ಹೊಸದಿಲ್ಲಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಕೇತಗಾನಹಳ್ಳಿಯ ಸರ್ಕಾರಿ ಜಮೀನು ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯನ್ನು ಎರಡು ವಾರಗಳ ಕಾಲ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಎಸ್‌ಐಟಿಗೆ (SIT) ಸೂಚನೆ ನೀಡಿದೆ.
ಕುಮಾರಸ್ವಾಮಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ನ್ಯಾ. ಪಂಕಜ್ ಮಿತ್ತಲ್ ಮತ್ತು ನ್ಯಾ. ಪ್ರಸನ್ನ ವರಾಳೆ ಅವರಿದ್ದ ನ್ಯಾಯಪೀಠವು ಸೋಮವಾರ ವಿಚಾರಣೆ ನಡೆಸಿತು. ಸೆಪ್ಟೆಂಬರ್ 8 ರಂದು ಹೈಕೋರ್ಟ್ ವಿಭಾಗೀಯ ಪೀಠವು ತನಿಖೆ ಮುಂದುವರಿಸಲು ತಹಶೀಲ್ದಾರ್‌ಗೆ ಅನುಮತಿ ನೀಡಿ ಹೊರಡಿಸಿದ್ದ ಆದೇಶಕ್ಕೆ ತಡೆ ಕೋರಿ ಕುಮಾರಸ್ವಾಮಿ ಈ ಅರ್ಜಿ ಸಲ್ಲಿಸಿದ್ದರು.
ತನಿಖೆಗೆ ಹೈಕೋರ್ಟ್ ಸೂಚನೆ
ಹೆಚ್.ಡಿ. ಕುಮಾರಸ್ವಾಮಿ ಮತ್ತು ಅವರ ಸಂಬಂಧಿಕರು ಕೇತಗಾನಹಳ್ಳಿಯ ಸರ್ವೆ ನಂಬರ್ 8, 9, 10, 16, 17 ಮತ್ತು 79 ರಲ್ಲಿ 14 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿಯಂತೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ 2020 ರಲ್ಲಿ ಆದೇಶಿಸಿತ್ತು.
ಆದರೆ ಈ ಆದೇಶವನ್ನು ಜಾರಿಗೊಳಿಸಿಲ್ಲ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯವು ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಸೂಚನೆ ನೀಡಿತ್ತು.
14 ಎಕರೆ ಜಮೀನಿನ ಮಾಲೀಕತ್ವದ ಕುರಿತು ವಿಚಾರಣೆ ನಡೆಸಲು ಐಎಎಸ್ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿತ್ತು. ಎಸ್‌ಐಟಿ ರಚನೆ ಮತ್ತು ತಹಶೀಲ್ದಾರ್ ಹೊರಡಿಸಿದ ನೋಟಿಸ್‌ಗೆ ಹೈಕೋರ್ಟ್‌ನ ಏಕಸದಸ್ಯ ಪೀಠವು ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠವು ಸೆಪ್ಟೆಂಬರ್ 8 ರಂದು ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿ, ತನಿಖೆ ಮುಂದುವರಿಸಲು ಸೂಚಿಸಿತ್ತು. ಈ ಆದೇಶಕ್ಕೆ ಪ್ರಸ್ತುತ ಸುಪ್ರೀಂ ಕೋರ್ಟ್ ಎರಡು ವಾರಗಳ ಕಾಲ ತಡೆ ನೀಡಿದೆ.