ಉತ್ತರ ಪ್ರದೇಶ: ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಲಕ್ನೋ ಜೈಲಿನಿಂದ ಬಿಡುಗಡೆ ಮಾಡಲು ಲಕ್ನೋದ ಸೆಷನ್ಸ್ ನ್ಯಾಯಾಲಯ ಬುಧವಾರ ಬಿಡುಗಡೆ ಆದೇಶಕ್ಕೆ ಸಹಿ ಹಾಕಿದೆ.
2020ರ ಅಕ್ಟೋಬರ್‌ನಲ್ಲಿ ಜಾರಿ ನಿರ್ದೇಶನಾಲಯ (ED) ದಾಖಲಿಸಿದ ಮನಿ ಲಾಂಡರಿಂಗ್ ತಡೆ ಕಾಯ್ದೆ ಅಡಿಯಲ್ಲಿ ಬಂಧಿತರಾಗಿರುವ ಕಪ್ಪನ್ ಅವರು ಎರಡು ವರ್ಷಗಳಿಗೂ ಹೆಚ್ಚು ಕಾಲ ಕಾರಾಗೃಹದಲ್ಲಿದ್ದ ನಂತರ ಗುರುವಾರ ಬೆಳಿಗ್ಗೆ ಲಕ್ನೋ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಂಜಯ್ ಶಂಕರ್ ಪಾಂಡೆ ಅವರು ಲಕ್ನೋ ಜೈಲು ಅಧೀಕ್ಷಕರಿಗೆ ಯಾವುದೇ ಪ್ರಕರಣದಲ್ಲಿ ಕಪ್ಪನ್ ಇಲ್ಲ. ಹಾಗಾಗಿ ಅವರನ್ನು ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ.
ಡಿಸೆಂಬರ್ 23, 2022 ರಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು PMLA ಪ್ರಕರಣದಲ್ಲಿ ಪತ್ರಕರ್ತ ಕಪ್ಪನ್‌ಗೆ ಜಾಮೀನು ನೀಡಿತ್ತು.
ದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಇದೀಗ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಗ್ರಹಿಸಿದೆ ಎನ್ನಲಾದ ₹ 1.36 ಕೋಟಿ ಮೊತ್ತದ ಅಕ್ರಮ ಹಣದ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಪ್ಪನ್‌ಗೆ ಯಾವುದೇ ನಿರ್ದಿಷ್ಟ ಪಾತ್ರವನ್ನು ಇಡಿ ತನಿಖೆಯಲ್ಲಿ ತೋರಿಸಿಲ್ಲ ಎಂದು ಗಮನಿಸಿದ ನ್ಯಾಯಮೂರ್ತಿ ಡಿಕೆ ಸಿಂಗ್ ಅವರ ಏಕ ಪೀಠವು ಪತ್ರಕರ್ತನಿಗೆ ಜಾಮೀನು ನೀಡಿದೆ.
ಪತ್ರಕರ್ತ ಕಪ್ಪನ್ ಅಕ್ಟೋಬರ್ 5, 2020 ರಂದು ಉತ್ತರ ಪ್ರದೇಶದ ಹಾಥರಸ್ನಲ್ಲಿ ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯನ್ನು ವರದಿ ಮಾಡಲು ಹೋಗುತ್ತಿದ್ದಾಗ, ಅವರನ್ನು ಮಥುರಾ ಟೋಲ್ ಪ್ಲಾಜಾ ಹತ್ತಿರ ಬಂಧಿಸಲಾಗಿತ್ತು.