Home ದೇಶ ಹಿಂದೂ ರಾಷ್ಟ್ರಕ್ಕೆ ಮುಸ್ಲಿಮರು ಹೆದರಲ್ಲ, ನಾವು ಅಲ್ಲಾಹನನ್ನು ಮಾತ್ರ ಪೂಜಿಸುತ್ತೇವೆ: ಬಾಬಾ ರಾಮದೇವ್ ಹೇಳಿಕೆಗೆ ಮೌಲಾನಾ...

ಹಿಂದೂ ರಾಷ್ಟ್ರಕ್ಕೆ ಮುಸ್ಲಿಮರು ಹೆದರಲ್ಲ, ನಾವು ಅಲ್ಲಾಹನನ್ನು ಮಾತ್ರ ಪೂಜಿಸುತ್ತೇವೆ: ಬಾಬಾ ರಾಮದೇವ್ ಹೇಳಿಕೆಗೆ ಮೌಲಾನಾ ಖಾಲಿದ್ ರಶೀದ್ ತಿರುಗೇಟು

0

ಲಕ್ನೋ: ಯೋಗ ಗುರು ಬಾಬಾ ರಾಮದೇವ್ ಇತ್ತೀಚೆಗೆ ‘ಹಿಂದೂ ರಾಷ್ಟ್ರ’ದ ಬಗ್ಗೆ ನೀಡಿದ್ದ ಹೇಳಿಕೆಗೆ ಲಕ್ನೋದ ಈದ್ಗಾ ಇಮಾಮ್ ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿ ಸೋಮವಾರ ತಿರುಗೇಟು ನೀಡಿದ್ದಾರೆ. ಮುಸ್ಲಿಮರು ಯಾರಿಗೂ ಹೆದರುವುದಿಲ್ಲ, ಏಕೆಂದರೆ ಅವರು ಅಲ್ಲಾಹನನ್ನು ಮಾತ್ರ ಪೂಜಿಸುತ್ತಾರೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಎಲ್ಲ ಧರ್ಮಗಳ ನಡುವೆ ಪರಸ್ಪರ ಗೌರವ ಇರಬೇಕು ಮತ್ತು ಇತರರ ಭಾವನೆಗಳಿಗೆ ನೋವುಂಟು ಮಾಡುವಂತಹ ಮಾತುಗಳನ್ನಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಸುದ್ದಿ ಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿದ ಮೌಲಾನಾ ಖಾಲಿದ್ ರಶೀದ್, “ಮುಸ್ಲಿಮರು ಅಲ್ಲಾಹನ ಸೇವಕರು, ಹಾಗಾಗಿ ಅವರು ಯಾರಿಗೂ ಹೆದರುವುದಿಲ್ಲ ಅಥವಾ ಬೆದರುವುದಿಲ್ಲ. ಜಗತ್ತಿನ ಎಲ್ಲ ಮನುಷ್ಯರ ಪೂರ್ವಜರು ಒಬ್ಬರೇ ಆಗಿದ್ದಾರೆ. ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡುವುದನ್ನು ನಾವು ಯಾವಾಗಲೂ ವಿರೋಧಿಸುತ್ತೇವೆ. ನಮ್ಮ ದೇಶವು ಮುಂದೆ ಬರಬೇಕಾದರೆ, ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮವನ್ನು ಪಾಲಿಸಬೇಕು, ಇತರರ ಧರ್ಮವನ್ನು ಗೌರವಿಸಬೇಕು ಮತ್ತು ಇಂತಹ ಧಾರ್ಮಿಕ ಹೇಳಿಕೆಗಳನ್ನು ನೀಡುವುದರಿಂದ ದೂರವಿರಬೇಕು” ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಉತ್ತರಾಖಂಡದಲ್ಲಿ ಮಸೀದಿಗಳನ್ನು ಕೆಡವುತ್ತಿರುವುದು ಮತ್ತು ಮದರಸಾ ಮಂಡಳಿಯನ್ನು ರದ್ದುಗೊಳಿಸಿರುವ ಕ್ರಮಗಳ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಗಳು ದೇಶಾದ್ಯಂತ ಇರುವ ಮುಸ್ಲಿಮರಿಗೆ ಬಹಳ ಬೇಸರ ಮತ್ತು ತೊಂದರೆ ಉಂಟುಮಾಡಿವೆ ಎಂದು ಅವರು ತಿಳಿಸಿದ್ದಾರೆ.

ಬಾಬಾ ರಾಮದೇವ್ ಹೇಳಿದ್ದೇನು?

ಭಾರತದಲ್ಲಿ ‘ಹಿಂದೂ ರಾಷ್ಟ್ರ’ ಎಂಬ ಪರಿಕಲ್ಪನೆಗೆ ಮುಸ್ಲಿಮರು ಹೆದರಬೇಕಾದ ಅಗತ್ಯವಿಲ್ಲ ಮತ್ತು ದೇಶದ ಎಲ್ಲ ಧರ್ಮಗಳ ಜನರ ಪೂರ್ವಜರು ಒಬ್ಬರೇ ಆಗಿದ್ದಾರೆ ಎಂದು ಬಾಬಾ ರಾಮದೇವ್ ಹೇಳಿದ್ದರು.

