತದು. ಆ ರೈಲ್ವೇ ಮುಷ್ಕರವನ್ನು ಒಡೆಯುವ ಉದ್ದೇಶದಿಂದಲೇ ಹತಾಶೆಯಿಂದ ಇಂದಿರಾ ಗಾಂಧಿ ಆ ಆದೇಶ ನೀಡಿದ್ದರು ಎಂದು ಈಗಲೂ ಹಲವಾರು ರಾಜಕೀಯ ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. ದೇಶದ ಗಮನವನ್ನು ಬೇರೆಡೆಗೆ ತಿರುಗಿಸುವುದು ಮತ್ತು ತನ್ನ ಜನಪ್ರಿಯತೆಯನ್ನು ವೃದ್ಧಿಸಿಕೊಳ್ಳುವುದು ಇದರ ಉದ್ದೇಶವಾಗಿತ್ತು. (ಫರ್ನಾಂಡಿಸ್‌ ಅವರ ರೈಲ್ವೇ ಮುಷ್ಕರವನ್ನು ಒಡೆಯಲು ಪೋಖ್ರಾನ್‌ I ಪ್ರಯೋಗಿಸಲ್ಪಟ್ಟಿದ್ದರೆ, ಅಟಲ್‌ ಬಿಹಾರಿ ವಾಜಪೇಯಿ ಸರಕಾರದಲ್ಲಿ ಫರ್ನಾಂಡಿಸ್‌ ರಕ್ಷಣಾ ಸಚಿವರಾಗಿದ್ದಾಗಲೇ ಪೋಖ್ರಾನ್‌ II ಪ್ರಯೋಗ ನಡೆಯಿತು ಎಂಬುದು ಐತಿಹಾಸಿಕ ವ್ಯಂಗ್ಯ) ಅಣು ಬಾಂಬಿನ ವಿರುದ್ಧ ಮಾತನಾಡುತ್ತಿದ್ದ ರಾಜಕಾರಣಿಯೊಬ್ಬ ಭಾರತದ ಪರಮಾಣು ಶಕ್ತಿಯ ಪ್ರತಿಪಾದಕರಲ್ಲಿ ಒಬ್ಬರಾಗಿ ಬದಲಾಗಿದ್ದರು.

ಫರ್ನಾಂಡಿಸ್ ಅವರ ಭೂತಕಾಲ ಕೂಡ ಕಹಿ ಮತ್ತು ಮುಸುಕಿನ ಪರದೆಯಂತಿದೆ. ಅವರು 2002 ರ ಗುಜರಾತ್‌ ಗಲಭೆಯನ್ನು ಮತ್ತು 1999 ರಲ್ಲಿ ಒಡಿಶಾದಲ್ಲಿ ನಡೆದ ಆಸ್ಟ್ರೇಲಿಯಾದ ಮಿಷನರಿ ಗ್ರಹಾಂ ಸ್ಟೇನ್ಸ್‌ ಮತ್ತವರ ಮಕ್ಕಳ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದರು. ಒಂದು ಕಾಲದಲ್ಲಿ ಅವರು ಮಹಾತ್ಮಾ ಗಾಂಧಿಯವರ ಅಹಿಂಸಾ ರಾಜಕಾರಣದ ಪ್ರತಿಪಾದಕರಾಗಿದ್ದರು. ಆದರೆ ನಂತರದಲ್ಲಿ ಹಿಂಸಾತ್ಮಕ ರಾಜಕಾರಣದ ಕಡೆಗೆ ಚಲಿಸಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸರಕಾರಿ ಸಂಸ್ಥೆಗಳನ್ನು ಹೊಡೆದುರುಳಿಸಲು “ಬರೋಡಾ ಡೈನಮೈಟ್‌ ಪಿತೂರಿ”ಯನ್ನು ಅವರು ನಡೆಸಿದ್ದರು.

