ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಒಂದನೇ ತರಗತಿಯ ಪ್ರವೇಶಾತಿಯ ವಯೋಮಿತಿಯಲ್ಲಿ 60 ದಿನಗಳ ಕಾಲ ಸಡಿಲಿಕೆ ನೀಡಿ ಅಧಿಕೃತ ಆದೇಶ ಹೊರಡಿಸಿದೆ.
ಸರ್ಕಾರದ ಈ ಹೊಸ ಆದೇಶದ ಪ್ರಕಾರ, ಒಂದನೇ ತರಗತಿಗೆ ಪ್ರವೇಶ ಪಡೆಯಬಯಸುವ ಮಕ್ಕಳಿಗೆ ಜೂನ್ 1ರಿಂದ ಅನ್ವಯವಾಗುವಂತೆ ಗರಿಷ್ಠ 60 ದಿನಗಳವರೆಗೆ ವಯೋಮಿತಿ ಸಡಿಲಿಕೆ ಲಭ್ಯವಾಗಲಿದೆ. ಇದರೊಂದಿಗೆ, ಜೂನ್ 1ರ ನಂತರದ 60 ದಿನಗಳ ಅವಧಿಯಲ್ಲಿ (ಅಂದರೆ ಜುಲೈ 30ರವರೆಗೆ) ಜನ್ಮದಿನಾಂಕ ಹೊಂದಿರುವ ಮಕ್ಕಳು ಕೂಡ ಈಗ ಒಂದನೇ ತರಗತಿಗೆ ದಾಖಲಾತಿ ಪಡೆಯಲು ಅರ್ಹರಾಗಲಿದ್ದಾರೆ.
ಪೋಷಕರಿಂದ ಬಂದ ಸಾಲು ಸಾಲು ಮನವಿಗಳನ್ನು ಪುರಸ್ಕರಿಸಿದ ಸರ್ಕಾರವು, ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಸೆಕ್ಷನ್ 20ರ ಅಡಿಯಲ್ಲಿ ಈ ವಿಶೇಷ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಈ ಆದೇಶವನ್ನು ತಕ್ಷಣವೇ ಜಾರಿಗೆ ತರಲು ಅನುಕೂಲವಾಗುವಂತೆ ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್ ಸಿಸ್ಟಮ್ (SATS) ಸಾಫ್ಟ್‌ವೇರ್‌ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ನಿರ್ಧಾರದಿಂದಾಗಿ ವಯಸ್ಸಿನ ಮಿತಿಯಿಂದಾಗಿ ಪ್ರವೇಶಾತಿ ವಂಚಿತರಾಗುತ್ತಿದ್ದ ಸಾವಿರಾರು ಮಕ್ಕಳಿಗೆ ಮತ್ತು ಪೋಷಕರಿಗೆ ದೊಡ್ಡ ಮಟ್ಟದ ಸಮಾಧಾನ ಸಿಕ್ಕಂತಾಗಿದೆ.
