/
ಹಾಸನ : ಅಪರಿಚಿತ ವ್ಯಕ್ತಿಗಳಿಂದ ಬ್ಲಾಕ್ ಮೇಲ್‌ಗೆ ಒಳಗಾದರೆ ಧೈರ್ಯವನ್ನು ಕಳೆದುಕೊಳ್ಳದೆ, ತಂದೆ ತಾಯಿಗೆ ತಿಳಿಸಬೇಕು ನಂತರ ಪೊಲೀಸ್ ಠಾಣೆಗೆ ದೂರು ನೀಡಿ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಕರೆ ನೀಡಿದರು.ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಠಾಣೆ ತವರು ಮನೆಗಿಂತ ಹೆಚ್ಚು ನಂಬಿಕೆ ಇಡಬೇಕು ಸಮಸ್ಯೆಯಾದಗ ತಂದೆ ತಾಯಿಗಿಂತ ಮೊದಲು ಪೊಲೀಸ್ ಬರುತ್ತಾರೆ. ಆದ್ದರಿಂದ ಎಲ್ಲರೂ ಸಹಾಯವಾಣಿಯನ್ನು ತಮ್ಮ ಮೊಬೈಲ್‌ನಲ್ಲಿ, ಸೇವ್ ಮಾಡಿಕೊಂಡು ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸೇರಿದಂತೆ ಸರ್ಕಾರದ ಎಲ್ಲಾ ಕಚೇರಿಗಳು ತೆರದ ಮನೆಯಾಗಬೇಕು. ಇದೇ ಉದ್ದೇಶದಿಂದ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಯೋಜಿತ ಕಾರ್ಯಕ್ರಮ ಪ್ರಾರಂಭವಾಗಿದೆ ಸ್ಥಳೀಯ ಶಾಲೆಗಳಿಗೆ ಮನೆಗಳಿಗೆ ಪೊಲೀಸರು ಭೇಟಿ ನೀಡಿ ಪೊಲೀಸ್ ಠಾಣೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ ಪೊಲೀಸರ ಕಂಡರೆ ಭಯಪಡದಂತೆ ಮಾಹಿತಿ ನೀಡುತ್ತಿದ್ದಾರೆ ಎಂದರು.ಕರ್ನಾಟಕ ತುರ್ತು ಸಹಾಯವಾಣಿ 112, ಮಹಿಳಾ ಸಹಾಯವಾಣಿ 181, ಸೈಬರ್ ಸಹಾಯವಾಣಿ 1908, ತಮ್ಮ ಮೊಬೈಲ್‌ನಲ್ಲಿ ಸೇವ್ ಮಾಡಿಕೊಳ್ಳಬೇಕು. ತುರ್ತು ಸಮಯದಲ್ಲಿ ಯೋಚಿಸದೆ ಕರೆ ಮಾಡುವ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳಬೇಕು. ಕರ್ನಾಟಕ ಪೊಲೀಸ್ ಮಹಿಳೆಯರ ರಕ್ಷಣೆಗೆ ಇದ್ದಾರೆ, ಜನಸ್ನೇಹಿಯಾಗಿದ್ದಾರೆ ಯಾವುದೇ ಸಮಸ್ಯೆಗಳನ್ನು ಅಂಜದೆ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿ, ಕಾನೂನು ತಿಳಿದ ಹೆಣ್ಣು ಹೆಚ್ಚು ಶಕ್ತಿಯುತ ಸಮಾಜದಲ್ಲಿ ಹೋರಾಟ ಮಾಡುತ್ತಾಳೆ ಅದ್ದರಿಂದ ಪ್ರತಿಯೊಂದು ಹೆಣ್ಣು ಮಕ್ಕಳು ಕಾನೂನು ಅರಿಯಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳಿಗಿಂದ ಹೆಚ್ಚಾಗಿ ಸಾವಿರಾರು ಪ್ರಕರಣಗಳು ಸೈಬರ್ ಠಾಣೆಯಲ್ಲಿ ದಾಖಲಾಗುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಯಾವುದೇ ವೈಯಕ್ತಿಕ ವಿಷಯಗಳು, ದೂರವಾಣಿ ಸಂಖ್ಯೆಯನ್ನು ಹಂಚಿಕೊಳ್ಳಬಾರದು ಎಲ್ಲವನ್ನೂ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು, ಸಾಮಾಜಿಕ ಜಾಲತಾಣದಲ್ಲಿ ಬರುವ ಎ ಪಿ. ಕೆ ಅಪ್ಲಿಕೇಶ್, ಲಿಂಕ್ ಗಳನ್ನು, ವಿಡಿಯೋ ಕರೆಗಳನ್ನು ಓಪನ್ ಮಾಡಬಾರದು ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಅವರು ಮಾತನಾಡಿ, ಸಾಮಾಜಿಕ ಜಾಲತಾಣ ಬಳಕೆಯ ಬಗ್ಗೆ ಹೆಣ್ಣು ಮಕ್ಕಳಿಗೆ ಹೆಚ್ಚಿನ ಅರಿವು ಇರಬೇಕು. ಅಪರಿಚಿತ ವ್ಯಕ್ತಿಯ ಸ್ನೇಹ ಮಾಡುವಾಗ ಎಚ್ಚರವಿರಲಿ, ಫೇಸ್‌ಬುಕ್ ಹಾಗು ಇನ್ಸ್ಟಾಗ್ರಾಮ್‌ಗಳಲ್ಲಿ ಫ್ರೆಂಡ್ಸ್ ರಿಕ್ವೆಸ್ಟ್ ಹಾಗೂ ಫಾಲೋ ಮಾಡುವಾಗ ಎಚ್ಚರವಹಿಸಬೇಕು ಎಂದರು.ಈ ವೇಳೆಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಆರ್ ಪೂರ್ಣಿಮ, ಅಪರ ಜಿಲ್ಲಾಧಿಕಾರಿ ಮಂಜುನಾಥ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಧರಣಿ ಕುಮಾರ, ಪ್ರಾಂಶುಪಾಲರಾದ ಬಸವರಾಜ್ ಉಪಸ್ಥಿತರಿದ್ದರು.
