ಹಾಸನ: ಸಮರ್ಪಕ ವಿದ್ಯುತ್ ಪೂರೈಕೆಗೆ ರಾಜ್ಯದಲ್ಲಿ ಈಗಾಗಲೇ 100 ಸಬ್ ಸ್ಟೇಷನ್ ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಸೂಕ್ತ ಜಾಗ ನೀಡಿದರೆ ಇನ್ನಷ್ಟು ಸಬ್‌ಸ್ಟೇಷನ್‌ಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಸಿಟಿಸಿಎಲ್) ವತಿಯಿಂದ ಅರಸೀಕೆರೆ ತಾಲೂಕಿನ ಕಸಬಾ ಹೋಬಳಿ, ಸೂಳೆಕೆರೆ(ಆಗ್ಗುಂದ) ಗ್ರಾಮದಲ್ಲಿ ನಿರ್ಮಿಸಿರುವ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರವನ್ನು ಇಂದು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಸಾಕ? ವಿದ್ಯುತ್ ಲಭ್ಯವಿದೆ. ಅದನ್ನು ಸಮರ್ಪಕವಾಗಿ ಪೂರೈಸಲು ಸಬ್ ಸ್ಟೇಷನ್‌ಗಳ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರ ಈಗಾಗಲೇ 100 ಸಬ್ ಸ್ಟೇಷನ್ ಗಳ ನಿರ್ಮಾಣಕ್ಕೆ ಕ್ರಮವಹಿಸಿದೆ. ಇನ್ನಷ್ಟು ಸಬ್‌ಸ್ಟೇಷನ್‌ಗಳು ಬೇಕು ಎಂಬ ಬೇಡಿಕೆ ಇದ್ದು, ಜಾಗದ ಕೊರತೆ ಇದೆ. ಸೂಕ್ತ ಜಾಗ ನೀಡಿದರೆ ಬೇಡಿಕೆಗೆ ತಕ್ಕಂತೆ ಸಬ್‌ಸ್ಟೇಷನ್‌ಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಕೃಷಿ ಪಂಪ್ ಸೆಟ್‌ಗಳಿಗೆ ಹಗಲು ವೇಳೆ ಸತತ 7 ಗಂಟೆ ವಿದ್ಯುತ್ ಪೂರೈಸುವ ಉದ್ದೇಶದಿಂದ ಕುಸುಮ್- ಸಿ ಯೋಜನೆಯಡಿ ಕೃಷಿ ಫೀಡರ್‌ಗಳ ಸೌರೀಕರಣ ಮಾಡಲಾಗುತ್ತಿದೆ. ಈ ಯೋಜನೆಯಡಿ ಈಗಾಗಲೇ ರಾಜ್ಯದಲ್ಲಿ 2,400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕ್ರಮ ವಹಿಸಲಾಗಿದೆ. ಇದಕ್ಕಾಗಿ ಖಾಸಗಿಯವರು 10 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತಿದ್ದಾರೆ. ಈ ಯೋಜನೆ ಪೂರ್ಣಗೊಂಡರೆ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಸಮಸ್ಯೆ ಬಹುತೇಕ ಬಗೆಹರಿಯಲಿದೆ ಎಂದು ಹೇಳಿದರು.ನಿರಂತರ ಜ್ಯೋತಿ ಯೋಜನೆಯಡಿ ಗೃಹ ಬಳಕೆಗೆ ನಿರಂತರ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಯಾವುದೇ ಸಮಸ್ಯೆ ಇದ್ದಲ್ಲಿ ಅದನ್ನು ತ್ವರಿತವಾಗಿ ಬಗೆಹರಿಸಲಾಗುವುದು. ವಿದ್ಯುತ್ ಪೂರೈಕೆ ವಿಚಾರಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದಲೇ ಮೂಲ ಸೌಕರ್ಯ ಹೆಚ್ಚಿಸಲು ನಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದರು.ಈಗಾಗಲೇ ಅಕ್ರಮ-ಸಕ್ರಮ ಯೋಜನೆ ಮೂಲಕ ರೈತರ ಪಂಪ್ ಸೆಟ್‌ಗಳಿಗೆ ಪಡೆದಿದ್ದ ಅಕ್ರಮ ಸಂಪರ್ಕಗಳನ್ನು ಸಕ್ರಮಗೊಳಿಸಲಾಗುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಅಕ್ರಮ-ಸಕ್ರಮ ಯೋಜನೆಯಲ್ಲಿ 4.5 ಲಕ್ಷ ಅರ್ಜಿಗಳು ಬಾಕಿ ಉಳಿದಿತ್ತು. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಸಚಿವ ಸಂಪುಟದಲ್ಲಿ ಚರ್ಚಿಸಿ ಸಕ್ರಮಗೊಳಿಸಲು ಕ್ರಮ ವಹಿಸಲಾಗಿದ್ದು, ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲಾಗಿದೆ ಎಂದು ತಿಳಿಸಿದರು.ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು ತಲಾ ಆದಾಯ ಹೆಚ್ಚಳವಾಗಿದೆ ಎಂದು ತಿಳಿಸಿದರು.
