ಸುಬ್ರಹ್ಮಣ್ಯ/ಕೊಲ್ಲೂರು: ನೀವು ಕರಾವಳಿಯಲ್ಲಿ ಕೆಲವೆಡೆ ದೇವಸ್ಥಾನಗಳಿಗೆ ಹೋದಾಗ ಅಲ್ಲಿ ಅಂಗಿ, ಮತ್ತು ಬನಿಯನ್ ಕಳಚಿಟ್ಟು ಒಳಹೋಗುವಂತೆ ಹೇಳುವುದನ್ನು ಗಮನಿಸಿರಬಹುದು. ಆದರೆ ಈಗ ಆ ರೀತಿ ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಅರ್ಜಿ ಸಲ್ಲಿಸಲಾಗಿದೆ.
ದೇವಸ್ಥಾನಗಳಲ್ಲಿ ಈ ರೀತಿಯಾಗಿ ಬಟ್ಟೆ ತೆಗೆಸುವುದನ್ನು ನಿಲ್ಲಿಸಬೇಕೆಂದು ಮಂಗಳೂರು ಮೂಲದ ಸಂಸ್ಥೆಯಾದ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಗೆ ಅರ್ಜಿ ಸಲ್ಲಿಸಿದೆ.
ಇತ್ತೀಚೆಗೆ ಸಂಸ್ಥೆಯ ಸದಸ್ಯರು ಮೇಲೆ ಹೇಳಿರುವ ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಅಲ್ಲಿ ಪುರುಷರು ಬನಿಯನ್, ಅಂಗಿ ಕಳಚಿ ಒಳಗೆ ಹೋಗಬೇಕೆನ್ನುವ ನಿಯಮ ಇರುವುದು ಕಂಡುಬಂದಿದ್ದು, ಹಿಂದೂ ಧರ್ಮದ ಯಾವುದೇ ಗ್ರಂಥಗಳಲ್ಲಿ ಇಂತಹ ಯಾವುದೇ ನಿಯಮದ ಕುರಿತು ಉಲ್ಲೇಖವಿಲ್ಲ. ಜೊತೆಗೆ ಇದರ ಕುರಿತಾಗಿ ಯಾವುದೇ ಸರ್ಕಾರಿ ಆದೇಶವೂ ಇಲ್ಲ, ಆದರೂ ಇದನ್ನು ಪಾಲಿಸುವಂತೆ ಹೇಳಿರುವುದು ಭಕ್ತಾದಿಗಳಲ್ಲಿ ಮುಜುಗರವನ್ನು ಹುಟ್ಟಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಹೀಗೆ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಲ್ಲಿ ಚರ್ಮಸಂಬಂಧಿ ಕಾಯಿಲೆಗಳಿದ್ದರೆ ಅದು ಇನ್ನೊಬ್ಬರಿಗೆ ಹರಡುವ ಸಾಧ್ಯತೆಗಳಿರುತ್ತವೆ. ಅಲ್ಲದೇ ಕೆಲವು ಭಕ್ತರು ತಾವು ಹೊಂದಿರುವ ಅಂಗವೈಕಲ್ಯವನ್ನು ಪ್ರದರ್ಶನಕ್ಕಿಡಬೇಕಾದ ಅನಿವಾರ್ಯತೆಗೂ ಒಳಗಾಗುತ್ತಾರೆ. ಹೀಗಾಗಿ ಈ ಕೂಡಲೇ ದೇವಸ್ಥಾನದಲ್ಲಿ ಅಂಗಿ ಮತ್ತು ಬನಿಯನ್ ತೆಗೆದು ಪ್ರವೇಶಿಸಬೇಕೆನ್ನುವ ಬೋರ್ಡುಗಳನ್ನು ತೆಗೆಸಬೇಕು ಮತ್ತು ಈ ನಿಯಮವನ್ನು ಪಾಲಿಸಬೇಕೆಂದು ಕಡ್ಡಾಯಗೊಳಿಸಲು ಅಲ್ಲಲ್ಲಿ ಬೆತ್ತ ಹಿಡಿದು ನಿಲ್ಲಿಸಿರುವ ಸಿಬ್ಬಂದಿಯನ್ನು ಹಿಂಪಡೆಯಬೇಕೆಂದು ಅರ್ಜಿಯಲ್ಲಿ ಹೇಳಲಾಗಿದೆ
ಸಂಸ್ಥೆಯು ಈ ಅರ್ಜಿಗೆ ಸಂಬಂಧಿಸಿದಂತೆ ಹದಿನೈದು ದಿನಗಳಲ್ಲಿ ಪ್ರತಿಕ್ರಿಯಿಸುವಂತೆ ಹೇಳಿದೆ. ಇದುವರೆಗೆ ಇಲಾಖೆಯಿಂದ ಈ ಕುರಿತು ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.