ಇಷ್ಟು ಧೈರ್ಯವನ್ನು ಟ್ರಂಪ್ ಮುಂದೆ ತೋರಿಸಿ: ಮೋದಿ ವಿರುದ್ಧ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ

ಇ-20 (E20) ಪೆಟ್ರೋಲ್‌ನ ಬಲವಂತದ ಬಳಕೆಯನ್ನು ವಿರೋಧಿಸಿ ಷಿಮ್ಲಾ/ದೆಹಲಿಯ ಮಾಜಿ ಸಿಎಂ ಹಾಗೂ ಆಮ್ ಆದ್ಮಿ ಪಾರ್ಟಿ (ಎಎಪಿ) ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ದೆಹಲಿಯಲ್ಲಿ ಪ್ರಧಾನಿ ಮೋದಿ ನಿವಾಸಕ್ಕೆ ಮಾರ್ಚ್ ನಡೆಸಿದ್ದರು.

ಇ-20 ಪೆಟ್ರೋಲ್‌ಗೆ ವಿರುದ್ಧವಾಗಿ ಎರಡು ಲಕ್ಷ ಜನರ ಸಹಿ ಸಂಗ್ರಹಿಸಿರುವ ಮನವಿ ಪತ್ರವನ್ನು ಮೋದಿಯವರಿಗೆ ನೀಡಲು ಕೇಜ್ರಿವಾಲ್ ನಿರ್ಧರಿಸಿದ್ದರು. ಸುಮಾರು 100 ಬೆಂಬಲಿಗರೊಂದಿಗೆ ಮೋದಿ ನಿವಾಸದತ್ತ ಹೊರಟಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಪೊಲೀಸರು ಮಾರ್ಗಮಧ್ಯದಲ್ಲೇ ತಡೆದರು. ತಮ್ಮನ್ನು ಪೊಲೀಸರು ತಡೆದಿದ್ದಕ್ಕೆ ಕೇಜ್ರಿವಾಲ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಮ್ಮನ್ನು ತಡೆಯಲು ಸರ್ಕಾರ ತೋರಿಸುತ್ತಿರುವ ಧೈರ್ಯವನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಮುಂದೆ ತೋರಿಸಲಿ ಎಂದು ಮೋದಿಯವರಿಗೆ ಕೇಜ್ರಿವಾಲ್ ಸವಾಲು ಹಾಕಿದ್ದಾರೆ. ಇ-20 ಪೆಟ್ರೋಲ್ ಬಳಕೆಯನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಇ-20 ಪೆಟ್ರೋಲ್ ವಿರುದ್ಧ ನಡೆಸಿದ ಆನ್‌ಲೈನ್ ಅಭಿಯಾನದಲ್ಲಿ ಎರಡು ಲಕ್ಷ ಜನರು ಸಹಿ ಮಾಡಿ ಬೆಂಬಲ ಸೂಚಿಸಿದ್ದು, ಆ ದಾಖಲೆಗಳನ್ನು ಮೋದಿಯವರಿಗೆ ತಲುಪಿಸಲು ಅವರು ತೆರಳುತ್ತಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಜ್ರಿವಾಲ್, “ಇ-20 ಪೆಟ್ರೋಲ್ ವಿರುದ್ಧ 2 ಲಕ್ಷ ಜನರು ನೀಡಿದ ಮನವಿ ಪತ್ರವನ್ನು ಪ್ರಧಾನಿ ಮೋದಿಯವರಿಗೆ ಸಲ್ಲಿಸಲು ನಾವು ಪ್ರಯತ್ನಿಸಿದೆವು. ಆದರೆ ಇಂದು ನಾವು ಮೋದಿಯವರನ್ನು ಭೇಟಿಯಾಗಲು ತೆರಳುವಾಗ ಪೊಲೀಸರು ನಮ್ಮನ್ನು ತಡೆದರು. ಆದರೂ ನಾವು ಎಲ್ಲ ಮನವಿ ಪತ್ರಗಳನ್ನು ಮೋದಿಯವರಿಗೆ ತಲುಪಿಸಿದ್ದೇವೆ. ಮೋದಿಜೀ, ನಿಮ್ಮನ್ನು ಭೇಟಿಯಾಗಲು ಬಿಡದೆ ನಮ್ಮನ್ನು ತಡೆದಿದ್ದೀರಿ. ನಿಮ್ಮ ಅಧಿಕಾರವನ್ನು ನಮ್ಮ ಮೇಲೆ ಪ್ರದರ್ಶಿಸಿ ನೀವು ಏನು ಸಾಧಿಸುತ್ತೀರಿ? ಈ ಧೈರ್ಯವೇನಿದ್ದರೂ ಟ್ರಂಪ್ ಮುಂದೆ ತೋರಿಸಿ. ಭಾರತದ ಮೇಲೆ ಬಲವಂತವಾಗಿ ಇ-20 ಪೆಟ್ರೋಲ್ ಹೇರುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ದೇಶದಲ್ಲಿ ಮತ್ತೊಂದು ಬೃಹತ್ ಚಳವಳಿ ಆರಂಭವಾಗಲಿದೆ,” ಎಂದು ಎಚ್ಚರಿಸಿದ್ದಾರೆ.

ಅದಕ್ಕೂ ಮುನ್ನ ತಮ್ಮನ್ನು ತಡೆದ ಪೊಲೀಸರೊಂದಿಗೆ ಕೇಜ್ರಿವಾಲ್ ವಾಗ್ವಾದ ನಡೆಸಿದರು. “ನಾವೇನೂ ಭಯೋತ್ಪಾದಕರಲ್ಲ. ಇ-20 ಪೆಟ್ರೋಲ್ ಸಮಸ್ಯೆಯ ಕುರಿತು ಪ್ರಧಾನಿಯವರನ್ನು ಭೇಟಿಯಾಗಲು ಮಾತ್ರ ತೆರಳುತ್ತಿದ್ದೇವೆ, ದಯವಿಟ್ಟು ಭೇಟಿಯಾಗಲು ಅವಕಾಶ ಕೊಡಿ” ಎಂದು ಮನವಿ ಮಾಡಿದರು. ಆದರೆ ಪೊಲೀಸರು ಇದಕ್ಕೆ ಒಪ್ಪದಿದ್ದಾಗ ಅವರು ಹಿಂತಿರುಗಿದರು.

Related Articles

ಇತ್ತೀಚಿನ ಸುದ್ದಿಗಳು