ದೆಹಲಿ: ತಮಿಳುನಾಡು ಅದ್ಯಂತ ಹಸು ಮತ್ತು ಕರುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಮಧ್ಯಂತರ ತಡೆ ನೀಡಿದೆ. ಈ ಮೂಲಕ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರಕ್ಕೆ ದೊಡ್ಡ ಕಾನೂನು ಮತ್ತು ರಾಜಕೀಯ ಜಯ ಸಿಕ್ಕಂತಾಗಿದೆ.
ಮದ್ರಾಸ್ ಹೈಕೋರ್ಟ್ ಕಳೆದ ಮೇ 27 ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ (SLP) ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಈ ಮಧ್ಯಂತರ ಆದೇಶ ಹೊರಡಿಸಿದೆ. ಅಲ್ಲದೆ, ಈ ಕುರಿತು ಪ್ರತಿಕ್ರಿಯೆ ಕೋರಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಹಡೀಪಾರಾಗಿ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಹೈಕೋರ್ಟ್ ನೀಡಿರುವ ಈ ಸಂಪೂರ್ಣ ನಿಷೇಧದ ತೀರ್ಪಿನ ಕೊನೆಯ ಭಾಗಕ್ಕೆ “ತಿದ್ದುಪಡಿ”ಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
ಹೈಕೋರ್ಟ್ ಆದೇಶಕ್ಕೆ ಸರ್ಕಾರದ ಆಕ್ಷೇಪವೇನಿತ್ತು?
ವಿಚಾರಣೆ ವೇಳೆ ತಮಿಳುನಾಡು ಸರ್ಕಾರವು, ಹೈಕೋರ್ಟ್ ಈ ಪ್ರಕರಣದಲ್ಲಿ ತನ್ನ ವ್ಯಾಪ್ತಿಯನ್ನು ಮೀರಿ ಹೋಗಿದೆ ಮತ್ತು ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ಕಾನೂನನ್ನು ತಾನೇ ತಿದ್ದಿ ಬರೆದಿದೆ ಎಂದು ಪ್ರಬಲವಾಗಿ ವಾದಿಸಿತು. “ಪ್ರಾಣಿಗಳ ಹತ್ಯೆಯು ಕೇವಲ ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ನಡೆಯಬೇಕು ಎಂದು ಹೈಕೋರ್ಟ್ ಹೇಳಿರುವುದು ಸರಿಯಾಗಿದೆ. ಆದರೆ, ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಬಕ್ರೀದ್ ಇರಲಿ ಅಥವಾ ಬೇರೆ ಯಾವುದೇ ದಿನ ಇರಲಿ, ತಮಿಳುನಾಡಿನಾದ್ಯಂತ ಯಾವುದೇ ಹಸು ಅಥವಾ ಕರುವನ್ನು ಕೊಲ್ಲಬಾರದು ಎಂದು ಆದೇಶಿಸಿದೆ. ಹೈಕೋರ್ಟ್ ನೀಡಿದ ಈ ಎರಡೂ ನಿರ್ದೇಶನಗಳು ಒಂದಕ್ಕೊಂದು ವಿರುದ್ಧವಾಗಿವೆ” ಎಂದು ಸರ್ಕಾರ ಕೋರ್ಟ್‌ಗೆ ತಿಳಿಸಿತು.
ಅಲ್ಲದೆ, ಈ ಸಂಪೂರ್ಣ ನಿಷೇಧವು ರಾಜ್ಯದ ‘ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ 1958’ ಕ್ಕೆ ತದ್ವಿರುದ್ಧವಾಗಿದೆ. ಈ ಕಾಯ್ದೆಯ ಪ್ರಕಾರ, 10 ವರ್ಷ ಮೇಲ್ಪಟ್ಟ, ಕೆಲಸ ಮಾಡಲು ಅಥವಾ ಸಂತಾನೋತ್ಪತ್ತಿಗೆ ಅಸಮರ್ಥವಾಗಿರುವ ಹಸುಗಳನ್ನು ಸೂಕ್ತ ಅಧಿಕಾರಿಯ ಪ್ರಮಾಣಪತ್ರ ಪಡೆದು ಹತ್ಯೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಇದಲ್ಲದೆ ಪ್ರಾಣಿ ಹಿಂಸೆ ತಡೆ ಕಾಯ್ದೆ ಹಾಗೂ ಸ್ಥಳೀಯ ಸಂಸ್ಥೆಗಳ ನಿಯಮಾವಳಿಗಳೂ ಸಹ ಇದನ್ನು ನಿಯಂತ್ರಿಸುತ್ತವೆಯೇ ಹೊರತು ಎಲ್ಲೂ ಸಂಪೂರ್ಣ ನಿಷೇಧ ಹೇರಿಲ್ಲ ಎಂದು ಸರ್ಕಾರ ವಾದಿಸಿತು.
ವಿವಾದದ ಹಿನ್ನೆಲೆ:
ಹಿಂದೂ ಮಕ್ಕಳ್ ಕಚ್ಚಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ. ಸೂರ್ಯ ಪ್ರಶಾಂತ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ವಧೆ ಮಾಡುವುದನ್ನು ತಡೆದು, ಕೇವಲ ನಿಗದಿತ ಕಸಾಯಿಖಾನೆಗಳಲ್ಲಿ ಮಾತ್ರ ಅದಕ್ಕೆ ಅವಕಾಶ ನೀಡುವಂತೆ ನಿರ್ದೇಶಿಸಬೇಕು ಎಂದು ಅವರು ಕೋರಿದ್ದರು. ಆದರೆ, ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು ಇಡೀ ರಾಜ್ಯದಲ್ಲೇ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿತ್ತು. ಹೈಕೋರ್ಟ್ ತನ್ನ ತೀರ್ಪಿಗೆ ಹಳೆಯ ಸರ್ಕಾರಿ ಆದೇಶಗಳು ಹಾಗೂ ಸುಪ್ರೀಂ ಕೋರ್ಟ್‌ನ ಹಳೆಯ ತೀರ್ಪುಗಳನ್ನು ಉಲ್ಲೇಖಿಸಿತ್ತು.
ಇದೀಗ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿರುವುದರಿಂದ ವಿಜಯ್ ಸರ್ಕಾರ ನಿಟ್ಟುಸಿರು ಬಿಟ್ಟಿದ್ದು, ಹೈಕೋರ್ಟ್‌ನ ನಿರ್ದೇಶನಗಳು ತಮಿಳುನಾಡಿನ ಪ್ರಾಣಿ ಸಂರಕ್ಷಣಾ ಕಾಯ್ದೆಗೆ ಅನುಗುಣವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸುಪ್ರೀಂ ಕೋರ್ಟ್ ಮುಂದಿನ ದಿನಗಳಲ್ಲಿ ವಿವರವಾಗಿ ಪರಿಶೀಲಿಸಲಿದೆ.
