ಜಪಾನೀಸ್ ಎನ್ಸೆಫಾಲಿಟಿಸ್ (ಜೆಇ) ವಿರುದ್ಧ ಅಂದಾಜು 1-15 ವರ್ಷದೊಳಗಿನ ಅಂದಾಜು 48 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ವಿಶೇಷ ಲಸಿಕೆ ಅಭಿಯಾನ ಸೋಮವಾರದಿಂದ ಮೂರು ವಾರಗಳ ಕಾಲ ಕರ್ನಾಟಕದಲ್ಲಿ ನಡೆಯಲಿದೆ.
ವಿಶೇಷ ಲಸಿಕಾ ಅಭಿಯಾನದ ಕುರಿತು ಮಾತನಾಡಿದ ಆರೋಗ್ಯ ಸಚಿವ ಕೆ ಸುಧಾಕರ್ ಭಾನುವಾರ, ಡಿಸೆಂಬರ್ ಮೊದಲ ವಾರದಲ್ಲಿ ಲಸಿಕೆಗಳನ್ನು ಪ್ರಾಥಮಿಕವಾಗಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ನೀಡಲಾಗುವುದು. “ಇದನ್ನು ಅನುಸರಿಸಿ, ಮುಂದಿನ ಎರಡು ವಾರಗಳಲ್ಲಿ, ನಾವು ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳು ಮತ್ತು ಸಮುದಾಯಗ ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್ ಅಭಿಯಾನದತ್ತ ಗಮನ ನೀಡಲಿದ್ದೇವೆ. ಈ ಅಭಿಯಾನಕ್ಕೆ ಬೆಂಬಲವಾಗಿ ಕೇಂದ್ರ ಆರೋಗ್ಯ ಸಚಿವಾಲಯವು ನಮಗೆ ಜೆನ್ವಾಕ್ ಲಸಿಕೆಯನ್ನು ಪೂರೈಸಲಿದೆ,” ಎಂದು ಅವರು ಹೇಳಿದರು.
ಎನ್ಸೆಫಾಲಿಟಿಸ್ ಎಂಬುದು ಸೋಂಕು ಅಥವಾ ಅಲರ್ಜಿಯ ಪ್ರತಿಕ್ರಿಯೆಯಿಂದ ಉಂಟಾಗುವ ಮೆದುಳಿನ ಉರಿಯೂತವಾಗಿದೆ. ಭಾರತದಲ್ಲಿ ಮೆದುಳಿನ ಉರಿಯೂತಕ್ಕೆ (ಮೆದುಳು ಜ್ವರ) ಅತ್ಯಂತ ಸಾಮಾನ್ಯ ಕಾರಣಗಳಲ್ಲಿ ಜೆಇ ಕೂಡಾ ಮತ್ತು ಪ್ರತಿ ವರ್ಷ ಒಟ್ಟು 68,000 ಪ್ರಕರಣಗಳು ವರದಿಯಾಗುತ್ತಿವೆ. ಈ ಪೈಕಿ ಸಾವಿನ ಪ್ರಮಾಣ ಶೇ.20ರಿಂದ ಶೇ.30ರಷ್ಟಿದೆ. ಗುಣಮುಖರಾದವರಲ್ಲಿ, ಶೇಕಡಾ 30ರಿಂದ 50ರಷ್ಟು ಜನರು ಸಂವೇದನೆ ಮತ್ತು ಚಲನಶೀಲತೆ ಕಳೆದುಕೊಳ್ಳುವುದು ಮತ್ತು ಇತರ ಶಾಶ್ವತ ದೈಹಿಕ ಮತ್ತು ಮಾನಸಿಕ ದೌರ್ಬಲ್ಯಗಳಿಂದ ಬಳಲುತ್ತಿದ್ದಾರೆ ಎಂದು ಸುಧಾಕರ್ ಹೇಳಿದರು.
ಜಪಾನೀಸ್ ಎನ್ಸೆಫಾಲಿಟಿಸ್ ಫ್ಲೇವಿವೈರಸ್ ಎಂಬ ವೈರಸ್‌ನಿಂದ ಉಂಟಾಗುತ್ತದೆ ಮತ್ತು ಇದು ಪ್ರಾಥಮಿಕವಾಗಿ ಕ್ಯುಲೆಕ್ಸ್ ಸೊಳ್ಳೆಗಳಿಂದ ಹರಡುತ್ತದೆ. ಹಂದಿಗಳು ಮತ್ತು ಕಾಡುಪಕ್ಷಿಗಳು ಇವುಗಳ ನೆಲೆಯಾಗಿದ್ದು ಮನುಷ್ಯದೇಹವು ಇದರ ಕೊನೆಯ ನೆಲೆಯಾಗಿದೆ.
