ಹಾವೇರಿ : ಕಾಂಗ್ರೆಸ್ (Congress) ಹೈಕಮಾಂಡ್ (Highcommand) ನನ್ನ ಉಪಮುಖ್ಯಮಂತ್ರಿ (DCM) ಮಾಡಿದ್ರೆ ಕರ್ತವ್ಯ ನಿಭಾಯಿಸಲು ಸಿದ್ಧನಿದ್ದೆನೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹೇಳಿದ್ದಾರೆ.ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನನ್ನ ಡಿಸಿಎಂ ಮಾಡುವಂತೆ ಜನ ಒತ್ತಾಯ ಮಾಡುತ್ತಿದ್ದಾರೆ. ಹೈಕಮಾಂಡ್ ನನ್ನ ಡಿಸಿಎಂ ಮಾಡಿದ್ರೆ ನಿಭಾಯಿಸುತ್ತೇನೆ ಎಂದು ತಿಳಿಸಿದ್ದಾರೆ. ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ನಾನು ಎರಡೂವರೆ ವರ್ಷ ಮಂತ್ರಿ ಆಗಿದ್ದು, ಸಚಿವ ಸ್ಥಾನ ಬಿಟ್ಟು ಪಕ್ಷದ ಕೆಲಸ ಮಾಡು ಅಂದರೂ ನಾನು ಸಿದ್ಧ. ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದಿದ್ದಾರೆ.ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಸಿಎಂ ಬದಲಾವಣೆ ಸಂಬಂಧ ಯಾವ ಒಪ್ಪಂದವೂ ಆಗಿಲ್ಲ. 2028 ರ ವರೆಗೂ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ. ನಮ್ಮದು ಹೈಕಮಾಂಡ್ ಪಕ್ಷ, ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಹಾಕಿದ ಗೆರೆಯನ್ನು ನಾವು ದಾಟುವುದಿಲ್ಲ ಎಂದಿದ್ದಾರೆ.ಒಟ್ಟಿನಲ್ಲಿ ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಬಗ್ಗೆ ರಾಜ್ಯ ಕಾಂಗ್ರೆಸ್ನಲ್ಲಿ ಚರ್ಚೆ ಶುರುವಾಗಿರುವ ಹೊತ್ತಲ್ಲಿಯೇ ಸಚಿವ ಜಮೀರ್ ಹೇಳಿಕೆ ತೀವ್ರ ಕುತೂಹಲ ಕೆರಳಿಸಿದೆ.
ಮುಂದಿನ ಡಿಸಿಎಂ ಜಮೀರ್ ಎಂದು ಘೋಷಣೆ : ಇತ್ತೀಚೆಗೆ ಚಿತ್ರದುರ್ಗದಲ್ಲಿ ಜಮೀರ್ ಅಹ್ಮದ್ ಖಾನ್ ಅವರು ಮುಂದಿನ ಡಿಸಿಎಂ ಎಂದು ಅಭಿಮಾನಿಗಳು ಘೋಷಣೆ ಕೂಗಿದ್ದರು. ಬೈಕ್ ರ್ಯಾಲಿ ಮೂಲಕ ಜಮೀರ್ ಸ್ವಾಗತಿಸುವ ವೇಳೆ ಬೆಂಬಲಿಗರು, ಜಮೀರ್ ಮುಂದಿನ ಡಿಸಿಎಂ ಭಿತ್ತಿಪತ್ರ ಪ್ರದರ್ಶಿಸಿದ್ದರು. ಇದೇ ಖುಷಿಯಲ್ಲಿ ಜಮೀರ್ ಅಭಿಮಾನಿಯೊಬ್ಬರಿಗೆ ಮುತ್ತು ಕೊಟ್ಟಿರುವ ವಿಡಿಯೋ ಭಾರೀ ವೈರಲ್ ಆಗಿತ್ತು.ವಿಜಯನಗರ: ಜಮಿರ್ ಅಹ್ಮದ್ ಖಾನ್ ಅವರು ಮುಂದಿನ ಡಿಸಿಎಂ ಆಗುತ್ತಾರೆ ಕೂಗು ಬೆನ್ನಲ್ಲೇ ವಿಜಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸ್ಪಷ್ಟನೆ ನೀಡಿದ ಸಚಿವರು, ನಮ್ಮದಲಿತ ಸಂಘಟನೆಯವರು ಅಭಿಮಾನದಿಂದ ಹೇಳಿದ್ದಾರೆ. ಈ ಬಗ್ಗೆ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಅವರು ತಿಳಿಸಿದ್ದರು. ಡಿಸಿಎಂ ಪಟ್ಟಕ್ಕೆ ನನ್ನ ಹೆಸರು ಮುಂಚೂಣಿಯಲ್ಲಿದೆ ಎನ್ನುವ ವಿಚಾರ ದಲಿತ ಸಂಘಟನೆಯವರು ನಿನ್ನೆ ಅಂಬೇಡ್ಕರ್ ಮೂರ್ತಿಗೆ ಹಾರ ಹಾಕುವಾಗ ಅಭಿಮಾನದಿಂದ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಜಮೀರ್ ಅಹಮದ್ ಖಾನ್ ಅವರು ಉಪಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದಾರೆ. ಅವರು ತಮ್ಮ ಭಾವನೆಯನ್ನು ಹೇಳಿದ್ದಾರೆ. ಆದರೆ ಇದೆಲ್ಲಾ ನಿರ್ಧಾರ ಮಾಡೋದು ಹೈಕಮಾಂಡ್. ಈ ವಿಚಾರವನ್ನು ನಾನು ಪದೇ ಪದೇ ಹೇಳಿದ್ದೇನೆ. ನಮ್ಮ ಪಕ್ಷ ಕೈ ಹೈಮಾಂಡ್ ಹೇಳಿದ್ದನ್ನೇ ಕೇಳುತ್ತದೆ ಎಂದು ಜಮೀರ್ ಉತ್ತರಿಸಿದ್ದರು.
