ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿಕೊಂಡ ಕೃಷ್ಣ ಬೈರೇಗೌಡ: ರಸ್ತೆ ಗುಂಡಿ ಸಮಸ್ಯೆ ನಿವಾರಣೆಗೆ ಕಟ್ಟುನಿಟ್ಟಿನ ಎಚ್ಚರಿಕೆ

ಬೆಂಗಳೂರು : ಹಲವು ದಿನಗಳ ಖಾತೆ ಗೊಂದಲ ಮತ್ತು ಅಸಮಾಧಾನದ ನಡುವೆ, ಸಚಿವ ಕೃಷ್ಣ ಬೈರೇಗೌಡ ಅವರು ಅಂತಿಮವಾಗಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿಯನ್ನು ಅಧಿಕೃತವಾಗಿ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ನಡೆದ ಸಂಧಾನದ ಬಳಿಕ ಇಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಕಚೇರಿಯಲ್ಲಿ ಐದು ನಗರ ಪಾಲಿಕೆ ಆಯುಕ್ತರ ಸಭೆ ನಡೆಸುವ ಮೂಲಕ ಕಾರ್ಯಭಾರ ವಹಿಸಿಕೊಂಡರು.

ಮೊದಲ ಸಭೆಯಲ್ಲೇ ಅಧಿಕಾರಿಗಳಿಗೆ ತರಾಟೆ
ಅಧಿಕಾರ ವಹಿಸಿಕೊಂಡ ದಿನವೇ ನಡೆದ ಮೊದಲ ಸಭೆಯಲ್ಲಿ ಸಚಿವರು ಬೆಂಗಳೂರಿನ ರಸ್ತೆ ಗುಂಡಿ ಮತ್ತು ಕಸ ವಿಲೇವಾರಿ ಸಮಸ್ಯೆಗಳ ಬಗ್ಗೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. “ಬೆಂಗಳೂರಿನ ರಸ್ತೆ ಮಾಡೋದು ಏನು ರಾಕೆಟ್ ಸೈನ್ಸಾ? ಸದಾ ಮಳೆ ಬೀಳುವ ನೆರೆ ರಾಜ್ಯಗಳಲ್ಲೂ ರಸ್ತೆ ಗುಂಡಿ ಇಲ್ಲದ ಉತ್ತಮ ರಸ್ತೆಗಳಿವೆ. ಬಜೆಟ್ ಕಡಿಮೆ ಕೊಟ್ಟಿದ್ದೇವಾ?” ಎಂದು ಜಿಬಿಎ ಎಂಜಿನಿಯರ್‌ಗಳನ್ನು ಪ್ರಶ್ನಿಸಿದರು.

ಕಸ ನಿರ್ವಹಣೆಯಲ್ಲಿ ಜನರ ಸಹಕಾರ ಅಗತ್ಯ
ಕಸ ವಿಲೇವಾರಿ ಬಗ್ಗೆ ಮಾತನಾಡಿದ ಅವರು, ವ್ಯವಸ್ಥೆಯಲ್ಲಿ ಲೋಪದೋಷಗಳಿರುವುದನ್ನು ಒಪ್ಪಿಕೊಳ್ಳುತ್ತಲೇ, ಜನರ ಸಹಕಾರ ಕೂಡ ಅಷ್ಟೇ ಮುಖ್ಯ ಎಂದು ಸ್ಪಷ್ಟಪಡಿಸಿದರು. ಕಸದ ಟೆಂಡರ್ ವಿಚಾರದಲ್ಲಿ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ಪಾಲಿಸಲಾಗುವುದು ಎಂದರು.

ಖಾತೆ ವಿವಾದದ ಬಗ್ಗೆ ಸ್ಪಷ್ಟನೆ
ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕೃಷ್ಣ ಬೈರೇಗೌಡ, “ಪೂರ್ಣ ಪ್ರಮಾಣದ ಖಾತೆ ಅಗತ್ಯ ಎಂದು ಸಿಎಂ ಹಾಗೂ ವರಿಷ್ಠರಿಗೆ ತಿಳಿಸಿದ್ದೆ. ಆದರೆ ವರಿಷ್ಠರ ಸೂಚನೆ ಮೇರೆಗೆ ಜವಾಬ್ದಾರಿ ಸ್ವೀಕರಿಸಿದ್ದೇನೆ. ನಮ್ಮ ಅರ್ಹತೆಗೆ ತಕ್ಕ ಖಾತೆ ಮುಂದೆ ಸಿಗಲಿದೆ ಎಂಬ ನಂಬಿಕೆ ಇದೆ” ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ದೇಶ ಮತ್ತು ಜಗತ್ತಿಗೆ ಅಮೂಲ್ಯ ಆಸ್ತಿಯಾಗಿದ್ದು, ಇಲ್ಲಿ ವಾಸಿಸುವ ಒಂದೂವರೆ ಕೋಟಿ ಜನರ ದೈನಂದಿನ ಜೀವನ ಸುಧಾರಣೆಗೆ ಆಡಳಿತ ವಿಕೇಂದ್ರೀಕರಣದ ಮೂಲಕ ಐದು ನಗರ ಪಾಲಿಕೆಗಳನ್ನು ರಚಿಸಲಾಗಿದೆ ಎಂದು ಸಚಿವರು ತಿಳಿಸಿದರು. “ನಮ್ಮ ಕೈಲಾದ ಮಟ್ಟಿಗೆ ಬೆಂಗಳೂರಿಗೆ ಅಳಿಲು ಸೇವೆ ಮಾಡುತ್ತೇವೆ” ಎಂದು ಭರವಸೆ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು