ಪೂರ್ವ ಆಫ್ರಿಕಾದ ಕೀನ್ಯಾ ದೇಶದಲ್ಲಿ ಭೀಕರ ಬರಗಾಲಕ್ಕೆ ತುತ್ತಾಗಿ ಸಾವಿರಾರು ಕಾಡುಪ್ರಾಣಿ ಪಕ್ಷಿಗಳು ದಾರುಣವಾಗಿ ಸಾವನ್ನಪುತ್ತಿರುವ ಆಘಾತಕಾರಿ ವಿದ್ಯಮಾನ ಜರುಗಿದೆ. ಕೀನ್ಯಾದ ಒಣ ಮತ್ತು ಅರೆಒಣ ಪ್ರದೇಶಗಳಲ್ಲಿ ತೀವ್ರ ಬರಗಾಲದ ಪರಿಣಾಮ ವ್ಯಾಪಕವಾಗಿದ್ದು 2022 ರ ಫೆಬ್ರವರಿಯಿಂದ ಅಕ್ಟೋಬರ್ ವರೆಗೆ ಕನಿಷ್ಠ 1,235 ಕಾಡು ಪ್ರಾಣಿಗಳು ಸಾವನ್ನಪ್ಪಿರುವುದು ಅತ್ಯಂತ ದುರಂತದ ಸಂಗತಿಯಾಗಿದೆ.
ಕೀನ್ಯಾ ಸೇರಿದಂತೆ ನೆರೆಯ ಇಥಿಯೋಪಿಯಾ, ಸೋಮಾಲಿಯಾಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಮಳೆ ಕೈಕೊಟ್ಟಿದೆ. ಪರಿಣಾಮವಾಗಿ ದೀರ್ಘಕಾಲದ ಒಣಹವೆಯು 14 ವಿವಿಧ ಪ್ರಬೇಧದ ವನ್ಯಜೀವಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ತೀವ್ರ ಬರಗಾಲದಿಂದ ಪ್ರಾಣಿಗಳಿಗೆ ತಿನ್ನಲು ಆಹಾರ ಸಂಪನ್ಮೂಲಗಳ ಕೊರತೆ ಉಂಟಾಗಿರುವುದಲ್ಲದೇ ಕುಡಿಯಲು ನೀರೂ ಸಹ ಸಿಗದೆ ಅನೇಕ ವನ್ಯ ಜೀವಿಗಳು ಸಾವನ್ನಪ್ಪಿರುವ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ. ಈ ಭಾಗದಲ್ಲಿನ ಜನಜೀವನದ ಮೇಲೂ ತೀವ್ರ ಪರಿಣಾಮಗಳು ಉಂಟಾಗಿವೆ.
ನ.04ರಂದು ಬಿಡುಗಡೆಯಾದ ಅಧಿಕೃತ ವರದಿಯ ಪ್ರಕಾರ, ಬರಗಾಲದಿಂದಾಗಿ 512 ಗಡ್ಡದ ಹುಲ್ಲೆಗಳು (ವೈಲ್ಡ್‌ಬೀಸ್ಟ್ ಅಥವಾ ಸ್ವಾಹಿಲಿ ಭಾಷೆಯಲ್ಲಿ ‘ನು’ (gnu) ಎನ್ನಲಾಗುತ್ತದೆ), 381 ಕಾಮನ್ ಜೀಬ್ರಾಗಳು, 205 ಆನೆಗಳು, 49 ಗ್ರೆವ್ವಿ ಜೀಬ್ರಾಗಳು, 51 ಕಾಡೆಮ್ಮೆಗಳು, 12 ಜಿರಾಫೆಗಳು, 8 ನೀರಾನೆಗಳು, 6 ಎಲ್ಯಾಂಡ್ಗಳು (ಕೃಷ್ಣಮೃಗ ಪ್ರಭೇದಕ್ಕೆ ಸೇರಿದವು), 6 ಕೊಂಗೋನಿ, 2 ಗ್ರಾಂಟ್ ಗೆಜೆಲ್ಲೆ (ಒಂದು ಬಗೆಯ ಹುಲ್ಲೆ), ತಲಾ ಒಂದೊಂದು ಉಷ್ಟ್ರಪಕ್ಷಿ, ಖಡ್ಗಮೃಗ ಮತ್ತು ವಾಟರ್ ಬಕ್ ಸಾವನ್ನಪ್ಪಿರುವ ಮಾಹಿತಿ ನೀಡಿದ್ದಾರೆ.
ಮುಂಬರುವ ಕೆಲವೇ ದಿನಗಳಲ್ಲಿ ವನ್ಯಪ್ರಾಣಿಗಳ ಸಾವಿನ ಸಂಖ್ಯೆ ಇನ್ನೂ ಹೆಚ್ಚಲಿದ್ದು ಆತಂಕದ ವಾತಾವರಣ ಉಂಟಾಗಿದೆ.
