Home ಬೆಂಗಳೂರು ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಜನ್ಮದಿನಾಚರಣೆಗೆ ಹೈಕೋರ್ಟ್‌ನಿಂದ ಅನುಮತಿ ನಿರಾಕರಣೆ

ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಜನ್ಮದಿನಾಚರಣೆಗೆ ಹೈಕೋರ್ಟ್‌ನಿಂದ ಅನುಮತಿ ನಿರಾಕರಣೆ

0

ಬೆಂಗಳೂರು: ದಿವಂಗತ ನಟ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮದಿನಾಚರಣೆಯನ್ನು ಸೆಪ್ಟೆಂಬರ್ 18ರಂದು ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ನಡೆಸಲು ಅನುಮತಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಬೇಕೆಂದು ಕೋರಿದ್ದ ಮನವಿಯನ್ನು ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ವಿ.ಎಸ್.ಎಸ್. ಅಭಿಮಾನ್ ಡಾ. ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ (ರಿ) ಮತ್ತು ವಿ.ಎಸ್.ಎಸ್. ವಿಷ್ಣು ಸೇನಾ ಸಂಘಟನೆ (ರಿ) ಅಧ್ಯಕ್ಷ ತಿಮ್ಮರಾಜು ಅವರು ಈ ಸಂಬಂಧ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಾದ ಆಲಿಸಿ, ಅಭಿಮಾನ್ ಸ್ಟುಡಿಯೋ ಮಾಲೀಕತ್ವದ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಈಗಾಗಲೇ 2025ರ ಜನವರಿ 13ರಂದು ವಿಶೇಷ ಜಿಲ್ಲಾಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ.

ಆದ್ದರಿಂದ, ಈಗ ಮತ್ತೆ ಬೇರೆ ರೀತಿಯ ಆದೇಶ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಬೇಕೆಂಬ ಅರ್ಜಿದಾರರ ಮಧ್ಯಂತರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ಅರ್ಜಿದಾರರ ಪರ ವಕೀಲ ಕೆ.ಎಸ್. ಅರುಣ್ ವಾದ ಮಂಡಿಸಿ, 2016ರಿಂದ ಪ್ರತಿ ವರ್ಷವೂ ಜನ್ಮದಿನಾಚರಣೆ ಮತ್ತು ಪುಣ್ಯತಿಥಿ ಆಚರಿಸಿಕೊಂಡು ಬರಲಾಗುತ್ತಿದೆ. ಜಿಲ್ಲಾಧಿಕಾರಿಗಳು ಈ ಹಿಂದಿನ ಎಲ್ಲಾ ವರ್ಷಗಳಲ್ಲಿ ಷರತ್ತುಗಳನ್ನು ವಿಧಿಸಿ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರು. ಈ ಬಾರಿ ಮಾತ್ರ ಅನುಮತಿ ನೀಡಿಲ್ಲ. ಇದು ಕೋಟ್ಯಂತರ ಅಭಿಮಾನಿಗಳ ಭಾವನಾತ್ಮಕ ವಿಷಯವಾಗಿದೆ, ಆದ್ದರಿಂದ ಅನುಮತಿ ನೀಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದರು.

ಆದರೆ ಮಧ್ಯಂತರ ಮನವಿ ತಿರಸ್ಕರಿಸಿದ ನ್ಯಾಯಾಲಯವು, ಅರ್ಜಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ನಗರ ಜಿಲ್ಲಾಧಿಕಾರಿ ಸೇರಿದಂತೆ ಆರು ಮಂದಿಗೆ ನೋಟಿಸ್ ಜಾರಿಗೊಳಿಸಿದ್ದು, ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಿದೆ.

You cannot copy content of this page

Exit mobile version