Home ದೇಶ ಗೊಂದಲವೇನೂ ಇಲ್ಲ, ಶೀಘ್ರದಲ್ಲೇ ಸಿಎಂ ಅಭ್ಯರ್ಥಿ ಯಾರೆಂದು ತಿಳಿಯಲಿದೆ: ತೇಜಸ್ವಿ ಯಾದವ್

ಗೊಂದಲವೇನೂ ಇಲ್ಲ, ಶೀಘ್ರದಲ್ಲೇ ಸಿಎಂ ಅಭ್ಯರ್ಥಿ ಯಾರೆಂದು ತಿಳಿಯಲಿದೆ: ತೇಜಸ್ವಿ ಯಾದವ್

0

ಬಿಹಾರದಲ್ಲಿ ಚುನಾವಣಾ ಜ್ವರ (Bihar Assembly Elections) ಹೆಚ್ಚಾಗಿದೆ. ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ಮೈತ್ರಿಕೂಟಗಳಲ್ಲಿ ಸೀಟು ಹಂಚಿಕೆ ಕುರಿತು ಚರ್ಚೆಗಳು ನಡೆಯುತ್ತಿವೆ.

ವಿರೋಧ ಪಕ್ಷಗಳ ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಕುರಿತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಪ್ರತಿಕ್ರಿಯಿಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಗೆ ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಈಗಾಗಲೇ ಪ್ರಚಾರದಲ್ಲಿ ಮುಳುಗಿವೆ. ತೇಜಸ್ವಿ ಯಾದವ್ (‘ಬಿಹಾರ ಅಧಕಾರ್ ಯಾತ್ರೆ’ಯನ್ನು ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಸಿಎಂ ಅಭ್ಯರ್ಥಿ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ವಿರೋಧ ಪಕ್ಷದ ಮೈತ್ರಿಕೂಟದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

“ಜನರೇ ಮಾಲೀಕರು. ಅವರೇ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಅವರು ಈಗ ಬದಲಾವಣೆಯನ್ನು ಬಯಸುತ್ತಿದ್ದಾರೆ. ಯಾರು ಮುಖ್ಯಮಂತ್ರಿಯಾಗಬೇಕು ಎಂದು ಅವರನ್ನೇ ಕೇಳಿ, ಆಗ ಉತ್ತರ ನಿಮಗೇ ತಿಳಿಯುತ್ತದೆ” ಎಂದು ಮಾಧ್ಯಮದೊಂದಿಗೆ ಮಾತನಾಡಿದರು.

ಇತ್ತೀಚೆಗೆ ತೇಜಸ್ವಿ ಅವರು ಮಹತ್ವದ ಹೇಳಿಕೆ ನೀಡಿದ್ದರು. ಸೀಟು ಹಂಚಿಕೆ ಬಗ್ಗೆ ಬಿಕ್ಕಟ್ಟು ಉಂಟಾಗಿದ್ದಾಗ, ಬಿಹಾರದ ಒಟ್ಟು 243 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ತಮ್ಮ ಪಕ್ಷ ಸಿದ್ಧವಾಗಿದೆ ಎಂದು ಅವರು ಹೇಳಿದ್ದರು. ಬಿಹಾರದಲ್ಲಿ ತಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಮತ್ತು ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಬೇಕು ಎಂದು ಕರೆ ನೀಡಿದರು. ಈ ಹೇಳಿಕೆಗಳಿಂದ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ಸುದ್ದಿ ಹರಡಿತ್ತು.

ಇದೇ ವೇಳೆ, ಬಿಹಾರದ 2020 ರ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆಯನ್ನು ಗಮನಿಸಿದರೆ, ಆರ್‌ಜೆಡಿ 144 ಸ್ಥಾನಗಳಲ್ಲಿ ಸ್ಪರ್ಧಿಸಿ 75 ಕಡೆ ಗೆಲುವು ಸಾಧಿಸಿತ್ತು. ಮತ್ತೊಂದೆಡೆ, ಕಾಂಗ್ರೆಸ್ 70 ಸ್ಥಾನಗಳಲ್ಲಿ ಸ್ಪರ್ಧಿಸಿ 19 ಕಡೆ ಗೆದ್ದಿತ್ತು. ಸಿಪಿಐ-ಎಂಎಲ್ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 12 ಕಡೆ ಗೆದ್ದಿತ್ತು. ಸಿಪಿಎಂ ಮತ್ತು ಸಿಪಿಐ ಕ್ರಮವಾಗಿ 4 ಮತ್ತು 6 ಸ್ಥಾನಗಳಲ್ಲಿ ಸ್ಪರ್ಧಿಸಿ ತಲಾ ಎರಡು ಕಡೆ ವಿಜಯ ಸಾಧಿಸಿದ್ದವು. ಹಿಂದಿನ ಫಲಿತಾಂಶಗಳನ್ನು ಗಮನದಲ್ಲಿಟ್ಟುಕೊಂಡು, ಮೈತ್ರಿಕೂಟದ ಎಲ್ಲಾ ಪಕ್ಷಗಳಿಗೆ ಸಮಾನ ನ್ಯಾಯ ಸಿಗುವಂತೆ ಸೀಟುಗಳನ್ನು ಹಂಚಲು ಮೈತ್ರಿ ನಾಯಕರು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ.

You cannot copy content of this page

Exit mobile version