ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ (ಕೃಪಾಂಕ) ಪದ್ಧತಿ ಜಾರಿಗೆ ತರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರವಾಗಿ ಖಂಡಿಸಿದೆ. ರಾಜ್ಯಪಾಲರು ಸಂವಿಧಾನಾತ್ಮಕ ಮಿತಿಗಳನ್ನು ಮೀರಿ ರಾಜ್ಯದ ಶಿಕ್ಷಣ ನೀತಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಕೆಆರ್‌ವಿ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ತೃತೀಯ ಭಾಷೆಯ ಮೌಲ್ಯಮಾಪನ ಕ್ರಮದ ಬಗ್ಗೆ ಪ್ರಶ್ನಿಸಿ ಸರ್ಕಾರಕ್ಕೆ ಪತ್ರ ಬರೆದಿರುವ ರಾಜ್ಯಪಾಲರ ನಡೆ ಸರಿಯಲ್ಲ ಎಂದು ಟೀಕಿಸಿದ್ದಾರೆ. ಶಿಕ್ಷಣ ತಜ್ಞರ ಶಿಫಾರಸಿನ ಮೇರೆಗೆ ಮತ್ತು ಕರ್ನಾಟಕದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಬದಲಾವಣೆ ಮಾಡಲಾಗಿದೆ. ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಕಾಲಕಾಲಕ್ಕೆ ನವೀಕರಿಸುವ ಹಕ್ಕು ಸರ್ಕಾರಕ್ಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಇದೇ ವೇಳೆ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದ ನಾರಾಯಣಗೌಡರು, “ಗೆಹ್ಲೋಟ್ ಅವರು ಹಿಂದಿ ಸಾಮ್ರಾಜ್ಯಶಾಹಿ ಲಾಬಿಗಳ ಮುಖವಾಣಿಯಂತೆ ವರ್ತಿಸುತ್ತಿದ್ದಾರೆ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಉತ್ತರ ಭಾರತದಲ್ಲಿ ಕನ್ನಡವನ್ನು ಪ್ರೋತ್ಸಾಹಿಸುವ ಬಗ್ಗೆಯೂ ರಾಜ್ಯಪಾಲರು ಇದೇ ರೀತಿಯ ಕಾಳಜಿ ತೋರಿಸಲಿ ಎಂದು ಅವರು ಸವಾಲು ಹಾಕಿದ್ದಾರೆ. “ನೀವು ಸಾಮಾನ್ಯ ನಾಗರಿಕರಾಗಿ ಈ ಪತ್ರ ಬರೆಯುತ್ತಿದ್ದರೆ, ಮೊದಲು ಉತ್ತರ ಭಾರತದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತ್ರಿಭಾಷಾ ಸೂತ್ರದಡಿ ಅಲ್ಲಿನ ಶಾಲೆಗಳಲ್ಲಿ ಕನ್ನಡವನ್ನು ಮೂರನೇ ಭಾಷೆಯಾಗಿ ಸೇರಿಸಲು ಒತ್ತಾಯಿಸಿ” ಎಂದು ಚಾಟಿ ಬೀಸಿದ್ದಾರೆ.
ಹೊಸ ಗ್ರೇಡಿಂಗ್ ಪದ್ಧತಿಯ ಅನುಷ್ಠಾನಕ್ಕೆ ತಡೆ ಒಡ್ಡಲು ಪ್ರಯತ್ನಿಸಿದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಎಚ್ಚರಿಕೆ ನೀಡಿದೆ. ಕೂಡಲೇ ಮುಖ್ಯ ಕಾರ್ಯದರ್ಶಿಯವರಿಗೆ ಬರೆದಿರುವ ಪತ್ರವನ್ನು ರಾಜ್ಯಪಾಲರು ಹಿಂಪಡೆಯಬೇಕು ಎಂದು ನಾರಾಯಣಗೌಡ ಆಗ್ರಹಿಸಿದ್ದಾರೆ.