ʼಆನೆಗಳು ದಿನಕ್ಕೆ 240 ಲೀಟರ್ (63.40 ಗ್ಯಾಲನ್) ನೀರನ್ನು ಕುಡಿಯುತ್ತವೆ. ಆದರೆ ಇದೀಗ ಬರದ ಕಾರಣದಿಂದ ಆನೆಗಳಿಗೆ ಕುಡಿಯಲು ನೀರು ಸಿಗದಾಗಿದೆʼ ಎನ್ನುತ್ತಾರೆ ಎಲಿಫೆಂಟ್ ನೈಬರ್ಸ್ ಸೆಂಟರಿನ ಕಾರ್ಯನಿರ್ವಾಹಕ ಹಾಗೂ ನಿರ್ದೇಶಕರಾದ ಜಿಮ್ ಜಸ್ಟಸ್ ನ್ಯಾಮು. ಉತ್ತರ ಕೀನ್ಯಾದ ಅಂಬೋಸೆಲಿ, ಲೈಕಿಪಿಯಾ ಮತ್ತು ಸಂಬೂರು ಕೌಂಟಿಗಳಲ್ಲಿನ ಆನೆಗಳು ಬರದಿಂದ ಹೆಚ್ಚು ಬಾಧಿತವಾಗಿದ್ದು, ಸುಮಾರು 70ಕ್ಕೂ ಹೆಚ್ಚು ಆನೆಗಳು ದಾರುಣ ಸಾವು ಕಂಡಿವೆ.
ಕೀನ್ಯಾದಲ್ಲಿ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಿದ್ದ ರಾಷ್ಟ್ರೀಯ ಉದ್ಯಾನಗಳಲ್ಲಿ ಬಹಳಷ್ಟು ಪ್ರಾಣಿಗಳು ಸಾವನ್ನಪ್ಪಿವೆ. ಅಂಬೊಸೇಲಿ, ಸಾವೊ, ಲೈಕಿಪಿಯಾ ಸಂಬೂರುಗಳ ರಾಷ್ಟ್ರೀಯ ಉದ್ಯಾನಗಳಲ್ಲಿ ಹೆಚ್ಚು ಪ್ರಾಣಿಗಳು ಸತ್ತಿರುವ ವರದಿಯಾಗಿದೆ. ಒಣಹವೆಯು ಖಡ್ಗಮೃಗಗಳ ಸಂತತಿಯ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲಎಂದು ವರದಿ ತಿಳಿಸಿದೆ.
ʼಗ್ರೆವಿಯ ಜೀಬ್ರಾ ಮತ್ತು ನೀರಾನೆಯಂತಹ ಬರ ಪೀಡಿತ ಪ್ರದೇಶಗಳಲ್ಲಿರುವ ಪ್ರಭೇದಗಳಿಗೆ ಸರ್ಕಾರವು ಹುಲ್ಲನ್ನು ಒದಗಿಸುತ್ತಿದೆ. ಸಂರಕ್ಷಿತ ಪ್ರದೇಶಗಳಲ್ಲಿ ವನ್ಯಜೀವಿಗಳಿಗೆ ನೀರಿನ ಟ್ರಕ್ಕಿಂಗ್, ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷಗಳನ್ನು ಕಡಿಮೆ ಮಾಡಲು, ಸಂರಕ್ಷಿತ ಪ್ರದೇಶಗಳ ಹೊರಗಿನ ವನ್ಯಜೀವಿಗಳಿಗೆ ಹೆಚ್ಚಿನ ಕಣ್ಗಾವಲು ಮತ್ತು ಬರದ ಪರಿಣಾಮಗಳನ್ನು ಕಡಿಮೆ ಮಾಡಲು ಸಂಪನ್ಮೂಲಗಳನ್ನು ಕ್ರೋಢೀಕರಿಸುತ್ತಿದೆʼ ಎಂದು ಪ್ರವಾಸೋದ್ಯಮ, ವನ್ಯಜೀವಿ ಮತ್ತು ಪರಂಪರೆಯ ಕ್ಯಾಬಿನೆಟ್ ಕಾರ್ಯದರ್ಶಿ ಪೆನಿನಾಹ್ ಮಲೋಂಜಾರವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕೀನ್ಯಾದ ಹುಲ್ಲುಗಾವಲುಗಳಲ್ಲಿ ಪಶುಸಂಗೋಪನೆಯನ್ನೇ ಅವಲಂಬಿಸಿ ಬದುಕು ನಡೆಸುವ ಮಸಾಯಿ ಬುಡಕಟ್ಟಿನ ಜನರೂ ಸಹ ಈ ಬರಗಾಲದಿಂತ ತತ್ತರಿಸಿದ್ದಾರೆ. ಪಶುಸಂಗೋಪನೆಯನ್ನೇ ಈ ಸಮುದಾಯ ಸಂಪೂರ್ಣವಾಗಿ ಅವಲಂಬಿಸಿರುವುದರಿಂದ ಈಗ ಬರದಿಂದ ಎಲ್ಲಾ ಸಾಕುಪ್ರಾಣಿಗಳೂ ಸಾಯುವ ಸ್ಥಿತಿಗೆ ಬಂದು ತಲುಪಿವೆ. ತಮ್ಮ ಸಾಕುಪ್ರಾಣಿಗಳನ್ನು ಉಳಿಸಿಕೊಳ್ಳಲಾಗದ ಹತಾಶ ಸ್ಥಿತಿಗೆ ಮಸಾಯಿ ಬುಡಕಟ್ಟು ಜನರು ಬಂದು ತಲುಪಿದ್ದಾರೆ ಎಂದು ವರದಿಗಳು ಹೇಳಿವೆ.