ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮಂಡಲಿ (ಕೆಪಿಟಿಸಿಎಲ್) ನೇಮಕಾತಿ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮಾಹಿತಿ ಪ್ರಕಾರ, ಬಂಧಿತ ಆರೋಪಿಗಳು ಗೋಕಾಕ್ ನಿವಾಸಿ ಯಲ್ಲಪ್ಪ(26) ಮತ್ತು ಚಿಕ್ಕೋಡಿ ನಿವಾಸಿ ನಾಗಪ್ಪ (27) ಎಂದು ತಿಳಿದು ಬಂದಿದೆ.
ಎಲೆಕ್ಟ್ರಾನಿಕ್ ಉಪಕರಣಗಳೊಂದಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪೇಪರ್ ಬರೆದ ಆಕಾಂಕ್ಷಿಗಳಲ್ಲಿ ನಾಗಪ್ಪ ಕೂಡ ಒಬ್ಬರಾಗಿದ್ದು, ಯಲ್ಲಪ್ಪ ಅವರು ಆಕಾಂಕ್ಷಿಗಳಿಗೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಒದಗಿಸಿದರೂ ಶಿರಹಟ್ಟಿಹಳ್ಳಿಯಲ್ಲಿ ಕುಳಿತು ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನಲೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 411, 417, 420, 426, 406, 511, 116 ಮತ್ತು 201 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಬಂಧಿತರಲ್ಲಿ ಪರೀಕ್ಷೆ ಬರೆದ ಆಕಾಂಕ್ಷಿಗಳು ಮತ್ತು ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿದವರೂ ಇದ್ದಾರೆ, ಜೊತೆಗೆ ಕೆಲವು ಸರ್ಕಾರಿ ಅಧಿಕಾರಿಗಳೂ ಇದಕ್ಕೆ ಕೈ ಜೋಡಿಸಿದ್ದಾರೆ. ಹೀಗಾಗಿ ತನಿಖೆ ಮುಂದುವರೆಸಲಾಗುತ್ತದೆ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಎಂ.ಪಾಟೀಲ್ ತಿಳಿಸಿದ್ದಾರೆ.
ಹಗರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ ಅವರು, ಸದ್ಯ ಸಂಜಯ್ ಬಂಡಾರಿ ಅಲಿಯಾಸ್ ಸಂಜು ಎಂಬ ವ್ಯಕ್ತಿ ಸ್ಮಾರ್ಟ್‌ವಾಚ್, ಬ್ಲೂಟೂತ್ ಸೇರಿದಂತೆ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಳಸಿ ಉತ್ತರ ನೀಡಲು ಅಭ್ಯರ್ಥಿಗಳಿಂದ 3ರಿಂದ 5 ಲಕ್ಷ ರೂಪಾಯಿ ವಸೂಲಿ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿಸಿದರು.
ಕೆಪಿಟಿಸಿಎಲ್ ಇಲಾಖೆಯಲ್ಲಿ, 505 ಸಹಾಯಕ ಎಂಜಿನಿಯರ್‌ಗಳು (ವಿದ್ಯುತ್), 28 ಸಹಾಯಕ ಎಂಜಿನಿಯರ್‌ಗಳು (ಸಿವಿಲ್), 570 ಕಿರಿಯ ಎಂಜಿನಿಯರ್‌ಗಳು (ವಿದ್ಯುತ್), 29 ಜೂನಿಯರ್ ಎಂಜಿನಿಯರ್‌ಗಳು (ಸಿವಿಲ್) ಮತ್ತು 360 ಕಿರಿಯ ಸಹಾಯಕರು ಸೇರಿದಂತೆ, ಒಟ್ಟು 1,492 ಹುದ್ದೆಗಳನ್ನು ಭರ್ತಿ ಮಾಡಲು ಈ ವರ್ಷ ಜನವರಿ 24 ರಂದು ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ತಾಂತ್ರಿಕ ಹುದ್ದೆಗಳಿಗೆ ಆಗಸ್ಟ್ 23 ಮತ್ತು 24 ರಂದು ಪರೀಕ್ಷೆಗಳು ನಡೆದರೆ, ಕಿರಿಯ ಸಹಾಯಕರ ಸಾಮರ್ಥ್ಯ ಪರೀಕ್ಷೆಗಳು ಮತ್ತು ತಾಂತ್ರಿಕ ಹುದ್ದೆಗಳಿಗೆ ಕನ್ನಡ ಭಾಷಾ ಪರೀಕ್ಷೆ ಆಗಸ್ಟ್ 7 ರಂದು ನಡೆದಿದ್ದವು.