2009 ರಲ್ಲಿ ತಾವು ದಿಯೋಬಂದ್‌ಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ರಾಮದೇವ್, “ನಮ್ಮ ಧರ್ಮಗಳು ಬೇರೆ ಇರಬಹುದು, ಆದರೆ ನಮ್ಮ ಪೂರ್ವಜರು ಒಬ್ಬರೇ. ಹಿಂದೂ ರಾಷ್ಟ್ರದ ಕಲ್ಪನೆಗೆ ಯಾರೂ ಹೆದರಬೇಕಾಗಿಲ್ಲ. ನಮ್ಮೆಲ್ಲರ ಪೂರ್ವಜರು ಸನಾತನಿ ಹಿಂದೂ ಆರ್ಯ-ವೈದಿಕರಾಗಿದ್ದರು” ಎಂದಿದ್ದರು.

ಮುಂದುವರಿದು ಮಾತನಾಡಿದ್ದ ಅವರು, “ಒಂದು ವೇಳೆ ಹಿಂದೂ ರಾಷ್ಟ್ರ ನಿರ್ಮಾಣವಾದರೆ ಮುಸ್ಲಿಮರು ಎಲ್ಲಿಗೆ ಹೋಗುತ್ತಾರೆ ಎಂದು ಕೆಲವರು ಕೇಳುತ್ತಾರೆ. ಅವರು ತಮ್ಮ ಪೂರ್ವಜರ ಹಾದಿಯನ್ನು ಅಳವಡಿಸಿಕೊಳ್ಳಬೇಕು ಎಂದು ನಾನು ಹೇಳುತ್ತೇನೆ. ನೀವು ಗಡ್ಡ ಬಿಡಿ ಅಥವಾ ಬಿಡದಿರಿ, ಯಾವುದೇ ಬಟ್ಟೆ ಧರಿಸಿ, ಆದರೆ ನಿಮ್ಮ ಪೂರ್ವಜರ ನಡತೆಯನ್ನು ಉಳಿಸಿಕೊಳ್ಳಿ. ಹಿಂದೂಸ್ತಾನದಲ್ಲಿ ಮುಸ್ಲಿಮರಿಗಾಗಲಿ ಅಥವಾ ಕ್ರೈಸ್ತರಿಗಾಗಲಿ ಯಾವುದೇ ಅಪಾಯವಿಲ್ಲ” ಎಂದು ಹೇಳಿದ್ದರು.

ಮುಸ್ಲಿಂ ಮುಖಂಡರ ವಿಭಿನ್ನ ಪ್ರತಿಕ್ರಿಯೆ:

ರಾಮದೇವ್ ಅವರ ಈ ಮಾತುಗಳಿಗೆ ಮುಸ್ಲಿಂ ಮುಖಂಡರಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆಲ್ ಇಂಡಿಯಾ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಮಾತನಾಡಿ, ಭಾರತದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರು ಸುರಕ್ಷಿತವಾಗಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ ದೇಶವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸುವುದನ್ನು ವಿರೋಧಿಸಿದ್ದಾರೆ. “ಈ ದೇಶ ಹಿಂದೂಗಳಿಗೆ ಎಷ್ಟು ಸೇರಿದ್ದೋ, ಮುಸ್ಲಿಮರಿಗೂ ಅಷ್ಟೇ ಸೇರಿದೆ. ಸಿಖ್ಖರು ಮತ್ತು ಇತರ ಧರ್ಮದವರಿಗೂ ಇಲ್ಲಿ ಸಮಾನ ಹಕ್ಕಿದೆ. ಹಾಗಾಗಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಕರೆಯುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.

ಇನ್ನೊಂದೆಡೆ, ಆಲ್ ಇಂಡಿಯಾ ಶಿಯಾ ಪರ್ಸನಲ್ ಲಾ ಬೋರ್ಡ್ ಮುಖಂಡ ಮೌಲಾನಾ ಯಾಸೂಬ್ ಅಬ್ಬಾಸ್ ಅವರು ಎಲ್ಲ ಮನುಷ್ಯರ ಮೂಲ ಒಂದೇ ಎಂಬ ಮಾತನ್ನು ಒಪ್ಪಿದ್ದಾರೆ. “ನಾವೆಲ್ಲರೂ ಆಡಮ್ (ಆದಂ) ಅವರ ಮಕ್ಕಳು. ಜನರೆಲ್ಲರೂ ಒಗ್ಗಟ್ಟು, ಸಹೋದರತೆ ಮತ್ತು ಪ್ರೀತಿಯಿಂದ ಬಾಳಿದರೆ ದ್ವೇಷ ಅಳಿದು ಶಾಂತಿ ನೆಲೆಸುತ್ತದೆ” ಎಂದು ಅವರು ತಿಳಿಸಿದ್ದಾರೆ.

You cannot copy content of this page

Exit mobile version