ಸಂಸದ ಶ್ರೇಯಸ್ ಪಟೇಲ್ ಅವರು ಮಾತನಾಡಿ ಕೃಷಿಕರ ಅಭಿವೃದ್ಧಿಗಾಗಿ ಉತ್ತಮ ಯೋಜನೆಗಳನ್ನು ರೂಪಿಸಿ ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರಲ್ಲದೆ, ಗೃಹ ಜ್ಯೋತಿ ಯೋಜನೆಯಡಿ ಸಾರ್ವಜನಿಕರಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲಾಗುತ್ತದೆ ಎಂದರು.ರಾಜ್ಯ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಅವರು ಮಾತನಾಡಿ ಅರಸೀಕರೆ ಬರಡು ಭೂಮಿ ಎಂದು ಹೇಳಲಾಗುತ್ತಿತ್ತು. ಆದರೆ, ಹಲವು ಯೋಜನೆಗಳ ಮೂಲಕ ತಾಲೂಕಿನ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಇದೀಗ ರೈತರಿಗೆ ಉತ್ತಮ ವಿದ್ಯುತ್ ಸೌಲಭ್ಯ ನೀಡಬೇಕಿದ್ದು, ಅರಸೀಕೆರೆಗೆ 100 ಮೆಗಾವ್ಯಾಟ್ ವಿದ್ಯುತ್ ಬೇಕಾಗಿದೆ. ಸದ್ಯ ನಮಗೆ ಅರ್ಧದಷ್ಟು ಮಾತ್ರ ಸಿಗುತ್ತಿದೆ. ರೈತರ ಈ ಬವಣೆಯನ್ನು ಹೋಗಲಾಡಿಸಲು ಕುಸುಮ್-ಸಿ ಯೋಜನೆ ಉಪಯುಕ್ತವಾಗಿದೆ. ಇದರ ಜತೆಗೆ ಕಾಡಂಚಿನ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಕಾರಣ ರಾತ್ರಿ ವೇಳೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಇದೆ. ಈ ಕಾರಣದಿಂದಾಗಿ ನಿರಂತರ ಜ್ಯೋತಿ ಮೂಲಕ ಈ ಸಮಸ್ಯೆ ಬಗೆಹರಿಸಲು ಕ್ರಮವಹಿಸ ಬೇಕಿದೆ. ಅಲ್ಲದೇ ತಾಲೂಕು ವ್ಯಾಪ್ತಿಯಲ್ಲಿ ಇನ್ನಷ್ಟು ಸಬ್ ಸ್ಟೇಷನ್‌ಗಳನ್ನು ಆರಂಭಿಸಿ ರೈತರ ವಿದ್ಯುತ್ ಸಮಸ್ಯೆಯನ್ನು ಹೋಗಲಾಡಿಸಬೇಕು” ಎಂದು ಇಂಧನ ಸಚಿವರಿಗೆ ಮನವಿ ಸಲ್ಲಿಸಿದರು.ಕ.ವಿ.ಪ್ರ.ನಿ.ನಿ ಮುಖ್ಯ ಇಂಜಿನಿಯರ್ ಸತೀಶ್ ಚಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸದರಿ ವಿದ್ಯುತ್ ಕೇಂದ್ರದಿಂದ ೪.೪೨ ಮೇಗಾವ್ಯಾಟ್ ವಿದ್ಯುತ್ ವರ್ಗಾವಣೆ ಮಾಡಲಾಗುವುದು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವುದರ ಮೂಲಕ ಸುಮಾರು ೨೫ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷರಾದ ಧರ್ಮಶೇಖರ್, ಅಗ್ಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕವಿತ, ದುಮ್ಮೇನ ಹಳ್ಳಿ ಗ್ರಾಪಂ ಅಧ್ಯಕ್ಷ ಎ.ಎಂ. ಅಜ್ಜಯ್ಯ, ಕ.ವಿ.ಪ್ರ.ನಿ.ನಿ ಅಧೀಕ್ಷಕರಾದ ಮಹೇಶ್, ಕಾರ್ಯಪಾಲಕ ಅಭಿಯಂತರರಾದ ಶಿವಾನಂದ, ಸೆಸ್ಕ್ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್ ಮತ್ತಿತರರು ಹಾಜರಿದ್ದರು.ಸೋಲಾರ್ ಪಾರ್ಕ್ ಪರಿಶೀಲನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಸಂಕೋಡನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರು, ಕುಸುಮ್- ಸಿ ಯೋಜನೆಯಡಿ ಗ್ರಾಮದ 25 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ “ಸೋಲಾರ್ ಪಾರ್ಕ್” ಪರಿಶೀಲನೆ ನಡೆಸಿದರು.