ಕರ್ನಾಟಕದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಧಾರವಾಡ, ಚಿತ್ರದುರ್ಗ ಮತ್ತು ದಾವಣಗೆರೆಯನ್ನು ಈ ವೈರಸ್‌ನ 10 ಸ್ಥಳೀಯ ಜಿಲ್ಲೆಗಳೆಂದು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ, ಒಂಬತ್ತು ತಿಂಗಳು ಪೂರ್ಣಗೊಂಡ ನಂತರ ಮಕ್ಕಳಿಗೆ ಜೆ ಇ ಲಸಿಕೆ ನೀಡಲಾಗುತ್ತದೆ ಮತ್ತು 1.5 ವರ್ಷ ವಯಸ್ಸಿನಲ್ಲಿ ಎರಡನೇ ಡೋಸ್ ನೀಡಲಾಗುತ್ತದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನದಂತೆ, ರಾಜ್ಯದ ಬಾಗಲಕೋಟೆ, ದಕ್ಷಿಣ ಕನ್ನಡ, ಗದಗ, ಹಾಸನ, ಹಾವೇರಿ, ಕಲಬುರ್ಗಿ, ತುಮಕೂರು, ರಾಮನಗರ, ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚುವರಿ ಜಪಾನೀಸ್ ಎನ್ಸೆಫಾಲಿಟಿಸ್ ಅಭಿಯಾನಗಳನ್ನು ಜಪಾನೀಸ್ ಎನ್ಸೆಫಾಲಿಟಿಸ್ ಪ್ರಸರಣವಿಲ್ಲದ ಸಮಯದಲ್ಲಿ ನಡೆಸಲಾಗುತ್ತದೆ. ಈ ಅಭಿಯಾನದಲ್ಲಿ, 1 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಜಪಾನೀಸ್ ಎನ್ಸೆಫಾಲಿಟಿಸ್ ಲಸಿಕೆಯ ಒಂದು ಡೋಸನ್ನು ನೀಡಲಾಗುತ್ತದೆ.
ಭಾರತದಲ್ಲಿ 1955 ಇಸವಿಯಲ್ಲಿ ತಮಿಳುನಾಡಿನ ವೆಲ್ಲೂರಿನಲ್ಲಿ ಮೊದಲ ಜಪಾನೀಸ್ ಎನ್ಸೆಫಾಲಿಟಿಸ್ ಪ್ರಕರಣ ವರದಿಯಾಯಿತು. ಕರ್ನಾಟಕದಲ್ಲಿ 1978ರಲ್ಲಿ ಕೋಲಾರ ಜಿಲ್ಲೆಯಲ್ಲಿ ಮೊದಲ ಜಪಾನೀಸ್ ಎನ್ಸೆಫಾಲಿಟಿಸ್ ಪ್ರಕರಣ ವರದಿಯಾಗಿತ್ತು. ಮೊದಲ ಪ್ರಮುಖ ಜಪಾನೀಸ್ ಎನ್ಸೆಫಾಲಿಟಿಸ್ ವೇಗದ ಹರಡುವಿಕೆ 1973ರಲ್ಲಿ ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯಲ್ಲಿ ವರದಿಯಾಗಿದೆ. 2005ರಲ್ಲಿ ಉತ್ತರ ಪ್ರದೇಶದಲ್ಲಿಜಪಾನೀಸ್ ಎನ್ಸೆಫಾಲಿಟಿಸ್ ರೋಗದ ಮತ್ತೊಂದು ಪ್ರಮುಖ ಹರಡುವಿಕೆ ವರದಿಯಾಗಿದೆ, ಇದರ ಪರಿಣಾಮವಾಗಿ 6000ಕ್ಕೂ ಹೆಚ್ಚು ಪ್ರಕರಣಗಳು ಮತ್ತು 1500 ಸಾವುಗಳು ಆ ರಾಜ್ಯದಲ್ಲಿ ಸಂಭವಿಸಿದವು. ಜಪಾನೀಸ್ ಎನ್ಸೆಫಾಲಿಟಿಸ್ 21 ರಾಜ್ಯಗಳಲ್ಲಿ ಸ್ಥಳೀಯ ರೋಗವಾಗಿ ಗುರುತಿಸಲ್ಪಟ್ಟಿದೆ.