1977 ರಲ್ಲಿ ತುರ್ತು ಪರಿಸ್ಥಿತಿ ಕೊನೆಗೊಂಡಾಗ, ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಮಧು ಲಿಮಾಯೆ ಅವರನ್ನು ಸಚಿವರಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಲಿಮಾಯೆ ಫರ್ನಾಂಡಿಸ್ ಅವರನ್ನು ಸಚಿವ ಸ್ಥಾನಕ್ಕೆ ಶಿಫಾರಸ್ಸು ಮಾಡುತ್ತಾರೆ. ಆ ಮೂಲಕ ಜೈಲಿನಿಂದ ಬಿಡುಗಡೆಗೊಂಡು, ಬರೋಡಾ ಡೈನಮೈಟ್‌ ಪ್ರಕರಣದ ವಿಚಾರಣೆ ಕೈಬಿಡುವಂತೆ ನೋಡಿಕೊಂಡಿದ್ದರು.

ಪ್ಯಾಲೆಸ್ತೀನರ ಹೋರಾಟದ ವಿರುದ್ಧ ಇಸ್ರೇಲ್‌ ದೇಶಕ್ಕೆ ಬೆಂಬಲ ನೀಡುವ ಸಲುವಾಗಿ ಅವರು “ಫ್ರೆಂಡ್‌ ಆಫ್‌ ಇಸ್ರೇಲ್‌” ಸಂಘಟನೆಯನ್ನು ಕೂಡ ಸ್ಥಾಪಿಸಿದ್ದರು.

ಒಟ್ಟಿನಲ್ಲಿ ಅವರ ಬದುಕು ವಿವಾದಗಳು ಮತ್ತು ಸಾಧನೆಗಳಿಂದ ಕೂಡಿತ್ತು. ಆಧುನಿಕ ಭಾರತದ ರಾಜಕಾರಣದಲ್ಲಿ ಅತ್ಯುನ್ನತ ವ್ಯಕ್ತಿತ್ವವಾಗಿ ಮೂಡಿದ್ದ ಫರ್ನಾಂಡಿಸ್‌ ಅವರು, ತಮ್ಮ ರಾಜಕೀಯ ಜೀವನದ ಕೊನೆಗಾಲದಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಕೊಂಡು ಸಾರ್ವಜನಿಕ ಚರ್ಚೆಯ ವಸ್ತುವಾಗಿದ್ದರು. ಬಹಳ ದೊಡ್ಡ ಕೋಲಾಹಲ ಸೃಷ್ಟಿಸಿದ್ದ ಆ ಪ್ರಕರಣದ ಕಾರಣದಿಂದಾಗಿ ಕೊನೆಗೆ ವಾಜಪೇಯಿ ಸರಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಫರ್ನಾಂಡಿಸ್‌ ಆ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದಿತ್ತು.

ತನ್ನ ಆಲ್ಶಿಮರ್ಸ್‌ ಮತ್ತು ಪಾರ್ಕಿನ್ಸನ್‌ ಕಾಯಿಲೆಗಳ ಕಾರಣದಿಂದ ಮತ್ತೆ ರಾಜಕಾರಣಕ್ಕೆ ಮರಳುವ ಅವಕಾಶಗಳು ಅವರಿಗೆ ಒದಗಲೇ ಇಲ್ಲ. ಕೊನೆಯ ದಿನಗಳಲ್ಲಿ, ಒಮ್ಮೆ ತನ್ನಿಂದ ದೂರವಾಗಿದ್ದ ಪತ್ನಿ ಲೀಲಾ ಕಬೀರ್‌ ಅವರೊಂದಿಗೆ ಬದುಕುತ್ತಿದ್ದರು. 2019 ಜನವರಿ 29 ರಂದು ತನ್ನ 88 ನೇ ವಯಸ್ಸಿನಲ್ಲಿ ಅವರು ನಿಧನರಾದರು.

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

You cannot copy content of this page

Exit mobile version