ಸೈನಿಕ ಶಾಲೆಗಳ ಖಾಸಗೀಕರಣ: ರಾಹುಲ್ ಗಾಂಧಿ ಆಕ್ರೋಶ, ಸಾಕ್ಷ್ಯಾಧಾರ ನೀಡಿ ಎಂದು ಸವಾಲು ಹಾಕಿದ ಸರ್ಕಾರ

ದೇಶದಲ್ಲಿರುವ ಸೈನಿಕ ಶಾಲೆಗಳನ್ನು ಖಾಸಗೀಕರಣಗೊಳಿಸುತ್ತಿರುವುದಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೈನಿಕ ಶಾಲೆಗಳನ್ನು ಆರ್‌ಎಸ್‌ಎಸ್‌ಗೆ ಒಪ್ಪಿಸಲಾಗುತ್ತಿದೆ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ದೆಹಲಿಯಲ್ಲಿ ಮಂಗಳವಾರ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಸಮಿತಿಯ ಸದಸ್ಯರಾದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕಾರ್ತಿ ಚಿದಂಬರಂ, ಪವನ್ ಖೇರಾ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹಾಗೂ ಬಿಜೆಪಿ ಸಂಸದರಾದ ರಾಧಾ ಮೋಹನ್ ಸಿಂಗ್, ಸುಧಾಂಶು ತ್ರಿವೇದಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸೈನಿಕ ಶಾಲೆಗಳ ವಿಷಯದಲ್ಲಿ ಸರ್ಕಾರ ತಳೆದಿರುವ ನಿಲುವನ್ನು ರಾಹುಲ್ ಗಾಂಧಿ ಕಟುವಾಗಿ ವಿಮರ್ಶಿಸಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ಸೈನಿಕ ಶಾಲೆಗಳನ್ನು ಖಾಸಗೀಕರಣಗೊಳಿಸುತ್ತಿರುವುದಕ್ಕೆ ಅವರು ಆಕ್ರೋಶ ಹೊರಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ಸೈನಿಕ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸಲಾಗುತ್ತಿದೆ ಮತ್ತು ಅದೇ ಸಮಯದಲ್ಲಿ ಆರ್‌ಎಸ್‌ಎಸ್‌ನೊಂದಿಗೆ ಸಂಪರ್ಕ ಹೊಂದಿರುವವರ ಕೈಗೆ ಈ ಶಿಕ್ಷಣ ಸಂಸ್ಥೆಗಳನ್ನು ನೀಡಲಾಗುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ.

ಆದರೆ, ಈ ಆರೋಪಗಳನ್ನು ಬಿಜೆಪಿ ಸಂಸದರು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಸೂಕ್ತ ಆಧಾರಗಳಿದ್ದರೆ ಸಲ್ಲಿಸುವಂತೆ ರಾಹುಲ್ ಗಾಂಧಿಯವರಿಗೆ ಸವಾಲು ಹಾಕಿದ್ದಾರೆ. ಸರಿಯಾದ ಸಾಕ್ಷ್ಯಾಧಾರಗಳು ಮತ್ತು ದಾಖಲೆಗಳಿಲ್ಲದೆ ಇಂತಹ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.

ರಾಹುಲ್ ಮಾಡಿದ ಆರೋಪಗಳಿಗೆ ಸಮಿತಿಯ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ರಾಧಾ ಮೋಹನ್ ಸಿಂಗ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೈನಿಕ ಶಾಲೆಗಳ ಖಾಸಗೀಕರಣ ನಡೆಯುತ್ತಿದೆ ಎಂಬ ವಿಷಯದ ಬಗ್ಗೆ ಸರ್ಕಾರದಿಂದ ಸಂಪೂರ್ಣ ವರದಿ ನೀಡುವಂತೆ ಅವರು ಕೋರಿದ್ದಾರೆ. ಈ ವಿಚಾರದಲ್ಲಿ ಸರ್ಕಾರದ ಪಾತ್ರ ಎಷ್ಟರಮಟ್ಟಿಗಿದೆ ಎಂಬುದರ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು